ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲೂ ಮಹಿಳಾ ಬ್ಯಾಂಡ್ ಮೋಡಿ

Last Updated 19 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಮನದೊಳಗಿನ ಪದಗಳನ್ನು ಕವಿತೆಯಾಗಿಸಬೇಕು. ಅವಿತು ಹೊರಬಂದ ಅವುಗಳಿಗೆ ಸಂಗೀತದ ಇಂಪು ನೀಡಬೇಕು. ಚೆಂದದ ಧಾಟಿ ಬೆರೆಸಿ ಸಂಗೀತಪ್ರಿಯರ ಕಿವಿಗೆ ಇಂಪುಣಿಸಬೇಕು. ಜೊತೆಗೂಡುವ ವಾದ್ಯಗಳಲ್ಲೂ ವಿಶೇಷತೆ ಇರಬೇಕು.

ಹೀಗೆ ಸಂಪೂರ್ಣ ವಿಭಿನ್ನ ಕನಸು ಕಾಣುತ್ತಿದ್ದವರು ಹಿನ್ನೆಲೆ ಗಾಯಕಿ ರೇಖಾ ಮೋಹನ್ (ರೆಮೊ). `ಚಿನ್ನಾರಿ ಮುತ್ತ' ಚಿತ್ರದಲ್ಲಿ `ರೆಕ್ಕೆ ಇದ್ದರೆ ಸಾಕೇ...' ಸೇರಿದಂತೆ ಹಲವಾರು ಹಾಡುಗಳನ್ನು ಹಾಡಿ ಸೈ ಎನಿಸಿಕೊಂಡ ಇವರು ಹೊಸ ಸಾಧನೆಯ ಮೂಲಕ ಬಾನೆತ್ತರಕ್ಕೆ ಬೆಳೆಯುವ ಕನಸು ಕಾಣುತ್ತಿದ್ದಾರೆ.

ಅಷ್ಟಕ್ಕೂ ಹೊಸತನದ ಇವರ ಯೋಜನೆ ಎಂದರೆ `ರೆಮೋಸ್ ಮ್ಯೂಸಿಕ್ ಸ್ಪಾರ್ಕ್' ಎಂಬ ಮ್ಯೂಸಿಕ್ ಬ್ಯಾಂಡ್. ಈ ತಂಡದಲ್ಲಿ ಹಾಡುವವರಷ್ಟೇ ಅಲ್ಲದೆ ಕೀಬೋರ್ಡ್, ಡ್ರಮ್ಸನಿಂದ ನಾದದ ಅಲೆ ಹೊಮ್ಮಿಸುವವರೂ ಹೆಂಗಳೆಯರೇ. ಕರ್ನಾಟಕದ ಮೊದಲ ಮಹಿಳಾ ಬ್ಯಾಂಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಬ್ಯಾಂಡ್ ಕನಸು ಆರಂಭವಾದದ್ದು ಎರಡು ವರ್ಷಗಳ ಹಿಂದೆ.

`ತಂಡ ಕಟ್ಟುವ ಕನಸು ಕಾಣುತ್ತಲೇ ಇದ್ದೆ. ಆದರೆ ಅದನ್ನು ಸಾಕಾರಗೊಳಿಸಿಕೊಳ್ಳುವ ಬಗ್ಗೆ ನನ್ನಲ್ಲೇ ಅನುಮಾನ ಇತ್ತು. ಗೆಳತಿ ಅರ್ಚನಾ ರವಿ (ಹಿನ್ನೆಲೆ ಗಾಯಕಿ), `ಕವಿತೆ ಬರೆದು, ಸಂಗೀತ ಸಂಯೋಜನೆ ಮಾಡಿ, ಚೆನ್ನಾಗಿ ಹಾಡುವ ನೀನು ಹೊಸದೇನನ್ನಾದರೂ ಮಾಡಬೇಕು' ಎಂದು ಹುರಿದುಂಬಿಸುತ್ತಿದ್ದಳು. ಒಂದು ದಿನ ಕಾರ್ಯಕ್ರಮವೊಂದರಲ್ಲಿ ಡ್ರಮ್ಸ ಬಾರಿಸುತ್ತಿದ್ದ ಹುಡುಗಿಯನ್ನು ನೋಡಿದೆ. ಕನಸಿಗೆ ರೆಕ್ಕೆ ಬಂದಂತೆ ಆಯಿತು.

ಗೆಳತಿ ಅರ್ಚನಾ ಕೂಡ ಕೀಬೋರ್ಡ್ ನುಡಿಸುತ್ತಿದ್ದಳು. ಸಂಗೀತ ಕ್ಷೇತ್ರದಲ್ಲೇ ಇದ್ದಿದ್ದರಿಂದ ಹಾಡುವ ಕೊರಳು ಹುಡುಕುವುದು ಕಷ್ಟವಾಗಲಿಲ್ಲ. ಸಮಾನ ಮನೋಧರ್ಮದ ಗೆಳತಿಯರು ಒಂದಾದೆವು' ಎನ್ನುತ್ತಾ ತಮ್ಮ `ಬ್ಯಾಂಡ್' ಹುಟ್ಟಿದ ಪರಿಯನ್ನು ತೆರೆದಿಟ್ಟರು ರೇಖಾ.

`ಗೆಳತಿಯರಾದ ಅರ್ಚನಾ ರವಿ, ಕುಶಲಾ (ಗಾಯನ, ಕೀಬೋರ್ಡ್), ಪ್ರಿಯಾ ರಾಮು (ಡ್ರಮ್ಸ, ಪ್ಯಾಡ್), ಶಿಲ್ಪಾ, ಪ್ರಾರ್ಥನಾ (ಗಾಯನ) ಅವರಲ್ಲಿ ನನ್ನ ಯೋಜನೆಯ ಬಗ್ಗೆ ಹೇಳಿಕೊಂಡೆ. ಮೊದಲಿಗೆ ಅವರು ಭಯ ವ್ಯಕ್ತಪಡಿಸಿದರು. ನಂತರ ಸಮ್ಮತಿ ದೊರೆಯಿತು. ಇದೇ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಲವರ ಮಾರ್ಗದರ್ಶನ ಪಡೆದೆ. ವಿಚಿತ್ರ ಎಂದರೆ ಜನಪ್ರಿಯರಾಗಿರುವ ಕೆಲವು ಗಾಯಕಿಯರೇ ನನ್ನ ಯೋಜನೆಯನ್ನು ಹೀಗಳೆದರು.

ಇದು ಆಗದ ಕಾರ್ಯ ಎಂದು ಕೊಂಕು ನುಡಿದರು. ಅದನ್ನೇ ಸವಾಲಾಗಿ ಸ್ವೀಕರಿಸಿ ಕೊನೆಗೂ `ಬ್ಯಾಂಡ್' ಪ್ರಾರಂಭಿಸಿದೆವು. `ಗೆಳತಿ ಎನ್ನಲೇ?' ಎಂಬ ಆಲ್ಬಂ ಬಿಡುಗಡೆ ಮಾಡಿದೆವು. ಅದೇ ದಿನ ನಮ್ಮ ತಂಡವನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಿದೆವು. ಹೊಸತನದ ಆ ಹಾಡುಗಳಿಗೆ ಬಿ.ಕೆ. ಸುಮಿತ್ರಾ ಹಾಗೂ ಮಂಜುಳಾ ಗುರುರಾಜ್ ಮೆಚ್ಚುಗೆ ಸೂಚಿಸಿದ್ದಾರೆ. ನಾಲ್ಕಾರು ಕಾರ್ಯಕ್ರಮ ಈಗಾಗಲೇ ನಿಗದಿಯಾಗಿವೆ' ಎಂದು ಸಂಭ್ರಮಪಡುತ್ತಾರೆ ರೆಮೊ.

ಒಡನಾಟ, ಹಲವು ವರ್ಷಗಳ ಸ್ನೇಹದಿಂದ ಪರಸ್ಪರರ ಪ್ರತಿಭೆಗಳ ಅರಿವಿದ್ದ ಈ ಗೆಳತಿಯರು ಸದ್ಯಕ್ಕೆ ಕನ್ನಡ ಹಾಡುಗಳನ್ನು ಮಾತ್ರ ಹಾಡುತ್ತಿದ್ದಾರೆ. ಶಾಸ್ತ್ರೀಯವಾಗಿ ಸಂಗೀತಾಭ್ಯಾಸ ಮಾಡಿರುವ ಇವರೆಲ್ಲರೂ ಬೇರೆ ಬೇರೆ ಭಾಷೆಯ ವಿವಿಧ ಶೈಲಿಯಲ್ಲಿ ಹಾಡುಗಳನ್ನು ಉಣಬಡಿಸಲು ಸಂಪೂರ್ಣ ತಯಾರಿ ನಡೆಸಿದ್ದಾರೆ. ರಂಗಭೂಮಿ, ಸಿನಿಮಾ, ಭಾವಗೀತೆ, ಜಾನಪದ ಗೀತೆಗಳನ್ನೂ ಸೇರಿಸಿ ಹಾಡಬೇಕೆಂದು ಕೊಂಡಿರುವ ಇವರದ್ದು ಪ್ರಪಂಚದಾದ್ಯಂತ ಹಾಡಿ ಸೈ ಎನಿಸಿಕೊಳ್ಳುವ ಬಯಕೆ.

ಈ ತಂಡಕ್ಕೆ ಇನ್ನೊಂದು ದೊಡ್ಡ ಕನಸಿದೆ. `ಬ್ಯಾಂಡ್'ನಲ್ಲಿರುವ ಆರು ಜನರನ್ನು ಹೊರತುಪಡಿಸಿ ತಬಲಾ, ಕೊಳಲು ಮುಂತಾದ ಸಂಗೀತ ವಾದ್ಯಗಳಲ್ಲಿ ಪರಿಣತಿ ಪಡೆದಿರುವ ಪ್ರತಿಭಾನ್ವಿತ ಕಲಾವಿದೆಯರನ್ನು ಸೇರಿಸಿಕೊಂಡು ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ನೀಡಬೇಕೆಂಬ ಕನಸದು. ಶಾಸ್ತ್ರೀಯ, ಪಾಶ್ಚಿಮಾತ್ಯ ಶೈಲಿಯ ನೃತ್ಯಗಳನ್ನು ಮಹಿಳೆಯರಿಂದಲೇ ಪ್ರಸ್ತುತಪಡಿಸುವ ಯೋಚನೆಯೂ ಇದ್ದು, ಎಲ್ಲಕ್ಕೂ ಕಲಾವಿದೆಯರು ದೊರೆತಿದ್ದಾರಂತೆ. ಆದರೆ ಇಂಥ ಕಾರ್ಯಕ್ರಮವನ್ನು ಆಯೋಜಿಸಿ ಅವಕಾಶ ನೀಡುವವರಿಗಾಗಿ ಈ ತಂಡ ಕಾಯುತ್ತಿದೆ.

ಬರೀ ಹೆಂಗಳೆಯರ ದನಿ ಕೇಳಿ ಬೇಸರ ಎನಿಸುವುದಿಲ್ಲವೇ ಎಂದು ಚಿಂತಿಸುವುದು ಬೇಡವೇ ಬೇಡ. ಈ ತಂಡದ ಗಾಯಕಿಯರು ಗಾಯಕರ ಧ್ವನಿಯನ್ನೂ ಅನುಕರಿಸಬಲ್ಲರು. ರೇಖಾ ಅವರು ಸೋನು ನಿಗಮ್ ಮುಂತಾದ ಗಾಯಕರ ಕಂಠವನ್ನು ಅನುಕರಿಸಿ ಹಾಡುತ್ತಾರಂತೆ. ಈ ಎಲ್ಲಾ ಗಾಯಕಿಯರಿಗೆ `ವಾಯ್ಸ ಮಾಡ್ಯುಲೇಶನ್', ಮಿಮಿಕ್ರಿ ಕೂಡ ಗೊತ್ತು. ಹೊಸ ಹೊಸ ಪ್ರತಿಭಾನ್ವಿತೆಯರು ತಮ್ಮತ್ತ ಬಂದರೆ ಸ್ವಾಗತಿಸಲು ತಂಡದ ಎಲ್ಲರೂ ಸಿದ್ಧರಿದ್ದಾರೆ.

`ನನ್ನ ನಿರೀಕ್ಷೆಗೂ ಮೀರಿ ಕುಟುಂಬದಿಂದ ಬೆಂಬಲ ದೊರೆತಿದೆ. ಕಾರ್ಯಕ್ರಮದಲ್ಲಿ ಗಾಯಕಿ ಅನುರಾಧಾ ಭಟ್ ಅವರನ್ನೂ ಜೊತೆಯಾಗಿಸಿಕೊಳ್ಳುವ ಬಯಕೆ ನನ್ನದು. ಹುಡುಗಿಯರಲ್ಲಿ ಕೀಳರಿಮೆ ಹೆಚ್ಚು. ಹೀಗಾಗಿ ಏನಾದರೊಂದು ಹೊಸ ಯೋಚನೆ ಬಂದರೆ ಮನಸ್ಸಿನಲ್ಲೇ ಇಟ್ಟುಕೊಳ್ಳುತ್ತಾರೆ. ಆದರೆ ಸಮಾನಮನಸ್ಕ ಗೆಳತಿಯರೊಂದಿಗೆ ಹಂಚಿಕೊಂಡರೆ ಮೂಡುವ ಯೋಚನೆಯನ್ನು ಸಾಕಾರಗೊಳಿಸುವ ಸಾಮರ್ಥ್ಯ ಹೆಣ್ಣುಮಕ್ಕಳಲ್ಲಿದೆ. ತಿಳಿದವರಿಂದ ಮಾರ್ಗದರ್ಶನ ಪಡೆದರೆ ಕಾರ್ಯ ಸುಲಭ. ಹೆಂಗಳೆಯರ ಸಾಧನೆ ನೋಡುವುದೇ ಹರ್ಷದ ಸಂಗತಿ' ಎಂದು ತಮ್ಮ ಕನಸು ಕಂಗಳನ್ನು ಮಿಟುಕಿಸಿದರು ರೇಖಾ.
ತಂಡದ ಸಂಪರ್ಕಕ್ಕೆ: 98808 24087/ 98450 48453.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT