ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದೊಂದು ದೊಡ್ಡ ಜೋಕ್

Last Updated 18 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪರಿಷ್ಕೃತ ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಮಸೂದೆಯನ್ನು ಕೂಡ ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ತಿರಸ್ಕರಿಸಿದೆ. `ಈ ಮಸೂದೆ ಒಂದು ದೊಡ್ಡ ತಮಾಷೆ~ ಎಂದು ಅದು ಲೇವಡಿ ಮಾಡಿದೆ.

`ಇದೊಂದು ಉಗ್ರ ಮಸೂದೆ. ಆಕಸ್ಮಾತ್ ಈ ಮಸೂದೆಗೆ ಒಪ್ಪಿಗೆ ಲಭಿಸಿದರೆ ಐಒಎ ಹಾಗೂ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳ ಸ್ವಾಯತ್ತೆಗೆ ದೊಡ್ಡ ಹೊಡೆತ ಬೀಳಲಿದೆ~ ಎಂದು ಐಒಎ ಹಂಗಾಮಿ ಅಧ್ಯಕ್ಷ ವಿಜಯ್ ಕುಮಾರ್ ಮಲ್ಹೋತ್ರಾ ಆತಂಕ ವ್ಯಕ್ತಪಡಿಸಿದ್ದಾರೆ.

ಸೋಮವಾರವಷ್ಟೇ ಕ್ರೀಡಾ ಸಚಿವ ಅಜಯ್ ಮಾಕನ್ ಪರಿಷ್ಕೃತ ಮಸೂದೆಯನ್ನು ಪ್ರಕಟಿಸಿದ್ದರು. ಈ ಮೊದಲು ಸಚಿವ ಸಂಪುಟ ಸಭೆಯಲ್ಲಿ ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಮಸೂದೆಯನ್ನು ತಿರಸ್ಕರಿಸಲಾಗಿತ್ತು. ಈಗ ಅದರಲ್ಲಿ 14 ಬದಲಾವಣೆ ಮಾಡಿ ಮತ್ತೆ ಸಚಿವ ಸಂಪುಟದ ಮುಂದಿಡಲಾಗುತ್ತಿದೆ. ಐಒಎ ಹಾಗೂ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳಿಗೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾಯ್ದೆಯಲ್ಲಿ ಕೆಲ ಬದಲಾವಣೆ ಮಾಡಲಾಗಿದೆ.

ಆದರೆ ವಯಸ್ಸು ಹಾಗೂ ವಯೋಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇದು ಐಒಎ ಹಾಗೂ ರಾಷ್ಟ್ರೀಯ ಕ್ರೀಡಾ ಫೆಡರೇಷನ್ ಪದಾಧಿಕಾರಿಗಳನ್ನು ಕೆರಳಿಸಿದೆ.

`ಮಸೂದೆಯನ್ನು ಪರಿಷ್ಕೃತಗೊಳಿಸಲು ಕ್ರೀಡಾ ಸಚಿವರು ವ್ಯರ್ಥ ಕಸರತ್ತು ನಡೆಸಿದ್ದಾರೆ. ಸುಮ್ಮನೇ ಅಮೂಲ್ಯ ಸಮಯ ಕಳೆದಿದ್ದಾರೆ. ಹಣ ಹಾಗೂ ಶಕ್ತಿ ನಷ್ಟ ಮಾಡಿಕೊಂಡಿದ್ದಾರೆ. ಮಸೂದೆ ಒಂದು ದೊಡ್ಡ ಜೋಕ್~ ಎಂದು ಮಲ್ಹೋತ್ರಾ ನುಡಿದಿದ್ದಾರೆ.

`ಹೊಸ ಬಾಟಲಿನಲ್ಲಿ ತುಂಬಿದ ಹಳೆಯ ಮದ್ಯ ಎಂದು ಕೂಡ ನಾನು ಇದನ್ನು ಬಣ್ಣಿಸುವುದಿಲ್ಲ. ಮೊದಲಿನ ಮಸೂದೆಯಿಂದ ಕೆಲ ಸಾಲುಗಳನ್ನು ಕೈಬಿಟ್ಟಿದ್ದಾರೆ ಅಷ್ಟೆ. ಇದರಲ್ಲಿ ಹೊಸತನವಿಲ್ಲ. ಆಕಸ್ಮಾತ್ ಈ ಮಸೂದೆ ಮೂಲಕ ನಿಯಂತ್ರಣ ಹೇರಬಹುದು ಎಂದು ಕ್ರೀಡಾ ಸಚಿವರು ಭಾವಿಸಿದರೆ ಅದೊಂದು ತಪ್ಪು ಗ್ರಹಿಕೆ~ ಎಂದಿದ್ದಾರೆ.

`ಕ್ರೀಡಾ ಸಚಿವರು ಮಸೂದೆ ಸಂಬಂಧ ಐಒಒ ಹಾಗೂ ಕ್ರೀಡಾ ಫೆಡರೇಷನ್‌ಗಳೊಂದಿಗೆ ಚರ್ಚೆ ಕೂಡ ನಡೆಸಿಲ್ಲ. ಸಲಹೆ ಕೂಡ ಕೇಳಿಲ್ಲ. ನಾವು ಏಕೆ ಈ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿದ್ದೇವೆ. ಏನು ಬದಲಾವಣೆ ಆಗಬೇಕು ಎಂಬುದನ್ನೂ ಕೇಳಿಲ್ಲ~ ಎಂದು ಮಲ್ಹೋತ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಕಸ್ಮಾತ್ ಐಒಎ ಹಾಗೂ ಕ್ರೀಡಾ ಫೆಡರೇಷನ್‌ಗಳ ಸ್ವಾಯತ್ತೆಗೆ ಧಕ್ಕೆಯಾದರೆ ಮುಂಬರುವ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಅವಕಾಶ ನೀಡುವುದಿಲ್ಲ ಎಂದು ಈ ಹಿಂದೆಯೇ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಎಚ್ಚರಿಕೆ ನೀಡಿದೆ ಎಂಬುದನ್ನೂ ಅವರು ನೆನಪಿಸಿದ್ದಾರೆ.

ಆದರೆ ಬಿಸಿಸಿಐ ಹೇರಿದ ಒತ್ತಡಕ್ಕೆ ಮಣಿದಿರುವ ಸಚಿವಾಲಯವು ಕ್ರಿಕೆಟ್‌ಗೆ ಸಂಬಂಧಿಸಿದಂತೆ ವಿಶ್ವ ಉದ್ದೀಪನ ಮದ್ದು ತಡೆ ಘಟಕದ (ವಾಡಾ) ಕೆಲ ನಿಯಮಗಳಲ್ಲಿ ವಿನಾಯಿತಿ ನೀಡಲು ಒಪ್ಪಿಗೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT