ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಮುಗ್ಗಟ್ಟು: ಮೂರು ಸಾವಿರ ಮಠದ ಸ್ವಾಮೀಜಿ ಪೀಠ ತ್ಯಜಿಸಲು ಮುಂದಾಗಿದ್ದರು!

Last Updated 7 ಅಕ್ಟೋಬರ್ 2012, 9:40 IST
ಅಕ್ಷರ ಗಾತ್ರ

ಜಮೀನಿಗೆ ಬದಲು ಹಣ ಕೊಡಿಸಿದೆ: ಮತ್ತಿಕಟ್ಟಿ

ಹುಬ್ಬಳ್ಳಿ: ಮೂರು ಸಾವಿರ ಮಠವು ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಬಿಡ್ನಾಳದ ಜಮೀನು ದಾನಕ್ಕೆ ಬದಲಾಗಿ ಕೆಎಲ್‌ಇ ಸಂಸ್ಥೆಯಿಂದ ಹಣ ಕೊಡಿಸಲಾಗಿದೆ ಎಂದು ಮಠದ ಉನ್ನತಾಧಿಕಾರ ಸಮಿತಿ ಸದಸ್ಯ ಹಾಗೂ ವಿಧಾನಪರಿಷತ್ ಸದಸ್ಯ ವೀರಣ್ಣಮತ್ತಿಕಟ್ಟಿ ಪ್ರಜಾವಾಣಿಗೆ ತಿಳಿಸಿದ್ದಾರೆ.

`ಮೂಜಗಂ ಅವರ ಹೆಸರು ಇಡುತ್ತೇವೆ, ರೊಕ್ಕ ಕೊಡುವುದಿಲ್ಲ~ ಎಂದು ಪಟ್ಟು ಹಿಡಿದು ಕುಳಿತಿದ್ದ ಕೆಎಲ್‌ಇ ಸಂಸ್ಥೆಯವರನ್ನು ಉನ್ನತಾಧಿಕಾರ ಸಮಿತಿಯ ಸದಸ್ಯರು ಬೆನ್ನತ್ತಿ, ಸುಮಾರು 3ರಿಂದ 4 ತಿಂಗಳ ಕಾಲ ಸತತ ಪ್ರಯತ್ನ ನಡೆಸಿ ಕೊನೆಗೆ ಹಣ ಕೊಡಲು ಒಪ್ಪಿಸಿದ್ದಾಗಿ ಅವರು ಹೇಳಿದರು.

ಪೀಠ ತ್ಯಜಿಸಲು ಮುಂದಾಗಿದ್ದರು
`ಡಾ. ಮೂಜಗಂ ಅವಧಿಯಲ್ಲಿ ಉಂಟಾದ ಉತ್ತರಾಧಿಕಾರಿ ವಿವಾದದ ನಂತರ, ಮಠ ತೀವ್ರ ಆರ್ಥಿಕ ಸಂಕಷ್ಟಕ್ಕೆ ಈಡಾಯಿತು. ವಿವಾದ ಪರಿಹರಿಸಲು ರುದ್ರಮುನಿ ಶ್ರೀಗಳಿಗೆ ನೀಡಿದ್ದ ಪರಿಹಾರದ ಹಣ ಹಾಗೂ ಆ ಪರಿಸ್ಥಿತಿಯ ಲಾಭ ಪಡೆದ ಕೆಲವು ಪಟ್ಟಭದ್ರರಿಂದ ಮಠದ ಆದಾಯ ಸೋರಿಕೆಯಾಗಿ ಆರ್ಥಿಕ ಸಂಕಷ್ಟ ಎದುರಾಗಿತ್ತು. ಇದೇ ಸಂದರ್ಭದಲ್ಲಿ ಡಾ.ಮೂಜಗಂ ಅನಾರೋಗ್ಯಕ್ಕೆ ಒಳಗಾಗಿದ್ದು, ಖರ್ಚೂ ಹೆಚ್ಚಾಗಿತ್ತು.

ಇದರಿಂದ ಅನಿವಾರ್ಯವಾಗಿ ವಿವಿಧೆಡೆ ಸಾಲ ಮಾಡಬೇಕಾಗಿ ಬಂತು. ಮಠದಲ್ಲಿನ ಆರ್ಥಿಕ ತೊಂದರೆ ಹಾಗೂ ಸಾಲಗಾರರ ಕಾಟದಿಂದ ಬೇಸತ್ತಿದ್ದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಪೀಠ ತ್ಯಜಿಸಲು ಮುಂದಾಗಿದ್ದರು. ಹಾನಗಲ್ ಮಠಕ್ಕೆ ಅಥವಾ ಶಿವಯೋಗ ಮಂದಿರಕ್ಕೆ ಹೋಗುವುದಾಗಿ ಹೇಳಿದ್ದರು. ಮಠದ ಪೀಠದಿಂದ ಮುಕ್ತಿ ದೊರೆತರೆ ಸಾಕು ಬೇರೆ ಎಲ್ಲಿಯಾದರೂ ಆಶ್ರಮ ಕಟ್ಟಿಕೊಂಡು ಶಿವಾನುಭವ ಅನುಷ್ಠಾನ ಮಾಡಿಕೊಂಡು ಇರುವುದಾಗಿ ಹೇಳುತ್ತಿದ್ದರು~ ಎಂದು ವೀರಣ್ಣ ಹೇಳಿದರು.

ಸ್ವಾಮೀಜಿ ಮನವೊಲಿಸಿದ್ದೆ...
 `ನಾನು ಆ ಸಂದರ್ಭದಲ್ಲಿ ವಿಧಾನಪರಿಷತ್ ಸಭಾಪತಿ ಆಗಿದ್ದು, ಸ್ವಾಮೀಜಿ ಅವರನ್ನು ಭೇಟಿ ಮಾಡಿ, ಪೀಠ ತ್ಯಜಿಸದಂತೆ ಮನವಿ ಮಾಡಿದ್ದೆ. ಉತ್ತರ ಕರ್ನಾಟಕದ ಗೌರವದ ಸಂಕೇತವಾದ ಮಠವನ್ನು ಉಳಿಸಿ-ಬೆಳೆಸಲು ಅವರ ಅನಿವಾರ್ಯತೆಯನ್ನೂ ತಿಳಿಸಿಕೊಟ್ಟಿದ್ದೆ. ನನ್ನ ಮಾತಿಗೆ ಗೌರವ ನೀಡಿ ಸ್ವಾಮೀಜಿ ಇಲ್ಲೇ ಇರಲು ಒಪ್ಪಿದ್ದರು~ ಎಂದು ವೀರಣ್ಣ ಮತ್ತಿಕಟ್ಟಿ ನೆನಪಿಸಿಕೊಂಡರು.

ಜಮೀನು ಕೈಬಿಟ್ಟಿತ್ತು
 ಗಬ್ಬೂರು ಗ್ರಾಮದ ವ್ಯಾಪ್ತಿಗೆ ಬರುವ ಬಿಡ್ನಾಳದ ಸರ್ವೆ ನಂ 141ರ 23.31 ಎಕರೆ ಜಮೀನು, ಭೂ ಸುಧಾರಣೆ ಕಾಯ್ದೆ ಅನ್ವಯ ಅದನ್ನು ಉಳುಮೆ ಮಾಡುತ್ತಿದ್ದ ಅಸುಂಡಿ ಮನೆತನದವರ ಪಾಲಾಗಿತ್ತು. ಅವರಿಂದ ಜಮೀನು ಬಿಡಿಸಿಕೊಂಡು ಅವರಿಗೂ ಕೆಎಲ್‌ಇ ಸಂಸ್ಥೆಯಿಂದ ಪರಿಹಾರ ಕೊಡಿಸಲಾಗಿದೆ. ಅದೇ ಸಂದರ್ಭದಲ್ಲಿ ಮಠದ ಆರ್ಥಿಕ ಸಂಕಷ್ಟದ ಬಗ್ಗೆ ಮನವರಿಕೆ ಮಾಡಿಕೊಟ್ಟು, ಎಷ್ಟಾದರೂ ಹಣ ಕೊಡುವಂತೆ ಸಂಸ್ಥೆಗೆ ಮನವಿ ಮಾಡಲಾಗಿತ್ತು ಎಂದು ವೀರಣ್ಣ ಇಡೀ ಪ್ರಕರಣದ ಹಿನ್ನೆಲೆಯನ್ನು ಬಿಚ್ಚಿಟ್ಟರು.

ಅನುಭವದ ಕೊರತೆ: ಮಠದ ವತಿಯಿಂದ ವೈದ್ಯಕೀಯ ಕಾಲೇಜು ಆರಂಭಿಸಲು ಅನುಭವದ ಕೊರತೆ ಇದೆ. ಮಠದ ಹೆಸರಿಗೆ 15 ವರ್ಷಗಳ ಹಿಂದೆಯೇ ಗದಗದಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಲು ಸರ್ಕಾರದಿಂದ ಅನುಮತಿ ದೊರೆತಿದೆ. ಆದರೆ ಇಲ್ಲಿಯವರೆಗೆ ಕಾಲೇಜು ಕಟ್ಟಲು ಸಾಧ್ಯವಾಗಿಲ್ಲ. ವೈದ್ಯಕೀಯ ಕಾಲೇಜು ನಿರ್ಮಿಸಲು ಇಂದು ಕನಿಷ್ಠ 200 ಕೋಟಿ ರೂಪಾಯಿ ಬೇಕು. ಅಷ್ಟೊಂದು ಸಂಪನ್ಮೂಲ ಸಂಗ್ರಹ ಸಾಧ್ಯವಿಲ್ಲ. ಕೆಎಲ್‌ಇ ಸಂಸ್ಥೆಗೆ ಅನುಭವ ಇದ್ದ ಕಾರಣ, ಡಾ. ಮೂಜಗಂ ಅವರ ಹೆಸರು ಇಡಲು ಒಪ್ಪಿದ ನಂತರವೇ ಜಮೀನು ಕೊಡಲಾಗಿದೆ. ಇದರಲ್ಲಿ ಮಠ ಹಾಗೂ ಭಕ್ತರ ಹಿತಾಸಕ್ತಿ ಎರಡೂ ಇದೆ ಎಂದರು.
 

ರುದ್ರಮುನಿ ಸ್ವಾಮೀಜಿ ಜತೆ ರಾಜಿ!
ನಿವೃತ್ತ ಜಿಲ್ಲಾ ನ್ಯಾಯಾಧೀಶ ಸಿ.ವೈ.ಭರಮಗೌಡರ ಸಮ್ಮುಖದಲ್ಲಿ ಕಳೆದ ಏಪ್ರಿಲ್ 30ರಂದು ತಿಪಟೂರು ಷಡಕ್ಷರಿ ಮಠದ ರುದ್ರಮುನಿ ಸ್ವಾಮೀಜಿ ಹಾಗೂ ಮೂರು ಸಾವಿರ ಮಠದ ರಾಜಯೋಗೀಂದ್ರ ಸ್ವಾಮೀಜಿ ನಡುವೆ ರಾಜಿ ಮಾಡಲಾಗಿದೆ. ಪ್ರಜಾವಾಣಿಗೆ ಈ ರಾಜಿ ಒಪ್ಪಂದದ ಪ್ರತಿ ದೊರೆತಿದ್ದು, ಮಠದ ಅಭಿವೃದ್ಧಿಗಾಗಿ ಆಸ್ತಿ ಮಾರಾಟ ಸೇರಿದಂತೆ ಆಡಳಿತ ಮಂಡಳಿ ಕೈಗೊಳ್ಳುವ ಯಾವುದೇ ನಿರ್ಧಾರಕ್ಕೆ ತಾವು ತಕರಾರು ಮಾಡುವುದಿಲ್ಲ ಎಂದು ರುದ್ರಮುನಿ ಸ್ವಾಮೀಜಿ ಒಪ್ಪಿಗೆ ನೀಡಿ ಸಹಿ ಹಾಕಿದ್ದಾರೆ.

ಉತ್ತರಾಧಿಕಾರಿ ವಿಷಯವಾಗಿ ಡಾ. ಮೂಜಗಂ ಅವರೊಂದಿಗೆ ವಿವಾದ ಉಂಟಾದಾಗ, ಮೂರು ಸಾವಿರ ಮಠದ ಯಾವುದೇ ಆಸ್ತಿಯನ್ನು ಮಾರಾಟ ಮಾಡುವಂತಿಲ್ಲ ಎಂದು ಆಗ ಉತ್ತರಾಧಿಕಾರಿಯಾಗಲು ಪ್ರಯತ್ನಿಸಿದ್ದ ರುದ್ರಮುನಿ ಶ್ರೀಗಳು ಸುಪ್ರೀಂಕೋರ್ಟ್‌ನ ಮಧ್ಯವರ್ತಿ ಸಮಿತಿಯಿಂದ ಆದೇಶ ತಂದಿದ್ದರು.

ಸುಪ್ರೀಂಕೋರ್ಟ್‌ನಲ್ಲಿ ಆಗ ಡಾ. ಮೂಜಗಂ ಹಾಗೂ ರುದ್ರಮುನಿ ಶ್ರೀಗಳ ನಡುವೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದ ಮುಂಬೈ ಹಾಗೂ ಕೋಲ್ಕತ್ತಾ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಚಿತ್ತತೋಷ್ ಮುಖರ್ಜಿ ನೇತೃತ್ವದ ಸಮಿತಿ ಜುಲೈ 16, 2009ರಲ್ಲಿ ತಡೆಯಾಜ್ಞೆ ನೀಡಿತ್ತು.
ಆದರೆ ಈ ಆದೇಶವನ್ನು ಸ್ಥಳೀಯವಾಗಿ ರಾಜಿ ಮಾಡಿಕೊಳ್ಳುವ ಮೂಲಕ ಮಠವು, ಜಮೀನು ದಾನ ನೀಡುವ ಪ್ರಕ್ರಿಯೆಗೆ ಮುಂದಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT