ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೆರಡು ದಿನಗಳಲ್ಲಿ ವಾರ್ಡ್ ಸಮಿತಿ

ಹೈಕೋರ್ಟ್ ಸೂಚನೆಯಂತೆ ಬಿಬಿಎಂಪಿ ತೀರ್ಮಾನ
Last Updated 15 ಜನವರಿ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಹೈಕೋರ್ಟ್ ಆದೇಶದಂತೆ ತಕ್ಷಣ ವಾರ್ಡ್ ಸಮಿತಿಗಳನ್ನು ರಚಿಸಲು ಮಂಗಳವಾರ ನಡೆದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಶೇಷ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿತು.

ವಾರ್ಡ್ ಸಮಿತಿ ಕಾರ್ಯ ನಿರ್ವಹಣೆಗೆ ಯಾವುದೇ ನಿಯಮ ರಚನೆ ಮಾಡಿಲ್ಲ. ಇದರಿಂದ ಸಮಿತಿಯ ಅಧಿಕಾರ, ಕರ್ತವ್ಯ ಮತ್ತು ಹೊಣೆಗಾರಿಕೆ ವಿಷಯವಾಗಿ ಸ್ಪಷ್ಟವಾದ ಚಿತ್ರಣ ಇಲ್ಲ. ಸಮಿತಿಯಲ್ಲಿ ಹಿಂದುಳಿದ ವರ್ಗಕ್ಕೆ ಮೀಸಲಾತಿಯನ್ನೂ ಕಲ್ಪಿಸಲಾಗಿಲ್ಲ. ಈ ಸಂಗತಿಗಳ ಬಗೆಗೆ ಸರ್ಕಾರದ ಮರು ಪರಿಶೀಲನೆಗೆ ಕೋರಬೇಕು ಮತ್ತು ಎಲ್ಲ ವಿವರವನ್ನು ಕೋರ್ಟ್ ಗಮನಕ್ಕೆ ತರಬೇಕು ಎಂದು ತೀರ್ಮಾನಿಸಲಾಯಿತು.

ನಿರ್ಣಯ ಮಂಡಿಸಿದ ಆಡಳಿತ ಪಕ್ಷದ ನಾಯಕ ಎನ್. ನಾಗರಾಜ್, `ಹೈಕೋರ್ಟ್ ಸೂಚನೆಯಂತೆ ತೀರ್ಮಾನ ಕೈಗೊಳ್ಳಲಾಗಿದ್ದು, ನೂರಕ್ಕೂ ಅಧಿಕ ಸದಸ್ಯರು ಈಗಾಗಲೇ ಸದಸ್ಯರ ಪಟ್ಟಿಯನ್ನು ಸಲ್ಲಿಸಿದ್ದಾರೆ. ಮಿಕ್ಕ ಸದಸ್ಯರು ಬುಧವಾರ ಸಂಜೆಯೊಳಗೆ ವಿವರ ಒದಗಿಸಲಿದ್ದಾರೆ' ಎಂದು ಹೇಳಿದರು. `ಸದಸ್ಯರು ವಿವರ ಕೊಡದ ವಾರ್ಡ್‌ಗಳಲ್ಲಿ ಆಯುಕ್ತರೇ ಸಮಿತಿ ರಚಿಸಲಿದ್ದಾರೆ' ಎಂದು ಸ್ಪಷ್ಟಪಡಿಸಿದರು.

`ಸಮಿತಿಯ ಸದಸ್ಯ ಕಾರ್ಯದರ್ಶಿಗಳ ಆಯ್ಕೆ ಅಧಿಕಾರವನ್ನು ಆಯುಕ್ತರಿಗೆ ನೀಡಲಾಗಿದೆ. ಇದೇ 18ರೊಳಗೆ ಎಲ್ಲ ಸಮಿತಿಗಳ ರಚನೆ ಕಾರ್ಯ ಪೂರ್ಣಗೊಳ್ಳಲಿದ್ದು, ತಕ್ಷಣ ಮೊದಲ ಸಭೆ ಕರೆದು, ಅಲ್ಲಿ ಕೈಗೊಳ್ಳಲಾಗುವ ನಿರ್ಣಯದ ವಿವರವನ್ನು ಹೈಕೋರ್ಟ್‌ಗೆ ಸಲ್ಲಿಸಲಾಗುವುದು' ಎಂದು ತಿಳಿಸಿದರು.

ಪ್ರತಿ ವಾರ್ಡ್ ಸಮಿತಿಯಲ್ಲಿ ಇಬ್ಬರು ಎಸ್‌ಸಿ, ಎಸ್‌ಟಿ ಪ್ರತಿನಿಧಿಗಳು, ಮೂವರು ಮಹಿಳೆಯರು, ಇಬ್ಬರು ನೋಂದಾಯಿತ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಒಟ್ಟಾರೆ ಹತ್ತು ಜನ ಸದಸ್ಯರು ಇರಬೇಕು. ಆಯಾ ವಾರ್ಡ್ ಬಿಬಿಎಂಪಿ ಸದಸ್ಯರು ಸಮಿತಿ ಅಧ್ಯಕ್ಷರಾಗಬೇಕು ಮತ್ತು ಬಿಬಿಎಂಪಿ ಅಧಿಕಾರಿಯೊಬ್ಬರು ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಬೇಕು ಎಂಬ ನಿಯಮ ವಿಧಿಸಲಾಗಿದೆ.

ಚರ್ಚೆಗೆ ನಾಂದಿ ಹಾಡಿದ ಜೆಡಿಎಸ್‌ನ ಪದ್ಮನಾಭ ರೆಡ್ಡಿ, `ಕಸದ ಸಮಸ್ಯೆ ಹೆಚ್ಚಿದ್ದರಿಂದಲೇ ಕೋರ್ಟ್ ಈ ಆದೇಶ ನೀಡುವಂತಾಗಿದೆ. ಈಚಿನ ದಿನಗಳಲ್ಲಿ ಬಿಬಿಎಂಪಿಯಿಂದ ಕೆಲಸ ಮಾಡಿಸಲು ಕೋರ್ಟ್ ಮೂಲಕವೇ ಆದೇಶ ತರಬೇಕಿದೆ. ಸಮತಿ ರಚನೆಯಾದ ಮೇಲೆ ವಾರ್ಡ್ ಮಟ್ಟದಲ್ಲಿ ಏನೇ ಸಮಸ್ಯೆಗಳು ಉದ್ಭವಿಸಿದರೂ ಬಿಬಿಎಂಪಿ ಸದಸ್ಯರನ್ನೇ ಹೊಣೆ ಮಾಡುವ ಅಪಾಯವೂ ಇದೆ. ಹೀಗಾಗಿ ಅದರ ಸ್ವರೂಪವನ್ನು ಈಗಲೇ ನಿರ್ಧರಿಸಬೇಕು' ಎಂದು ಒತ್ತಾಯಿಸಿದರು.

ವಿರೋಧ ಪಕ್ಷದ ನಾಯಕ ಎಂ.ಕೆ. ಗುಣಶೇಖರ್, `ಕೌನ್ಸಿಲ್ ಸಭೆಗಳಲ್ಲಿ ಕೈಗೊಳ್ಳುವ ತೀರ್ಮಾನಗಳಿಗೇ ಬಿಬಿಎಂಪಿ ಅಧಿಕಾರಿಗಳು ಬೆಲೆ ನೀಡುತ್ತಿಲ್ಲ. ಇನ್ನು ವಾರ್ಡ್ ಸಮಿತಿ ತೆಗೆದುಕೊಳ್ಳುವ ನಿರ್ಧಾರಗಳನ್ನು ಅವರು ಅನುಷ್ಠಾನ ಮಾಡುತ್ತಾರೆಯೇ' ಎಂದು ಪ್ರಶ್ನಿಸಿದರು. `ಸಮಿತಿಗೆ ಕಾರ್ಯ ನಿರ್ವಹಣೆ ಅಧಿಕಾರ ಮತ್ತು ಹಣಕಾಸಿನ ಜವಾಬ್ದಾರಿ ಏನೆಂಬುದು ಮೊದಲು ಸ್ಪಷ್ಟವಾಗಬೇಕು' ಎಂದು ಕೇಳಿದರು.

`ಯಾವುದೇ ಕಾಮಗಾರಿ ಟೆಂಡರ್ ಸಹ ವಾರ್ಡ್ ಸಮಿತಿಯಲ್ಲೇ ಅಂತಿಮಗೊಳ್ಳಬೇಕು ಎಂಬ ನಿಯಮವಿದೆ. ಇದಕ್ಕೆ ಬಿಬಿಎಂಪಿ ಸಿದ್ಧವಿದೆಯೇ' ಎಂದು ಪ್ರಶ್ನಿಸಿದರು. `ಎರಡು ವರ್ಷಗಳ ಹಿಂದೆಯೇ ಕಾಯ್ದೆ ರೂಪಗೊಂಡಿದ್ದರೂ ಹೈಕೋರ್ಟ್ ಆದೇಶ ನೀಡುವವರೆಗೆ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಸಮಿತಿ ರಚಿಸದೆ ಸುಮ್ಮನೆ ಕುಳಿತು ಪ್ರಮಾದ ಎಸಗಿವೆ' ಎಂದು ಆಕ್ರೋಶ ವ್ಯಕ್ತಪಡಿಸಿದರು. `ಸಮಿತಿಯಲ್ಲಿ ಹಿಂದುಳಿದ ವರ್ಗದ ಪ್ರತಿನಿಧಿಗಳಿಗೂ ಮೀಸಲಾತಿ ಒದಗಿಸಬೇಕು' ಎಂದು ಆಗ್ರಹಿಸಿದರು.

ಕಾಂಗ್ರೆಸ್‌ನ ಕೆ.ಚಂದ್ರಶೇಖರ್, `ಸಮಿತಿಯಲ್ಲಿ ಸಾಮಾಜಿಕ ನ್ಯಾಯಕ್ಕೆ ಏನೂ ತೊಂದರೆಯಾಗಿಲ್ಲ. ಸಮಿತಿ ರಚನೆಯಾದ ಮೇಲೂ ಪಾಲಿಕೆಗೆ ಪರಮಾಧಿಕಾರ ಇದ್ದೇ ಇರುತ್ತದೆ. ಯಾವ ಸದಸ್ಯರೂ ಆತಂಕಪಡುವ ಅಗತ್ಯ ಇಲ್ಲ. ಈಗಾಗಲೇ ಸಾಕಷ್ಟು ಕಾಲಹರಣ ಮಾಡಲಾಗಿದ್ದು, ತಕ್ಷಣ ಸಮಿತಿ ರಚಿಸಬೇಕು' ಎಂದು ಒತ್ತಾಯಿಸಿದರು.

`ಕೇಂದ್ರ ಸರ್ಕಾರ ಅನುದಾನ ಒದಗಿಸಬೇಕಾದರೆ ವಾರ್ಡ್ ಸಮಿತಿ ರಚಿಸುವ ಷರತ್ತು ಪೂರೈಸಬೇಕು ಎಂಬ ನಿರ್ಬಂಧ ವಿಧಿಸಿದ್ದರಿಂದ ರಾಜ್ಯ ಸರ್ಕಾರ ಅದರ ಅನುಷ್ಠಾನಕ್ಕೆ ಮುಂದಾಗಿದೆಯೇ ಹೊರತು ಯಾವುದೇ ಕಾಳಜಿಯಿಂದ ಅಲ್ಲ' ಎಂದು ಕುಟುಕಿದರು.

`ವಾರ್ಡ್ ಸಮಿತಿಗಳೇ ನಿರ್ಧಾರ ಕೈಗೊಳ್ಳುವುದಾದರೆ ಬಿಬಿಎಂಪಿ ಅಗತ್ಯ ಏನಿದೆ' ಎಂದು ಪ್ರಶ್ನಿಸಿದ ಶಾಸಕ ನಂದೀಶ್ ರೆಡ್ಡಿ, ಸಮಿತಿ ಸ್ವರೂಪ ಇನ್ನೂ ನಿರ್ಧಾರ ಆಗಿಲ್ಲ. ಸರ್ಕಾರ ಈ ಕುರಿತು ತೀರ್ಮಾನ ಕೈಗೊಳ್ಳುವವರೆಗೆ ಸಮಿತಿ ರಚನೆಗೆ ಕೋರ್ಟ್‌ನಿಂದ ಕಾಲಾವಕಾಶ ಕೇಳಬೇಕು' ಎಂದು ಆಗ್ರಹಿಸಿದರು.

ಮೇಯರ್ ಡಿ.ವೆಂಕಟೇಶಮೂರ್ತಿ ಹಾಗೂ ಆಯುಕ್ತ ಸಿದ್ದಯ್ಯ ಹಾಜರಿದ್ದರು.

ಸ್ವಾಮೀಜಿಗೆ ಶ್ರದ್ಧಾಂಜಲಿ
ಅಗಲಿದ ಆದಿಚುಂಚನಗರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿಗೆ ಮಂಗಳವಾರ ನಡೆದ ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಬಿಬಿಎಂಪಿ ಹಲವು ಸದಸ್ಯರು ಮಾತನಾಡಿ ಸ್ವಾಮೀಜಿ ಸೇವೆಯನ್ನು ಸ್ಮರಿಸಿದರು. ಸ್ವಾಮೀಜಿಯವರ ಕಂಚಿನ ಪುತ್ಥಳಿ ಸ್ಥಾಪನೆಗೆ ಕೆಲ ಸದಸ್ಯರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT