ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಓಪನ್: ಜೊಕೊವಿಚ್‌ಗೆ ಸುಲಭ ಜಯ

Last Updated 21 ಜನವರಿ 2012, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್ (ಎಎಫ್‌ಪಿ/ಪಿಟಿಐ): ಪ್ರಶಸ್ತಿಯ ಹಾದಿಯಲ್ಲಿ ಹೆಜ್ಜೆ ಹಾಕಿರುವ ಸರ್ಬಿಯಾದ ನೊವಾಕ್ ಜೊಕೊವಿಚ್ ಹಾಗೂ ರಷ್ಯಾದ ಮರಿಯಾ ಶರ್ಪೋವಾ ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದ ಸಿಂಗಲ್ಸ್‌ನ ಮೂರನೇ ಸುತ್ತಿನ ಪಂದ್ಯದಲ್ಲಿ ಗೆಲುವು ಸಾಧಿಸಿದರು.

ಮೆಲ್ಬರ್ನ್ ಪಾರ್ಕ್ ಕೋರ್ಟ್‌ನಲ್ಲಿ ಶನಿವಾರ ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳ ಮಧ್ಯೆ ನೊವಾಕ್ 6-0, 6-1, 6-1ರಲ್ಲಿ ಫ್ರಾನ್ಸ್‌ನ ನಿಕೊಲೆಸ್ ಮಹುತ್ ಎದುರು ಸುಲಭ ಜಯ ಸಾಧಿಸಿದರು. ಕಳೆದ ಸಲದ ಚಾಂಪಿಯನ್‌ಗೆ ಈ ಪಂದ್ಯದಲ್ಲಿ ಗೆಲುವು ಕಷ್ಟವಾಗಲಿಲ್ಲ. 74 ನಿಮಿಷದಲ್ಲಿ ಗೆಲುವಿನ ನಗು ಬೀರಿದರು.

ಇದೇ ವಿಭಾಗದ ಸಿಂಗಲ್ಸ್‌ನ ಇತರ ಪಂದ್ಯಗಳಲ್ಲಿ ನಾಲ್ಕನೇ ಶ್ರೇಯಾಂಕದ ಇಂಗ್ಲೆಂಡ್‌ನ ಆ್ಯಂಡಿ ಮರ‌್ರೆ 6-4, 6-2, 6-0ರಲ್ಲಿ ಫ್ರಾನ್ಸ್‌ನ ಮೈಕಲ್ ಲೊದ್ರಾ ಮೇಲೂ, ಫ್ರಾನ್ಸ್‌ನ ಜೊ ವಿಲ್ಫ್ರೆಡ್ ಸೊಂಗಾ 6-2, 6-2, 6-2ರಲ್ಲಿ ಪೊರ್ಚುಗಲ್‌ನ ಫ್ರೆಡಿರಿಕೊ ಗಿಲ್ ವಿರುದ್ಧವೂ ಜಯ ಪಡೆದರು.

ಫ್ರಾನ್ಸ್‌ನ ರಿಚರ್ಡ್ ಗಾಸ್ಕ್ವೆಟ್ 6-3, 6-3, 6-1ರಲ್ಲಿ ಸರ್ಬಿಯಾದ ಜಾಂಕೊ ತಿಪ್ಸರೆವಿಕ್ ಮೇಲೂ, ಸ್ಪೇನ್‌ನ ಡೇವಿಡ್ ಫೆರರ್ 7-5, 6-2, 6-1ರಲ್ಲಿ ಅರ್ಜೆಂಟೀನಾದ ಜುವಾನ್ ಇಗ್ನೊಸಿಯೊ ವಿರುದ್ಧವೂ, ಜಪಾನ್‌ನ ಕೈ ನಿಷಿಕೋರಿ 4-6, 7-6, 7-6, 6-3ರಲ್ಲಿ ಫ್ರಾನ್ಸ್‌ನ ಜೂಲಿಯನ್ ಬೆನೆಟು ಮೇಲೂ ಗೆಲುವು ಪಡೆದು ನಾಲ್ಕನೇ ಸುತ್ತಿಗೆ ಪ್ರವೇಶಿಸಿದರು.

ಆಸ್ಟ್ರೇಲಿಯದ ಲೇಟನ್ ಹೆವಿಟ್ 4-6, 6-3, 7-6, 6-3 ರಲ್ಲಿ ಕೆನಡಾದ ಮಿಲೋಸ್ ರೋನಿಕ್ ವಿರುದ್ಧ ಗೆಲುವು ಸಾಧಿಸಿದರು.

ಶರ್ಪೋವಾಗೆ ಗೆಲುವು: ರಷ್ಯಾದ ಮರಿಯಾ ಶರ್ಪೋವಾ 6-1, 6-2ರಲ್ಲಿ ಜರ್ಮನಿಯ ಅಂಜೆಲಿಕ್ ಕೆರ್ಬೆರ್ ಎದುರು ಮೂರನೇ ಸುತ್ತಿನ ಪಂದ್ಯದಲ್ಲಿ ಗೆಲುವು ಸಾಧಿಸಿದರು. 87 ನಿಮಿಷ ನಡೆದ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಆಟಗಾರ್ತಿಗೆ ಗೆಲುವು ಸುಲಭವಾಗಿ ದಕ್ಕಿತು.

ಇದೇ ವಿಭಾಗದ  ಇತರ ಪಂದ್ಯಗಳಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ 6-1, 6-1ರಲ್ಲಿ ಹಂಗೇರಿಯಾದ ಗ್ರೀಟಾ ಅರ್ನ್ ಮೇಲೂ, ಜರ್ಮನಿಯ ಸಬಿನ್ ಲಿಸಿಕಿ 2-6, 6-4, 6-2ರಲ್ಲಿ ರಷ್ಯಾದ ಸ್ವೆಟ್ಲಾನಾ ಕುಜ್ನೆತ್ಸೊವಾ ವಿರುದ್ಧವೂ, ಸರ್ಬಿಯಾದ ಅನಾ ಇವನೋವಿಚ್ 6-3, 6-4ರಲ್ಲಿ ಅಮೆರಿಕದ ವಾನಿಯಾ ಕಿಂಗ್ ಮೇಲೂ, ಶ್ರೇಯಾಂಕ ರಹಿತ ಆಟಗಾರ್ತಿ ರಷ್ಯಾದ ಏಕ್ತರೀನಾ ಮಕರೊವಾ 7-6, 6-1ರಲ್ಲಿ ಏಳನೇ ಶ್ರೇಯಾಂಕದ ರಷ್ಯಾದ ವೆರಾ ಜೊನೆರೇವಾ ವಿರುದ್ಧವೂ ಗೆಲುವು ಸಾಧಿಸಿದರು.

ವಿಂಬಲ್ಡನ್ ಚಾಂಪಿಯನ್ ಜೆಕ್ ಗಣರಾಜ್ಯದ  ಪೆಟ್ರಾ ಕ್ವಿಟೋವಾ ಸುಲಭವಾಗಿ ಗೆಲುವು ಪಡೆದರು. ಈ ಆಟಗಾರ್ತಿ 6-1, 1-0 ಸೆಟ್‌ಗಳಲ್ಲಿ ಮುನ್ನಡೆ ಹೊಂದಿದ್ದಾಗ ರಷ್ಯಾದ ಎದುರಾಳಿ ಮರಿಯಾ ಕಿರಿಲೆಂಕೊ ಗಾಯದ ಕಾರಣ ಪಂದ್ಯ ತ್ಯಜಿಸಿದರು.

ಪ್ರೀ ಕ್ವಾರ್ಟರ್ ಫೈನಲ್‌ಗೆ ಸಾನಿಯಾ-ವೆಸ್ನಿನಾ: ಭಾರತದ ಸಾನಿಯಾ ಮಿರ್ಜಾ ಹಾಗೂ ರಷ್ಯಾದ ಎಲೆನಾ ವೆಸ್ನಿನಾ ಜೋಡಿ ಮಹಿಳೆಯರ ವಿಭಾಗದ ಡಬಲ್ಸ್‌ನಲ್ಲಿ ಪ್ರೀ ಕ್ವಾರ್ಟರ್‌ಫೈನಲ್ ಪ್ರವೇಶಿಸಿತು. ಈ ಜೋಡಿ 7-5, 7-5ರಲ್ಲಿ ಜೆಕ್ ಗಣರಾಜ್ಯದ ಇವಾ ಬಿರ‌್ನೆರೊವಾ-ಇಟಲಿಯ ಅಲ್ಬೆರ್ಟಾ ಬ್ರಾಂತಿ ಎದುರು ಗೆಲುವು ಪಡೆಯಿತು.

ಭೂಪತಿ-ಬೋಪಣ್ಣಗೆ ಗೆಲುವು: ಪುರುಷರ ಡಬಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಭಾರತದ ಮಹೇಶ್‌ಭೂಪತಿ-ರೋಹನ್ ಬೋಪಣ್ಣ 6-2, 6-2ರಲ್ಲಿ ಆಸ್ಟ್ರೇಲಿಯಾದ ಕಾರ್ಸ್ಟೆನ್ ಬಾಲ್-ಫಿಲಿಪ್ಪೀನ್ಸ್‌ನ ಟ್ರಿಟ್ ಕಾನ್ರರ್ಡ್ ಎದುರು ಗೆಲುವು ಪಡೆದರು. ಈ ಪಂದ್ಯ 58 ನಿಮಿಷಗಳ ಕಾಲ ನಡೆಯಿತು. ಈ ಮೂಲಕ ಭಾರತದ ಜೋಡಿ ಪ್ರೀ ಕ್ವಾರ್ಟರ್‌ಫೈನಲ್ ಪ್ರವೇಶಿಸಿತು.

ಇನ್ನೊಂದು ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಬಲ್ಗೇರಿಯಾದ ಮ್ಯಾಕ್ಸ್ ಮಿರ್ನಿ-ಕೆನಡಾದ ಡೇನಿಯಲ್ ನೆಸ್ಟರ್  7-6, 6-2ರಲ್ಲಿ ಕೊಲಂಬಿಯಾದ ಜುವಾನ್ ಸೆಬಾಸ್ಟಿಯನ್ ಕಾಬೆಲ್-ರಾಬರ್ಟ್ ಫರಹ್ ಎದುರು ಜಯ ಸಾಧಿಸಿದರು.

ಮಿಶ್ರ ಡಬಲ್ಸ್ ವಿಭಾಗದ ಪ್ರಥಮ ಸುತ್ತಿನ ಪಂದ್ಯದಲ್ಲಿ ಭಾರತದ ಲಿಯಾಂಡರ್ ಪೇಸ್-ರಷ್ಯಾದ ಎಲೆನಾ ವೆಸ್ನಿನಾ 6-2, 7-5ರಲ್ಲಿ ರಷ್ಯಾದ ಅನಸ್ತೇಸಿಯಾ ಪೆವ್ಲಚಂಕೊವಾ ಬಲ್ಗೇರಿಯಾದ ಮ್ಯಾಕ್ಸ್ ಮಿರ್ನಿ ಎದುರು ಗೆಲುವು ಪಡೆದು ಎರಡನೇ ಸುತ್ತಿಗೆ ಲಗ್ಗೆ ಇಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT