ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಬ್ಬರು ಚಾಲಕರಿಲ್ಲದ ಟ್ಯಾಂಕರ್‌ಗಳಿಗೆ ಕಂಟಕ ನಿಶ್ಚಿತ

ರಾಷ್ಟ್ರೀಯ ಪರವಾನಗಿ ಪಡೆದ ವಾಹನಗಳಿಗೆ ಅನ್ವಯ; ಇಂದಿನಿಂದ ಜಾರಿ
Last Updated 15 ಏಪ್ರಿಲ್ 2013, 6:48 IST
ಅಕ್ಷರ ಗಾತ್ರ

ಮಂಗಳೂರು: ಉಪ್ಪಿನಂಗಡಿ ಸಮೀಪದ ಪೆರ್ನೆಯಲ್ಲಿ ಕಳೆದ ಮಂಗಳವಾರ ಸಂಭವಿಸಿದ ಟ್ಯಾಂಕರ್ ದುರಂತದಿಂದ ಅನಿಲ ಸೋರಿಕೆಯಾಗಿ ಭಾರಿ ಬೆಂಕಿ ಅನಾಹುತ ಸಂಭವಿಸಿದ ಹಿನ್ನೆಲೆಯಲ್ಲಿ, ದೂರದೂರುಗಳಿಗೆ ಚಲಿಸುವ ಸರಕು ಸಾಗಣೆ ವಾಹನಗಳಲ್ಲಿ ಇಬ್ಬರು ಚಾಲಕರು ಇರಬೇಕು ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಜಿಲ್ಲಾಡಳಿತ ಮುಂದಾಗಿದೆ.

ಮೋಟಾರ್ ವಾಹನ ಕಾಯ್ದೆಯಂತೆ ರಾಷ್ಟ್ರೀಯ ಪರವಾನಗಿ (ಎನ್‌ಪಿ) ಪಡೆದ ಸರಕು ಸಾಗಣೆ ವಾಹನಗಳಲ್ಲಿ ಇಬ್ಬರು ಚಾಲಕರು ಇರುವುದು ಕಡ್ಡಾಯ. ಆದರೆ ಈ ನಿಯಮವನ್ನು ಇದುವರೆಗೆ ಯಾರೂ ಎಲ್ಲಿಯೂ ಪಾಲಿಸುತ್ತಿರಲಿಲ್ಲ. ಪೆರ್ನೆಯ ದುರಂತ 10 ಮಂದಿ ಅಮಾಯಕರನ್ನು ಬಲಿ ತೆಗೆದುಕೊಂಡ ಬಳಿಕ ಈ ನಿಯಮವನ್ನು ಜಾರಿಗೆ ತರುವುದು ಅಗತ್ಯ ಎಂಬುದನ್ನು ಜಿಲ್ಲಾಡಳಿತ ಮನಗಂಡಂತಿದೆ. ಅದೇ ಕಾರಣಕ್ಕಾಗಿ ಸೋಮವಾರದಿಂದ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಅದು ಮುಂದಾಗಿದೆ.

`ಹೆದ್ದಾರಿಗಳಲ್ಲಿ ಅಪಘಾತಗಳನ್ನು ತಪ್ಪಿಸುವುದಕ್ಕೆ ರಸ್ತೆ ಉಬ್ಬುಗಳನ್ನು ಅಳವಡಿಸುವುದು ಒಂದು ಪರಿಹಾರ. ಆದರೆ ಇದು ವೈಜ್ಞಾನಿಕವಲ್ಲ. ವಾಹನಗಳು ವೇಗವಾಗಿ ಚಲಿಸಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪಬೇಕು ಎಂಬ ಕಾರಣಕ್ಕಾಗಿಯೇ ಹೆದ್ದಾರಿಗಳನ್ನು ನಿರ್ಮಿಸಲಾಗಿರುತ್ತದೆ.

ದುರಂತಗಳನ್ನು ತಪ್ಪಿಸುವುದಕ್ಕೆ ಇರುವ ಮತ್ತೊಂದು ದಾರಿಯೆಂದರೆ ದೂರದ ಊರುಗಳಿಗೆ ತೆರಳುವ ಸರಕು ಸಾಗಣೆ/ ಪ್ರಯಾಣಿಕ ವಾಹನಗಳಲ್ಲಿ ಇಬ್ಬರು ಚಾಲಕರು ಇರುವಂತೆ ನೋಡಿಕೊಳ್ಳುವುದು. ಇದರಿಂದ ಒಬ್ಬ ಚಾಲಕನಿಗೆ ಸುಸ್ತಾದಾಗ ಇನ್ನೊಬ್ಬ ಚಾಲಕ ವಾಹನ ಚಾಲನೆ ಮಾಡಬಹುದು. ಅಪಘಾತ ಪ್ರಮಾಣ ತಗ್ಗಿಸಲು ಇದು ಸಹಕಾರಿಯಾಗುವ ವಿಶ್ವಾಸ ಇದೆ' ಎಂದು ಮಂಗಳೂರಿನ ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿ.ಮಲ್ಲಿಕಾರ್ಜುನ್ ಭಾನುವಾರ `ಪ್ರಜಾವಾಣಿ'ಗೆ ತಿಳಿಸಿದರು.

ಪೆರ್ನೆ ದುರ್ಘಟನೆ ಭಯಾನಕವಾದುದು, ಘಟನೆ ನಡೆದ ತಕ್ಷಣವೇ ಇಂತಹ ನಿಯಮ ಜಾರಿಗೆ ತರುವುದು ಸಾರಿಗೆ ಇಲಾಖೆಯ ಉದ್ದೇಶವಾಗಿತ್ತು. ಆದರೆ ಚುನಾವಣಾ ಕರ್ತವ್ಯದಲ್ಲಿ ನಿರತರಾದ ಅಧಿಕಾರಿಗಳಿಗೆ ವಾಹನಗಳನ್ನು ಒದಗಿಸುವುದು ಸಹಿತ ಇತರ ಹಲವಾರು ಒತ್ತಡಗಳ ಕಾರಣ ನಿಯಮ ಜಾರಿ ಒಂದು ವಾರ ವಿಳಂಬವಾಗಿದೆ.

ಸೋಮವಾರದಿಂದ ಇಬ್ಬರು ಚಾಲಕರಿಲ್ಲದ ಟ್ಯಾಂಕರ್‌ನಂತಹ ಸ್ಫೋಟಕ ವಸ್ತುಗಳ ಸಾಗಾಟದ ಟ್ಯಾಂಕರ್‌ಗಳಿಗೆ ದಂಡ ವಿಧಿಸುವಂಥ ಶಿಸ್ತಿನ ಕ್ರಮಗಳು ಆರಂಭವಾಗಲಿದೆ. ಆದರೆ ಸಾರ್ವಜನಿಕರ ಬೇಡಿಕೆಯಂತೆ ಇಂತಹ ಟ್ಯಾಂಕರ್‌ಗಳಿಗೆ ಸ್ಪೀಡ್ ಗವರ್ನರ್ ಅಳವಡಿಸುವ ಸಾಧ್ಯತೆ ಸದ್ಯಕ್ಕೆ ಇದ್ದಂತಿಲ್ಲ ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಇದುವರೆಗೆ ಯಾಕಾಗಿ ಈ ನಿಯಮ ಜಾರಿಗೆ ತಂದಿಲ್ಲ? ಇದು ಜಾರಿಗೆ ಬರುವುದಕ್ಕೆ ಪೆರ್ನೆ ಘಟನೆಯವರೆಗೂ ಕಾಯಬೇಕಿತ್ತೇ? ಜನಸಾಮಾನ್ಯರನ್ನು ಈ ಪ್ರಶ್ನೆ ಕಾಡುತ್ತಿದ್ದು, ಉತ್ತರ ನೀಡಬೇಕಾದ ತೈಲ ಕಂಪೆನಿಗಳು ತೆಪ್ಪಗಾಗಿವೆ.

ತೈಲ ಕಂಪೆನಿಯಲ್ಲೂ ಎಲ್‌ಪಿಜಿಯಂತಹ ಸ್ಪೋಟಕ ಸಾಮಗ್ರಿಗಳನ್ನು ತುಂಬಿಸುವಲ್ಲಿ ಟ್ಯಾಂಕರ್‌ನಲ್ಲಿ ಇಬ್ಬರು ಚಾಲಕರು ಇರಲೇಬೇಕು ಎಂಬ ನಿಯಮ ಇದ್ದರೂ, ತೋರಿಕೆಗಾಗಿ ಇನ್ನೊಬ್ಬ ಚಾಲಕನನ್ನು ಇಟ್ಟುಕೊಂಡು ಬಳಿಕ ಒಬ್ಬೊಬ್ಬರೇ ಚಾಲಕರು ಟ್ಯಾಂಕರ್ ಚಲಾಯಿಸಿಕೊಂಡು ಹೋಗುವುದು ಇದುವರೆಗೆ ನಡೆದುಕೊಂಡು ಬಂದ ಪರಿಪಾಠ ಎಂದು ಅಲ್ಲಿನ ಆಂತರಿಕ ವ್ಯವಹಾರ ತಿಳಿದುಕೊಂಡಿರುವ ಮೂಲಗಳು ತಿಳಿಸಿವೆ.

ಬಾಡಿಗೆ ವಾಹನಗಳ ಜಪ್ತಿ: ಸಾರಿಗೆ ಇಲಾಖೆ
ಜಿಲ್ಲೆಯಲ್ಲಿ ಚುನಾವಣಾ ಕಾರ್ಯಕ್ಕಾಗಿ 650ರಿಂದ 700ರಷ್ಟು ಟ್ಯಾಕ್ಸಿಗಳ ಅಗತ್ಯ ಇದ್ದು, ಸಾರಿಗೆ ಇಲಾಖೆ ರಸ್ತೆಯಲ್ಲಿ ಸಿಕ್ಕ ಸಿಕ್ಕ ಹಳದಿ ಬಣ್ಣದ ನಂಬರ್ ಪ್ಲೇಟ್ (ಬಾಡಿಗೆ) ಹೊಂದಿರುವ ಟ್ಯಾಕ್ಸಿಗಳನ್ನು ತಡೆದು ನಿಲ್ಲಿಸಿ ಚುನಾವಣಾ ಕರ್ತವ್ಯಕ್ಕೆ ಕಳುಹಿಸುತ್ತಿರುವ ಬೆಳವಣಿಗೆ ಶನಿವಾರ ರಾತ್ರಿಯಿಂದೀಚೆಗೆ ಕಂಡುಬಂದಿದೆ.

`ಏಕಾಏಕಿಯಾಗಿ ವಾಹನಗಳಿಗೆ ಬೇಡಿಕೆ ಬಂದಾಗ ನಾವು ಇಂತಹ ಕ್ರಮ ಕೈಗೊಳ್ಳದೆ ಬೇರೆ ದಾರಿಯೇ ಇಲ್ಲ. ವಾಹನ ಬೇಕೆಂದು ಕೇಳಿದರೆ ಯಾರೂ ಕೊಡುವವರು ಇಲ್ಲ. ಮೋಟಾರು ವಾಹನ ಕಾಯ್ದೆಯ ಪ್ರಕಾರ ಸರ್ಕಾರಕ್ಕೆ ಅಗತ್ಯ ಬಿದ್ದಾಗ ಖಾಸಗಿ ವಾಹನಗಳನ್ನು ಸಹ ಸ್ವಾಧೀನಕ್ಕೆ ತೆಗೆದುಕೊಂಡು ಬಳಸಬಹುದು ಎಂದು ತಿಳಿಸಲಾಗಿದೆ. ಸದ್ಯ ಖಾಸಗಿ ವಾಹನಗಳ ತಂಟೆಗೆ ಹೋಗದೆ ಬಾಡಿಗೆ ವಾಹನಗಳನ್ನಷ್ಟೇ ಜಪ್ತಿ ಮಾಡಿಕೊಂಡು ಚುನಾವಣಾ ಸೇವೆಗೆ ಒದಗಿಸಲಾಗುತ್ತಿದೆ. ಇವುಗಳನ್ನು ಪುಕ್ಕಟೆಯಾಗಿ ಬಳಸುತ್ತಿಲ್ಲ, ಸೂಕ್ತ ಬಾಡಿಗೆ ನೀಡಲಾಗುತ್ತದೆ' ಎಂದು ಸಾರಿಗೆ ಇಲಾಖೆಯ ಮೂಲಗಳು ತಿಳಿಸಿವೆ.

ಎಲ್ಲಾ ಎನ್‌ಪಿ ವಾಹನಗಳಿಗೆ ಅನ್ವಯ
ಇಬ್ಬರು ಚಾಲಕರು ಇರಬೇಕು ಎಂಬ ನಿಯಮ ಕೇವಲ ಎಲ್‌ಪಿಜಿ ಟ್ಯಾಂಕರ್‌ಗಳಿಗೆ ಮಾತ್ರ ಅನ್ವಯವಲ್ಲ, ಅಂತರರಾಜ್ಯ ಸಂಚಾರದ ಎಲ್ಲಾ ವಾಹನಗಳಿಗೂ ಇದು ಅನ್ವಯ. ಇದನ್ನು ಉಲ್ಲಂಘಿಸಿದ ಸರಕು ಸಾಗಣೆ ವಾಹನಗಳ ಮಾಲೀಕರ ವಿರುದ್ಧ ಮೋಟಾರು ವಾಹನ ಕಾಯ್ದೆಯ ರಹದಾರಿ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು. ವಾಹನ ಚಾಲಕರ ಮೇಲೂ ಕ್ರಮ ಕೈಗೊಳ್ಳಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT