ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸೀಸ್‌ಗೆ ಕಂಟಕವಾಗುವುದೇ ವಿಂಡೀಸ್?

Last Updated 4 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕೊಲಂಬೊ: ಈಗ ಎಲ್ಲರ ಚಿತ್ತ ಹರಿಯುತ್ತಿರುವುದು ವೆಸ್ಟ್‌ಇಂಡೀಸ್‌ನ ಕ್ರಿಸ್ ಗೇಲ್ ಹಾಗೂ ಆಸ್ಟ್ರೇಲಿಯಾದ ಶೇನ್ ವಾಟ್ಸನ್ ಅವರತ್ತ. ಈ ಆಟಗಾರರು ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ತೋರುತ್ತಿದ್ದಾರೆ.

ಈ ಆಟಗಾರರ ಅಮೋಘ ಪ್ರದರ್ಶನವೇ ಉಭಯ ತಂಡಗಳು ಸೆಮಿಫೈನಲ್ ಪ್ರವೇಶಿಸಲು ಪ್ರಮುಖ ಕಾರಣ. ವಿಶೇಷವೆಂದರೆ ಈ ತಂಡಗಳು ಶುಕ್ರವಾರ ರಾತ್ರಿ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿರುವ ನಾಲ್ಕರ ಘಟ್ಟದ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ.

ವಾಟ್ಸನ್ ಅವರನ್ನು ನಿಯಂತ್ರಿಸಲು ಕೆರಿಬಿಯನ್ ಬಳಗದವರು ತಂತ್ರ ರೂಪಿಸುತ್ತಿದ್ದರೆ, ಗೇಲ್ ಅವರನ್ನು ಬೇಗ ಔಟ್ ಮಾಡಲು ಕಾಂಗರೂ ಪಡೆ ಯೋಜನೆ ರೂಪಿಸುತ್ತಿದೆ. ಆಲ್‌ರೌಂಡರ್ ವಾಟ್ಸನ್ ಬ್ಯಾಟಿಂಗ್‌ನಲ್ಲಿ 242 ರನ್ ಹಾಗೂ ಬೌಲಿಂಗ್‌ನಲ್ಲಿ 11 ವಿಕೆಟ್ ಕಬಳಿಸಿದ್ದಾರೆ. ಜೊತೆಗೆ ನಾಲ್ಕು ಬಾರಿ `ಪಂದ್ಯ ಶ್ರೇಷ್ಠ~ ಗೌರವ ಪಡೆದಿದ್ದಾರೆ. ಗೇಲ್ ಒಟ್ಟು 10 ಸಿಕ್ಸರ್ ಎತ್ತಿದ್ದಾರೆ. ಎರಡು ಅರ್ಧ ಶತಕ ಗಳಿಸಿದ್ದಾರೆ. ಪಂದ್ಯದ ಫಲಿತಾಂಶವನ್ನೇ ಬದಲಾಯಿಸುವ ತಾಕತ್ತು ಅವರಲ್ಲಿದೆ.

ಒಂದೊಮ್ಮೆ ವಿಶ್ವ ಕ್ರಿಕೆಟ್‌ನಲ್ಲಿ ಪಾರಮ್ಯ ಸಾಧಿಸಿದ್ದ ವಿಂಡೀಸ್ ತಂಡದವರು ಕೆಲ ವರ್ಷಗಳಿಂದ ಕಳಪೆ ಪ್ರದರ್ಶನ ತೋರುತ್ತಿದ್ದರು. ಆದರೆ ಈ ತಂಡದವರು ಈ ಟೂರ್ನಿಯಲ್ಲಿ ತೋರುತ್ತಿರುವ ಪ್ರದರ್ಶನ ಎಲ್ಲರನ್ನೂ ಅಚ್ಚರಿಯಲ್ಲಿ ಮುಳುಗಿಸಿದೆ. ಇದಕ್ಕೆ ಕಾರಣ ಗೇಲ್ ಆಟ. ಈ ಬಾರಿ ಚಾಂಪಿಯನ್ ಆಗಿ ತಮ್ಮ ಗತವೈಭವನ್ನು ನೆನಪಿಸುವ ತವಕದಲ್ಲಿ ಈ ತಂಡದವರಿದ್ದಾರೆ. ಅದು ಈ ದ್ವೀಪ ರಾಷ್ಟ್ರದಲ್ಲಿ ಕುಸಿದಿರುವ ಕ್ರಿಕೆಟ್ ಆಸಕ್ತಿಯನ್ನು ಹೆಚ್ಚಿಸಬಹುದು.

ಗೇಲ್ ಮಾತ್ರವಲ್ಲ, ಮಾರ್ಲೊನ್ ಸ್ಯಾಮುಯೆಲ್ಸ್, ಜಾನ್ಸನ್ ಚಾರ್ಲ್ಸ್ ಹಾಗೂ ಕೀರನ್ ಪೊಲಾರ್ಡ್ ಅವರಂಥ ಆಟಗಾರರು ವಿಂಡೀಸ್ ತಂಡದಲ್ಲಿದ್ದಾರೆ. ಬೌಲಿಂಗ್ ವಿಭಾಗವೂ ಪ್ರತಿಭಾವಂತರನ್ನು ಒಳಗೊಂಡಿದೆ. ಪ್ರಮುಖವಾಗಿ ಸ್ಪಿನ್ನರ್ ಸುನಿಲ್ ನಾರಾಯಣ್ ಎದುರಾಳಿ ತಂಡಕ್ಕೆ ತಲೆನೋವಾಗಿ ಪರಿಣಮಿಸಿದ್ದಾರೆ.

ವಿಂಡೀಸ್ 1994ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಜಯಿಸಿದ ಮೇಲೆ ಯಾವುದೇ ಪ್ರಮುಖ ಟೂರ್ನಿಗಳ ಫೈನಲ್ ತಲುಪಿಲ್ಲ. ಈ ಬಾರಿ ಅಂಥ ಅವಕಾಶ ಮುಂದಿದೆ. ಚುಟುಕು ಕ್ರಿಕೆಟ್‌ನಲ್ಲಿ ಸತತ ಎರಡನೇ ಬಾರಿ ಫೈನಲ್ ತಲುಪುವ ತವಕದಲ್ಲಿ ಆಸ್ಟ್ರೇಲಿಯಾ ತಂಡವಿದೆ. ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ ಹಲವು ವರ್ಷ ಪಾರಮ್ಯ ಸಾಧಿಸಿದ್ದ ಈ ತಂಡ ಒಮ್ಮೆಯೂ ಚುಟುಕು ವಿಶ್ವಕಪ್ ಗೆದ್ದಿಲ್ಲ. 

 `ಸೂಪರ್ 8~ ಹಂತದ ತಮ್ಮ ಕೊನೆಯ ಪಂದ್ಯದಲ್ಲಿ ಈ ತಂಡದವರು ಪಾಕಿಸ್ತಾನ ಎದುರು ಸೋಲು ಕಂಡಿದ್ದರು. ಆಸೀಸ್ ತಂಡದ ಮಧ್ಯಮ ಕ್ರಮಾಂಕ ದುರ್ಬಲವಾಗಿದೆ. ಈ ಕಾರಣ ಡೇವಿಡ್ ಹಸ್ಸಿಗೆ 11ರ ಬಳಗದಲ್ಲಿ ಸ್ಥಾನ ಲಭಿಸುವ ಸಾಧ್ಯತೆ ಇದೆ. ಹಾಗಾದರೆ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಸ್ಥಾನ ತೆರವು ಮಾಡಬೇಕಾಗುತ್ತದೆ.

ಆದರೆ ವಿಂಡೀಸ್ ಕೆಲ ವಿವಾದಕ್ಕೆ ಸಿಕ್ಕಿಕೊಂಡಿದೆ. ಎರಡು ದಿನಗಳ ಹಿಂದೆಯಷ್ಟೇ ಕ್ರಿಸ್ ಗೇಲ್ ವಾಸ್ತವ್ಯ ಹೂಡಿರುವ ಹೋಟೆಲ್‌ನ ಕೊಠಡಿ ಪ್ರವೇಶಿಸಿದ್ದ ಮೂವರು ಯುವತಿಯರನ್ನು ಬಂಧಿಸಲಾಗಿತ್ತು. ಈ ಘಟನೆ ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ತಂಡಗಳು: ಆಸ್ಟ್ರೇಲಿಯಾ: ಜಾರ್ಜ್ ಬೇಲಿ (ನಾಯಕ),ಡ್ಯಾನ್ ಕ್ರಿಸ್ಟಿಯಾನ್, ಪ್ಯಾಟ್ ಕಮಿನ್ಸ್, ಕ್ಸೇವಿಯರ್ ಡೋಹರ್ತಿ, ಬೆನ್ ಹಿಲ್ಫೆನ್ಹಾಸ್, ಬ್ರಾಡ್ ಹಾಗ್, ಡೇವಿಡ್ ಹಸ್ಸಿ, ಮೈಕಲ್ ಹಸ್ಸಿ, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಲಿಂಟ್ ಮೆಕ್‌ಕೇ, ಮಿಶೆಲ್ ಸ್ಟಾರ್ಕ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಶೇನ್ ವಾಟ್ಸನ್ ಹಾಗೂ ಕೆಮರೂನ್ ವೈಟ್.

ವೆಸ್ಟ್‌ಇಂಡೀಸ್: ಡರೆನ್ ಸಮಿ (ನಾಯಕ), ಡ್ವೇನ್ ಬ್ರಾವೊ, ಸ್ಯಾಮುಯೆಲ್ ಬದ್ರಿ, ಡರೆನ್ ಬ್ರಾವೊ, ಜಾನ್ಸನ್ ಚಾರ್ಲ್ಸ್, ಫಿಡೆಲ್ ಎಡ್ವರ್ಡ್ಸ್, ಕ್ರಿಸ್ ಗೇಲ್, ಕೀರನ್ ಪೊಲಾರ್ಡ್, ಸುನಿಲ್ ನಾರಾಯಣ್, ದೆನೇಶ್ ರಾಮ್ದಿನ್, ರವಿ ರಾಂಪಾಲ್, ಆ್ಯಂಡ್ರೆ ರಸೆಲ್, ಮಾರ್ಲೊನ್ ಸ್ಯಾಮುಯೆಲ್ಸ್, ಲೆಂಡ್ಲ್ ಸಿಮನ್ಸ್ ಹಾಗೂ ಡ್ವೇನ್ ಸ್ಮಿತ್.
ಪಂದ್ಯ ಆರಂಭ: ರಾತ್ರಿ 7 ಗಂಟೆಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT