ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಆರ್‌ಬಿಐ' ನೀತಿ ನಿರ್ಣಾಯಕ

Last Updated 21 ಜುಲೈ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೂರಸಂಪರ್ಕ, ವಿಮೆ ಕ್ಷೇತ್ರ ಸೇರಿದಂತೆ 13 ವಲಯಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಮಿತಿ (ಎಫ್‌ಡಿಐ) ಹೆಚ್ಚಿಸಿರುವುದರಿಂದ ಷೇರುಪೇಟೆ ಕಳೆದ ವಾರಾಂತ್ಯದಲ್ಲಿ ಏರಿಕೆ ದಾಖಲಿಸಿದೆ. ಆದರೆ, ಈ ವಾರ ಕಾರ್ಪೊರೇಟ್ ಕಂಪೆನಿಗಳ ತ್ರೈಮಾಸಿಕ ಫಲಿತಾಂಶ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಲಿರುವ ಮೊದಲ ತ್ರೈಮಾಸಿಕ ಹಣಕಾಸು ನೀತಿಯು ವಹಿವಾಟಿನ ಗತಿ ನಿರ್ಧರಿಸಲಿವೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಡಾಲರ್ ವಿರುದ್ಧ ರೂಪಾಯಿ ಅಪಮೌಲ್ಯ ತಡೆಯಲು `ಆರ್‌ಬಿಐ' ಪ್ರಕಟಿಸಿರುವ ಕ್ರಮಗಳು ವಿದೇಶಿ ಸಾಂಸ್ಥಿಕ ಹೂಡಿಕೆದಾರರಲ್ಲಿ(ಎಫ್‌ಐಐ) ವಿಶ್ವಾಸ ಮೂಡಿಸಿವೆ. ಇದರಿಂದ ಈ ವಾರ   `ಎಫ್‌ಐಐ' ಒಳಹರಿವು ಹೆಚ್ಚುವ ಸಾಧ್ಯತೆ ಇದೆ ಎಂದು `ಆದಿತ್ಯಾ ಟ್ರೇಡಿಂಗ್ ಸಲ್ಯೂಷನ್ಸ್' ಮುಖ್ಯಸ್ಥ ವಿಕಾಸ್ ಜೈನ್ ಅಭಿಪ್ರಾಯಪಟ್ಟಿದ್ದಾರೆ.

ರೂಪಾಯಿ ಅಪಮೌಲ್ಯ ತಡೆಯಲು `ಆರ್‌ಬಿಐ' ಬ್ಯಾಂಕುಗಳಿಗೆ ನೀಡುವ ಸಾಲದ (ರೆಪೊ) ಬಡ್ಡಿದರ ಹೆಚ್ಚಿಸಿದೆ. ಆದರೆ, ಜುಲೈ 30ರಂದು ಪ್ರಕಟಿಸಲಿರುವ ಹಣಕಾಸು ನೀತಿಯಲ್ಲಿ `ರೆಪೊ' ದರ ಕಡಿತ ಮಾಡುವ ನಿರೀಕ್ಷೆ ಇದೆ. ತಯಾರಿಕೆ ಮತ್ತು ಕೈಗಾರಿಕಾ ವಲಯದ ಪ್ರಗತಿ ಕುಸಿದಿರುವುದರಿಂದ ಬಡ್ಡಿ ದರ ತಗ್ಗಲಿದೆ ಎಂದು ಉದ್ಯಮ ಸಂಸ್ಥೆಗಳು ವಿಶ್ವಾಸ ವ್ಯಕ್ತಪಡಿಸಿವೆ. ಆದರೆ, ಹಣದುಬ್ಬರ ಹೆಚ್ಚಳಗೊಂಡಿರುವುದರಿಂದ ಬಡ್ಡಿ ದರ ಕಡಿತ ಸಾಧ್ಯತೆ ಕ್ಷೀಣಗೊಂಡಿದೆ ಎಂದು ವಿಕಾಸ್ ಹೇಳಿದ್ದಾರೆ.

`ರಿಲಯನ್ಸ್ ಇಂಡಸ್ಟ್ರೀಸ್ ಶುಕ್ರವಾರ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿದೆ. ಸೋಮವಾರ ವಹಿವಾಟು ಆರಂಭವಾಗುತ್ತಿದ್ದಂತೆ ಪೇಟೆ ಇದಕ್ಕೆ ಪ್ರತಿಕ್ರಿಯಿಸಲಿದೆ' ಎಂದು ಇನ್ವೆಂಚರ್ ಗ್ರೋಥ್ ಅಂಡ್ ಸೆಕ್ಯುರಿಟೀಸ್‌ನ ವ್ಯವಸ್ಥಾಪಕ ನಿರ್ದೇಶಕರಾದ ನಗ್ಜಿ ಕೆ.ರೀಟಾ ಅಭಿಪ್ರಾಯಪಟ್ಟಿದ್ದಾರೆ.

`ಸದ್ಯ ಜಾಗತಿಕ ಮಾರುಕಟ್ಟೆ ಬೆಳವಣಿಗೆಗಳು ದೇಶೀಯ ಷೇರುಪೇಟೆಗೆ ಪೂರಕವಾಗಿಲ್ಲ. `ಕೆವೈಸಿ'(ನೊ ಯುವರ್ ಕಸ್ಟಮರ್) ನಿಯಮ ಉಲ್ಲಂಘಿಸಿದ ಬ್ಯಾಂಕುಗಳಿಗೆ `ಆರ್‌ಬಿಐ' ದಂಡ ವಿಧಿಸಿದೆ. ಇದರಿಂದ ಬ್ಯಾಂಕಿಂಗ್ ವಲಯದ ಷೇರುಗಳು ತೀವ್ರ ಕುಸಿತ ಕಂಡಿವೆ. ಇದು ಒಟ್ಟಾರೆ ಪೇಟೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ನಗ್ಜಿ ವಿಶ್ಲೇಷಿಸಿದ್ದಾರೆ.

ಎಲ್ ಅಂಡ್ ಟಿ, ಅಂಬುಜಾ ಸಿಮೆಂಟ್ಸ್, ಕ್ರೇನ್ ಇಂಡಿಯಾ, ಹೀರೊ ಮೋಟೊ ಕಾರ್ಪ್, ಐಟಿಸಿ, ಮಾರುತಿ ಸುಜುಕಿ, ಸ್ಟರ್‌ಲೈಟ್ ಇಂಡಸ್ಟ್ರೀಸ್, ಹಿಂದೂಸ್ತಾನ್ ಯೂನಿಲಿವರ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ವಿಪ್ರೊ ಈ ವಾರ ಪ್ರಸಕ್ತ ಹಣಕಾಸು ವರ್ಷದ  ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ.

`ಮಾರಾಟದ ಒತ್ತಡ ಹೆಚ್ಚಿರುವುದರಿಂದ ಈ ವಾರ ರಾಷ್ಟ್ರೀಯ ಷೇರು  ವಿನಿಮಯ ಕೇಂದ್ರದ(ಎನ್‌ಎಸ್‌ಇ) ಸೂಚ್ಯಂಕ `ನಿಫ್ಟಿ' 5,900 ಅಂಶಗಳನ್ನು ದಾಟುವುದು ಕಷ್ಟ' ಎಂದು ಬೊನಾಂಜಾ ಪೋರ್ಟ್ ಫೋಲಿಯೊ ಸಂಸ್ಥೆಯ ಉಪಾಧ್ಯಕ್ಷ ರಾಕೇಶ್ ಗೋಯಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT