ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಧಾನ್ಯ ಉತ್ಪಾದನೆಯಲ್ಲಿ ಕೊರತೆ

Last Updated 13 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿಯಿಂದಾಗಿ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಶೇ 20ರಿಂದ 25ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಕೃಷಿ ಸಚಿವ ಉಮೇಶ್ ವಿ.ಕತ್ತಿ ಗುರುವಾರ ಇಲ್ಲಿ ತಿಳಿಸಿದರು.

ಕಳೆದ ವರ್ಷ 128 ಲಕ್ಷ ಟನ್ ಆಹಾರ ಉತ್ಪಾದನೆ ಗುರಿ ಇರಿಸಿಕೊಂಡಿದ್ದರೂ ದಾಖಲೆ ಎನ್ನುವಂತೆ 132 ಲಕ್ಷ ಟನ್ ಉತ್ಪಾದನೆ ಆಗಿತ್ತು. ಆದರೆ, ಈ ವರ್ಷದ ಉತ್ಪಾದನೆ 100 ಲಕ್ಷ ಟನ್‌ಗೆ ಇಳಿದರೂ ಆಶ್ಚರ್ಯ ಇಲ್ಲ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.

ರಾಜ್ಯದ ಹಲವು ಕಡೆ ಮಳೆಯ ಕೊರತೆ ಇದ್ದರೆ, ಇನ್ನೂ ಕೆಲವೆಡೆ ಅತಿವೃಷ್ಟಿಯಿಂದಾಗಿ ಸಮಸ್ಯೆ ಎದುರಾಗಿದೆ. ಹೀಗಾಗಿ ಆಹಾರ ಉತ್ಪಾದನೆಯಲ್ಲಿ ಗಣನೀಯ ಇಳಿಕೆಯಾಗುವ ಮುನ್ಸೂಚನೆ ಇದೆ ಎಂದರು.

ಈ ವರ್ಷದ ಮುಂಗಾರು ಹಂಗಾಮಿನಲ್ಲಿ 74.65 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ, ಸಕಾಲದಲ್ಲಿ ಮಳೆಯಾಗದೆ ಕೇವಲ 69.15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲು ಸಾಧ್ಯವಾಯಿತು. ಅದರಲ್ಲಿಯೂ ಬೆಳೆ ಸರಿಯಾಗಿ ಆಗಿಲ್ಲ ಎಂದು ಹೇಳಿದರು.

ಮುಂಗಾರಿನಲ್ಲಿ ಬಿತ್ತನೆಯಾಗದೇ ಉಳಿದ ನಾಲ್ಕೈದು ಲಕ್ಷ ಹೆಕ್ಟೇರ್ ಪ್ರದೇಶವೂ ಸೇರಿದಂತೆ ಒಟ್ಟು 38 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹಿಂಗಾರಿನಲ್ಲಿ ಬಿತ್ತನೆ ಮಾಡುವ ನಿರೀಕ್ಷೆ ಇತ್ತು. ಆದರೆ ಅದು ಕೂಡ ಸಾಧ್ಯವಾಗಿಲ್ಲ ಎಂದು ವಿವರ ನೀಡಿದರು.

ಕೇಂದ್ರದ ರಸಗೊಬ್ಬರ ನೀತಿಯಿಂದಾಗಿ ರಸಗೊಬ್ಬರಗಳ ದರ ದುಪ್ಪಟ್ಟಾಗಿದೆ. ಇದರಿಂದಾಗಿ ಮುಂದಿನ ವರ್ಷ ಆಹಾರ ಧಾನ್ಯಗಳ ಬೆಲೆಗಳೂ ಗಗನಕ್ಕೇರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು. ಪ್ರಸಕ್ತ ವರ್ಷದ ಮುಂಗಾರಿಗೆ ರಾಜ್ಯಕ್ಕೆ 23.35 ಲಕ್ಷ ಟನ್ ರಸಗೊಬ್ಬರದ ಅಗತ್ಯವಿದ್ದರೆ, ಈ ಪೈಕಿ 21.95 ಲಕ್ಷ ಟನ್ ರಸಗೊಬ್ಬರವನ್ನು ಕೇಂದ್ರ ಸರ್ಕಾರ ಒದಗಿಸಿದೆ ಎಂದರು.

ಸೂಕ್ತ ಬೆಲೆ ಕೊಟ್ಟರೆ ವಿದ್ಯುತ್:
ವಿದ್ಯುತ್ ಸಮಸ್ಯೆ ಎದುರಿಸುತ್ತಿರುವ ಈ ಸಮಯದಲ್ಲಿ ಸಕ್ಕರೆ ಕಾರ್ಖಾನೆಗಳನ್ನು ನಡೆಸುತ್ತಿರುವ ಸಚಿವರು ವಿದ್ಯುತ್ ಒದಗಿಸಲು ಮುಂದಾಗುತ್ತಿಲ್ಲ ಎಂಬ ಆರೋಪವನ್ನು ಅಲ್ಲಗೆಳೆದ ಅವರು, ಸೂಕ್ತ ಬೆಲೆ ನೀಡಿದರೆ ಸಕ್ಕರೆ ಕಾರ್ಖಾನೆಗಳು ತಾವು ಉತ್ಪಾದಿಸಿದ ವಿದ್ಯುತ್ತನ್ನು ನೀಡುತ್ತವೆ ಎಂದರು.

ರೇವಣ್ಣ ಅವರು ಇಂಧನ ಸಚಿವರಾಗಿದ್ದ ಕಾಲದಲ್ಲಿ ಯೂನಿಟ್‌ಗೆ 2.60 ರೂಪಾಯಿನಂತೆ ವಿದ್ಯುತ್ ಖರೀದಿ ಮಾಡಿರುವುದಾಗಿ ಹೇಳಿದ್ದಾರೆ. ಆದರೆ ಈಗ ಆ ದರದಲ್ಲಿ ವಿದ್ಯುತ್ ಸಿಗುವುದಿಲ್ಲ ಎಂದು ಹೇಳಿದರು.

ಸರ್ಕಾರದ ಜತೆ ಮಾಡಿಕೊಂಡ ಒಪ್ಪಂದದ ಅವಧಿವರೆಗೆ ತಮ್ಮ ಸಕ್ಕರೆ ಕಾರ್ಖಾನೆಯಲ್ಲಿ ಉತ್ಪಾದಿಸುವ ವಿದ್ಯುತ್ ಅನ್ನು ಪ್ರತಿ ಯೂನಿಟ್‌ಗೆ 3.20 ರೂಪಾಯಿಯಂತೆ ನೀಡಿರುವುದಾಗಿ ಹೇಳಿದ ಅವರು, ಈಗ ಆ ಬೆಲೆಗೆ ವಿದ್ಯುತ್ ನೀಡಲು ಅಸಾಧ್ಯ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT