ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಜಾತ್ರೆ ಆರಂಭ

Last Updated 13 ಫೆಬ್ರುವರಿ 2011, 8:55 IST
ಅಕ್ಷರ ಗಾತ್ರ

ಸುರಪುರ: ತಾಲ್ಲೂಕಿನ ತಿಂಥಣಿ ಗ್ರಾಮ ಭಾವೈಕ್ಯದ ಮೆರುಗು ನೀಡುತ್ತಿರುವ ಮೌನೇೀಶ್ವರ ದೇವಸ್ಥಾನದಿಂದ ಸುಪ್ರಸಿದ್ಧ. ಕೋಮು ಸಾಮರಸ್ಯೆಯ ಪ್ರತೀಕವಾಗಿರುವ ಮೌನೇಶ್ವರ ಜಾತ್ರೆಗೆ ಜಾತಿ ಭೇದವೆಣಿಸಿದೆ ಆಗಮಿಸುವವವರ ಭಕ್ತರ ಸಂಖ್ಯೆ ಅಗಣ್ಯ. ಇಡೀ ದಕ್ಷಿಣ ಭಾರತದಲ್ಲೆ ವಿಶ್ವಕರ್ಮ ಸಮಾಜದ ಏಕೈಕ ಬೃಹತ್ ಮೇಳ. ಅದಕ್ಕೆಂದೆ ಇದಕ್ಕೆ ‘ದಕ್ಷಿಣ ಕಾಶಿ’ ಎಂಬ ಅಭಿದಾನ.

ಹದಿನಾರನೇ ಶತಮಾನದಲ್ಲಿ ಅವತಾರವೆತ್ತಿದ ಈ ಮಹಾಪುರುಷ ಹಿಂದುಗಳಿಗೆ ಯೋಗಿಯಾದರೆ ಮುಸ್ಲಿಂರಿಗೆ ಸೂಫಿ ಸಂತ. ಜಾತಿವಾದವನ್ನು ಬಲವಾಗಿ ಖಂಡಿಸಿದವರಲ್ಲಿ ಇವರೆ ಆದ್ಯರು. ಹಸಿರು ಶಾಲನ್ನು ತಮ್ಮ ಲಾಂಛನವಾಗಿಸಿದ್ದು, ಧ್ವಜಕ್ಕೂ ಹಸಿರು ಬಣ್ಣ, ದೇವಸ್ಥಾನದ ಒಳಗೆ ಹಿಂದೂ ವಾಸ್ತು ವಿನ್ಯಾಸ, ಹೊರಗೆ ದರ್ಗಾ ಮಿಶ್ರ ಶೈಲಿಯಲ್ಲಿನ ಕಟ್ಟಡ ಮುಂತಾದವುಗಳು ಸಮಾನತೆಯ ಕುರುಹುಗಳಾಗಿವೆ.

‘ಓಂ ಏಕ ಲಾಕ ಐಂಸಿ ಹಜಾರ ಪಾಚೋಪೀರ್ ಪೈಗಂಬರ್ ಮೌನಾಧೀನ್ ಕಾಶಿಪತಿ ಗಂಗಾಧರ ಹರ ಹರ ಮಹಾದೇವ’ ಸರ್ವಧರ್ಮ ಸಮನ್ವಯದ ಈ ಶ್ಲೋಕ ಮೌನೇಶ್ವರರ ಮೂಲ ಮಂತ್ರ. ಜಾತಿವಾದದ ಮುಲೋತ್ಪಾಟನೆಗೆ ಶ್ರಮಿಸಿದ ಈ ಭಾವೈಕ್ಯತೆಯ ಹರಿಕಾರ ಮೆರೆದ ಪವಾಡಗಳು ಅನೇಕ.

ಉಪನಯನ ಸಮಯದಲ್ಲಿ ಅಹಂಕಾರ ಮತ್ತನಾಗಿದ್ದ ಪುರೋಹಿತನಿಗೆ ಪ್ರಾಯಶ್ಚಿತ ರೂಪದಲ್ಲಿ ಜ್ಞಾನೋದಯ ಕಲ್ಪಿಸಿದ್ದು, ಪಾಠಶಾಲೆಯ ಗುರುಗಳಿಗೆ ಓಂಕಾರದ ಮಹಿಮೆ ತಿಳಿಸಿದ್ದು, ಸತ್ತ ರಾಜಕುಮಾರನನ್ನು ಬದುಕಿಸಿದ್ದು, ಗೋನಾಲದ ಪರ್ವತಶೆಟ್ಟಿಗೆ ಐಶ್ವರ್ಯ ಕರುಣಿಸಿದ್ದು, ವಿಜಾಪುರದ ಸುಲ್ತಾನ ಆದಿಲಶಾಹನಿಗೆ ದೇವರು ಒಬ್ಬನೆ ಎಂದು ನಿರೂಪಿಸಿದ್ದು ಇವರ ಅನೇಕ ಪವಾಡಗಳಲ್ಲಿ ಕೆಲ ನಿದರ್ಶನ ಮಾತ್ರ.

‘ಹಿಂದು ತುರುಕರಿಗೆ ಚಂದ್ರಮನೊಬ್ಬನೇ ದೇವರು,ನಿಂದಿಸಿದವನೇ ಅಧಮನು ಕಾಣದ,ಅಂದಕರಿಗೇಕೆ ದರ್ಪಣ, ಸಕಲವೂ,ವಂದೆ ಎಂದು ಕಂಡ ಗುರು ಬೇರೆ ಬಸವಣ್ಣ’
ಇಂತಹ ಅನೇಕ ಧರ್ಮ ಸಮನ್ವಯದ ವಚನಗಳನ್ನು ರಚಿಸಿರುವ ಮೌನೇಶ್ವರರು ಮಹಾನ್ ಮಾನವತಾವಾದಿಯಾಗಿದ್ದಾರೆ. ಸುರಪುರದ ದೇವರಗೋನಾಲದ ಜನಿಸಿ ದೇಶದುದ್ದಕ್ಕೂ ಭಾವೆಕ್ಯತೆಯನ್ನು ಸಾರಿ ತಮ್ಮ ಕೊನೆಯ ದಿನಗಳಲ್ಲಿ ಕೃಷ್ಣೆ ತಟಾಕದ ತಿಂಥಣಿ ಗ್ರಾಮಕ್ಕೆ ಬಂದು ಭಾರತ ಹುಣ್ಣಿಮೆಯ ದಿನ ಗುಹಾ ಪ್ರವೇಶ ಮಾಡಿ ಐಕ್ಯರಾಗಿ, ಇಂದಿಗೂ ಎಲ್ಲಾ ಜಾತಿ ಧರ್ಮದ ಭಕ್ತರನ್ನು ಕರುಣಿಸುತ್ತಿದ್ದಾರೆ.

ಪ್ರತಿ ವರ್ಷ ಭಾರತ ಹುಣ್ಣಿಮೆಯಂದು ನಡೆಯುವ ಜಾತ್ರೆಗ ಭಕ್ತರ ಮಹಾಪೂರವೇ ಹರಿದುಬರುತ್ತದೆ. ಕರ್ನಾಟಕವಲ್ಲದೆ, ಆಂಧ್ರಪ್ರದೇಶ, ಮಹಾರಾಷ್ಟ್ರಗಳಿಂದಲೂ ಸಹಸ್ರಾರು ಭಕ್ತರು ಆಗಮಿಸುತ್ತಾರೆ. ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಗೆ ಸೇರಿದ ಈ ದೇವಸ್ಥಾನದಿಂದ ಸಾಕಷ್ಟು ಆದಾಯವೂ ಇದೆ. ದೇವಸ್ಥಾನವನ್ನು ಅಭೂತಪೂರ್ವವಾಗಿ ಜೀರ್ಣೋದ್ಧಾರ ಮಾಡಲಾಗಿದೆ.

ಈ ಸಲದ ಜಾತ್ರೆ ಫೆ. 13 ರಂದು ಸುರಪುರದ ಪಲ್ಲಕ್ಕಿ ಉತ್ಸವ ತಿಂಥಣಿಗೆ ತೆರಳುವ ಕಾರ್ಯಕ್ರಮದೊಂದಿಗೆ ಆರಂಭವಾಗುತ್ತದೆ. ಫೆ. 14 ಏಕಾದಶಿ ಆಚರಣೆ, ಸಾಯಂಕಾಲ ಮಹಾಪ್ರಸಾದ, ಫೆ. 15 ಪಲ್ಲಕ್ಕಿ ಪ್ರಥಮ ಸೇವೆ, ಫೆ. 16 ಧಾರ್ಮಿಕ ಕಾರ್ಯಕ್ರಮಗಳು, ಸಾಮೂಹಿಕ ಜಾವಳ, ಉಪನಯನ, ರಾತ್ರಿ ಸಂಗೀತ ಸೇವೆ, ಫೆ. 17 ಸಾಯಂಕಾಲ ರಥೋತ್ಸವ, ಪಲ್ಲಕ್ಕಿಯ ಮಹಾಸೇವೆ, ಫೆ. 18 ಧೂಳಗಾಯಿ, ಗುಹಾಪ್ರವೇಶ ಜರುಗಲಿವೆ.
       

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT