ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ-ಟೆಂಡರ್: ಅಡಿಕೆ ಮಾರಾಟಕ್ಕೂ ಹೈಟೆಕ್ ಸ್ಪರ್ಶ

Last Updated 2 ಫೆಬ್ರುವರಿ 2011, 11:20 IST
ಅಕ್ಷರ ಗಾತ್ರ

ಸುಳ್ಯ:  ಆಧುನಿಕ ತಂತ್ರಜ್ಞಾನ ಇಂದು ಎಲ್ಲಾ ಕ್ಷೇತ್ರಕ್ಕೂ ಕಾಲಿಟ್ಟಿದೆ. ಕೃಷಿ ಉತ್ಪನ್ನಗಳ ಮಾರಾಟಕ್ಕೂ ಇ-ಟೆಂಡರ್ ಪದ್ಧತಿಯನ್ನು ಎಪಿಎಂಸಿಗಳು ಜಾರಿಗೆ ತಂದಿವೆ. ಇದರಿಂದ ಕೃಷಿಕರಿಗೆ ಉತ್ತಮ ಧಾರಣೆ ದೊರೆತರೆ ವರ್ತಕರಿಗೆ ಗುಣಮಟ್ಟದ ಕೃಷಿ ಉತ್ಪನ್ನ ಒಂದೇ ಕಡೆ ಸಿಕ್ಕಂತಾಗುತ್ತದೆ.

ರಾಜ್ಯದ ಎಲ್ಲಾ ಜಿಲ್ಲೆಗಳ ಒಂದೊಂದು ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣಗಳಿಗೆ ಈ ವರ್ಷದಿಂದ ಸರ್ಕಾರ ಈ ಯೋಜನೆ ಜಾರಿ ಮಾಡಿದೆ. ದ.ಕ. ಜಿಲ್ಲೆಯಲ್ಲಿ ಸುಳ್ಯ ಎಪಿಎಂಸಿಗೆ ಇದನ್ನು ಜಾರಿ ಮಾಡುವ ಹೊಣೆಯನ್ನು ವಹಿಸಲಾಗಿದೆ. ದ.ಕ.ಕೃಷಿಕರ ಮಾರಾಟ ಸಹಕಾರಿ ಸಂಘದ ಸಹಯೋಗದಲ್ಲಿ ಇ.ಟೆಂಡರ್ ಪದ್ಧತಿಯನ್ನು ಇಲ್ಲಿ ಜಾರಿ ಮಾಡಲಾಗಿದೆ.

ಏನಿದು ಇ-ಟೆಂಡರ್?:
ಕೃಷಿಕರು ತಂದ ಉತ್ಪನ್ನಗಳನ್ನು ಎಪಿಎಂಸಿಗಳಲ್ಲಿ ಪ್ರತ್ಯೇಕ-ಪ್ರತ್ಯೇಕ ಲಾಟ್ ಆಗಿ ಸಂಖ್ಯೆ ನೀಡಿ ಪ್ರದರ್ಶನಕ್ಕೆ ಇಡಲಾಗುತ್ತದೆ. ವ್ಯಾಪಾರಿಗಳು ಇವುಗಳನ್ನು ಪರೀಕ್ಷಿಸಿ ತಮ್ಮ ಧಾರಣೆಯನ್ನು ಎಪಿಎಂಸಿಯ ಸರ್ವರ್‌ಗೆ ದಾಖಲು ಮಾಡುತ್ತಾರೆ. ಯಾರು ಹೆಚ್ಚು ಧಾರಣೆ ನೀಡಿದ್ದಾರೋ ಅವರಿಗೆ ರೈತ ತಾನು ತಂದ ಉತ್ಪನ್ನನ್ನು ಮಾರಾಟ ಮಾಡಬಹುದು.ಎಪಿಎಂಸಿ, ಕೃಷಿಕರಿಗೆ ಹಾಗೂ ವರ್ತಕರಿಗೆ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತವೆ. ಒಬ್ಬ ವರ್ತಕರೂ ತಾನು ಯಾವ ಲಾಟ್‌ಗೆ ಎಷ್ಟು ಧಾರಣೆ ಹಾಕಿದ್ದಾನೆ ಎಂಬುದು ಇನ್ನೊಬ್ಬ ವರ್ತಕನಿಗೆ ತಿಳಿಯುವುದಿಲ್ಲ.

ಎಪಿಎಂಸಿ ಪ್ರಾಂಗಣ ಪ್ರವೇಶಿಸುತ್ತಿದ್ದಂತೆ ಗೇಟ್‌ನಲ್ಲೆ ನೋಂದಣೆ ಹಾಗೂ ಎಂಟ್ರಿ ಪಾಸ್ ನೀಡಲಾಗುತ್ತದೆ. ರೈತನ ಪ್ರತಿ ಉತ್ಪನ್ನಕ್ಕೂ ಪ್ರತ್ಯೇಕ ಲಾಟ್ ನಂಬರ್‌ಗಳನ್ನು ನೀಡಲಾಗುತ್ತದೆ. ಬಳಿಕ ಅವುಗಳನ್ನು ತೂಕ ಮಾಡಿ ಪ್ರತ್ಯೇಕ-ಪ್ರತ್ಯೇಕವಾಗಿ ಪ್ರದರ್ಶನಕ್ಕೆ ಇಡಲಾಗುತ್ತದೆ. ಬೆಳಿಗ್ಗೆ 10 ಗಂಟೆಗೆ ಪ್ರಕ್ರಿಯೆ ಆರಂಭವಾದರೆ ಮಧ್ಯಾಹ್ನ 1.30ಕ್ಕೆ ಅಂತ್ಯವಾಗುತ್ತದೆ. ವರ್ತಕರು ತಾವು ನಮೂದಿಸಿದ ಬೆಲೆಯು ಎಪಿಎಂಸಿಯ ಕೇಂದ್ರ ಕಚೇರಿಯ ಸರ್ವರ್‌ನಲ್ಲಿ ದಾಖಲಾಗುತ್ತದೆ ಹಾಗೂ ಸಮಯ ಮುಗಿದ ತಕ್ಷಣ ಅದನ್ನು ಎಪಿಎಂಸಿ ಪ್ರಾಂಗಣದಲ್ಲಿ ಎಲ್‌ಸಿಡಿ ಪರದೆಯಲ್ಲಿ ಪ್ರದರ್ಶಿಸಲಾಗುತ್ತದೆ.

ಯಾವ ಲಾಟ್‌ಗೆ ಯಾವ ವರ್ತಕ ಎಷ್ಟು ಬೆಲೆ ನಮೂದಿಸಿದ್ದಾನೆ ಎಂದೂ ತಿಳಿಯುತ್ತದೆ. ರೈತರು ತಮಗೆ ಧಾರಣೆ ಸಮಾಧಾನ ತಂದರೆ ಮಾತ್ರ ಮಾರಾಟ ಮಾಡಬಹುದು. ಅಥವಾ ತಿರಸ್ಕರಿಸಲು ಅವಕಾಶವಿದೆ. ಸಮಾಧಾನ ತಾರದಿದ್ದರೆ ಅದನ್ನು ನೇರವಾಗಿ ಮರಾಟ ಮಾಡಬಹುದು ಅಥವಾ ಓಪನ್ ಹರಾಜಿನಲ್ಲೂ ಹರಾಜು ಹಾಕಬಹುದು. ಇದಕ್ಕೆ ರೈತ ಸಂಪೂರ್ಣ ಸ್ವಾತಂತ್ರ್ಯ ಹೊಂದಿದ್ದಾನೆ.

ಕಿಯೋನಿಕ್ಸ್ ಸಂಸ್ಥೆಯವರು ಇದಕ್ಕೆ ಬೇಕಾದ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿದ್ದು, ಎಪಿಎಂಸಿಯ ಕೇಂದ್ರ ಕಚೇರಿಯ ಸರ್ವರ್‌ನಲ್ಲಿ ಎಲ್ಲಾ ಪ್ರಕ್ರಿಯೆಗಳು ದಾಖಲಾಗುತ್ತವೆ.ನೋಂದಾವಣೆ ಮಾಡಿದ  ಪ್ರತಿಯೊಬ್ಬ ವರ್ತಕರಿಗೂ ಪ್ರತ್ಯೇಕ ಯೂಸರ್‌ನೇಮ್ ಹಾಗೂ ಪಾಸ್‌ವರ್ಡ್‌ಗಳನ್ನು ನೀಡಲಾಗುತ್ತದೆ. ಇದರ ಮೂಲಕ ಅವರು ತಾವು ಖರೀದಿ ಮಾಡಬಹುದಾದ ಬೆಲೆಯನ್ನು ಲಾಟ್ ನಂಬರ್‌ಗಳಿಗೆ ಅನುಗುಣವಾಗಿ ದಾಖಲಿಸಬಹುದಾಗಿದೆ.

ಸುಳ್ಯದಲ್ಲಿ ಪ್ರತಿ ಮಂಗಳವಾರ ಅಡಿಕೆಯನ್ನು ಇ-ಟೆಂಡರ್ ಮೂಲಕ ಖರೀದಿ ಮಾಡುವ ಪ್ರಕ್ರಿಯೇ ಆರಂಭವಾಗಿದೆ. ರೈತರು ಹಾಗೂ ವರ್ತಕರು ಹೆಚ್ಚಿನ ಸಂಖ್ಯೆಯಲ್ಲಿ ಇದರಲ್ಲಿ ಭಾಗವಹಿಸುವ ಮೂಲಕ ಇದನ್ನು ಯಶಸ್ವಿಗೊಳಿಸುವಂತೆ ಪ್ರಾಂಗಣದ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ಮನವಿ ಮಾಡಿದ್ದಾರೆ. ಇದು ಯಶಸ್ವಿಯದರೆ ಮುಂದಿನ ದಿನಗಳಲ್ಲಿ ತೆಂಗಿನ ಕಾಯಿ, ಕಾಳುಮೆಣಸು ಇತ್ಯಾದಿಗಳನ್ನು ಈ ಪದ್ಧತಿಯಲ್ಲಿ ಮಾರಾಟ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT