ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆವೇಶ ಬೇಡ, ಆತ್ಮೀಯತೆ ಸಾಕು-ಸಿಎಂ

Last Updated 9 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ವಿಧಾನ ಮಂಡಲದ ಉಭಯ ಸದನಗಳಲ್ಲಿ ಸದಸ್ಯರು ಮಾತನಾಡುವಾಗ ಆವೇಶಕ್ಕಿಂತ ಆತ್ಮೀಯತೆ ಹೆಚ್ಚಿರಲಿ. ಶುಷ್ಕವಾದ ಮಾತಿಗಿಂತ ಜನರ ಆಶಯಗಳ ಬಗ್ಗೆ ಭಾವನಾತ್ಮಕ ಸ್ಪಂದನೆ ಇರಲಿ.

ಜೊತೆಗೆ ಸದನ ಪ್ರವೇಶಿಸುವಾಗ ಅಹಂ ಭಾವವನ್ನು ಹೊರಗಡೆಯೇ ಬಿಟ್ಟುಬರುವ ಮನಸ್ಸೂ ನಮ್ಮದಾಗಲಿ...~
- ರಾಜ್ಯ ವಿಧಾನ ಪರಿಷತ್ತಿನ ಸದಸ್ಯರಿಗಾಗಿ ಬೆಂಗಳೂರಿನ ಹೊರವಲಯದಲ್ಲಿರುವ ಅಲಯನ್ಸ್ ವಿಶ್ವವಿದ್ಯಾಲಯ ಆವರಣದಲ್ಲಿ ಬುಧವಾರ ಆಯೋಜಿಸಲಾಗಿದ್ದ `ಪ್ರಶಿಕ್ಷಣ ಶಿಬಿರ~ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ವ್ಯಕ್ತಪಡಿಸಿದ ಅನಿಸಿಕೆಗಳು ಇವು.

ಸದನದ ಕಲಾಪಗಳು ಸುಗಮವಾಗಿ ನಡೆಯಲು ವಿಪಕ್ಷಗಳ ಮಾತನ್ನು ಆಡಳಿತ ಪಕ್ಷದವರು ಸಾವಧಾನವಾಗಿ ಆಲಿಸಬೇಕು. ವಿರೋಧ ಪಕ್ಷಗಳ ಮುಖಂಡರು ಸಕಾರಾತ್ಮಕ ಚರ್ಚೆಗೆ ಪೀಠಿಕೆ ಹಾಕಬೇಕು. ಇದೇ ಸೂತ್ರವನ್ನು ಇಟ್ಟುಕೊಂಡು ಮುಂದೆ ಸಾಗೋಣ. ಡಿಸೆಂಬರ್ 5 ರಿಂದ ಆರಂಭವಾಗಲಿರುವ ವಿಧಾನ ಮಂಡಲದ ಅಧಿವೇಶನ ಯಶಸ್ವಿಗೊಳಿಸೋಣ ಎಂದರು.

`1994ರಿಂದ ವಿಧಾನ ಮಂಡಲದ ಅಧಿವೇಶನಗಳನ್ನು ನಾನು ನೋಡುತ್ತಿದ್ದೇನೆ. ಅಧ್ಯಯನದ ಕೊರತೆಯಿಂದ ಚರ್ಚೆಯ ಗುಣಮಟ್ಟವೂ ಕುಸಿಯುತ್ತಿರುವುದು ಕಂಡುಬಂದಿದೆ. ಸದನದಲ್ಲಿ ಆರೋಗ್ಯಕರ ಚರ್ಚೆ ನಡೆಯುವಂತೆ ವರ್ತಿಸೋಣ~ ಎಂದು ಹೇಳಿದರು.

`ಎಂಬತ್ತರ ದಶಕದಲ್ಲಿ ಪರಿಷತ್ತಿಗೆ ಪ್ರವೇಶ ಪಡೆದ ನನಗೆ ಅಲ್ಲಿನ ಕಾರ್ಯವಿಧಾನಗಳ ಕುರಿತು ಯಾವುದೇ ಅರಿವಿರಲಿಲ್ಲ. ಹಾಗಾಗಿ ಕಲಾಪಗಳಲ್ಲಿ ಮಾತನಾಡಲು ಸಾಧ್ಯವೇ ಆಗುತ್ತಿರಲಿಲ್ಲ. ಇಂಥ ಮುಜುಗರದ ಸ್ಥಿತಿಯನ್ನು ಇಂದಿನ ಸದಸ್ಯರು ಅನುಭವಿಸಬಾರದು ಎಂಬ ಕಾರಣಕ್ಕೆ ಈ ಶಿಬಿರ ಆಯೋಜಿಸಲಾಗಿದೆ~ ಎಂದು ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್. ಶಂಕರಮೂರ್ತಿ     ವಿವರಿಸಿದರು.

10 ಲಕ್ಷ ದೇಣಿಗೆ: ಅಲಯನ್ಸ್ ವಿ.ವಿ. ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಇದೇ ಸಂದರ್ಭದಲ್ಲಿ 10 ಲಕ್ಷ ರೂಪಾಯಿಗಳ ಚೆಕ್ ನೀಡಲಾಯಿತು.

ಆಕ್ಷೇಪ: ಶಿಬಿರದ ಉದ್ಘಾಟನೆಗೂ ಮುನ್ನ ಡಾ. ಮಧುಕರ್ ಜಿ. ಅಂಗೂರ್ ಅವರು ವಿ.ವಿ. ಕುರಿತು ಪವರ್ ಪಾಯಿಂಟ್ ಪ್ರೆಸೆಂಟೇಷನ್ ತೋರಿಸಲು ಆರಂಭಿಸಿದರು. ವಿ.ವಿ.ಯಲ್ಲಿ ದೊರೆಯುತ್ತಿರುವ ವಿವಿಧ ಕೋರ್ಸ್‌ಗಳು, ಕ್ಯಾಂಪಸ್ ಕುರಿತ ಮಾಹಿತಿಯನ್ನು ಇದು ಒಳಗೊಂಡಿತ್ತು.

ಅವರ ಮಾತು ಅಂತ್ಯಗೊಳ್ಳುವಾಗ ಮಧ್ಯಪ್ರವೇಶಿಸಿದ ಜೆಡಿಎಸ್ ಸದಸ್ಯರಾದ ಸಂದೇಶ್ ನಾಗರಾಜ್ ಮತ್ತು ಇ. ಕೃಷ್ಣಪ್ಪ, `ನಾವು ಇಲ್ಲಿಗೆ ಬಂದಿರುವುದು ಇವರ ಹರಿಕಥೆ ಕೇಳುವುದಕ್ಕಲ್ಲ. ಶಿಬಿರಕ್ಕೂ ಇವರು ಹೇಳುತ್ತಿರುವುದಕ್ಕೂ ಏನು ಸಂಬಂಧ ಇದೆ~ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಪರಿಷತ್ತಿನ 75 ಸದಸ್ಯರ ಪೈಕಿ 63 ಮಂದಿ ಶಿಬಿರದಲ್ಲಿ ಪಾಲ್ಗೊಂಡಿದ್ದರು. ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ, ಪರಿಷತ್ತಿನ ಉಪ ಸಭಾಪತಿ ವಿಮಲಾ ಗೌಡ, ಪರಿಷತ್ತಿನಲ್ಲಿ ಸರ್ಕಾರದ ಮುಖ್ಯ ಸಚೇತಕರಾದ ಎ.ಎಚ್. ಶಿವಯೋಗಿಸ್ವಾಮಿ, ವಿರೋಧ ಪಕ್ಷದ ಮುಖ್ಯ ಸಚೇತಕ ಆರ್.ವಿ. ವೆಂಕಟೇಶ್, ಸಮಾಜ ಕಲ್ಯಾಣ ಸಚಿವ ಎ. ನಾರಾಯಣಸ್ವಾಮಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್. ಸುರೇಶ್‌ಕುಮಾರ್, ಪರಿಷತ್ತಿನ ವಿರೋಧ ಪಕ್ಷದ ನಾಯಕಿ ಮೋಟಮ್ಮ ವೇದಿಕೆಯಲ್ಲಿದ್ದರು.

ಸಂಸದ ಡಿ.ಬಿ. ಚಂದ್ರೇಗೌಡ, ಸಚಿವ ಸುರೇಶ್‌ಕುಮಾರ್, ಪರಿಷತ್ತಿನ ಸದಸ್ಯರಾದ ಬಸವರಾಜ ಹೊರಟ್ಟಿ ಮತ್ತು ಬಿ.ಎಲ್. ಶಂಕರ್, `ಪ್ರಜಾವಾಣಿ~ಯ ಕಾರ್ಯನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿ, ಲೇಖಕ ಬೇಳೂರು ಸುದರ್ಶನ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

ಸದಸ್ಯರಿಗೆ ಐ-ಪ್ಯಾಡ್
ಬೆಂಗಳೂರು:
ವಿಧಾನ ಪರಿಷತ್ತಿನ ಎಲ್ಲ ಸದಸ್ಯರಿಗೂ ಐ-ಪ್ಯಾಡ್ ನೀಡಲು ಸರ್ಕಾರ ಒಪ್ಪಿಗೆ ನೀಡಿದೆ. ಇದರ ಪರಿಣಾಮಕಾರಿ ಬಳಕೆಯ ಕುರಿತು ಇನ್ನು 15 ದಿನಗಳಲ್ಲಿ ಪ್ರತ್ಯೇಕ ಶಿಬಿರ ಆಯೋಜಿಸಲಾಗುವುದು ಎಂದು ಸಭಾಪತಿ ಡಿ.ಎಚ್. ಶಂಕರಮೂರ್ತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಘೋಷಿಸಿದರು.

ಐ-ಪ್ಯಾಡ್ ನೀಡುವ ಪ್ರಸ್ತಾವನೆಗೆ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ. ಪ್ರತಿ ಐ-ಪ್ಯಾಡ್‌ಗೆ ಅಂದಾಜು 45 ಸಾವಿರ ರೂಪಾಯಿ ಖರ್ಚಾಗಲಿದೆ ಎಂದು ಅವರು ತಿಳಿಸಿದರು.

ಪರಿಷತ್ತಿನ ಗ್ರಂಥಾಲಯವನ್ನು ಸಂಪೂರ್ಣ ಡಿಜಿಟೈಸ್ ಮಾಡಲಾಗಿದೆ. ಇದನ್ನು ಶೀಘ್ರದಲ್ಲೇ ಸಂಸತ್ತಿನ ಗ್ರಂಥಾಲಯದೊಂದಿಗೆ ಬೆಸೆಯಲಾಗುವುದು. ಆಗ ಸದಸ್ಯರು ಇಲ್ಲಿ ಕುಳಿತುಕೊಂಡೇ ಸಂಸತ್ತಿನ ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಓದುವ ಅವಕಾಶ ಲಭ್ಯವಾಗಲಿದೆ ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT