ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸ ಪ್ರಸಿದ್ಧ ಕಾರೀಮನಿ ಮಲ್ಲಯ್ಯನ ಜಾತ್ರೆ

Last Updated 9 ಅಕ್ಟೋಬರ್ 2011, 7:20 IST
ಅಕ್ಷರ ಗಾತ್ರ

ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕು ಕಾರೀಮನಿ ಗ್ರಾಮವು ಶಿವ-ಶರಣರ ಬೀಡಾಗಿ ಇತಿಹಾಸ ಪ್ರಶಿದ್ಧಿಯಾಗಿದೆ. ಬಸವಣ್ಣನವರ ಕಲ್ಯಾಣದ ಕ್ರಾಂತಿ ನಡೆದಾಗ ಶಿವ-ಶರಣರು ದಕ್ಷಿಣದ ಕಡೆಗೆ ಪ್ರಯಾಣ ಬೆಳೆಸಿದರು, ಆಗ ಕಾರೀಮನಿ ಗ್ರಾಮದಲ್ಲಿ ತಂಗಿ ಬಸವ ತತ್ವಗಳ ಪ್ರಚಾರ ಮಾಡಿದ ಬಗ್ಗೆ ಕುರುಹುಗಳಿವೆ. ಇದರಿಂದಾಗಿ ಇಲ್ಲಿ ಬಸವಣ್ಣನ ದೇವಸ್ಥಾನವಿದ್ದು, ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಾರೆ.

ಅದೇ ರೀತಿ ಕಾರೀಮನಿ ಗ್ರಾಮದ ಪೂರ್ವ ದಿಕ್ಕಿಗೆ ಬೆಟ್ಟದ ಮೇಲೆ ಮೈಲಾರಲಿಂಗನ ಪ್ರತಿರೂಪವಾದ ಮಲ್ಲಯ್ಯಜ್ಜನ ದೇವಸ್ಥಾನವು ಪ್ರಸಿದ್ಧಿ ಹೊಂದಿ ಪವಿತ್ರ ಕ್ಷೇತ್ರವಾಗಿದೆ. ಇದೇ ತಾಲ್ಲೂಕಿನ ಮರಕುಂಬಿ ಗ್ರಾಮದ ಪಾಟೀಲ ಮನೆತನಕ್ಕೆ ಸೇರಿದ ಜಮೀನದಾರರು ಭಕ್ತಿವಂತರಾಗಿದ್ದರು. ನ್ಯಾಯ-ನೀತಿ ಧರ್ಮದಿಂದ ಆಡಳಿತ ನಡೆಸುತ್ತಿದ್ದರು. ಅವರಿಗೆ ಎರಡು ಸಾವಿರ ಎಕರೆಯಷ್ಟು ಜಮೀನು ಇದ್ದು, ಅವರ ಮನೆಯಲ್ಲಿ ಸುಮಾರು ನೂರಾರು ಹಸುಗಳಿದ್ದವು. ಇವುಗಳ ಹಾಲನ್ನು ದೂರದ ಮೈಲಾರ ದೇವಸ್ಥಾನದ ಮೈಲಾರಲಿಂಗೇಶ್ವರರಿಗೆ ಪಾದಯಾತ್ರೆಯ ಮೂಲಕ ಮುಟ್ಟಿಸುವ ಸಂಪ್ರದಾಯ ಇಂತಹ ಸಮಯದಲ್ಲಿ ಅವರ ಮನೆತನದ ಹಿರಿಯರೊಬ್ಬರು ಹಾಲು ಒಯ್ಯುವಾಗ ಕಾಲಿಗೆ ಮುಳ್ಳು ತಾಗಿತು. ಆಗ ಅವರು ಕುಂಟುತ್ತಾ ಮೈಲಾರದವರೆಗೆ ಹೋಗಿ ಹಾಲು ಮುಟ್ಟಿಸಿದ ನಂತರ ಮುಳ್ಳನ್ನು ತೆಗೆದರು.

ಇಂತಹ ಭಕ್ತಿಗೆ ಮೆಚ್ಚಿ ಮೈಲಾರಲಿಂಗೇಶನು ಪಾಟೀಲ ಮನೆತನದ ರಾಯನಾಯ್ಕರ ಅವರ ಕನಸಲ್ಲಿ ಬಂದು ಮರಕುಂಬಿ ಗ್ರಾಮದ ಪೂರ್ವದ ಬೆಟ್ಟದ ಮಧ್ಯದಲ್ಲಿ ಭಾನುವಾರ ದಿನದಂದು ಹಾಲು ಇರುತ್ತದೆ. ಆ ಸ್ಥಳದಲ್ಲಿ ನನ್ನ ವಿಗ್ರಹ ಮಾಡಿಸಿ ದೇವಸ್ಥಾನ ಕಟ್ಟಿಸಿ ಸೇವೆ ಸಲ್ಲಿಸಬೇಕು ಎಂದು ಆಜ್ಞೆ ಮಾಡಿದನೆಂದು ತಿಳಿದು ಬರುತ್ತದೆ.

ಅದೇ ರೀತಿ ಭಾನುವಾರ ಬೆಳಿಗ್ಗೆ ಬೆಟ್ಟಕ್ಕೆ ಹೋಗಿ ನೋಡಲು ಅಲ್ಲಿ ಹಾಲು ಇದ್ದ ಸ್ಥಳ ಕಂಡು ಭಕ್ತಿಪರವಶರಾದರು. ಅಲ್ಲಿಯೇ ದೇವಸ್ಥಾನ ನಿರ್ಮಿಸಿದರು. ಹೀಗಾಗಿ ಈ ಭಾಗದ ಭಕ್ತರು ಕಾರೀಮನಿಯಲ್ಲಿ ಸ್ಥಾಪಿತವಾದ ಮೈಲಾರಲಿಂಗೇಶ್ವರ ಪ್ರತಿರೂಪವಾದ ಮಲ್ಲಯ್ಯಜ್ಜನಿಗೆ ಹೋಗಲು ಪ್ರಾರಂಭಿಸಿದರು.

ಪ್ರತಿ ವರ್ಷ ಶೀಗಿ ಹುಣ್ಣಿಮೆಯ ಮುನ್ನಾ ದಿನ ರಾತ್ರಿ 12ಕ್ಕೆ ಮಲ್ಲಯ್ಯಜ್ಜನ ಭಕ್ತರಾದ ವಗ್ಗರು ಕಬ್ಬಿಣದ ಸರಪಳಿಯನ್ನು ಹರಿಯುವ ಸಾಂಪ್ರದಾಯಿಕ ಕಾರ್ಯಕ್ರಮ ಜರಿಗಿಸುವರು. ಇದಾದ ಮೇಲೆ ಭಂಡಾರ ಪ್ರಸಾದ ಹಂಚುವರು. ಇದೆ ರೀತಿ ಈ ವರ್ಷ ಕೂಡ ಇದೇ 9ರಂದು ಭಾನುವಾರ ರಾತ್ರಿ 12 ಕ್ಕೆ ಜರುಗುವುದು. ನಂತರ ರಥೋತ್ಸವ ಕಾರ್ಯಕ್ರಮ ಜರುಗುವುದು. ಈ ಎಲ್ಲ ಕಾರ್ಯಕ್ರಮಗಳಿಗೆ ಪಾಟೀಲ ಮನೆತನಕ್ಕೆ ಸೇರಿದ ರಾಯನಾಯ್ಕ, ಚಂದ್ರನಾಯ್ಕ, ನಾನಾನಾಯ್ಕ, ಶಂಕರನಾಯ್ಕ, ಬಾಬಾನಾಯ್ಕಅವರು ಮಲ್ಲಯ್ಯಜ್ಜನ ಜಾತ್ರೆಯ ಎಲ್ಲ ವ್ಯವಸ್ಥೆಯನ್ನು ಮಾಡುವರು.

ಇದೆ ಮನೆತನಕ್ಕೆ ಸೇರಿದ ಕಾರ್ತಿಕನಾಯ್ಕ ಪಾಟೀಲ ಅವರು ಈ ವರ್ಷ ಧರ್ಮಕಾರ್ಯಗಳನ್ನು ಕೈಕೊಂಡಿದ್ದಾರೆ. ಇಂತಹ ಪೌರಾನಿಕ ಹಿನ್ನೆಲೆಯ ಮಲ್ಲಯ್ಯಜ್ಜನ ಜಾತ್ರೆ ಸಂಭ್ರಮ ಸಡಗರದಿಂದ ನಡೆಯುವುದು. ಸಾವಿರಾರು ಭಕ್ತರು ಪಾಲ್ಗೊಂಡು ಮಲ್ಲಯ್ಯಜ್ಜನ ಕೃಪೆಗೆ ಪಾತ್ರರಾಗುವರು. ಈ ಜಾತ್ರೆ ಪ್ರತಿ ವರ್ಷ ಶೀಗಿ ಹುಣ್ಣಿಮೆಯ ಮೆದಲನೇ ದಿನವೇ ಅತಿ ವಿಜೃಂಭನೆಯಿಂದ ಜರುಗುವುದು. ಈ ಜಾತ್ರೆಯಲ್ಲಿ ಹೊಸೂರ, ಮಾಟ್ಟೊಳ್ಳಿ, ಇಂಗಳಗಿ, ಸೊಗಲ, ಕಾರೀಮನಿ, ಮಲ್ಲೂರ, ಮುರಗೋಡ, ರುದ್ರಾಪೂರ, ದುಂಡಕೊಪ್ಪ ಗ್ರಾಮದ ಭಕ್ತಾದಿಗಳು ಜಾತ್ರೆಯಲ್ಲಿ ಪಾಲ್ಗೊಂಡು ವಿಜೃಂಭನೆಯಿಂದ ನಡೆಸುವರು ಎಂದು ಸುಭಾಷ ನಾಶೀಪುಡಿ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT