ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶೀರ್ವಾದ ಪಡೆವಾಸೆ

Last Updated 15 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಹೆಣ್ಣು ಭ್ರೂಣ ಹತ್ಯೆ ಹೀಗೇ ಮುಂದುವರಿದರೆ ಏನಾಗಬಹುದು? ಹೆಣ್ಣು ಮಕ್ಕಳೇ ಇಲ್ಲದ ಸ್ಥಿತಿಯಲ್ಲಿ ಗಂಡಸರ ಪಾಡೇನು? ಅದಕ್ಕೆ ಪರಿಹಾರ ಯಾವುದು? ಎಂದು ಹುಡುಕಿ, ಅದನ್ನು ಚಿತ್ರವಾಗಿಸಿದ್ದಾರಂತೆ ನಿರ್ದೇಶಕ ವಿಷ್ಣುಪ್ರಿಯ. ಚಿತ್ರದ ಹೆಸರು `ಆಶೀರ್ವಾದ~. ಬೆಂಗಳೂರು ಸುತ್ತಮುತ್ತ ಶೇ 90ರಷ್ಟು ಚಿತ್ರೀಕರಣ ಮುಗಿಸಿರುವ ಅವರು ಹಾಡುಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ.

ಹೆಣ್ಣುಮಕ್ಕಳ ಕೊರತೆ ಮತ್ತು ರಾಜಕೀಯ ಎಡಬಿಡಂಗಿತನವನ್ನು ಪ್ರಧಾನವಾಗಿಟ್ಟುಕೊಂಡು ಕತೆ ಹೆಣೆದಿರುವ ವಿಷ್ಣುಪ್ರಿಯ ಚಿತ್ರದ ಅಂತ್ಯದಲ್ಲಿ ಸಿನಿಮೀಯ ರೀತಿಯ ಪರಿಹಾರವನ್ನೂ ಹೇಳುತ್ತಾರಂತೆ.

ಅಂದಹಾಗೆ ಅವರು ಉಪೇಂದ್ರ ಅವರ ಸಿನಿಮಾಗಳನ್ನು ನೋಡಿ, ಸ್ಫೂರ್ತಿ ಪಡೆದು ಅವರಂತೆ ಆಗಲು ಬಂದವರು. ಅದಕ್ಕಾಗಿ ತಮ್ಮ ಚಿತ್ರದ `ಆಶೀರ್ವಾದ~ ಶೀರ್ಷಿಕೆಗೆ ಅಕ್ಷರಗಳ ಮೊರೆ ಹೋಗದೇ ಹಸ್ತದ ಚಿತ್ರವನ್ನು ಹಾಕಿದ್ದಾರೆ.

ಇದು ಉಪೇಂದ್ರ ಅವರ ಶೈಲಿಯ ಕಾಪಿ ಅಲ್ಲವೇ? ಎಂದರೆ `ಗಾಂಧಿ ತತ್ವವನ್ನು ಅನುಸರಿಸಿದರೆ ಅದು ಗಾಂಧಿಯ ಕಾಪಿ ಆಗುತ್ತದೆಯೇ? ಉಪೇಂದ್ರ ಅವರ ತಂತ್ರಜ್ಞಾನ ಮತ್ತು ಕ್ರಿಯಾಶೀಲತೆಯನ್ನು ಮಾದರಿಯಾಗಿಟ್ಟುಕೊಂಡರೆ ಅದು ಕಾಪಿ ಹೇಗಾದೀತು~ ಎಂದು ಪ್ರಶ್ನಿಸುತ್ತಾರೆ.

ದೊಡ್ಡಬಳ್ಳಾಪುರದ ವಿಷ್ಣುಪ್ರಿಯ ಎಂ.ಎ. ಓದಿದವರು. ಉಪೇಂದ್ರ ಅವರ ಸಿನಿಮಾಗಳನ್ನು ನೋಡಿ ಅವರೊಂದಿಗೆ ಕೆಲಸ ಮಾಡಬೇಕೆಂಬಾಸೆಯಿಂದ ಹೋಗಿ ಅವಕಾಶ ಕೇಳಿದವರು. ಆಗಿನ್ನೂ ಮೀಸೆ ಚಿಗುರದ ಅವರನ್ನು ಉಪೇಂದ್ರ ಓದುವಂತೆ ಪ್ರೇರೇಪಿಸಿ ಕಳುಹಿಸಿದ್ದರಂತೆ.

ಬಳಿಕ ಕ್ಲ್ಯಾಪ್ ಬಾಯ್ ಆಗಿ ಚಿತ್ರರಂಗಕ್ಕೆ ಪ್ರವೇಶಿಸಿದ ಅವರು ಚಿತ್ರರಂಗದ ಆಗುಹೋಗುಗಳನ್ನು ತಿಳಿದುಕೊಂಡು ನಿರ್ದೇಶನದತ್ತ ಒಲವು ಬೆಳೆಸಿಕೊಂಡಿದ್ದಾರೆ. ಅವರ ನಿರ್ದೇಶನದ ಮೊದಲ ಚಿತ್ರ `ಮಳ್ಳಿ~. ಅದಕ್ಕೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಆ ಸಮಯದಲ್ಲಿ ಪರಿಚಿತರಾದ ಸೂರ್ಯ ಮೋಹನ್ ಎಂಬುವರಿಗೆ `ಆಶೀರ್ವಾದ~ದ ಕತೆ ಹೇಳಿದರಂತೆ. ಸೂರ್ಯ ಮೋಹನ್ ಚಿತ್ರವನ್ನು ನಿರ್ಮಿಸಲು ಮುಂದಾಗಿದ್ದಷ್ಟೇ ಅಲ್ಲ, ಚಿತ್ರದ ಎರಡನೇ ನಾಯಕನಾಗಿಯೂ ನಟಿಸಿದ್ದಾರೆ.

`ಜನರಿಗೆ ಮನರಂಜನೆಯೊಂದಿಗೆ ಸಂದೇಶ ನೀಡುವ ಉದ್ದೇಶ ನನ್ನನ್ನು ಈ ಕ್ಷೇತ್ರಕ್ಕೆ ಕರೆತಂದಿತು. ಸಿನಿಮಾ ಒಂದು ಪ್ರಭಾವಶಾಲಿ ಮಾಧ್ಯಮ. ಅದರ ಮೂಲಕ ಜನರನ್ನು ಬೇಗ ತಲುಪಬಹುದು~ ಎನ್ನುವ ವಿಷ್ಣುಪ್ರಿಯ, ಚಿತ್ರರಂಗದಲ್ಲಿ ಯಶಸ್ಸಿಗಾಗಿ ಕಷ್ಟಪಡಲು ಸಿದ್ಧವಾಗಿದ್ದಾರೆ. `ಸುಲಭವಾಗಿ ಯಶ ಸಿಕ್ಕರೆ ಅದು ಹೆಚ್ಚು ದಿನ ಉಳಿಯುವುದಿಲ್ಲ. ಅದಕ್ಕಾಗಿ ಕಷ್ಟಪಡಲು ಸಿದ್ಧ~ ಎನ್ನುತ್ತಾರೆ.

`ನನ್ನದು ಮಾಸ್ ಜನರ ಸಬ್ಜೆಕ್ಟ್. ನನಗೂ ಕ್ಲಾಸ್ ಜನರಿಗೆ ಸಿನಿಮಾ ಮಾಡುವಾಸೆ ಇದೆ. ಮೊದಲು ನಿರ್ಮಾಪಕರಿಗೆ ಲಾಭ ತಂದುಕೊಡುವಂಥ ಸಿನಿಮಾ ಮಾಡಬೇಕು. ಅದರಿಂದ ಮತ್ತೆ ನಿರ್ಮಾಪಕರು ಸಿಗುತ್ತಾರೆ. ಆಗ ಅಂಥ ಸಿನಿಮಾಗಳ ಕಡೆ ಹೊರಳಬಹುದು~ ಎನ್ನುವ ಅವರು ಗಿಮಿಕ್‌ಗಳನ್ನು ಇಷ್ಟಪಡುವ ನಿರ್ದೇಶಕ.

`ನನ್ನ ಸಿನಿಮಾ ಸಂಭಾಷಣೆಯನ್ನು ಅವಲಂಬಿಸಿದೆ. ಕತೆ ಎಲ್ಲೂ ಬೋರ್ ಆಗದಂತೆ ಮಾಡಲು ನಾನು ಮಾಡಿರುವ ಗಿಮಿಕ್ ಅದು. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯಲು ಅಂಥ ಗಿಮಿಕ್‌ಗಳ ಅಗತ್ಯ ಇದೆ~ ಎಂದು ನುಡಿಯುತ್ತಾರೆ ವಿಷ್ಣುಪ್ರಿಯ.

 ಇನ್ನು ಚಿತ್ರದಲ್ಲಿ ಇರುವ ಎರಡೇ ಹಾಡುಗಳಿಗೆ ವಿ.ಮನೋಹರ್ ಸಂಗೀತ ನೀಡಿದ್ದಾರೆ. ಶ್ರೀಹರಿ, ದಿಶಾ ಪೂವಯ್ಯ ಪ್ರಧಾನ ಪಾತ್ರಧಾರಿಗಳು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT