ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆಯಲ್ಲಿ ಎಮ್ಮೆ ವಾಸ; ಸೊಳ್ಳೆ ಸಂತಾನ!

Last Updated 18 ಸೆಪ್ಟೆಂಬರ್ 2013, 9:27 IST
ಅಕ್ಷರ ಗಾತ್ರ

ಶಿವಮೊಗ್ಗ: ಸಾರ್ವಜನಿಕ ಸ್ವತ್ತು ಪ್ರಭಾವಿಗಳ ಕಣ್ಣಿಗೋ, ರಾಜಕಾರಣಿಗಳ ವಕ್ರ ದೃಷ್ಟಿಗೋ ಬಿದ್ದರೆ ಸಾರ್ವಜನಿಕರ ಪಾಲಿಗೆ ಅದರ ಆಯಸ್ಸು ಮುಗಿದಂತೆ. ಸಾರ್ವಜನಿಕರು ಇಂತಹ ಆಸ್ತಿ–ಪಾಸ್ತಿಗಳಿಂದ ಅನುಕೂಲ ಪಡೆಯುವುದಿರಲಿ ಪ್ರವೇಶಕ್ಕೂ ಅವಕಾಶ ಇರುವುದಿಲ್ಲ. ಇಂತಹದ್ದೇ ಪ್ರಕರಣವೊಂದು ತಾಲ್ಲೂಕಿನ ಗೊಂಧಿ ಚಟ್ನಹಳ್ಳಿಯಲ್ಲಿ ನಡೆದಿದೆ.

ಗೊಂಧಿ ಚಟ್ನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರ, ಸುತ್ತಲಿನ ಗ್ರಾಮಗಳ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುತ್ತಿರುವ ಆಸ್ಪತ್ರೆ. ಈ ಆಸ್ಪತೆ್ರ ಜಾಗದಲಿ್ಲ ಎಮ್ಮೆಗಳ ಕೊಟ್ಟಿಗೆ, ತಿಪ್ಪೆಗುಂಡಿ ನಿರ್ಮಾಣವಾಗಿವೆ.

ಈ ಆಸ್ಪತ್ರೆಗೆ ಸುಮಾರು 4 ಎಕರೆ ಜಾಗವಿದ್ದು, ಇದನ್ನು ಸ್ಥಳೀಯರೊಬ್ಬರು  ಕಬಳಿಸಲು ಪ್ರಯತ್ನಿಸುತ್ತಿದ್ದಾರೆ. ಕೊಟ್ಟಿಗೆ, ತಿಪ್ಪೆಗುಂಡಿ ನಿರ್ಮಾಣದಿಂದಾಗಿ ಆಸ್ಪತ್ರೆ ಆವರಣ ಅಕ್ಷರಶಃ ಕೊಳೆತು ನಾರುತ್ತಿದೆ. ಆಸ್ಪತೆ್ರಯೇ ರೋಗಗಳ ತಾಣವಾಗಿದೆ. ಆಸ್ಪತ್ರೆಗೆ ಕಾಲಿಟ್ಟರೆ ಕಾಯಿಲೆ ಗುಣವಾಗುವುದಿರಲಿ ಮತ್ತಷ್ಟು ರೋಗಗಳು ಅಂಟಿಕೊಳ್ಳುವ ಆತಂಕ ಸಾರ್ವಜನಿಕರಲ್ಲಿ ಮೂಡಿದೆ.

ರೋಗಿಗಳಿಗೆ ತೊಂದರೆ ಆಗುತ್ತಿರುವ ಜತೆಗೆ ಆಸ್ಪತ್ರೆಯ ಸಿಬ್ಬಂದಿಗಳೂ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಆಸ್ಪತ್ರೆಯ ಆವರಣ ಹದಗೆಟ್ಟಿರುವುದರಿಂದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಆಸ್ಪತ್ರೆ ಕೊಳಕಾಗಿರುವುದರಿಂದ ರೋಗಿಗಳಿಗೆ ಸೋಂಕು ತಗುಲಿ ರೋಗ ಉಲ್ಬಣಗೊಳ್ಳುವ ಸಾಧ್ಯತೆ ಇದೆ ಎಂದು ಆಸ್ಪತ್ರೆ ಸಿಬ್ಬಂದಿ ಆತಂಕ ವ್ಯಕ್ತಪಡಿಸುತ್ತಾರೆ.

ಆಸ್ಪತ್ರೆಯ ಜಾಗವನ್ನು ಒತ್ತುವರಿ ಮಾಡಿರುವ ವ್ಯಕ್ತಿಗೆ ತನ್ನ ಪತ್ನಿಯ ಹೆಸರಿನಲ್ಲಿ ಸ್ವಂತ ಮನೆ, ಜಮೀನು ಇದೆ. ಆದರೆ, ತಾನು ನಿರ್ಗತಿಕ; ತನಗೆ ಮನೆ–ಮಠವಿಲ್ಲ; ಮನೆ ನಿರ್ಮಾಣ ಮಾಡಿಕೊಳ್ಳಲು ಈ ಭೂಮಿಯನ್ನು ತನಗೇ ನೀಡಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾನೆ. ಭೂಮಿ ಕಬಳಿಸುವ ಪ್ರಯತ್ನದಲ್ಲಿ ಇದ್ದಾನೆ ಎಂದು ನಮ್ಮ ಹಕ್ಕು ವೇದಿಕೆಯ ಚಟ್ನಹಳ್ಳಿ ನಾಗರಾಜ್‌ ಆರೋಪಿಸುತ್ತಾರೆ.

ಹೀಗೆ ಸರ್ಕಾರಿ ಜಾಗ ಕಬಳಿಸಿರುವ ವ್ಯಕ್ತಿ ವಿರುದ್ಧ ಆರೋಗ್ಯ ಕೇಂದ್ರದ ಸಿಬ್ಬಂದಿ ಗ್ರಾಮ ಪಂಚಾಯ್ತಿ, ಜಿಲ್ಲಾ ಪಂಚಾಯ್ತಿಗೆ ಮಾಹಿತಿ ನೀಡಿದ್ದಾರೆ. ನಮ್ಮ ಹಕ್ಕು ವೇದಿಕೆಯಿಂದಲೂ ಒತ್ತುವರಿ ತೆರವುಗೊಳಿಸುವಂತೆ ಆಗ್ರಹಿಸಿ ತಹಶೀಲ್ದಾರರಿಗೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಮನವಿ ಮಾಡಲಾಗಿದೆ. ಈ ಬಗ್ಗೆ ತಹಶೀಲ್ದಾರರು ಒಮ್ಮೆ ಸರ್ವೇ ನಡೆಸಿದ್ದು ಹೊರತುಪಡಿಸಿ ಒತ್ತುವರಿ ತೆರವುಗೊಳಿಸಲು ಕ್ರಮಕೈಗೊಂಡಿಲ್ಲ ಎಂಬ ದೂರು ಅವರದ್ದು.

ಸರ್ವೇ ವರದಿ ಬಗ್ಗೆ ತಹಶೀಲ್ದಾರರಿಗೆ ವಿಚಾರಿಸಿದರೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಜಿಲ್ಲಾ ಆರೋಗ್ಯಾಧಿಕಾರಿ ಅವರಿಗೆ ಕೇಳಿದರೆ, ಒತ್ತುವರಿ ತೆರವುಗೊಳಿಸುವುದು ತಮ್ಮ ಕೆಲಸವಲ್ಲ ಎಂದು ಹೇಳುತ್ತಾರೆ. ಕೂಡಲೆ ತಹಶೀಲ್ದಾರರು ಮತ್ತು ಆರೋಗ್ಯಾಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಅಕ್ರಮ ಒತ್ತುವರಿಯನ್ನು ತೆರವು ಮಾಡಬೇಕು. ಕೊಟ್ಟಿಗೆ, ತಿಪ್ಪೆಗುಂಡಿಯನ್ನು ತೆಗೆಸಬೇಕು. ಇಲ್ಲದಿದ್ದಲ್ಲಿ ನಮ್ಮ ಹಕ್ಕು ವೇದಿಕೆಯಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT