ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಕ್ಕಟ್ಟಿನಲ್ಲಿ ಸರ್ಕಾರ?

ಇಂದು ಬಿಎಸ್‌ವೈ ಬಣದ ಶಾಸಕರ ರಾಜೀನಾಮೆ
Last Updated 22 ಜನವರಿ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಬಣಕ್ಕೆ ಸೇರಿದ ಸಚಿವರಾದ ಶೋಭಾ ಕರಂದ್ಲಾಜೆ, ಸಿ.ಎಂ.ಉದಾಸಿ ಹಾಗೂ ಕೆಲವು ಶಾಸಕರು ನಿರೀಕ್ಷೆಯಂತೆ ಬುಧವಾರ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲಿದ್ದಾರೆ. ಇದರಿಂದಾಗಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆ ಇದೆ.

ಶೆಟ್ಟರ್‌ಗೆ ಬಜೆಟ್ ಮಂಡಿಸಲು ಅವಕಾಶ ನೀಡಬಾರದು ಎಂದು ಹಟ ಹಿಡಿದಿರುವ ಯಡಿಯೂರಪ್ಪ ಅವರು, ತಮ್ಮ ಆಪ್ತ ಸಚಿವರು ಮತ್ತು ಶಾಸಕರಿಂದ ರಾಜೀನಾಮೆ ಕೊಡಿಸುವ ಮೂಲಕ ಸರ್ಕಾರ ಪದಚ್ಯುತಗೊಳಿಸಲು ಮುಂದಾಗಿದ್ದಾರೆ. ಸರ್ಕಾರದ ಅಳಿವು - ಉಳಿವಿನ ಬಗ್ಗೆ ಬುಧವಾರ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ.

ಬುಧವಾರ ಬೆಳಿಗ್ಗೆ ಯಡಿಯೂರಪ್ಪ ಅವರು ಆಪ್ತರ ಜತೆ ಸಭೆ ನಡೆಸಲ್ದ್ದಿದಾರೆ. ಅದರಲ್ಲಿ ಎಷ್ಟು ಶಾಸಕರು ಭಾಗವಹಿಸುತ್ತಾರೆ, ಎಷ್ಟು ಮಂದಿ ರಾಜೀನಾಮೆ ನೀಡಲು ಒಪ್ಪುತ್ತಾರೆ ಎಂಬುದು ಇನ್ನೂ ಖಚಿತವಾಗಿಲ್ಲ. ಈಗಿನ ಲೆಕ್ಕಾಚಾರದ ಪ್ರಕಾರ 10-12 ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ.

ಬಿ.ಪಿ.ಹರೀಶ್, ನೆಹರೂ ಓಲೇಕಾರ ಮಾತ್ರ ಬಹಿರಂಗವಾಗಿಯೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದಾರೆ. ಕನಿಷ್ಠ 20 ಜನ ಶಾಸಕರು ರಾಜೀನಾಮೆ ನೀಡಿದರೆ ಮಾತ್ರ ಸರ್ಕಾರ ಬಹುಮತ ಕಳೆದುಕೊಳ್ಳಲಿದೆ.ಸಭೆ ನಂತರ ಶೋಭಾ ಮತ್ತು ಉದಾಸಿ ಅವರು ಶೆಟ್ಟರ್ ಅವರಿಗೆ ರಾಜೀನಾಮೆ ಪತ್ರಗಳನ್ನು ಕಳುಹಿಸಿಕೊಡಲಿದ್ದಾರೆ. ಬಳಿಕ ಅವರು ಯಡಿಯೂರಪ್ಪ ಬೆಂಬಲಿಗ ಶಾಸಕರ ಜತೆ ತೆರಳಿ ವಿಧಾನಸಭೆಯ ಸ್ಪೀಕರ್ ಅವರನ್ನು ಭೇಟಿಯಾಗಿ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ.

ಬುಧವಾರವೇ 20 ಜನ ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಕಡಿಮೆ. ಮೊದಲ ಕಂತಿನಲ್ಲಿ 10- 12 ಜನ ಶಾಸಕರು ರಾಜೀನಾಮೆ ನೀಡಲಿದ್ದಾರೆ. ಉಳಿದ ಶಾಸಕರು ಎರಡನೇ ಕಂತಿನಲ್ಲಿ ಇದೇ 30ರ ಒಳಗೆ ರಾಜೀನಾಮೆ ನೀಡಲಿದ್ದಾರೆ ಎಂದು ಭಿನ್ನಮತೀಯರ ಆಪ್ತ ಮೂಲಗಳು ತಿಳಿಸಿವೆ.
ಬಲಾಬಲ: 225 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 120 ಸದಸ್ಯರನ್ನು ಹೊಂದಿದೆ. ಇವರಲ್ಲಿ ನಾಮಕರಣ ಸದಸ್ಯ, ಸ್ಪೀಕರ್ ಹಾಗೂ ಪಕ್ಷೇತರ ಶಾಸಕ, ಜವಳಿ ಸಚಿವ ವರ್ತೂರು ಪ್ರಕಾಶ್ ಸೇರಿದ್ದಾರೆ.  ಕಾಂಗ್ರೆಸ್, ಜೆಡಿಎಸ್‌ನ ಒಟ್ಟು ಸಂಖ್ಯಾಬಲ 97. ಆರು ಜನ ಪಕ್ಷೇತರ ಶಾಸಕರ್ದ್ದಿದಾರೆ. ಹೀಗಾಗಿ ಎಷ್ಟು ಜನ ಬಿಜೆಪಿ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬುದರ ಮೇಲೆ ಶೆಟ್ಟರ್ ಸರ್ಕಾರದ ಭವಿಷ್ಯ ನಿಂತಿದೆ.

ಪಕ್ಷೇತರರ ಬೆಂಬಲ: ಈ ಮಧ್ಯೆ ಪಕ್ಷೇತರ ಶಾಸಕರ ಬೆಂಬಲ ಪಡೆಯುವ ಲೆಕ್ಕಾಚಾರದಲ್ಲಿ ಬಿಜೆಪಿ ತೊಡಗಿದೆ. ಆದರೆ, ಮುಂಬರುವ ಚುನಾವಣೆಯಲ್ಲಿ ಅವರೆಲ್ಲರೂ ಕಾಂಗ್ರೆಸ್‌ನಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಕಾಂಗ್ರೆಸ್ ನಿರ್ದೇಶನದಂತೆ ಪಕ್ಷೇತರ ಶಾಸಕರು ನಡೆದುಕೊಳ್ಳಲಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. `ಶೆಟ್ಟರ್ ನಾಯಕತ್ವದಲ್ಲಿ ತಮಗೆ ವಿಶ್ವಾಸವಿಲ್ಲ' ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ನೀಡುವ ಬಗ್ಗೆ ಯಡಿಯೂರಪ್ಪ ಬಣ ಇನ್ನೂ ಸ್ಪಷ್ಟವಾದ ತೀರ್ಮಾನಕ್ಕೆ ಬಂದಿಲ್ಲ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬ ಕಾರಣ ನೀಡಿ ಸ್ಪೀಕರ್ ಅವರು ಶಾಸಕರನ್ನು ಅನರ್ಹಗೊಳಿಸುವ ಅಪಾಯ ಇದ್ದು, ಆ ಕಾರಣಕ್ಕೆ ರಾಜ್ಯಪಾಲರ ಸಹವಾಸ ಬೇಡ ಎಂದು ಕೆಲವರು ಹೇಳುತ್ತಿದ್ದಾರೆ. ಹೀಗಾಗಿ ಸದ್ಯಕ್ಕೆ ಸ್ಪೀಕರ್ ಅವರಿಗಷ್ಟೇ ರಾಜೀನಾಮೆ ನೀಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಗಡುವು: ಸಂಕ್ರಾಂತಿ ವೇಳೆಗೆ ಸರ್ಕಾರವನ್ನು ಪತನಗೊಳಿಸುವುದಾಗಿ ಯಡಿಯೂರಪ್ಪ ಈ ಮುಂಚೆ ಹೇಳಿದ್ದರು. ನಂತರ ಜ.23ರ ಗಡುವು ನೀಡಿದ್ದರು. ಈ ಮಧ್ಯೆ 3-4 ದಿನಗಳ ಹಿಂದೆ ಸರ್ಕಾರಕ್ಕೆ ಯಾವುದೇ ಗಡುವು ನೀಡುವುದಿಲ್ಲ ಎಂದು ತದ್ವಿರುದ್ಧ ಹೇಳಿಕೆಯನ್ನೂ ನೀಡಿದ್ದರು.
ರಾಜಕೀಯ ಚಟುವಟಿಕೆ ಚುರುಕು:ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ ರಾಜಕೀಯ ಬೆಳವಣಿಗೆಗಳು ಚುರುಕುಗೊಂಡಿವೆ. ಮಂಗಳವಾರ ಸಂಜೆ ಸಚಿವ ಉದಾಸಿ ನಿವಾಸಕ್ಕೆ ಭೇಟಿ ನೀಡಿದ್ದ ಯಡಿಯೂರಪ್ಪ, ಮುಂದೆ ಕೈಗೊಳ್ಳಬೇಕಾದ ರಾಜಕೀಯ ತಂತ್ರಗಾರಿಕೆ ಬಗ್ಗೆ ಸಮಾಲೋಚನೆ ನಡೆಸಿದರು.  ಸದ್ಯಕ್ಕೆ ಇಬ್ಬರು ಸಚಿವರು ಮಾತ್ರ ರಾಜೀನಾಮೆ ನೀಡಲಿದ್ದಾರೆ. ಯಡಿಯೂರಪ್ಪ ಅವರ ಮತ್ತೊಬ್ಬ ಆಪ್ತ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಇನ್ನೂ ಗೊಂದಲದಲ್ಲಿ ಇದ್ದಾರೆ. ಅವರು ರಾಜೀನಾಮೆ ನೀಡುವುದು ಖಚಿತವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ತಮ್ಮ ನಿವಾಸದಲ್ಲಿ ಬೆಂಬಲಿಗರ ಸಭೆ ನಡೆಸಿದ ಉದಾಸಿ, `ಬುಧವಾರ ಮಧ್ಯಾಹ್ನದವರೆಗೂ ಕಾದು ನೋಡಿ ಎಲ್ಲವೂ ಬಹಿರಂಗಗೊಳ್ಳಲಿದೆ' ಎನ್ನುವ ಮೂಲಕ ರಾಜೀನಾಮೆಯ ಸುಳಿವು ನೀಡಿದರು. ರಾಜೀನಾಮೆ ನೀಡಲು ನಿರ್ಧರಿಸಿರುವ ಶೋಭಾ, ಉದಾಸಿ ಅವರು ತಮ್ಮ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಅಧಿಕಾರದ ಅವಧಿಯಲ್ಲಿ ನೀಡಿದ ಸಹಕಾರಕ್ಕಾಗಿ ಕೃತಜ್ಞತೆ ಸಲ್ಲಿಸಿದರು.

ವಿದಾಯ ಗೋಷ್ಠಿ: ಇಂಧನ ಇಲಾಖೆಯಲ್ಲಿ ನಾಲ್ಕೂವರೆ ವರ್ಷಗಳಲ್ಲಿ ಆಗಿರುವ ಪ್ರಗತಿ ಕುರಿತು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಶೋಭಾ, ಇಲಾಖೆ ಬಿಟ್ಟು ಹೋಗುತ್ತಿರುವುದು ನೋವಿನ ಸಂಗತಿ ಎನ್ನುವ ಮೂಲಕ ಪರೋಕ್ಷವಾಗಿ ಬುಧವಾರ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದರು. `ನಾನು ಚಿಕ್ಕವಳು. ನನಗಿಂತ ದೊಡ್ಡವರು ಇಂಧನ ಇಲಾಖೆಯ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಸರ್ಕಾರ ಮತ್ತು ಪಕ್ಷಕ್ಕಿಂತ, ಇಂಧನ ಇಲಾಖೆಯನ್ನು ಬಿಟ್ಟು ಹೋಗುತ್ತಿರುವುದಕ್ಕೆ ನೋವಾಗುತ್ತಿದೆ. ಇಲಾಖೆಯ ಸಿಬ್ಬಂದಿ ನೀಡಿದ ಉತ್ತಮ ಸಹಕಾರವನ್ನು ಮರೆಯಲು ಸಾಧ್ಯವಿಲ್ಲ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT