ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದೆಂಥ ನ್ಯಾಯ!

Last Updated 15 ಸೆಪ್ಟೆಂಬರ್ 2011, 18:30 IST
ಅಕ್ಷರ ಗಾತ್ರ

ನಟ ದರ್ಶನ್ ಹಾಗೂ ಅವರ ಪತ್ನಿಯ ಜಗಳ ಬೀದಿಗೆ ಬಂದು, ಕೋರ್ಟ್ ಕಟಕಟೆ ಹತ್ತಿರುವ ಈ ಹೊತ್ತಲ್ಲಿ ನಟಿ ನಿಖಿತಾ ಮೇಲೆ ನಿರ್ಮಾಪಕರ ಸಂಘ ಮೂರು ವರ್ಷಗಳ ನಿಷೇಧ ಹೇರಿದೆ.

ಅದೇ ಹೊತ್ತಲ್ಲಿ ನಟಿ ನಿಖಿತಾ ಜ್ವರದ ಕಾರಣ ಮುಂಬೈಯಲ್ಲಿ ಆಸ್ಪತ್ರೆ ಸೇರಿದ್ದು ಕಾಕತಾಳೀಯವೋ, ಬೇಸರದ ಕಾರಣಕ್ಕೋ ಗೊತ್ತಿಲ್ಲ. ದರ್ಶನ್-ವಿಜಯಲಕ್ಷ್ಮಿ ದಾಂಪತ್ಯ ಬದುಕಿನ ವಿವಾದದ  ಸುತ್ತಲೇ ಗಿರಕಿಹೊಡೆಯುತ್ತಿದ್ದ ಮಾಧ್ಯಮದ ಕಣ್ಣು ನಿಖಿತಾ ಕಡೆ ವಾಲುವಂತೆ ಮಾಡಿದ್ದೇ ನಿರ್ಮಾಪಕರ ಸಂಘ.

ಇಂಥ ಪಾಳೇಗಾರಿಕೆಯ ನಿರ್ಧಾರವನ್ನು ಅನುಮೋದಿಸಿದವರು ಕಡಿಮೆ. ಕನ್ನಡದ ಕೆಲವು ನಟಿಯರು ಹಾಗೂ ಶಿವಣ್ಣ ಎಂದೇ ಎಲ್ಲರ ಗೌರವಕ್ಕೆ ಪಾತ್ರರಾಗಿರುವ ಶಿವರಾಜ್‌ಕುಮಾರ್ ಈ ಕುರಿತು `ಸಿನಿಮಾ ರಂಜನೆ~ಗೆ ಮುಕ್ತವಾಗಿ ಪ್ರತಿಕ್ರಿಯಿಸಿರುವುದು ಹೀಗೆ:

ತಪ್ಪೋ ಸರಿಯೋ ಎಂಬ ಜಿಜ್ಞಾಸೆ...

ವೈಯಕ್ತಿಕ ವಿಚಾರಗಳನ್ನು ವೃತ್ತಿಗೆ ತಂದು ಹಚ್ಚುವುದು ತಪ್ಪು. ಹೀಗೆ ಮಾಡಿದಾಗ ಒಬ್ಬರಿಗೊಂದು, ಇನ್ನೊಬ್ಬರಿಗೆ ಮತ್ತೊಂದು ಎಂಬ ನ್ಯಾಯವಾಗುತ್ತದೆ. ಆದರೂ ಯಾವ ವ್ಯಾಪಾರಿ ದೃಷ್ಟಿಯಿಂದ ನಿರ್ಮಾಪಕರು ನಿಖಿತಾ ಮೇಲೆ ನಿಷೇಧ ಹೇರಿದ್ದಾರೋ ಗೊತ್ತಿಲ್ಲ. ಅದಕ್ಕೆ ಅವರಲ್ಲಿ ಸಮರ್ಥನೆಗಳು ಇದ್ದಿರಲೂಬಹುದು. ಅದು ಸರಿಯೋ ತಪ್ಪೋ ಎಂಬುದು ಜಿಜ್ಞಾಸೆ.

ಸಿನಿಮಾ ಇಂಡಸ್ಟ್ರಿ ಸಮಾಜದ ಭಾಗವೇ ಹೊರತು ಹೊರಗಿನದ್ದಲ್ಲ. ಇಲ್ಲಿ ಯಾರೂ ಕಣ್ಣಿಗೆ ಕಾಣದ ದೇವರಲ್ಲ. ರಾಘ-ದ್ವೇಷ, ಸಂಕಟ, ಅಸೂಯೆ, ವಾಂಛೆ, ಸುಖ ಎಲ್ಲವೂ ಇಲ್ಲಿ ಇದ್ದೇ ಇರುತ್ತದೆ. ಇವೆಲ್ಲವೂ ಇರಬೇಕದಷ್ಟೇ ಪ್ರಮಾಣದಲ್ಲಿ- ಒಂದು ಇತಿಮಿತಿಯಲ್ಲಿ- ಇದ್ದರೆ ನಟನಟಿಯರ ಬದುಕು ಹಸನು. ನಾನು ದರ್ಶನ್ ಪ್ರಕರಣವನ್ನು ಮಾತ್ರ ಉದ್ದೇಶದಲ್ಲಿಟ್ಟುಕೊಂಡು ಈ ಅಭಿಪ್ರಾಯ ಹೇಳುತ್ತಿಲ್ಲ.

ಒಟ್ಟಾರೆ ಎಲ್ಲರ ಮನಸ್ಥಿತಿಗೂ ಅನ್ವಯಿಸಿ ಹೇಳುತ್ತಿದ್ದೇನೆ. ನಟ ಅಥವಾ ನಟಿ ಶಾಸ್ತ್ರೋಕ್ತವಾಗಿ ಮದುವೆಯಾದ ಮೇಲೆ ಪರಸ್ಪರ ಜವಾಬ್ದಾರಿ ಇರಬೇಕು. ಗಂಡ ಹೆಂಡತಿಯನ್ನು, ಹೆಂಡತಿ ಗಂಡನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.
 
ನಟಿ ಕೂಡ ದುಡಿಯುವ ಮಹಿಳೆ. ಅಂಥವರನ್ನು ಜವಾಬ್ದಾರಿ ಇರುವವರು ಅಗತ್ಯವಿದ್ದಾಗ ಹಿಡಿಯಬೇಕು. ಅಂತೆಯೇ ಬೆಳೆಯಲು ಕೂಡ ಬಿಡಬೇಕು. ಪ್ರೀತಿಯಿಂದಷ್ಟೇ ಎಲ್ಲವನ್ನೂ ಎಲ್ಲರನ್ನೂ ಗೆಲ್ಲಲು ಸಾಧ್ಯ. ಪತ್ನಿಗೆ ದಾಂಪತ್ಯ ಬದುಕು ಸರಿಯಿಲ್ಲ ಎನಿಸಿದರೆ ಅದನ್ನು ಸರಿಪಡಿಸಿಕೊಳ್ಳಲು ಯತ್ನಿಸಬಹುದು.

ಅದೂ ಇಲ್ಲವಾದರೆ ವಿಚ್ಛೇದನ ಪಡೆಯುವ ಕಾನೂನಿನ ದಾರಿ ಇದ್ದೇಇದೆ. ಅದು ಬಿಟ್ಟು ಮನೆಯೊಳಗೇ ಇರಬೇಕಾದ ಸಮಸ್ಯೆಯನ್ನು ಸಾರ್ವಜನಿಕವಾಗಿ ಎಳೆದುತಂದು ಬದುಕನ್ನು ನಾಶ ಮಾಡಿಕೊಳ್ಳುವ ಅಗತ್ಯವಿಲ್ಲ. ದರ್ಶನ್ ಹಾಗೂ ವಿಜಯಲಕ್ಷ್ಮಿ ನಡುವಿನದ್ದು ಖಾಸಗಿ ವ್ಯಾಜ್ಯ.

ಅದರ ಸಾಂದರ್ಭಿಕ ಕಾರಣಗಳು ಅವರಿಬ್ಬರಿಗಷ್ಟೆ ಗೊತ್ತು. ಅದರ ಬಗ್ಗೆ ನಾನು ಏನೂ ವಿಶ್ಲೇಷಣೆ ಮಾಡಲಾರೆ. ಆದರೆ, ಅವರ ನಡುವೆ ಇರುವ ಮಗು ಈ ಜಗಳದಲ್ಲಿ ಬಡವಾಗಬಾರದೆಂಬುದು ನನ್ನ ಕಾಳಜಿ. ಕಲಾವಿದನಿಗೆ ಸಾಮಾಜಿಕ ಜವಾಬ್ದಾರಿ ಇರುತ್ತದೆ. ಅದು ದರ್ಶನ್ ಸೇರಿದಂತೆ ಎಲ್ಲರೂ ಅರಿತುಕೊಳ್ಳಬೇಕು.

ನಿಖಿತಾ ತರಹದ ಆಮದು ನಟಿಯರು ನಮ್ಮಲ್ಲಿ ಅನೇಕರಿದ್ದಾರೆ. ಯಾರನ್ನು ಯಾರೂ ನಿಷೇಧಿಸುವುದೇ ತಮಾಷೆ. ಪ್ರಜಾಪ್ರಭುತ್ವದಲ್ಲಿ ನಿಷೇಧ ಎಂಬುದು ವಿಚಿತ್ರವಾಗಿ ಕಾಣುತ್ತದೆ. ಒಂದು ವೇಳೆ ನಿರ್ಮಾಪಕರಿಗೆ ಆ ನಟಿಗೆ ಅವಕಾಶ ಕೊಡುವುದು ಬೇಡವೆನ್ನಿಸಿದರೆ ಅವರವರೇ ತೀರ್ಮಾನ ಮಾಡಿಕೊಂಡು ಅದನ್ನು ತಮ್ಮಳಗೇ ಇಟ್ಟುಕೊಳ್ಳಬಹುದಿತ್ತು.

ಅದು ಬಿಟ್ಟು `ನಿಷೇಧ ಮಾಡಿದ್ದೇವೆ~ ಎಂದು ಹೇಳಿಕೊಂಡಿರುವುದು ವೈಯಕ್ತಿಕವಾಗಿ ನನಗೆ ಸರಿ ಎನಿಸಿಲ್ಲ. ಆದರೆ, ಅದರ ಒಳಮರ್ಮ ಏನು ಎಂಬುದು ನನಗೆ ಗೊತ್ತಿಲ್ಲ. ಬದುಕೇ ಒಂದು ಕಲೆ ಎಂದು ನಂಬಿದವರಿಗೆ ಇವೆಲ್ಲವನ್ನೂ ನೋಡುವುದು ಕಷ್ಟ. 
 - ಉಮಾಶ್ರೀ

ಒಂದು ಹಿಡಿ ಮನುಷ್ಯತ್ವ...
ಒಂದು ಹೆಣ್ಣಿಗೆ ಬಂದಿರುವ ತೊಂದರೆಯನ್ನು ವಿಷಯಾಂತರ ಮಾಡಲು ಇನ್ನೊಂದು ಹೆಣ್ಣನ್ನು ಶೋಷಣೆಗೆ ಒಳಪಡಿಸುತ್ತಿರುವಂತೆ ಈ ಬೆಳವಣಿಗೆ ನನಗೆ ಕಾಣುತ್ತಿದೆ. ನಾವು ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಒದಗಿರುವ ಪರಿಸ್ಥಿತಿ ಕಂಡು ಆ ಬಗ್ಗೆ ಚಿಂತಿಸುತ್ತಿರುವಾಗಲೇ ನಿರ್ಮಾಪಕರ ಸಂಘದವರು ನಿಖಿತಾಗೆ ಮೂರು ವರ್ಷ ನಿಷೇಧ ಹೇರುವ ಮೂಲಕ ಚರ್ಚೆ ದಿಕ್ಕು ಬದಲಿಸುವಂತೆ ಮಾಡಿದ್ದಾರೆ.ಇಬ್ಬರೂ ಹೆಣ್ಣುಮಕ್ಕಳನ್ನು ಶೋಷಿಸುವ ತಂತ್ರದಂತೆ, ಅಸ್ತ್ರದಂತೆ ಇದು ನನಗೆ ಕಾಣುತ್ತಿದೆ.
ನಿಷೇಧ ಹೇರುವುದು ನಮ್ಮ ಸಂಸ್ಕೃತಿ ಅಲ್ಲ. ಯಾವ ನಿಷೇಧವೂ ಸಿಂಧು ಆಗಿಲ್ಲ. ಇದು ಉದ್ಯಮವನ್ನು ಕತ್ತಲಲ್ಲಿ ಇಡುವ ಕೆಲಸ.
 
ನಟ ದರ್ಶನ್ ತಪ್ಪು ಮಾಡಿದ್ದಾರೋ ಇಲ್ಲವೋ ಎಂಬುದನ್ನು ಕಾನೂನು ನಿರ್ಧರಿಸುತ್ತದೆ. ಆದರೆ, ನಿಖಿತಾ ಮೇಲೆ ನಿಷೇಧ ಹೇರಿರುವುದು ಆಗಿರಬಹುದಾದ ತಪ್ಪುಗಳನ್ನು ಸಾಬೀತುಪಡಿಸುವಂತಿದೆ.

ಇಷ್ಟೆಲ್ಲಾ ಆದ ನಂತರವೂ ದರ್ಶನ್‌ಗೆ ಪಶ್ಚಾತ್ತಾಪವೇ ಇಲ್ಲವಲ್ಲ ಎಂಬುದು ಬೇಸರ ಹುಟ್ಟಿಸುತ್ತದೆ. ಪ್ರತಿಯೊಬ್ಬ ನಟನಿಗೆ ಒಂದು ಇಮೇಜ್ ಇರುತ್ತದೆ. ಅದು ಹೇಗೇ ಬಂದಿರಲಿ, ಸಾಮಾಜಿಕ ಹೊಣೆಗಾರಿಕೆಯನ್ನು ಒಡ್ಡಿರುತ್ತದೆ. ಅದನ್ನು ನಿಭಾಯಿಸಬೇಕು. ಇಲ್ಲವಾದರೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ. ದರ್ಶನ್ ವಿಷಯದಲ್ಲಿ ಆಗಿರುವುದು ಇದೇ.
 

ಹಿಂದೊಮ್ಮೆ ದರ್ಶನ್ ಕೂಗಾಡಿದ್ದಾಗ ನನ್ನ ಮಗನ ತರಹ ಎಂದುಕೊಂಡು ನಾನು ಅದನ್ನು ಮರೆತಿದ್ದೆ. ನಾನು ಸತ್ತರೂ ಬಣ್ಣ ಅಳಿಸುವುದಿಲ್ಲ ಎಂದು ಅಂದು ಆತ ಆಡಿದ ಮಾತು ಇನ್ನೂ ಕಿವಿಯಲ್ಲಿದೆ. ನಾವು ಬದುಕಿನ ಬಣ್ಣಗಳನ್ನು ಅಳಿಸಿಕೊಳ್ಳದಿರುವುದು ಮುಖ್ಯ. ಎಲ್ಲರಿಗೂ ಬೇಕಿರುವುದು ಒಂದು ಹಿಡಿ ಮನುಷ್ಯತ್ವ, ಅಷ್ಟೆ. 
 - ಜಯಮಾಲಾ

ಅವಸರದ ನಿರ್ಣಯ
ನಾನೂ ನಟಿಯಾಗಿಯೇ ಉಳಿದವಳು. ಚಿತ್ರೋದ್ಯಮ ಕೂಡ ಬಹುಪಾಲು ಕ್ಷೇತ್ರಗಳಂತೆ ಪುರುಷ ಪ್ರಧಾನ ಎಂಬುದು ಸತ್ಯ. ತಪ್ಪುಗಳು ಎಲ್ಲಾ ಕಡೆಯಿಂದಲೂ ಆಗುತ್ತಿರುತ್ತವೆ. ಅವನ್ನು ಸರಿಪಡಿಸಿಕೊಳ್ಳಬೇಕು. ನಿಖಿತಾ ಮೇಲೆ ನಿಷೇಧ ಹೇರಿರುವುದು ಅವಸರದ ನಿರ್ಣಯ. ಇನ್ನಷ್ಟು ಸಮಯ ಯೋಚಿಸಿ, ಸುದೀರ್ಘ ಚರ್ಚೆ ನಡೆಸಿ ನಿರ್ಮಾಪಕರು ಪ್ರತಿಕ್ರಿಯಿಸಿದ್ದರೆ ಚೆನ್ನಾಗಿತ್ತು.
 
ಮದುವೆ, ಸಂಸಾರ ತುಂಬಾ ಖಾಸಗಿ ವಿಚಾರಗಳು. ಯಾರದ್ದೋ ಬದುಕಿನ ಈ ಸಂಗತಿಗಳ ಕುರಿತು ನಾವು ಮಾತನಾಡುವುದು ತಪ್ಪಾಗುತ್ತದೆ. ಸಂಬಂಧಗಳು ಕೂಡ ಅವರಿಷ್ಟ. ಆದರೆ, ಒಬ್ಬರನ್ನು ಇನ್ನೊಬ್ಬರು ದೈಹಿಕವಾಗಿ ದಂಡಿಸುವುದನ್ನು ನಾನು ಖಂಡಿಸುತ್ತೇನೆ. ಸಂಬಂಧಗಳನ್ನು ನಿರ್ವಹಿಸುವುದು ಸುಲಭವಲ್ಲ ಎಂಬುದು ಎಂದೆಂದಿಗೂ ಸತ್ಯ. 
 - ತಾರಾ

ನಿಷೇಧವೆಂಬುದೇ ತಪ್ಪು
ನನಗೆ ವಿಜಯಲಕ್ಷ್ಮಿ ಸ್ಥಿತಿಯ ಬಗ್ಗೆ ಅನುಕಂಪವಿದೆ. ಮಾಧ್ಯಮದಲ್ಲಿ ಅವರನ್ನು ನೋಡಿದರೆ ಎಂಥವರ ಕರುಳೂ ಚುರ‌್ರೆನ್ನದೆ ಇರದು. ಅವರು ಶೋಷಣೆಗೆ ಒಳಗಾಗಿರುವುದರಲ್ಲಿ ಅನುಮಾನವೇ ಇಲ್ಲ. ಇನ್ನು ನಿಖಿತಾ ಮೇಲಿನ ನಿಷೇಧವಂತೂ ಅರ್ಥಹೀನ. ಅವರನ್ನು ನಿಷೇಧಿಸುವುದಾದರೆ ದರ್ಶನ್ ಅವರನ್ನೂ ನಿಷೇಧಿಸಬೇಕಿತ್ತು.
ಒಬ್ಬರ ಮೇಲಷ್ಟೇ ಈ ಕ್ರಮ ಸರಿಯಲ್ಲ. ಮುಖ್ಯವಾಗಿ ಇದು ಇಬ್ಬರ ನಡುವಿನ ಖಾಸಗಿ ಸಮಸ್ಯೆ. ಶೂಟಿಂಗ್‌ಗೆ ಸರಿಯಾಗಿ ಬರದಿದ್ದರೆ ಅಥವಾ ಸಿನಿಮಾ ವಿಷಯದಲ್ಲಿ ಸಮಸ್ಯೆ ಸೃಷ್ಟಿಸಿದ್ದರೆ ನಿಖಿತಾ ಮೇಲೆ ಕ್ರಮ ತೆಗೆದುಕೊಳ್ಳಬಹುದಿತ್ತು. ನಿರ್ಮಾಪಕರ ಸಂಘ  `ನೈತಿಕತೆಯ ಪೊಲೀಸಿಂಗ್~ ಕೂಡ ಮಾಡುತ್ತದೆ ಎಂದಾದರೆ ದರ್ಶನ್ ಮೇಲೂ ನಿಷೇಧ ಹೇರಬೇಕಿತ್ತಲ್ಲವೇ? 
 - ನೀತು

ಇದು ಒಪ್ಪಿತವಲ್ಲ
ದರ್ಶನ್ ಬದುಕಿನಲ್ಲಿ ಆಗಿರುವ ಬೆಳವಣಿಗೆ ತುಂಬಾ ಖಾಸಗಿಯಾದದ್ದು. ಅದರ ಬಗ್ಗೆ ಅವರೇ ಮಾತನಾಡಬೇಕು. ಆದರೆ, ಈ ವಿಷಯದಲ್ಲಿ ನಟಿ ನಿಖಿತಾ ಮೇಲೆ ನಿಷೇಧ ಹೇರಿರುವುದು ಸ್ವಲ್ಪವೂ ಸರಿಯಲ್ಲ. ಈ ನಿರ್ಧಾರವನ್ನು ಯಾರೂ ಒಪ್ಪಲು ಸಾಧ್ಯವಿಲ್ಲ.  
 - ಶಿವರಾಜ್ ಕುಮಾರ್

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT