ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಬಿಸಿಸಿಐ ಮಹತ್ವದ ಸಭೆ

`ಶ್ರೀನಿವಾಸನ್ ಮಂಡಳಿಯ ಅಧ್ಯಕ್ಷ... ಅವರ ಸಾರಥ್ಯದಲ್ಲಿಯೇ ಸಭೆ ನಡೆಯಲಿದೆ'
Last Updated 1 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್‌ಎಸ್): ಆಂತರಿಕ ತನಿಖಾ ಆಯೋಗವು ಕಾನೂನುಬಾಹಿರ ಹಾಗೂ ಅಸಾಂವಿಧಾನಿಕ ಎಂದು ಬಾಂಬೆ ಹೈಕೋರ್ಟ್ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿರುವ ಕಾರಣ ಶುಕ್ರವಾರ ಇಲ್ಲಿ ನಡೆಯಲಿರುವ ಬಿಸಿಸಿಐ ಕಾರ್ಯಕಾರಿ ಸಮಿತಿ ಸಭೆಯತ್ತ ಎಲ್ಲರ ಕಣ್ಣು ನೆಟ್ಟಿದೆ.

ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯೋಗವು ದೋಷಮುಕ್ತಗೊಳಿಸಿ ವರದಿ ನೀಡಿದ ಬಳಿಕ ಎನ್.ಶ್ರೀನಿವಾಸನ್ ಅವರು ಬಿಸಿಸಿಐ ಅಧ್ಯಕ್ಷರಾಗಿ ಮತ್ತೆ ಅಧಿಕಾರ ವಹಿಸಿಕೊಂಡಿದ್ದಾರೆ ಎಂಬ ಊಹಾಪೋಹ ಕೇಳಿಬಂದಿದ್ದು, ಅವರ ಸಾರಥ್ಯದಲ್ಲಿಯೇ ಈ ಸಭೆ ನಡೆಯುವ ಸಾಧ್ಯತೆ ಇದೆ. ಹಾಗಾಗಿ ಈ ಸಭೆ ಕುತೂಹಲಕ್ಕೆ ಕಾರಣವಾಗಿದೆ.

ಮಹತ್ವದ ಈ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಈಗಾಗಲೇ ಅವರು ಸ್ಪಷ್ಟಪಡಿಸಿದ್ದಾರೆ. ಆದರೆ ಕಾನೂನುಬಾಹಿರ ಆಯೋಗ ರಚನೆಯಲ್ಲಿ ಅಧ್ಯಕ್ಷರ ಕೈವಾಡವಿದೆ ಎಂದು ಕೋರ್ಟ್ ತೀರ್ಪು ನೀಡಿದ ಮೇಲೂ ಶ್ರೀನಿವಾಸನ್ ಈ ನಿರ್ಧಾರ ತೆಗೆದುಕೊಂಡಿರುವುದು ಅಚ್ಚರಿ ಮೂಡಿಸಿದೆ.

`ಶ್ರೀನಿವಾಸನ್ ಬಿಸಿಸಿಐ ಅಧ್ಯಕ್ಷ... ಅವರೇ ಈ ಸಮಿತಿ ಸಭೆಯ ಸಾರಥ್ಯ ವಹಿಸಲಿದ್ದಾರೆ' ಎಂದು ಮಂಡಳಿಯ ಕಾರ್ಯದರ್ಶಿ ಸಂಜಯ ಪಟೇಲ್ ಕೂಡ ಹೇಳಿರುವುದು ಭಾರಿ ಟೀಕೆಗೆ ಗುರಿಯಾಗಿದೆ. `ಅವರು ಈಗಾಗಲೇ ಮಂಡಳಿಯ ಕಾರ್ಯಚಟುವಟಿಕೆ ಆರಂಭಿಸಿದ್ದಾರೆ. ಹಾಗಾಗಿ ಯಾರ ಸಾರಥ್ಯದಲ್ಲಿ ಸಭೆ ನಡೆಯಲಿದೆ ಎಂಬುದರ ಬಗ್ಗೆ ಗೊಂದಲ ಬೇಡ. ರಾಜೀನಾಮೆ ನೀಡುವಂತೆ ಇದುವರೆಗೆ ಮಂಡಳಿಯ ಯಾವೊಬ್ಬ ಸದಸ್ಯನೂ ಒತ್ತಾಯಿಸಿಲ್ಲ. ಸಭೆಯಲ್ಲಿ ತನಿಖಾ ಆಯೋಗದ ವರದಿ ಬಗ್ಗೆ ಚರ್ಚಿಸಲಿದ್ದೇವೆ' ಎಂದು ಸಂಜಯ್ ಸ್ಪಷ್ಟಪಡಿಸಿದ್ದಾರೆ. 

ಆದರೆ ಈ ಬಗ್ಗೆ ಗುರುವಾರ ಶ್ರೀನಿವಾಸನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. `ಕಾರಿನೊಳಗೆ ಹೋಗಲು ನನ್ನನ್ನು ಬಿಡಿ. ಕ್ಯಾಮೆರಾದಲ್ಲಿ ನನಗೆ ಗುದ್ದಿದ್ದೀರಿ. ಈ ರೀತಿ ನೀವು ಮಾಡುವಂತಿಲ್ಲ. ನಿಮ್ಮ ಯಾವುದೇ ಪ್ರಶ್ನೆಗೆ ನಾನು ಪ್ರತಿಕ್ರಿಯಿಸುವುದಿಲ್ಲ' ಎಂದಿದ್ದಾರೆ.
ಶ್ರೀನಿವಾಸನ್ ಅವರು ಈ ಸಭೆಯ ಸಾರಥ್ಯ ವಹಿಸುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಮತ್ತೆ ನ್ಯಾಯಾಲಯದ ಮೊರೆ ಹೋಗುವುದಾಗಿ ಬಿಹಾರ ಕ್ರಿಕೆಟ್ ಸಂಸ್ಥೆ ಹಾಗೂ ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ಎಚ್ಚರಿಕೆ ನೀಡಿವೆ.

ಅಷ್ಟು ಮಾತ್ರವಲ್ಲದೇ, ಕಳ್ಳಾಟ ಪ್ರಕರಣದ ವಿಚಾರಣೆ ನಡೆಸಲು ಹೊಸ ತನಿಖಾ ಆಯೋಗ ರಚಿಸುವಂತೆ ಮಂಡಳಿಯ ಉಪಾಧ್ಯಕ್ಷ ನಿರಂಜನ್ ಷಾ ಆಗ್ರಹಿಸಿದ್ದಾರೆ. ಸಂಜಯ್ ಪಟೇಲ್ ಹೇಳಿದಂತೆ ಈ ಸಭೆ ಶ್ರೀನಿವಾಸನ್ ಅಧ್ಯಕ್ಷತೆಯಲ್ಲಿ ನಡೆದರೆ ಮತ್ತೆ ಮಂಡಳಿಯ ಮುಖ್ಯಸ್ಥರಾಗಿ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡಂತಾಗುತ್ತದೆ.

ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣದಲ್ಲಿ ಅಳಿಯ ಗುರುನಾಥ್ ಮೇಯಪ್ಪನ್ ಅವರನ್ನು ಪೊಲೀಸರು ಬಂಧಿಸಿದ ಬಳಿಕ ಅವರು ಮಂಡಳಿಯ ಕಾರ್ಯಚಟುವಟಿಕೆಗಳಿಂದ ಹಿಂದೆ ಸರಿದಿದ್ದರು. ಹಂಗಾಮಿ ಅಧ್ಯಕ್ಷರನ್ನಾಗಿ ಜಗಮೋಹನ್ ದಾಲ್ಮಿಯ ಅವರನ್ನು ನೇಮಿಸಲಾಗಿತ್ತು. ಆದರೆ ಮಂಡಳಿಯ ಸದಸ್ಯದ ಬೆಳವಣಿಗೆಗಳ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ದಾಲ್ಮಿಯ ಬೇಸರ ವ್ಯಕ್ತಪಡಿಸಿದ್ದಾರೆ.

ಶ್ರೀನಿವಾಸನ್ ಈಗಾಗಲೇ ಅಧಿಕಾರ ವಹಿಸಿಕೊಂಡಿದ್ದಾರೆ ಎಂಬ ವರದಿಗೆ ಮಂಡಳಿಯ ಕೆಲ ಸದಸ್ಯರಿಂದ ಆಕ್ರೋಶ ವ್ಯಕ್ತವಾಗಿದೆ. ಬಾಂಬೆ ಹೈಕೋರ್ಟ್ ತೀರ್ಪಿನ ಹಿನ್ನಲೆಯಲ್ಲಿ ಶ್ರೀನಿವಾಸನ್ ಈ ಸಭೆಯಿಂದ ದೂರು ಉಳಿಯವುದು ಒಳಿತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪ್ರಮುಖವಾಗಿ ತನಿಖಾ ಆಯೋಗ ನೀಡಿರುವ ವರದಿ ಮೇಲಿನ ಚರ್ಚೆಯ ಕೇಂದ್ರ ಭಾಗವಾಗಿರಲಿದೆ. ಬಾಂಬೆ ಹೈಕೋರ್ಟ್ ತೀರ್ಪು ಹಾಗೂ ಆ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗುವುದರ ಬಗ್ಗೆ ಸಮಾಲೋಚನೆ ನಡೆಯುವ ಸಾಧ್ಯತೆ ಇದೆ. ಅಷ್ಟು ಮಾತ್ರವಲ್ಲದೇ, ಐಪಿಎಲ್‌ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರ ವಿಷಯವೂ ಸಭೆಯಲ್ಲಿ ಪ್ರಸ್ತಾಪವಾಗುವ ಸಂಭವವಿದೆ.

ಮತ್ತೆ ಕೋರ್ಟ್‌ಗೆ: ವರ್ಮ ಬೆದರಿಕೆ
ನವದೆಹಲಿ (ಪಿಟಿಐ): ಎನ್.ಶ್ರೀನಿವಾಸನ್ ಅವರು ಶುಕ್ರವಾರ ಇಲ್ಲಿ ನಡೆಯಲಿರುವ ಬಿಸಿಸಿಐ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದರೆ ಮತ್ತೆ ಕೋರ್ಟ್ ಮೊರೆ ಹೋಗುವುದಾಗಿ ಬಿಹಾರ ಹಾಗೂ ಜಾರ್ಖಂಡ್ ಕ್ರಿಕೆಟ್ ಸಂಸ್ಥೆಗಳು ಬೆದರಿಕೆ ಹಾಕಿವೆ. `ಈಗಾಗಲೇ ನ್ಯಾಯಾಲಯ ತನಿಖಾ ಆಯೋಗ ರಚನೆಯನ್ನು ಕಾನೂನುಬಾಹಿರ ಎಂದು ಹೇಳಿದೆ. ಹಾಗಾಗಿ ಸಭೆಯ ಅಧ್ಯಕ್ಷತೆ ವಹಿಸಲು ಶ್ರೀನಿವಾಸನ್ ಅವರಿಗೆ ಯಾವುದೇ ಅಧಿಕಾರವಿಲ್ಲ. ಅಕಸ್ಮಾತ್ ಅಧ್ಯಕ್ಷತೆ ವಹಿಸಿದರೆ ಮತ್ತೆ ನ್ಯಾಯಾಲಯದ ಮೊರೆ ಹೋಗುತ್ತೇವೆ' ಎಂದು ಬಿಹಾರ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಆದಿತ್ಯ ವರ್ಮ ಎಚ್ಚರಿಕೆ ನೀಡಿದ್ದಾರೆ.

ತನಿಖಾ ಆಯೋಗದ ಸಂಬಂಧ ಬಿಸಿಸಿಐ ಅಧಿಕಾರಿಯೊಬ್ಬರು ತಮ್ಮಂದಿಗೆ ಒಪ್ಪಂದ ಮಾಡಿಕೊಳ್ಳಲು ಮುಂದೆ ಬಂದಿದ್ದಾರೆ. ಅಷ್ಟು ಮಾತ್ರವಲ್ಲದೇ, ಬೆದರಿಕೆ ಹಾಕಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ. `ನಾನು ಮುಂಬೈನಲ್ಲಿದ್ದ ಸಂದರ್ಭದಲ್ಲಿ ಒಬ್ಬ ಸದಸ್ಯ ನನ್ನನ್ನು ಭೇಟಿಯಾಗಿದ್ದರು. ಬಿಹಾರ ಕ್ರಿಕೆಟ್ ಸಂಸ್ಥೆಗೆ ಮಾನ್ಯತೆ ನೀಡುವ ವಿಚಾರ ಮಾತನಾಡಿದರು. ಆ ಮೂಲಕ ಹೋರಾಟದಿಂದ ಹಿಂದೆ ಸರಿಯುವಂತೆ ಸೂಚನೆ ನೀಡಿದರು' ಎಂದು ವರ್ಮ ತಿಳಿಸಿದ್ದಾರೆ.

ಸ್ಪಾಟ್ ಫಿಕ್ಸಿಂಗ್ ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಟಿ.ಜಯರಾಮ್ ಚೌಟ ಹಾಗೂ ಆರ್.ಬಾಲಸುಬ್ರಮಣ್ಯಂ ಅವರನ್ನೊಳಗೊಂಡ ಆಂತರಿಕ ತನಿಖಾ ಆಯೋಗವು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ತಾನ ರಾಯಲ್ಸ್ ಯಾವುದೇ ತಪ್ಪು ಎಸಗಿಲ್ಲ ಎಂದು ದೋಷಮುಕ್ತಗೊಳಿಸಿ ವರದಿ ನೀಡಿತ್ತು. ಗುರುನಾಥ್ ಮೇಯಪ್ಪನ್ ಮತ್ತು ರಾಜ್ ಕುಂದ್ರಾ ಅವರಿಗೂ `ಕ್ಲೀನ್‌ಚಿಟ್' ನೀಡಿತ್ತು.

ಇದನ್ನು ಆದಿತ್ಯ ವರ್ಮ ಬಾಂಬೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ  ನ್ಯಾಯಮೂರ್ತಿಗಳಾದ ಎಸ್.ಜೆ.ವಾಜಿಫ್ದರ್ ಹಾಗೂ ಎಂ.ಎಸ್.ಸೊನಾಕ್ ಅವರನ್ನೊಳಗೊಂಡ ವಿಭಾಗೀಯ ಪೀಠ, `ಆಯೋಗ ರಚನೆ ಕಾನೂನುಬಾಹಿರ ಹಾಗೂ ಅಸಾಂವಿಧಾನಿಕ' ಎಂದು ತೀರ್ಪು ನೀಡಿತ್ತು.

`ಬಾಂಬೆ ಹೈಕೋರ್ಟ್ ಆದೇಶವನ್ನು ನಾವು ಸ್ವಾಗತಿಸುತ್ತೇವೆ. ಶ್ರೀನಿವಾಸನ್ ವಿರುದ್ಧ ಮಂಡಳಿಯ ಸದಸ್ಯರು ಧ್ವನಿ ಎತ್ತಬೇಕು' ಎಂದು ಜಾರ್ಖಂಡ್ ಕ್ರಿಕೆಟ್ ಸಂಸ್ಥೆಯ (ಸಿಎಜೆ) ಅಧ್ಯಕ್ಷ ಸುಬೋಧ್ ಸಾಹೆ ನುಡಿದಿದ್ದಾರೆ. ಬಿಸಿಸಿಐ ಮಾನ್ಯತೆ ಹೊಂದಿರುವ ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಪರ್ಯಾಯವಾಗಿ ಸುಬೋಧ್ ಸಾರಥ್ಯದಲ್ಲಿ ಈ ಸಂಸ್ಥೆ ಇದೆ.

ಇಂದು ಐಪಿಎಲ್ ಸಭೆ: ರಾಜೀವ್ ಶುಕ್ಲಾ ಸಾರಥ್ಯ?
ನವದೆಹಲಿ (ಪಿಟಿಐ): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಡಳಿತ ಮಂಡಳಿ ಸಭೆ ಕೂಡ ಶುಕ್ರವಾರ ಇಲ್ಲಿ ನಡೆಯಲಿದ್ದು, ರಾಜೀವ್ ಶುಕ್ಲಾ ಈ ಸಭೆಯ ಸಾರಥ್ಯ ವಹಿಸುವ ನಿರೀಕ್ಷೆ ಇದೆ. ಸ್ಪಾಟ್ ಫಿಕ್ಸಿಂಗ್ ಪ್ರಕರಣ ಹಲವು ತಿರುವು ಪಡೆದಾಗ ಶುಕ್ಲಾ ಐಪಿಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಬಿಸಿಸಿಐ ಅವರ ರಾಜೀನಾಮೆಯನ್ನು ಇನ್ನೂ ಅಂಗೀಕರಿಸಿಲ್ಲ.

`ಸಭೆಯ ಅಧ್ಯಕ್ಷತೆ ವಹಿಸುವಂತೆ ಕೋರಿದರೆ ಅದಕ್ಕೆ ನನ್ನ ಆಕ್ಷೇಪವಿಲ್ಲ. ಆದರೆ ಐಪಿಎಲ್ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಬೇಕೇ ಎಂಬುದು ಮುಖ್ಯ ಪ್ರಶ್ನೆಯಾಗಿದೆ' ಎಂದು ಕೇಂದ್ರ ಸಚಿವರೂ ಆಗಿರುವ ಶುಕ್ಲಾ ಗುರುವಾರ ನುಡಿದಿದ್ದಾರೆ. ಬಿಸಿಸಿಐನ ಆಂತರಿಕ ತನಿಖಾ ಆಯೋಗ ನೀಡಿರುವ ವರದಿ ಬಗ್ಗೆ ಚರ್ಚಿಸಲು ಈ ಸಭೆ ಕರೆಯಲಾಗಿದೆ. ಈ ವರದಿ ಬಗ್ಗೆ ಮಂಡಳಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ. 

ಈ ನಿರ್ಧಾರವನ್ನು ಬಿಸಿಸಿಐ ಕಾರ್ಯಕಾರಿ ಸಮಿತಿ ಅನುಮೋದಿಸಲಿದೆ. ಕಾರ್ಯಕಾರಿ ಸಮಿತಿ ಸಭೆ ಶ್ರೀನಿವಾಸನ್ ಅವರ ಸಾರಥ್ಯದಲ್ಲಿ ನಡೆಯಲಿದೆಯೇ ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು, `ಈ ಬಗ್ಗೆ ಶುಕ್ರವಾರ ನಿರ್ಧಾರ ತೆಗೆದುಕೊಳ್ಳಲಾಗುವುದು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT