ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನಿ ಕಪ್ ಕ್ರಿಕೆಟ್: ತೆಂಡೂಲ್ಕರ್ ಶತಕ

ಭಾರತ ಇತರೆ ತಂಡಕ್ಕೆ ಇನಿಂಗ್ಸ್ ಮುನ್ನಡೆ
Last Updated 8 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 81ನೇ ಶತಕ ಗಳಿಸುವ ಮೂಲಕ ಸಚಿನ್ ತೆಂಡೂಲ್ಕರ್ (ಅಜೇಯ 140) ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ತಕ್ಕ ರೀತಿಯಲ್ಲಿ ಸಜ್ಜಾದರು. ಆದರೆ ಅವರ ಸೊಗಸಾದ ಆಟದ ಹೊರತಾಗಿಯೂ ಮುಂಬೈ ತಂಡ ಇರಾನಿ ಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ಇತರೆ ವಿರುದ್ಧ ಇನಿಂಗ್ಸ್ ಹಿನ್ನಡೆ ಅನುಭವಿಸಿತು.

ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಶುಕ್ರವಾರ ಮುಂಬೈ ತನ್ನ ಮೊದಲ ಇನಿಂಗ್ಸ್‌ನಲ್ಲಿ 409 ರನ್‌ಗಳಿಗೆ ಆಲೌಟಾಯಿತು. ಈ ಮೂಲಕ ಎದುರಾಳಿ ತಂಡಕ್ಕೆ 117 ರನ್‌ಗಳ ಮುನ್ನಡೆ ಬಿಟ್ಟುಕೊಟ್ಟಿತು.

ಮಹತ್ವದ ಮುನ್ನಡೆ ಸಾಧಿಸಿದ ಹರಭಜನ್ ಸಿಂಗ್ ನೇತೃತ್ವದ ಭಾರತ ಇತರೆ ತಂಡ ದಿನದಾಟದ ಅಂತ್ಯಕ್ಕೆ  ಎರಡನೇ ಇನಿಂಗ್ಸ್‌ನಲ್ಲಿ 5 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 27 ರನ್ ಗಳಿಸಿತ್ತು. ಶಿಖರ್ ಧವನ್ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು. ಮುರಳಿ ವಿಜಯ್ (18) ಮತ್ತು `ನೈಟ್ ವಾಚ್‌ಮನ್' ಎಸ್. ಶ್ರೀಶಾಂತ್ (7) ಶನಿವಾರ ಆಟ ಮುಂದುವರಿಸಲಿದ್ದಾರೆ.

ಭಾರತ ಇತರೆ ತಂಡ ಇದೀಗ ಒಟ್ಟು 144 ರನ್‌ಗಳ ಮುನ್ನಡೆಯಲ್ಲಿದೆ. ಇನ್ನೆರಡು ದಿನಗಳ ಆಟ ಬಾಕಿಯುಳಿದಿದ್ದು, ಮುಂಬೈ ತಂಡ ಮರುಹೋರಾಟ ನಡೆಸುವುದೇ ಎಂಬುದನ್ನು ನೋಡಬೇಕು. ಪಂದ್ಯ ಡ್ರಾದಲ್ಲಿ ಅಂತ್ಯಗೊಂಡರೆ, ಮೊದಲ ಇನಿಂಗ್ಸ್ ಮುನ್ನಡೆ ಆಧಾರದಲ್ಲಿ ಭಾರತ ಇತರೆ ತಂಡ ಟ್ರೋಫಿ ಜಯಿಸಲಿದೆ.

ಸಚಿನ್ ಬ್ಯಾಟಿಂಗ್ ವೈಭವ:
ಮೂರನೇ ದಿನದಾಟದ ಸಂಪೂರ್ಣ ಶ್ರೇಯ ಸಚಿನ್‌ಗೆ ಸಲ್ಲಬೇಕು. ಎರಡನೇ ಓವರ್‌ನಲ್ಲೇ ಕ್ರೀಸ್‌ಗೆ ಆಗಮಿಸಿದ ಅವರು ಕೊನೆಯವರೆಗೂ ಭಾರತ ಇತರೆ ತಂಡದ ಬೌಲರ್‌ಗಳಿಗೆ ಬಿಡಿಸಲಾಗದ ಒಗಟಾಗಿಯೇ ಉಳಿದುಕೊಂಡರು.

197 ಎಸೆತಗಳನ್ನು ಎದುರಿಸಿದ ಅವರು 18 ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳನ್ನು ಸಿಡಿಸಿದರು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪೂರ್ಣ ವೈಫಲ್ಯ ಅನುಭವಿಸಿದ್ದ ತೆಂಡೂಲ್ಕರ್ ಈ ಶತಕದ ಮೂಲಕ ಆಸೀಸ್ ಎದುರಿನ ಸರಣಿಗೆ ಸೂಕ್ತ ರೀತಿಯಲ್ಲಿ ಸಜ್ಜಾದರು.

ಮುಂಬೈ ತಂಡ ಎರಡು ವಿಕೆಟ್‌ಗೆ 155 ರನ್‌ಗಳಿಂದ ಶುಕ್ರವಾರ ಆಟ ಮುಂದುವರಿಸಿತ್ತು. `ನೈಟ್ ವಾಚ್‌ಮನ್' ಶಾರ್ದೂಲ್ ಠಾಕೂರ್ ಬೇಗನೇ ಔಟಾದರು. ಸಚಿನ್ ಮತ್ತು ಅಜಿಂಕ್ಯ ರಹಾನೆ ( 83, 183 ಎಸೆತ, 9 ಬೌಂ, 1 ಸಿಕ್ಸರ್) ನಾಲ್ಕನೇ ವಿಕೆಟ್‌ಗೆ 73 ರನ್ ಸೇರಿಸಿದರು. ಉತ್ತಮವಾಗಿ ಆಡುತ್ತಿದ್ದ ರಹಾನೆಗೆ ಶತಕ ಗಳಿಸುವ ಅದೃಷ್ಟವಿರಲಿಲ್ಲ.

ರೋಹಿತ್ ಶರ್ಮ (0) ಮತ್ತು ಅಭಿಷೇಕ್ ನಾಯರ್ (1) ಬೇಗನೇ ಔಟಾದದ್ದು ಮುಂಬೈಗೆ ಮುಳುವಾಗಿ ಪರಿಣಮಿಸಿತು. ಆದರೆ ಸಚಿನ್ ಮತ್ತೊಂದು ಬದಿಯಲ್ಲಿ ಇನಿಂಗ್ಸ್‌ಗೆ ಬಲ ನೀಡುತ್ತಲೇ ಇದ್ದರು. ಅಂಕಿತ್ ಚವಾಣ್ (49) ಜೊತೆ ಅವರು ಏಳನೇ ವಿಕೆಟ್‌ಗೆ 103 ರನ್ ಕಲೆಹಾಕಿದರು.

ಈ ಹಂತದಲ್ಲಿ ಮುಂಬೈ ಇನಿಂಗ್ಸ್ ಮುನ್ನಡೆಯ ಕನಸು ಕಂಡಿದ್ದು ನಿಜ. ಅಂಕಿತ್ ವಿಕೆಟ್ ಪಡೆದ ಅಭಿಮನ್ಯು ಮಿಥುನ್ ತಮ್ಮ ತಂಡಕ್ಕೆ `ಬ್ರೇಕ್' ನೀಡಿದರು. ಕೊನೆಯ ಮೂರು ವಿಕೆಟ್‌ಗಳು 11 ರನ್‌ಗಳ ಅಂತರದಲ್ಲಿ ಉರುಳಿದವು. ಐದು ಗಂಟೆ 43 ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ದ ಸಚಿನ್ ಸೂಕ್ತ ಜೊತೆಗಾರರಿಲ್ಲದೆ ನಿರಾಸೆಯಿಂದ ಪೆವಿಲಿಯನ್‌ಗೆ ಮರಳಿದರು.

ಆರಂಭದಲ್ಲಿ ಅಲ್ಪ ಎಚ್ಚರಿಕೆಯಿಂದ ಆಡಿದ ಸಚಿನ್ ಬಳಿಕ ಎಲ್ಲ ಬೌಲರ್‌ಗಳನ್ನು ಧೈರ್ಯದಿಂದ ಎದುರಿಸಿದರು. ಎಸ್. ಶ್ರೀಶಾಂತ್ ಕೆಲವೊಂದು ಶಾರ್ಟ್‌ಪಿಚ್ ಎಸೆತಗಳ ಮೂಲಕ ಚಾಂಪಿಯನ್ ಬ್ಯಾಟ್ಸ್‌ಮನ್ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದರಾದರೂ ಯಶ ಕಾಣಲಿಲ್ಲ.

ರಾಷ್ಟ್ರೀಯ ತಂಡಕ್ಕೆ ಮರಳುವ ಪ್ರಯತ್ನದಲ್ಲಿರುವ ಹರಭಜನ್ ಸಿಂಗ್ (64ಕ್ಕೆ 3) ಯಶಸ್ವಿ ಬೌಲರ್ ಎನಿಸಿಕೊಂಡರು. ಈಶ್ವರ್ ಪಾಂಡೆ, ಮಿಥುನ್ ಮತ್ತು ಪ್ರಗ್ಯಾನ್ ಓಜಾ ತಲಾ ಎರಡು ವಿಕೆಟ್ ಪಡೆದರು.

ಸ್ಕೋರ್ ವಿವರ:
ಭಾರತ ಇತರೆ: ಮೊದಲ ಇನಿಂಗ್ಸ್

130.1 ಓವರ್‌ಗಳಲ್ಲಿ 526
ಮುಂಬೈ: ಮೊದಲ ಇನಿಂಗ್ಸ್ 114.1 ಓವರ್‌ಗಳಲ್ಲಿ 409
(ಗುರುವಾರ 43 ಓವರ್‌ಗಳಲ್ಲಿ 2 ವಿಕೆಟ್‌ಗೆ 155)
ಅಜಿಂಕ್ಯ ರಹಾನೆ ಎಲ್‌ಬಿಡಬ್ಲ್ಯು ಬಿ ಹರಭಜನ್ ಸಿಂಗ್  83
ಶಾರ್ದೂಲ್ ಠಾಕೂರ್ ಸಿ ತಿವಾರಿ ಬಿ ಈಶ್ವರ್ ಪಾಂಡೆ  04
ಸಚಿನ್ ತೆಂಡೂಲ್ಕರ್ ಔಟಾಗದೆ  140
ರೋಹಿತ್ ಶರ್ಮ ಸಿ ಓಜಾ ಬಿ ಹರಭಜನ್ ಸಿಂಗ್  00
ಅಭಿಷೇಕ್ ನಾಯರ್ ಸಿ ವಿಜಯ್ ಬಿ ಮಿಥುನ್  01
ಅಂಕಿತ್ ಚವಾಣ್ ಸಿ ಸಹಾ ಬಿ ಅಭಿಮನ್ಯು ಮಿಥುನ್  49
ಧವಳ್ ಕುಲಕರ್ಣಿ ಸಿ ವಿಜಯ್ ಬಿ ಪ್ರಗ್ಯಾನ್ ಓಜಾ  10
ಜಾವೇದ್ ಖಾನ್ ಸಿ ಮಿಥುನ್ ಬಿ ಹರಭಜನ್ ಸಿಂಗ್  08
ವಿಶಾಲ್ ದಬೋಲ್ಕರ್ ಎಲ್‌ಬಿಡಬ್ಲ್ಯು ಬಿ ಓಜಾ  00
ಇತರೆ (ಬೈ-6, ಲೆಗ್‌ಬೈ-7, ವೈಡ್-2, ನೋಬಾಲ್-13)  28
ವಿಕೆಟ್ ಪತನ: 1-14 (ತಾರೆ; 3.3), 2-146 (ಜಾಫರ್; 39.2), 3-161 (ಠಾಕೂರ್; 44.1), 4-234 (ರಹಾನೆ; 64.5), 5-254 (ರೋಹಿತ್; 70.4), 6-257 (ನಾಯರ್; 73.4), 7-360 (ಚವಾಣ್; 99.4), 8-399 (ಧವಳ್; 110.4), 9-409 (ಜಾವೇದ್; 113.5), 10-409 (ದಬೋಲ್ಕರ್; 114.1)
ಬೌಲಿಂಗ್: ಎಸ್. ಶ್ರೀಶಾಂತ್ 21-3-80-1, ಈಶ್ವರ್ ಪಾಂಡೆ 24-6-76-2, ಅಭಿಮನ್ಯು ಮಿಥುನ್ 21-1-73-2, ಪ್ರಗ್ಯಾನ್ ಓಜಾ 26.1-1-103-2, ಹರಭಜನ್ ಸಿಂಗ್ 21-4-64-3, ಮನೋಜ್ ತಿವಾರಿ 1-1-0-0

ಭಾರತ ಇತರೆ: ಎರಡನೇ ಇನಿಂಗ್ಸ್ 5 ಓವರ್‌ಗಳಲ್ಲಿ
1 ವಿಕೆಟ್‌ಗೆ 27
ಶಿಖರ್ ಧವನ್ ಸಿ ನಾಯರ್ ಬಿ ಧವಳ್ ಕುಲಕರ್ಣಿ  00
ಮುರಳಿ ವಿಜಯ್ ಬ್ಯಾಟಿಂಗ್  18
ಎಸ್. ಶ್ರೀಶಾಂತ್ ಬ್ಯಾಟಿಂಗ್  07
ಇತರೆ: (ನೋಬಾಲ್-2)  02
ವಿಕೆಟ್ ಪತನ: 1-0 (ಧವನ್; 0.6)
ಬೌಲಿಂಗ್: ಧವಳ್ ಕುಲಕರ್ಣಿ 3-1-10-1, ಅಭಿಷೇಕ್ ನಾಯರ್ 2-0-17-0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT