ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಏಡ್ಸ್‌ ರೋಗಿಗಳ ಆರೋಗ್ಯ ಧಾಮ

ನಗರ ಸಂಚಾರ
Last Updated 23 ಡಿಸೆಂಬರ್ 2013, 7:14 IST
ಅಕ್ಷರ ಗಾತ್ರ

ವಿಜಾಪುರ: ಆಕೆಗಿನ್ನೂ 20 ವರ್ಷ ವಯಸ್ಸು. ಬಾಲ್ಯದಲ್ಲೇ ವಿವಾಹ ಮಾಡಿದ್ದರಿಂದ ಕುಂಕುಳಲ್ಲಿ ಎರಡು ಮಕ್ಕಳಿವೆ. ಏಡ್ಸ್‌ನಿಂದಾಗಿ ಗಂಡ ತೀರಿ ಹೋಗಿದ್ದಾನೆ. ಆತ ತಾನು ಸಾಯುವುದಷ್ಟೇ ಅಲ್ಲ, ಈ ಮುಗ್ಧ ಯುವತಿಗೂ  ಏಡ್ಸ್‌ ಕರುಣಿಸಿದ್ದಾನೆ.

ಇಲ್ಲಿಯ ಇಂಡಿ ರಸ್ತೆಯ ಅಲಿಯಾಬಾದ್‌ನ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ವಸಾಹತು ನಲ್ಲಿರುವ ಸಂತ ಜೋಸೆಫ್‌ ಆರೋಗ್ಯ ಮತ್ತು ಸಮುದಾಯ ಕೇಂದ್ರದಲ್ಲಿ ದಾಖಲಾಗಿರುವ ಒಬ್ಬೊಬ್ಬರದ್ದು ಒಂದೊಂದು ಕತೆ. ಅವರಿಗೆಲ್ಲ ಆಸರೆಯಾಗಿದೆ ಈ ಕೇಂದ್ರ.
ಬೆಂಗಳೂರು ಮೂಲದ ಸಂತ ಜೋಸೆಫ್‌ ಸಂಸ್ಥೆ ಐದು ಎಕರೆ ವಿಶಾಲ ಪ್ರದೇಶದಲ್ಲಿ ಈ ಸುಸಜ್ಜಿತ ‘ಸಂತ ಜೋಸೆಫ್‌ ಆರೋಗ್ಯ ಮತ್ತು ಸಮುದಾಯ ಕೇಂದ್ರ’ ಸ್ಥಾಪಿಸಿದೆ. 2010ರ ನವೆಂಬರ್‌ 15ರಿಂದ ಕಾರ್ಯ ನಿರ್ವಹಣೆ ಆರಂಭಿಸಿದ್ದು, ಎಚ್‌ಐವಿ, ಏಡ್ಸ್‌ ಬಾಧಿತರಿಗೆ ಚಿಕಿತ್ಸೆ, ಆರೈಕೆ ಮಾಡಲಾಗುತ್ತಿದೆ.

‘40 ಹಾಸಿಗೆಗಳ ಸಾಮರ್ಥ್ಯ ಹೊಂದಿರುವ ಇದು ಎಚ್‌ಐವಿ, ಏಡ್ಸ್‌ ಪೀಡಿತರ ಸಮಗ್ರ ವೈದ್ಯಕೀಯ ಕೇಂದ್ರ. ಪುರುಷ ಮತ್ತು ಸ್ತ್ರೀಯರಿಗೆ ಪ್ರತ್ಯೇಕ ವಾರ್ಡ್‌ಗಳಿವೆ. ಮೂವರು ದಾದಿ ಯರು, ಇಬ್ಬರು ಸ್ವಯಂ ಸೇವಕರು ಸೇರಿದಂತೆ 13 ಜನ ಸಿಬ್ಬಂದಿ. ಇಬ್ಬರು ಪೂರ್ಣ ಪ್ರಮಾಣದ ವೈದ್ಯರು ಹಾಗೂ ಸಂದರ್ಶಕ ತಜ್ಞ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದೇವೆ. ಆಂಬುಲನ್ಸ್ ಸೇವೆಯೂ ಇದೆ’ ಎನ್ನುತ್ತಾರೆ ಈ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕಿ ಸಿಸ್ಟರ್‌ ಜೆಸಿಂತಾ.

‘ಈ ಕೇಂದ್ರದಲ್ಲಿ ಈ ವರೆಗೆ 3,852 ಜನ ಹೊರ ರೋಗಿಗಳಿಗೆ ಹಾಗೂ 2,370 ಜನ ಒಳರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಏಡ್ಸ್‌ ಪೀಡಿತರನ್ನು 10ರಿಂದ 15 ದಿನ ಇಟ್ಟುಕೊಂಡು ಅವರಿಗೆ ಆರೈಕೆ ಮಾಡುತ್ತೇವೆ. ಏಡ್ಸ್‌ಗಿಂತಲೂ ಮಾನಸಿಕ ಕಾಯಿಲೆ ಅವರನ್ನು ಹೆಚ್ಚಾಗಿ ಬಾಧಿಸುತ್ತಿರುತ್ತದೆ. ಅದಕ್ಕಾಗಿ ಚಿಕಿತ್ಸೆ, ಪೌಷ್ಟಿಕ ಆಹಾರದ ಜೊತೆಗೆ ಮಾನಸಿಕ ಆರೋಗ್ಯ ಕಾಪಾಡಲು ಯೋಗ, ಪ್ರಾರ್ಥನೆ, ಆಟೋಟ, ಕೌನ್ಸೆಲಿಂಗ್‌ ನಡೆಸುತ್ತೇವೆ’ ಎನ್ನುತ್ತಾರೆ ಅವರು.

ಕೀಳರಿಮೆ–ನಿಂದನೆಯಿಂದ ಏಡ್ಸ್‌ ಬಾಧಿತರು ದೈಹಿಕ ಮತ್ತು ಮಾನಸಿಕ ವಾಗಿ ಕುಗ್ಗಿ ಹೋಗಿರುತ್ತಾರೆ ‘ನಿಮಗೂ ನಮ್ಮಂತೆ ಬದುಕುವ ಹಕ್ಕಿದೆ. ನಿಮ್ಮ ಜೊತೆ  ನಾವಿದ್ದೇವೆ’ ಎಂಬ ಸಾಂತ್ವನದ ಮಾತು ಹೇಳಿ ಅವರಲ್ಲಿ  ಧೈರ್ಯ ತುಂಬತ್ತೇವೆ ಎನ್ನುತ್ತಾರೆ ಸಿಸ್ಟರ್‌ ಮೇರಿ ಜಯ.

‘ಜಿಲ್ಲಾ ಆಸ್ಪತ್ರೆಯ ಎ.ಆರ್.ಟಿ. ಕೇಂದ್ರ, ಸಂಘ–ಸಂಸ್ಥೆಗಳ ಮೂಲಕ ಹಾಗೂ ನೇರವಾಗಿ ಬರುವ ರೋಗಿ ಗಳನ್ನು ನಿಗಾ ಘಟಕದಲ್ಲಿಟ್ಟು ಆಪ್ತ ಸಮಾಲೋಚನೆ, ಔಷಧೋಪಚಾರ ನೀಡುತ್ತೇನೆ. ಸೋಂಕಿತರಿಗೆ ಊಟ, ಚಹಾ, ಕಾಫಿ, ಹಣ್ಣು, ಮೊಟ್ಟೆ ಇತರ ಪೌಷ್ಟಿಕ ಆಹಾರ ಉಚಿತವಾಗಿ ನೀಡು ತ್ತೇವೆ’ ಎಂದು ಸಿಸ್ಟರ್ ಮರಿಯಾ ಹೇಳಿದರು. ಎಚ್.ಐ.ವಿ. ಮತ್ತು ಕ್ಷಯ ರೋಗ ತಡೆಗಟ್ಟಲು ಜಾಗೃತಿ ಕಾರ್ಯ ಕ್ರಮಗಳನ್ನೂ ನಡೆಸಲಾಗುತ್ತಿದೆ ಎಂದರು.

‘ಜಿಲ್ಲೆಯಲ್ಲಿ ಸರ್ಕಾರಿ ಅಂಕಿ–ಅಂಶ ಗಳ ಪ್ರಕಾರ 27,000 ಏಡ್ಸ್‌ ಬಾಧಿತರು ಇದ್ದಾರೆ. ದೊಡ್ಡವರ ಆರೈಕೆ ಗಾಗಿ ಜಿಲ್ಲೆಯಲ್ಲಿ ಇರುವ ಏಕೈಕ ಕೇಂದ್ರವಿದು. ಅತ್ಯುತ್ತಮ ಸೇವೆ ದೊರೆಯುತ್ತಿದೆ. ನಮ್ಮ ಎಆರ್‌ಟಿ ಕೇಂದ್ರದಿಂದಲೂ ತಿಂಗಳಿಗೆ ಸರಾಸರಿ 70 ಜನ ರೋಗಿ ಗಳನ್ನು ಅಲ್ಲಿಗೆ ಕಳಿಸುತ್ತೇವೆ’ ಎನ್ನುತ್ತಾರೆ ಇಲ್ಲಿಯ ಜಿಲ್ಲಾ ಆಸ್ಪತ್ರೆಯ ಎಆರ್‌ಟಿ ಕೇಂದ್ರದ ಹಿರಿಯ ಆಪ್ತ ಸಮಾಲೋಚಕ ರವಿ ಕಿತ್ತೂರ.

‘ಐದು ಎಕರೆ ಜಮೀನು ಇದ್ದರೂ ನೀರು ಮತ್ತು ವಿದ್ಯುತ್‌ ಸಮಸ್ಯೆಯಿಂದ ಅದನ್ನು ಅಭಿವೃದ್ಧಿ ಪಡಿಸಲು ಆಗಿಲ್ಲ. ಉಚಿತವಾಗಿ ಇಲ್ಲವೆ ರಿಯಾಯಿತಿ ದರದಲ್ಲಿ ವಿದ್ಯುತ್‌ ಮತ್ತು ನೀರು ಪೂರೈಕೆ ಮಾಡಬೇಕು. ನಮ್ಮಲ್ಲಿಗೆ ಬರು ವವರು ಬಹುಪಾಲು ಕಡು ಬಡವರು. ದುಡಿಯುವ ಶಕ್ತಿ ಅವರಲ್ಲಿ ಇರಲ್ಲ. ಅವರಿಗೊಂದು ಸ್ವ ಉದ್ಯೋಗ ಕೇಂದ್ರ ಆರಂಭಿಸುವ ಚಿಂತನೆ ಇದ್ದು, ಇದಕ್ಕೆ ಸ್ಥಳೀಯರ ಬೆಂಬಲ–ನೆರವು ನೀಡ ಬೇಕು’ ಎಂಬುದು ಜೆಸಿಂತಾರ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT