ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಬೆಳೆ ಹಾನಿ ಸಮೀಕ್ಷೆ ಆರಂಭ

Last Updated 15 ಅಕ್ಟೋಬರ್ 2011, 9:50 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯಲ್ಲಿ ಬರದಿಂದ ತೀವ್ರ ಹಾನಿಗೆ ಒಳಗಾಗಿರುವ ಆಯ್ದ ಗ್ರಾಮಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಮತ್ತು ಅಧಿಕಾರಿಗಳ ತಂಡ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಮೈಸೂರು ತಾಲ್ಲೂಕಿನ ಇಲವಾಲ ಹೋಬಳಿ ಮತ್ತು ನಂಜನಗೂಡು ತಾಲ್ಲೂಕಿನ ಕೌಲಂದೆ ಹೋಬಳಿಗಳ ಕೆಲವು ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ಹಾನಿ, ಮೇವು, ಕುಡಿಯುವ ನೀರು, ವಿದ್ಯುತ್ ಸಮಸ್ಯೆ ಕುರಿತು ವಾಸ್ತವ ಸ್ಥಿತಿಯನ್ನು ಅರಿಯಿತು. ಈ ಭಾಗದಲ್ಲಿ ರಾಗಿ, ಹುರುಳಿ, ಅವರೆ, ಅಲಸಂದೆ, ಎಳ್ಳು, ಹತ್ತಿ ಬೆಳೆ ಮಳೆ ಕೊರತೆಯಿಂದ ಹಾನಿಗೊಳಗಾಗಿದೆ. ಇದನ್ನು ಪ್ರತ್ಯಕ್ಷವಾಗಿ ಕಂಡ ರಾಮದಾಸ್ ಹೊಲದಲ್ಲಿದ್ದ ರೈತರಿಂದ ಮಾಹಿತಿ ಪಡೆದರು. ಮಳೆ ಕೊರತೆಯಿಂದ ಇಲವಾಲ ಮತ್ತು ಕೌಲಂದೆ ಹೋಬಳಿಗಳಲ್ಲಿ ಬೆಳೆ ಹಾನಿಯಾಗಿರು ವುದನ್ನು ಸಚಿವರು ಖಾತರಿ ಪಡಿಸಿಕೊಂಡರು.

`ಸೆಪ್ಟಂಬರ್ ತಿಂಗಳಲ್ಲಿ ಮಳೆ ಕೈಕೊಟ್ಟಿತು. ಆದ್ದರಿಂದ ರಾಗಿ ಸರಿಯಾಗಿ ಕಾಳುಕಟ್ಟುತ್ತಿಲ್ಲ. ಜೊಳ್ಳು ಹೆಚ್ಚಾಗಿದೆ. ಇದರಿಂದ ಇಳುವರಿ ಕಡಿಮೆಯಾಗುತ್ತದೆ. ನಾವು ಮಾಡಿದ ಖರ್ಚು ಸಹ ಕೈ ಸೇರುವುದಿಲ್ಲ. ಹುರುಳಿ, ಅವರೆ, ಎಳ್ಳಿನ ಕಥೆಯೂ ಇದೇ ಆಗಿದೆ~ ಎಂದು ಯಲಚಹಳ್ಳಿಯ ರೈತರು ಸಚಿವ ರಾಮದಾಸ್‌ಗೆ ತಮ್ಮ ಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟರು.

ಆನಂದೂರು ಭಾಗದಲ್ಲಿ ಹುರುಳಿ, ರಾಗಿ ಪೈರುಗಳು ಒಣಗುವ ಸ್ಥಿತಿಯಲ್ಲಿದ್ದವು. ಮೂರು ದಿನಗಳಿಂದ ಮಳೆಯಾಗಿದ್ದು ಪೈರು ಹಸಿರಾಗಿವೆ. `ಈಗ ಬಿತ್ತನೆ ಮಾಡಲು ನೀವು ಸಿದ್ಧವಿದ್ದರೆ ಅಗತ್ಯವಾದ ಬೀಜ, ಗೊಬ್ಬರವನ್ನು ಒದಗಿಸಲಾಗುತ್ತದೆ~ ಎಂದು ಸಚಿವರು ರೈತರನ್ನು ಕೇಳಿದರು. ಆದರೆ ರೈತರು ಮಾತ್ರ ಇದಕ್ಕೆ ಒಪ್ಪಲಿಲ್ಲ. `ಬಿತ್ತನೆ ಸಮಯ ಮುಗಿದು ಹೋಗಿದೆ. ಈಗ ಬಿತ್ತಿದರೂ ಪ್ರಯೋಜನವಿಲ್ಲ. ಆದ್ದರಿಂದ ನಾವು ಬಿತ್ತನೆ ಮಾಡಲು ಸಿದ್ಧವಿಲ್ಲ. ಇದರ ಬದಲು ಬೆಳೆ ನಷ್ಟ ಪರಿಹಾರ, ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡಿಕೊಡಿ~ ಎಂದು ಆನಂದೂರಿನ ರೈತರು ರಾಮದಾಸ್ ಅವರಲ್ಲಿ ಮನವಿ ಮಾಡಿದರು.

ನಾಳೆಯಿಂದ ಸರ್ವೆ: ಬರ ಸ್ಥಿತಿಯನ್ನು ವೀಕ್ಷಿಸಿದ ನಂತರ ಪತ್ರಕರ್ತರೊಂದಿಗೆ ರಾಮದಾಸ್ ಮಾತನಾಡಿ, `ನಾಳೆಯಿಂದ ಬರದಿಂದ ಆಗಿರುವ ಬೆಳೆ ನಷ್ಟವನ್ನು ಅಂದಾಜು ಮಾಡುವ ಸರ್ವೆಯನ್ನು ಆರಂಭಿಸಲಾಗುತ್ತದೆ. ಬಳಿಕವಷ್ಟೇ ಪರಿಹಾರ ಕುರಿತು ಚಿಂತಿಸಲಾಗುವುದು. ಕೆಲವು ಕಡೆ ಬಿತ್ತನೆ ಮಾಡಿದ್ದು ಪೈರು ಬಂದಿವೆ. ಇನ್ನು ಕೆಲವು ಕಡೆ ಬಿತ್ತನೆಯೇ ಆಗಿಲ್ಲ. ಎಲ್ಲವನ್ನೂ ಸರ್ವೆ ನಂತರ ನಿರ್ಧಾರಿಸಲಾಗುವುದು. ಇಷ್ಟೇ ಅಲ್ಲದೆ ತೀವ್ರ ಬರ ಇರುವ ಗ್ರಾಮಗಳಲ್ಲಿ ಜಾನುವಾರುಗಳ ಗಣತಿಯೂ ನಡೆಯಲಿದ್ದು, ನಂತರದಲ್ಲಿ ಅವುಗಳಿಗೆ ಅಗತ್ಯವಾದ ಮೇವನ್ನು ಪೂರೈಸಲಾಗುವುದು~ ಎಂದು ಅವರು ತಿಳಿಸಿದರು.

`ಬೆಳೆ ಹಾನಿಯಷ್ಟೇ ಕುಡಿಯುವ ನೀರಿಗೂ ತೊಂದರೆ ಇದೆ. ಆದ್ದರಿಂದ ಈಗ ಇರುವ ಕೊಳವೆಬಾವಿಗಳ ಪುನಶ್ವೇತನಗೊಳಿಸಲಾಗುವುದು. 23 ಕೊಳವೆಬಾವಿಗಳ ನೀರಿನಲ್ಲಿ ಫ್ಲೋರೈಡ್ ಅಂಶವಿದ್ದು ಇವುಗಳನ್ನು ಬಳಕೆ ಮಾಡದಂತೆ ಸೂಚಿಸಲಾಗಿದೆ. ಹೆಚ್ಚು ಕೊಳವೆಬಾವಿಗಳನ್ನು ಕೊರೆಸಲು ಅನುಮತಿ ನೀಡುವುದಿಲ್ಲ. ಇದಕ್ಕೆ ಪರ್ಯಾಯವಾಗಿ ನದಿ, ಕಾಲುವೆ, ಕೆರೆ ಇತ್ಯಾದಿಗಳಿಂದ ಮೇಲುಮಟ್ಟದಲ್ಲಿ ನೀರು ತರುವ ವ್ಯವಸ್ಥೆಗೆ ಆದ್ಯತೆ ನೀಡಲಾಗುವುದು. ಕಲ್ಲೂರು, ಕೆ.ನಾಗನಹಳ್ಳಿಯ ಕುಡಿಯುವ ನೀರು ಪೂರೈಕೆಗೆ ಅಗತ್ಯವಾದ ಪೈಪ್‌ಲೈನ್ ಅಳವಡಿಸಲು 20 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಲಾಗಿದೆ~ ಎಂದು ಹೇಳಿದರು.

`ಬರ ಪರಿಹಾರಕ್ಕೆ ಸರ್ಕಾರ ಸದ್ಯದಲ್ಲಿ ಹಣ ಬಿಡುಗಡೆ ಮಾಡಿಲ್ಲ. ಆದರೆ ಜಿಲ್ಲಾಧಿಕಾರಿ ಬಳಿ ಪ್ರಕೃತಿ ವಿಕೋಪ ನಿಧಿಯಲ್ಲಿ 4 ಕೋಟಿ ರೂಪಾಯಿ ಇದೆ. ಇದನ್ನು ಬಳಕೆ ಮಾಡಿಕೊಂಡು ಇನ್ನು ಹೆಚ್ಚಿನ ಹಣಕ್ಕೆ ಸರ್ಕಾರಕ್ಕೆ ಬೇಡಿಕೆ ಇಡಲಾಗುವುದು. ಕುಡಿಯುವ ನೀರಿನ ಸಮಸ್ಯೆಯನ್ನು ನೀಗುವ ಸಲುವಾಗಿ ಜಿಲ್ಲಾ ಪಂಚಾಯಿತಿ ಬಳಿ 57 ಕೋಟಿ ರೂಪಾಯಿಗಳಿದ್ದು ಇದನ್ನು ಬಳಕೆ ಮಾಡಿಕೊಳ್ಳಲಾಗುವುದು~ ಎಂದರು.

ಶಾಸಕ ಎಂ.ಸತ್ಯನಾರಾಯಣ ಮಾತನಾಡಿ, `ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಜಯಪುರ ಹೋಬಳಿಯಲ್ಲಿಯೂ ಬರದ ಸ್ಥಿತಿ ಇದೆ. ಆದ್ದರಿಂದ ಈ ಬಗ್ಗೆಯೂ ಗಮನಹರಿಸಬೇಕು. ನಾಗರಕಟ್ಟೆ ಸೇತುವೆಯನ್ನು ಸಂಪರ್ಕಿಸುವ ರಸ್ತೆ ನಿರ್ಮಾಣ ಕಾರ್ಯ ಹಣಕಾಸಿನ ತೊಂದರೆಯಿಂದ ಅರ್ಧಕ್ಕೆ ನಿಂತಿದೆ. ಇದಕ್ಕೂ ಅಗತ್ಯವಾದ ಹಣವನ್ನು ಕೊಡಬೇಕು~ ಎಂದು ಸಚಿವ ರಾಮದಾಸ್ ಅವರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುನೀತಾವೀರಪ್ಪಗೌಡ , ಉಪಾಧ್ಯಕ್ಷ ಡಾ.ಶಿವರಾಮು, ಜಿಲ್ಲಾಧಿಕಾರಿ ಪಿ.ಎಸ್.ವಸ್ತ್ರದ್, ಕೃಷಿ  ಜಂಟಿ ನಿರ್ದೇಶಕ ಕೃಷ್ಣಯ್ಯ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಗೋಪಾಲ್, ಉಪವಿಭಾಗಾಧಿಕಾರಿ ಭಾರತಿ, ತಹಶೀಲ್ದಾರ್  ಮಂಜುನಾಥ್ ಬಾಬು ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು, ವಿವಿಧ ಪಕ್ಷಗಳ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT