ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗು ಗುಂಡಿಗಳಿಗೆ ಚಾಲನೆ

Last Updated 21 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಂತರ್ಜಲವನ್ನು ಉಳಿಸುವ ಸಲುವಾಗಿ ಚಾಮರಾಜಪೇಟೆ ವಾರ್ಡ್‌ನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಹಲವು ಕಡೆಗಳಲ್ಲಿ ಇಂಗು ಗುಂಡಿಗಳನ್ನು ತೆರೆದಿದ್ದು, ಇಲ್ಲಿಯ ಬಿಬಿಎಂಪಿ ಹೆರಿಗೆ ಆಸ್ಪತ್ರೆಯ ಆವರಣದಲ್ಲಿ ಈಗಾಗಲೇ ಇಂಗುಗುಂಡಿಗೆ ಚಾಲನೆ ದೊರೆತಿದೆ.

ಪ್ರತಿ ವಾರ್ಡ್‌ಗಳಲ್ಲಿರುವ ಉದ್ಯಾನ, ಬಿಬಿಎಂಪಿ ಕಟ್ಟಡ, ಶಾಲೆ, ಮೈದಾನ ಸೇರಿದಂತೆ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಮಳೆ ನೀರಿನ ಸಂಗ್ರಹ, ಅಂತರ್ಜಲ ಹೆಚ್ಚಳಕ್ಕೆ ಇಂಗುಗುಂಡಿಗಳನ್ನು ನಿರ್ಮಿಸುವ ಬಗ್ಗೆ ಈಚೆಗಷ್ಟೆ ಪಾಲಿಕೆ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಚಾಮರಾಜಪೇಟೆಯ ಮಕ್ಕಳ ಕೂಟ, ಸರ್.ಎಂ. ವಿಶ್ವೇಶ್ವರಯ್ಯ ಬಿಬಿಎಂಪಿ ಕಾಲೇಜು ಹಾಗೂ ವಾರ್ಡ್ ಕಾಮಗಾರಿ ಕಚೇರಿಯ ಆವರಣದಲ್ಲಿ ಇಂಗುಗುಂಡಿಗಳ ನಿರ್ಮಾಣಕ್ಕೆ ತಯಾರಿ ನಡೆದಿದೆ.

ಸುಮಾರು ಅರ್ಧ ಎಕರೆ ಜಾಗದಲ್ಲಿರುವ ಬಿಬಿಎಂಪಿ ಹೆರಿಗೆ ಆಸ್ಪತ್ರೆಯ ಆವರಣದ ಇಳಿಜಾರು ಭಾಗದಲ್ಲಿ ಎರಡು ಇಂಗುಗುಂಡಿಗಳನ್ನು ತೆಗೆಯಲಾಗಿದೆ. ಮಳೆ ನೀರು ಸರಾಗವಾಗಿ ಹರಿದು ಈ ಗುಂಡಿಗಳಿಗೆ ಬೀಳುತ್ತದೆ. ಸುಮಾರು ಏಳು ಅಡಿಗಿಂತಲೂ ಹೆಚ್ಚು ಆಳವಿರುವ ಈ ಗುಂಡಿಗಳಿಗೆ ಕಾಂಕ್ರೀಟ್‌ನ ರಿಂಗ್‌ಗಳನ್ನು ಅಳವಡಿಸಲಾಗಿದೆ. ನೀರು ಹೆಚ್ಚು ಶೇಖರಣೆಗೊಂಡು ಆಸ್ಪತ್ರೆಯ ತಡೆಗೋಡೆ ಕುಸಿದು ಬೀಳುವ ಸಂಭವ ಇರುವುದರಿಂದ ಈ ತಂತ್ರವನ್ನು ಬಳಸಲಾಗಿದೆ. ಇಂಗುಗುಂಡಿಗೆ ಬೀಳುವ ನೀರು ನೇರವಾಗಿ ಭೂಮಿಯ ಪದರವನ್ನು ತಲುಪಿ ಇಂಗುತ್ತದೆ. ಹೆಚ್ಚಾಗಿ ಗುಂಡಿಯಿಂದ ಆಚೆಗೆ ನಿಂತ ನೀರು ಸೊಳ್ಳೆ ವೃದ್ಧಿಗೆ ಕಾರಣವಾಗಬಾರದೆಂಬ ಉದ್ದೇಶದಿಂದ ಗುಂಡಿಯ ಒಳಗೆ ಜಲ್ಲಿ ಕಲ್ಲುಗಳನ್ನು ತುಂಬಲಾಗಿದೆ.

ಸ್ಮಶಾನದಲ್ಲೂ ಇಂಗುಗುಂಡಿ: ಮಳೆ ನೀರು ಭೂಮಿಯ ಮೇಲೆ ಹರಿದು ಚರಂಡಿಗಳನ್ನು ಸೇರುವುದಕ್ಕಿಂತ ಇಂಗುವ ಪ್ರಕ್ರಿಯೆಯಿಂದ ಅಂತರ್ಜಲ ವೃದ್ಧಿಗೆ ಸಹಕಾರಿ. ಆದ್ದರಿಂದ ಈ ವಾರ್ಡ್ ವ್ಯಾಪ್ತಿಯಲ್ಲಿರುವ ಸ್ಮಶಾನದ ಆವರಣದಲ್ಲೂ ಮಳೆ ನೀರು ಪೋಲಾಗದಂತೆ ಸುಮಾರು ನಾಲ್ಕು ಇಂಗುಗುಂಡಿಗಳನ್ನು ನಿರ್ಮಿಸಲಾಗಿದೆ.

ಇದರೊಂದಿಗೆ ರಸ್ತೆಯ ಇಕ್ಕೆಲಗಳಲ್ಲಿರುವ ಕಾಲುವೆಗಳ ಮಧ್ಯ ಭಾಗದಲ್ಲೂ ಇಂಗು ಗುಂಡಿಗಳನ್ನು ತೆರೆಯಲಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ನೀರು ಇಂಗಲು ಸಹಾಯವಾಗುತ್ತದೆ. ಅಲ್ಲದೇ ನೀರು ಗುಂಡಿಗಳಲ್ಲಿ ಮಾತ್ರವಲ್ಲದೇ ಅದು ಹರಿಯುವ ಜಾಗದ ಮಧ್ಯಭಾಗಗಳಲ್ಲಿ ಇಂಗುವಂತೆ ಯೋಜನೆ ರೂಪಿಸಲಾಗಿದೆ. 

ಈ ಬಗ್ಗೆ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಚಾಮರಾಜಪೇಟೆ ವಾರ್ಡ್ ಸದಸ್ಯ ಬಿ.ವಿ.ಗಣೇಶ್, `ವರ್ಷದಿಂದ ವರ್ಷಕ್ಕೆ ಮಳೆಯು ನಿಗದಿತ ಸಮಯಕ್ಕೆ ಬಾರದೇ ಕೈಕೊಡುತ್ತಿರುವುದರಿಂದ ಇರುವ ಅಂತರ್ಜಲವನ್ನು ಉಳಿಸಿಕೊಳ್ಳುವ ಅಗತ್ಯವಿದೆ. ಪಾಲಿಕೆ ಅಧಿಸೂಚನೆ ಹೊರಡಿಸುವ ಮುನ್ನವೇ ವಿಶೇಷ ಆಸಕ್ತಿ ತೆಗೆದುಕೊಂಡು ಸುಮಾರು ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ಯೋಜನೆಯನ್ನು ರೂಪಿಸಲಾಗಿದೆ~ ಎಂದರು.

`ಸಾರ್ವಜನಿಕ ಸ್ಥಳದಲ್ಲಿ ಲಭ್ಯವಿರುವ ಸ್ಥಳಾವಕಾಶಕ್ಕೆ ಅನುಗುಣವಾಗಿ ಯೋಜನೆಯನ್ನು ಅಳವಡಿಸಲಾಗುವುದು. ಮಳೆ ನೀರು ಸಂಗ್ರಹಿಸಿದರೂ ಅದು ಇಂಗದಿದ್ದರೆ ಸೊಳ್ಳೆಯ ಮೂಲಕ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತವೆ.

ನಗರದಲ್ಲಿ ಕ್ರಾಂಕೀಟ್ ನೆಲವೇ ಹೆಚ್ಚಾಗಿರುವುದರಿಂದ ನೀರು ಇಂಗದೇ ಚರಂಡಿಗಳಿಗೆ ಹರಿಯುತ್ತದೆ. ಇದನ್ನು ತಪ್ಪಿಸಲು ಸಾಧ್ಯವಾದಷ್ಟು ಇಂಗುಗುಂಡಿಗಳನ್ನು ತೆಗೆಯಲಾಗಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಅಳವಡಿಸುವ ಬಗ್ಗೆ ಹೆಚ್ಚಿನ ಒತ್ತು ನೀಡಲಾಗುವುದು~ ಎಂದು ಅವರು ಹೇಳಿದರು.


ಎರಡಕ್ಕಿಂತ ಹೆಚ್ಚು ಪದ್ಧತಿ ಅಳವಡಿಕೆಗೆ ಚಿಂತನೆ
ಚಾಮರಾಜಪೇಟೆಯ ವಾರ್ಡ್ ಕಾಮಗಾರಿ ಕಚೇರಿ, ಮಕ್ಕಳ ಕೂಟ, ಸರ್.ಎಂ. ವಿಶ್ವೇಶ್ವರಯ್ಯ ಬಿಬಿಎಂಪಿ ಕಾಲೇಜಿನ ಆವರಣದಲ್ಲೂ ಸಹ ಇಂಗುಗುಂಡಿ ನಿರ್ಮಾಣದ ಜತೆ  ದೊಡ್ಡ ಪ್ರಮಾಣದಲ್ಲಿ ಮಳೆ ನೀರು ಸಂಗ್ರಹದ ಯೋಜನೆಯನ್ನು ರೂಪಿಸಲಾಗಿದೆ. ಸ್ಥಳಾವಕಾಶದ ಆಧಾರದ ಮೇಲೆ ಈ ಸ್ಥಳಗಳಲ್ಲಿ ಎರಡಕ್ಕಿಂತ ಹೆಚ್ಚು ಮಳೆ ನೀರು ಸಂಗ್ರಹ ಪದ್ಧತಿಯನ್ನು ಅಳವಡಿಸಿಕೊಳ್ಳಲು ಚಿಂತನೆ ನಡೆಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT