ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರದಲ್ಲಿ ಕಿರುಧಾನ್ಯಗಳ ಬಳಕೆ

ಔರಾದ್ ತಾಲ್ಲೂಕಿನ 100 ಅಂಗನವಾಡಿಗಳಲ್ಲಿ ಪ್ರಾಯೋಗಿಕ ಯೋಜನೆ
Last Updated 4 ಜುಲೈ 2013, 20:02 IST
ಅಕ್ಷರ ಗಾತ್ರ

ಬೀದರ್: ಅಂಗನವಾಡಿಗಳಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಸುವ ಉದ್ದೇಶದಿಂದ ಪ್ರಸ್ತುತ ಆ ಮಕ್ಕಳಿಗೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) ಅನ್ವಯ ಒದಗಿಸುತ್ತಿರುವ ಆಹಾರದ ಜೊತೆಗೆ ಜಿಲ್ಲೆಯಲ್ಲಿ ಕಿರುಧಾನ್ಯಗಳನ್ನು ಪರಿಚಯಿಸಲು ತೀರ್ಮಾನಿಸಲಾಗಿದೆ.

ಜಿಲ್ಲಾಡಳಿತದ ನೇತೃತ್ವದಲ್ಲಿ ಈಚೆಗೆ ನಡೆದ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಈಗ ಕೊಡುತ್ತಿರುವ ಏಕದಳ, ದ್ವಿದಳ ಧಾನ್ಯಗಳ ಜೊತೆಗೆ ಕಿರುಧಾನ್ಯಗಳಾದ ನವಣೆ, ಸಜ್ಜೆ, ಬಾಂಜ್ರಾ ಈ ಭಾಗದಲ್ಲಿ ಲಭ್ಯವಿರುವ ಜೋಳವನ್ನು ಬಳಕೆ ಮಾಡುವುದು ಈಗಿನ ಉದ್ದೇಶ.

ಜಿಲ್ಲೆಯ ಔರಾದ್ ತಾಲ್ಲೂಕಿನ ಆಯ್ದ 100 ಅಂಗನವಾಡಿಗಳಲ್ಲಿ ಪೈಲಟ್ ಯೋಜನೆಯಾಗಿ ಇದನ್ನು ಜಾರಿಗೆ ತರಲು ಮತ್ತು ಫಲಿತಾಂಶ ಆಧರಿಸಿ ಇತರ ಅಂಗನವಾಡಿಗಳಿಗೂ ವಿಸ್ತರಿಸಲು ಈಚೆಗೆ ನಡೆದ ಸಭೆ ತೀರ್ಮಾನಿಸಿದೆ. ಕಿರುಧಾನ್ಯಗಳ ವಿತರಣೆಗೆ ರೈತ ಸಂಘ, ಹೈದರಾಬಾದ್‌ನ ಮಿಲ್ಲೆಟ್ ನೆಟ್‌ವರ್ಕ್ ಆಫ್ ಇಂಡಿಯಾ ಕೈ ಜೋಡಿಸಿವೆ. ಈ ಕುರಿತು ಔಪಚಾರಿಕ ನಿರ್ಣಯವಾಗಿದ್ದು, ಜಿಲ್ಲಾಧಿಕಾರಿ ಜೊತೆಗೆ ಇನ್ನೊಮ್ಮೆ ಚರ್ಚೆ ನಂತರ ಜಾರಿಯಾಗಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ವಿಶ್ವನಾಥ ಕೆ. ಪಾಟೀಲ ಕೌಠಾ `ಪ್ರಜಾವಾಣಿ'ಗೆ ತಿಳಿಸಿದರು.

ಈ ವಿಷಯವನ್ನು ಚರ್ಚಿಸಲು ಈಚೆಗೆ ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರೈತ ಸಂಘದ ಪ್ರತಿನಿಧಿಗಳು, ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿ.ಟಿ.ಪುಥ್ರಾ, ಕೃಷಿ ವಿಜ್ಞಾನ ಕೇಂದ್ರದ ರವಿ ದೇಶಮುಖ, ಡಾ.ಕೆ. ಭವಾನಿ, ಹೈದರಾಬಾದ್‌ನ ಮಿಲ್ಲೆಟ್ ನೆಟ್‌ವರ್ಕ್‌ನ ಪಿ.ವಿ.ಸತೀಶ್ ಭಾಗವಹಿಸಿದ್ದರು.

ಔರಾದ್ ತಾಲ್ಲೂಕು ಏಕೆ?: ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿರುವ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬ ಹಿನ್ನೆಲೆಯಲ್ಲಿ ಔರಾದ್ ತಾಲ್ಲೂಕಿನ ಒಂದು ಹೋಬಳಿಯನ್ನು ಪೈಲಟ್ ಯೋಜನೆಗೆ ಆಯ್ಕೆ ಮಾಡಲು ಸಭೆಯು ನಿರ್ಧರಿಸಿದೆ.

ಆಯ್ಕೆಯಾದ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಸುಮಾರು 100 ಅಂಗನವಾಡಿಗಳಲ್ಲಿ ಕಿರುಧಾನ್ಯಗಳನ್ನು  ಆಹಾರವಾಗಿ ಮಕ್ಕಳಿಗೆ ನೀಡಲಾಗುವುದು. ಈ ಪೈಕಿ ಶೇ 50ರಷ್ಟು ಅಂಗನವಾಡಿಗಳಲ್ಲಿ ವಾರಪೂರ್ತಿ ಮತ್ತು ಉಳಿದ ಅಂಗನವಾಡಿಗಳಲ್ಲಿ ವಾರದಲ್ಲಿ ಮೂರು ದಿನ ಕಿರುಧಾನ್ಯವನ್ನು ಆಹಾರವಾಗಿ ನೀಡುವುದು.

ಅಂಗನವಾಡಿಗಳಲ್ಲಿ ಪೌಷ್ಟಿಕವಾದ ಕಿರುಧಾನ್ಯಗಳನ್ನು ನೀಡುವುದರಿಂದ ಅಲ್ಲಿನ ಮಕ್ಕಳ ಆರೋಗ್ಯದಲ್ಲಿ ಆಗುವ ಪ್ರಗತಿಯನ್ನು ಬೀದರ್‌ನ ಕೃಷಿ ವಿಜ್ಞಾನ ಕೇಂದ್ರ, ರಾಜ್ಯ ರೈತ ಸಂಘ ಮತ್ತು ಮಿಲ್ಲೆಟ್ ನೆಟ್‌ವರ್ಕ್ ಸಂಸ್ಥೆಯು ಜಂಟಿಯಗಿ ಅಧ್ಯಯನ ನಡೆಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT