ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಇ: ಚಿಣ್ಣರ ಮೊಗದಲ್ಲಿ ಮೂಡಿದ ಮಂದಹಾಸ

`ಬುದ್ಧಿಮಟ್ಟ ಕಡಿಮೆ' ಎಂದವರಿಗೆ ಬುದ್ಧಿ ಹೇಳಿದ `ನ್ಯಾಯಾಧೀಶರು'
Last Updated 6 ಸೆಪ್ಟೆಂಬರ್ 2013, 20:19 IST
ಅಕ್ಷರ ಗಾತ್ರ

ಬೆಂಗಳೂರು: `ಮಗುವಿನ ಬುದ್ಧಿಮಟ್ಟ ಕಡಿಮೆ ಇದೆ ಎಂಬ ನೆಪ ಒಡ್ಡಿ ಆಕೆಯನ್ನು ಶಾಲೆಯಿಂದ ಹೊರಕ್ಕೆ ಹಾಕುವುದು ಮಾನವೀಯತೆ ಅಲ್ಲ. ಈ ಪ್ರಕರಣವನ್ನು ಮಾನವೀಯ ದೃಷ್ಟಿಯಿಂದ ನೋಡ ಬೇಕು. ಈ ಮಗುವಿಗೆ ವಿಶೇಷ ತರಗತಿಗಳನ್ನು ಆಯೋಜಿಸಿ ಶೈಕ್ಷಣಿಕ ಚಟುವಟಿಕೆಗೆ ಉತ್ತೇಜನ ನೀಡಬೇಕು. ಪೋಷಕರು ಮಗುವನ್ನು ನಿಮ್ಹಾನ್ಸ್‌ಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಬೇಕು' ಎಂದು `ನ್ಯಾಯಾಧೀಶರು' ಸೂಚಿಸಿದರು. 

`ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ 2009' ಹಾಗೂ `ಕರ್ನಾಟಕ ಶಿಕ್ಷಣ ಹಕ್ಕು ನಿಯಮಗಳು-2012' ಪರಿಣಾಮಕಾರಿ ಅನುಷ್ಠಾನ ಸಂಬಂಧ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಲ್ಲಿ ದಾಖಲಾದ ದೂರುಗಳ ತ್ವರಿತ ಇತ್ಯರ್ಥಕ್ಕಾಗಿ ಆಯೋಗದ ವತಿಯಿಂದ ಸಾರ್ವಜನಿಕ ವಿಚಾರಣೆ ನಗರದ ಶಿಕ್ಷಕರ ಸದನದಲ್ಲಿ ಶುಕ್ರವಾರ ನಡೆಯಿತು.

ನಿವೃತ್ತ ನ್ಯಾಯಮೂರ್ತಿಗಳಾದ ಎ.ಜೆ. ಸದಾಶಿವ, ಚಂದ್ರಶೇಖರಯ್ಯ ಹಾಗೂ ಶಿಕ್ಷಣ ತಜ್ಞ ಡಾ.ವಿ.ಪಿ. ನಿರಂಜನಾರಾಧ್ಯ `ನ್ಯಾಯಾಧೀಶ (ಜ್ಯೂರಿ)'ರಾಗಿ ಕಾರ್ಯನಿರ್ವಹಿಸಿದರು. ಮೊದಲ ದಿನ 15 ಪ್ರಕರಣಗಳ ವಿಚಾರಣೆ ನಡೆಸಿ ದರು.

ಬಡ ಹಾಗೂ ಹಿಂದುಳಿದ ಮಕ್ಕಳಿಗೆ ಪ್ರವೇಶ ನಿರಾಕರಿಸಿದ ಆಡಳಿತ ಮಂಡಳಿಗಳಿಗೆ ಚಾಟಿ ಬೀಸಿದರು. ತಾರತಮ್ಯ ನಡೆದ ಪ್ರಕರಣಗಳಲ್ಲಿ ಕೂಡಲೇ ಪ್ರವೇಶ ಅವಕಾಶ ಕಲ್ಪಿಸುವಂತೆ ಸೂಚಿಸಿ ದರು. ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಪೋಷಕರಿಗೂ ಕಿವಿಮಾತು ಹೇಳಿದರು.

ಸರಸ್ವತಿಪುರದ ಎಸ್.ಜಿ.ಇಂಟರ್‌ನ್ಯಾಷನಲ್ ಸಂಸ್ಥೆಯಲ್ಲಿ `ಬುದ್ಧಿಮಟ್ಟ ಕಡಿಮೆ ಇದೆ' ಎಂಬ ಕಾರಣ ನೀಡಿ ಚೈತ್ರ ಎಸ್.ಎನ್. ಅವರಿಗೆ ಆರನೇ ತರಗತಿಗೆ ಪ್ರವೇಶ ನಿರಾಕರಿಸಲಾಗಿತ್ತು. ಈ ಸಂಬಂಧ ತಂದೆ ಶ್ರೀನಿವಾಸಮೂರ್ತಿ ಆಯೋಗಕ್ಕೆ ದೂರು ಸಲ್ಲಿಸಿದ್ದರು.

`ಬುದ್ಧಿಮಟ್ಟ ಕಡಿಮೆ ಇದೆ ಎಂಬ ಕಾರಣ ನೀಡಿ ಶಾಲಾ ಆಡಳಿತ ಮಂಡಳಿಯವರು ಆರನೇ ತರಗತಿಗೆ ಪ್ರವೇಶ ನಿರಾಕರಿಸಿದರು. ಈ ಬಗ್ಗೆ ಪ್ರಶ್ನಿಸಲು ಹೋದ ನಮ್ಮನ್ನು ಅವಾಚ್ಯವಾಗಿ ನಿಂದಿ ಸಿದರು. ಮಕ್ಕಳ ನಡುವೆ ತಾರತಮ್ಯ ಮಾಡುವ ಇಂತಹ ಶಾಲೆಗೆ ಬುದ್ಧಿ ಕಲಿಸಿಯೇ ತೀರುತ್ತೇನೆ' ಎಂದು ಶ್ರೀನಿವಾಸಮೂರ್ತಿ ಕಣ್ಣೀರಿಟ್ಟರು.

`ಐದು ವರ್ಷಗಳಿಂದ ಈ ವಿದ್ಯಾರ್ಥಿನಿ ಪರೀಕ್ಷೆಯೇ ಬರೆದಿಲ್ಲ. ವೈದ್ಯಕೀಯ ತಪಾಸಣೆ ನಡೆಸುವಂತೆ ಪೋಷಕರಿಗೆ ಹಲವು ಬಾರಿ ಮನವಿ ಮಾಡಲಾಗಿತ್ತು. ತರಗತಿಯಿಂದ ಹೊರಗೆ ಹಾಕಿಲ್ಲ. ಶಾಲಾ ವರ್ಗಾವಣೆ ಪತ್ರವನ್ನೂ ನೀಡಿಲ್ಲ. ಬುದ್ಧಿಮಾಂದ್ಯ ವಿದ್ಯಾರ್ಥಿನಿ ಅನಾಹುತ ಮಾಡಿ ಕೊಂಡರೆ ಜವಾಬ್ದಾರಿ ಯಾರು' ಎಂದು ಶಾಲಾ ಆಡಳಿತ ಮಂಡಳಿಯವರು ಪ್ರಶ್ನಿಸಿದರು.

ಈ ವಾದವನ್ನು ಒಪ್ಪದ ನಿರಂಜನಾರಾಧ್ಯ, `ಮಕ್ಕಳ ಮನಸ್ಸು ಸೂಕ್ಷ್ಮವಾದುದು. ಅವರ ಮನಸ್ಸಿಗೆ ನೋವಾಗದಂತೆ ವರ್ತಿಸಬೇಕು. ಬುದ್ಧಿ ಮಟ್ಟ ಕಡಿಮೆ ಇದೆ ಎಂದು ಶಾಲೆಯವರು ಜಾರಿ ಕೊಳ್ಳುವುದು ಸರಿಯಲ್ಲ. ವಿಶೇಷ ತರಗತಿಗಳನ್ನು ನಡೆಸುವ ಮೂಲಕ ಆಕೆಯ ಬೆಳವಣಿಗೆಗೆ ಉತ್ತೇ ಜನ ನೀಡಬೇಕು. ನಿಮ್ಮ ಮಗುವಿನ ಸ್ಥಿತಿ ಇದೇ ರೀತಿ ಆಗಿದ್ದರೆ ಏನು ಮಾಡುತ್ತಿದ್ದೀರಿ' ಎಂದು ಕಟು ವಾಗಿ ಪ್ರಶ್ನಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉತ್ತರ ಜಿಲ್ಲೆಯ ಉಪನಿರ್ದೇಶಕ ವೆಂಕಟೇಶ್, `ಆಡಳಿತ ಮಂಡಳಿಯ ವರ್ತನೆ ಸರಿಯಿಲ್ಲ. ಘಟನೆ ಬಗ್ಗೆ ಮಾಹಿತಿ ಪಡೆಯಲು ಇಲಾಖೆಯ ಅಧಿಕಾರಿಗಳು ಹೋದಾಗ ಕಟುವಾಗಿ ವರ್ತಿಸಿದ್ದಾರೆ. ಶಿಕ್ಷಣ ಕಾಯ್ದೆ ಪ್ರಕಾರ ಶಾಲೆಯವರೇ ಮಾನಸಿಕ ತಜ್ಞರನ್ನು ಕರೆಯಿಸಿ ವಿಶೇಷ ಮಕ್ಕಳಿಗೆ ಚಿಕಿತ್ಸೆ ಕೊಡಿಸಬೇಕು' ಎಂದು ಸೂಚಿಸಿದರು.

ಎ.ಜೆ. ಸದಾಶಿವ ಮಾತನಾಡಿ, `ಶಾಲೆಯಲ್ಲಿ ಮಕ್ಕಳ ಬೌದ್ಧಿಕ ಬೆಳವಣಿಗೆಯ ಜೊತೆಗೆ ಮಾನ ಸಿಕ ಬೆಳವಣಿಗೆಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳ ಬೇಕು. ಮಗುವಿನ ಹಿತಾಸಕ್ತಿಗೆ ಗಮನ ಹರಿಸ ಬೇಕು. ಪೊಷಕರು ಹಾಗೂ ಆಡಳಿತ ಮಂಡಳಿ ಯವರು ಆರೋಪ-ಪ್ರತ್ಯಾರೋಪ ಮಾಡಿ ಮಗು ವನ್ನು ನಿರ್ಲಕ್ಷಿಸುವುದು ಸರಿಯಲ್ಲ' ಎಂದರು.

ಕೇಳಿದವರಿಗೆ ವರ್ಗಾವಣೆ ಪತ್ರ ನೀಡಿ: ವಿದ್ಯಾ ರಣ್ಯಪುರದ ನವೋದಯ ಕಿಶೋರ ಕೇಂದ್ರದಲ್ಲಿ ಪೂರ್ವ ಪ್ರಾಥಮಿಕ ವಿಭಾಗದಲ್ಲಿ ಕಲಿಯುತ್ತಿ ರುವ ಎಚ್.ಜೆ. ಅದೀಶ್ ಪನಾಗ್ ಎಂಬ ಮಗು ವಿಗೂ ತಾರತಮ್ಯ ಮಾಡಲಾಗುತ್ತಿದೆ ಎಂಬ ದೂರು ಕೇಳಿ ಬಂತು.

`ಈ ವಿದ್ಯಾರ್ಥಿಗೆ ಚರ್ಮದ ಕಾಯಿಲೆ ಇದೆ. ಈ ವಿದ್ಯಾರ್ಥಿಯನ್ನು ಶಾಲೆಯಲ್ಲಿ ಉಳಿಸಿ ಕೊಂಡರೆ ಹಲವು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಾಲೆ ತ್ಯಜಿಸುವಾಗಿ ಬೆದರಿಸಿದ್ದಾರೆ' ಎಂದು ಶಾಲಾ ಪ್ರತಿನಿಧಿ ಹೇಳಿದರು.

`ಈ ತರಗತಿ ಯ ಶಿಕ್ಷಕಿ ಚರ್ಮ ರೋಗ ಹರಡುವ ಆತಂಕ ವ್ಯಕ್ತಪಡಿಸಿದ್ದಾರೆ. ಸುಮಾರು 40ರಿಂದ 70 ವಿದ್ಯಾರ್ಥಿಗಳ ಪೋಷಕರು ಈ ಮಗುವನ್ನು ಶಾಲೆಯಿಂದ ಬಿಡಿಸುವಂತೆ ಒತ್ತಡ ಹೇರಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಾವೇನು ಮಾಡಲು ಸಾಧ್ಯ' ಎಂದು ಅವರು ಪ್ರಶ್ನಿಸಿದರು.

ನ್ಯಾ.ಎ.ಜೆ. ಸದಾಶಿವ ಪ್ರತಿಕ್ರಿಯಿಸಿ, `ಈ ಸಮಸ್ಯೆ ಪರಿಹಾರ ಸರಳವಾಗಿದೆ. ಯಾವುದೇ ಕಾರಣಕ್ಕೂ ಈ ಮಗುವಿಗೆ ವರ್ಗಾವಣೆ ಪತ್ರ ನೀಡಬಾರದು. ವರ್ಗಾವಣಾ ಪತ್ರ ಕೇಳಿರುವವರಿಗೆ ಕೊಟ್ಟು ಕಳುಹಿಸಿ ಬಿಡಿ' ಎಂದು ಸೂಚಿಸಿದರು.

ಎರಡನೇ ತರಗತಿಗೆ ದಾಖಲಿಸಿ: ಚಿಕ್ಕನಾಯಕನ ಹಳ್ಳಿಯ ಪ್ರಕ್ರಿಯ ಶಾಲೆಯಲ್ಲಿ ಆರು ವಿದ್ಯಾರ್ಥಿ ಗಳಿಗೆ ಆರ್‌ಟಿಇ ಕಾಯ್ದೆಯಡಿ ಕಳೆದ ವರ್ಷ ಪ್ರವೇಶ ನಿರಾಕರಿಸಲಾಗಿತ್ತು ಎಂಬ ದೂರಿನ ವಿಚಾ ರಣೆ ನಡೆಸಲಾಯಿತು.

`ಈ ಮಕ್ಕಳನ್ನು ಈ ವರ್ಷ ಕಾಯ್ದೆಯಡಿ ಎರಡನೇ ತರಗತಿಗೆ ದಾಖಲು ಮಾಡಿಕೊಳ್ಳಬೇಕು. ಇದಕ್ಕೆ ಬೇಕಿರುವ ಅನುಮತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ನೀಡುತ್ತಾರೆ. ಮಕ್ಕಳಿಗೆ ವರ್ಗಾ ವಣೆ ಪತ್ರವನ್ನು ನೀಡಬಾರದು' ಎಂದು ಆಡಳಿತ ಮಂಡಳಿಗೆ ಸೂಚಿಸಲಾಯಿತು.

ಪೂರ್ವ ಪ್ರಾಥಮಿಕ ತರಗತಿಗೆ ಸೇರಿಸಿ: ಸೂಚನೆ
`ಇಂದಿರಾನಗರದ ನ್ಯಾಷನಲ್ ಪಬ್ಲಿಕ್ ಸ್ಕೂಲಿನಲ್ಲಿ ಆರ್‌ಟಿಇ ಅಡಿ ಅರ್ಜಿ ಸಲ್ಲಿಸಿದ ಮಗು ವನ್ನು ಒಂದನೇ ತರಗತಿಗೆ ದಾಖಲು ಮಾಡಿಕೊಳ್ಳದೆ ಕಾಯ್ದೆ ಉಲ್ಲಂಘನೆ ಮಾಡಲಾಗಿದೆ. ಮಗುವಿಗೆ 6 ವರ್ಷ ಆಗಿಲ್ಲ ಎಂಬ ನೆಪಒಡ್ಡಿ ಪ್ರವೇಶ ನಿರಾಕರಿಸುವುದು ಸರಿಯಲ್ಲ. ಆ ಮಗು ವನ್ನು ಕೂಡಲೇ ಪೂರ್ವ ಪ್ರಾಥಮಿಕ ತರಗತಿಗೆ ದಾಖಲಾತಿ ಮಾಡಿಕೊಳ್ಳಬೇಕು' ಎಂದು ಜ್ಯೂರಿಗಳು ಆಡಳಿತ ಮಂಡಳಿಗೆ ನಿರ್ದೇಶನ ನೀಡಿದರು.

`ಈ ಶಾಲೆಯಲ್ಲಿ ಒಂದನೇ ತರಗತಿಗೆ ಮಗ ಧೀರಜ್‌ಕುಮಾರ್‌ನನ್ನು ದಾಖಲು ಮಾಡಲು ಅರ್ಜಿ ಸಲ್ಲಿಸಲಾಗಿತ್ತು. ಶಾಲೆಯಲ್ಲಿ ಅರ್ಜಿ ಸ್ವೀಕರಿಸಲು ನಿರಾಕರಿಸಲಾಗಿತ್ತು. ಕ್ಷೇತ್ರ ಶಿಕ್ಷಣಾಧಿ ಕಾರಿ ಅವರಿಗೆ ದೂರು ಸಲ್ಲಿಸಲಾಗಿತ್ತು. ಆ ಬಳಿಕವೂ ಅರ್ಜಿ ಸ್ವೀಕರಿಸಲು ನಿರಾಕರಿಸಿದ್ದರು' ಎಂದು ಪೋಷಕರು ಅಳಲು ತೋಡಿಕೊಂಡರು. ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಪಿ. ಗೋಪಾಲಕೃಷ್ಣ ಪ್ರತಿಕ್ರಿಯಿಸಿ, `ಕಾಯ್ದೆಯಡಿ ಮಗುವನ್ನು ಒಂದನೇ ತರಗತಿಗೆ ಸೇರಿಸಲು ಮಗು ವಿಗೆ 6 ವರ್ಷ ಆಗಿರಬೇಕು. ಈ ಮಗುವಿಗೆ ಐದು ವರ್ಷ ಮೂರು ತಿಂಗಳು ಆಗಿತ್ತು. ಹೀಗಾಗಿ ಪ್ರವೇಶ ನೀಡಿಲ್ಲ. ಕಾಯ್ದೆಯಡಿ ಅರ್ಜಿ ಸಲ್ಲಿಸಿದ ಉಳಿದ ಮಕ್ಕಳಿಗೆ ಪ್ರವೇಶ ನೀಡಲಾಗಿದೆ' ಎಂದು ಸಮಜಾಯಿಷಿ ನೀಡಿದರು.

`ಮಗುವಿಗೆ 6 ವರ್ಷ ಆಗಿರದೆ ಇದ್ದಲ್ಲಿ ಪೂರ್ವ ಪ್ರಾಥಮಿಕ ತರಗತಿಗೆ ಸೇರಿಸಿ. ಇದರಿಂದ ಆಕಾಶವೇನು ಕಳಚಿ ಬೀಳಲ್ಲ. ಹಿಂದುಳಿದ ಮಗುವಿಗೆ ಸಾಮಾಜಿಕ ನ್ಯಾಯ ಒದಗಿಸಿ' ಎಂದು ಎ.ಜೆ.ಸದಾಶಿವ ಸೂಚಿಸಿದರು. ಆಡಳಿತ ಮಂಡಳಿಯವರು ಮಗುವನ್ನು ಪೂರ್ವ ಪ್ರಾಥಮಿಕ ತರಗತಿಗೆ ದಾಖಲಾತಿ ಮಾಡಲು ಒಪ್ಪಿಗೆ ಸೂಚಿಸಿದರು.

ನೀವ್ಯಾಕೆ ಆಡಳಿತ ಮಂಡಳಿ ಪರ: ಬಿಇಒಗೆ ತರಾಟೆ
`ನೀವೇ ಆಡಳಿತ ಮಂಡಳಿಯ ಪರವಾಗಿ ಮಾತನಾಡುತ್ತಿದ್ದೀರಿ. ಇಂತಹ ನಡತೆ ಸರಿ ಯಲ್ಲ' ಎಂದು ರಾಜಾಜಿನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲಕೃಷ್ಣ ಅವರನ್ನು ಆಯೋಗದ ಜ್ಯೂರಿಗಳು ತರಾಟೆಗೆ ತೆಗೆದು ಕೊಂಡರು. 

ಹೆಚ್ಚುವರಿ ಶುಲ್ಕ ಕಟ್ಟಿಲ್ಲ ಎಂಬ ಕಾರಣ ದಿಂದ ಬಸವೇಶ್ವರನಗರದ ವಿಎಲ್‌ಎಸ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಆರನೇ ತರಗತಿ ವಿದ್ಯಾರ್ಥಿ ಶ್ರವಣ ಗೌಡ ಎಂಬಾತ ನಿಗೆ ತಾರತಮ್ಯ ಮಾಡಲಾಗುತ್ತಿದೆ ಎಂದು ತಂದೆ ವೈ.ಆರ್.ನಾಗರಾಜ್ ದೂರು ಸಲ್ಲಿಸಿದ್ದರು.

ನಾಗರಾಜ್ ಮಾಹಿತಿ ನೀಡಿ, `ಕಳೆದ ವರ್ಷ ವಾರ್ಷಿಕ ಶುಲ್ಕರೂ. 19,000 ಇತ್ತು. ಈ ವರ್ಷ ಶುಲ್ಕವನ್ನುರೂ. 32,000 ರೂಪಾಯಿಗೆ ಹೆಚ್ಚಿಸಲಾಗಿದೆ. ಹೆಚ್ಚುವರಿ ಶುಲ್ಕ ಕಟ್ಟಲು ನಿರಾಕರಿಸಿದ್ದೆ. ಮಗನನ್ನು ಶಾಲೆಗೆ ಕಳುಹಿಸಿದರೆ ಐದನೇ ತರಗತಿಯಲ್ಲಿ ಕೂರಿಸುತ್ತಿದ್ದರು. ಕೆಲವೊಮ್ಮೆ ಸಭಾಂಗಣ ದಲ್ಲಿ ಕೂರಿಸುತ್ತಿದ್ದರು' ಎಂದು ಆರೋಪಿಸಿ ದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿ ಕಾರಿ ಅವರು ಆಡಳಿತ ಮಂಡಳಿಯ ಪರವಾಗಿ ಮಾತನಾಡಿದರು. `ಈ ಶಾಲೆಯಲ್ಲಿ ತಾರ ತಮ್ಯ ನಡೆಸಿರುವುದು ಬೆಳಕಿಗೆ ಬಂದಿದೆ. ಆಡ ಳಿತ ಮಂಡಳಿಯವರು ಎಲ್ಲ ದಾಖಲೆಗಳ ಸಮೇತ ಶನಿವಾರ ವಿಚಾರಣೆಯಲ್ಲಿ ಹಾಜರಾ ಗುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ನೋಟಿಸ್ ನೀಡಬೇಕು' ಎಂದು ಜ್ಯೂರಿಗಳು ನಿರ್ದೇಶನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT