ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಹಲೋಕದಿಂದ ಕಳಚಿದ `ವರ್ಣ ತಂತು'

Last Updated 17 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ದಾವಣಗೆರೆ: `ದಾವಣಗೆರೆಯ ಲಲಿತಕಲಾ ಮಹಾವಿದ್ಯಾಲಯವನ್ನು (ಈಗಿನ ದಾವಣಗೆರೆ ವಿಶ್ವವಿದ್ಯಾಲಯ ದೃಶ್ಯಕಲಾ ವಿದ್ಯಾಲಯ) ಹೆಮ್ಮರವಾಗಿ ಬೆಳೆಸಿದ ಬೇರು ಕಳಚಿಕೊಂಡಿದೆ. ನನ್ನ ಹಾಗೆ ಅನೇಕ ಕಲಾವಿದರನ್ನು ಉನ್ನತ ಸ್ಥಾನಕ್ಕೆ ಏರಿಸಿದ ತಂದೆಯ ಸಮಾನರೊಬ್ಬರನ್ನು ಅಗಲಿದ ನೋವು ಕಾಡುತ್ತಿದೆ'.

`ಗುರುಗಳಾದ ವಿರೂಪಾಕ್ಷಪ್ಪ ಬಸನಗೌಡ ಹಿರೇಗೌಡರ್ (ವಿ.ಬಿ. ಹಿರೇಗೌಡರ್) ಅಗಲಿದ್ದಾರೆ ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಒಂದು ತಿಂಗಳ  ಹಿಂದೆಯಷ್ಟೇ ಅವರನ್ನು ಕಂಡಿದ್ದೆ. ಅವರ ಕಣ್ಣುಗಳಲ್ಲಿ ಅದೇನೋ ನೋವಿತ್ತು. ದಾವಣಗೆರೆಯ ವರ್ಣ ಬಿಂದು (ಮನೆಯ ಹೆಸರು) ಮೈಸೂರಿಗೆ ಹೊರಟ ಅವರ ಮುಖದಲ್ಲಿ ಕಣ್ಣಬಿಂದುಗಳು ಜಾರಿದ್ದನ್ನು ಸ್ಪಷ್ಟವಾಗಿ ಗಮನಿಸಿದ್ದೆ. ಇಲ್ಲಿನ ಕಾಲೇಜು, ಅವರ ವಿದ್ಯಾರ್ಥಿಗಳು, ಪರಿಸರ ಎಲ್ಲವನ್ನೂ ಬಿಟ್ಟು ಹೋಗುವುದು ಅವರಿಗೂ ಸುಲಭವಾಗಿರಲಿಲ್ಲ'.

`ಮೂಲತಃ ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನ ಗುಡಗೇರಿಯಲ್ಲಿ 1943ರಲ್ಲಿ ಜನಿಸಿದ ಅವರು ಧಾರವಾಡದ ಹಾಲಬಾವಿ ಕಲಾಶಾಲೆಯಲ್ಲಿ ಡಿಪ್ಲೊಮಾ ಪಡೆದರು. ಬಳಿಕ ಉನ್ನತ ಶಿಕ್ಷಣ ಪಡೆದು 1975ರಿಂದ ಲಲಿತಕಲಾ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ 2002ರಲ್ಲಿ ನಿವೃತ್ತರಾದರು.

1974ರಲ್ಲಿ ನಾನು ಇಲ್ಲಿನ ಲಲಿತಕಲಾ ಕಾಲೇಜಿಗೆ ಸೇರಿದಾಗ ಅವರು ಪ್ರಾಂಶುಪಾಲರಾಗಿದ್ದರು. ಅಂದಿನಿಂದ ತೀರಾ ಇತ್ತೀಚಿನವರೆಗೂ ಅವರ ಒಡನಾಡಿಯಾಗಿ ಗಮನಿಸಿದ್ದೇನೆ. ಅವರು ತಮ್ಮನ್ನು ಕಲಾಕ್ಷೇತ್ರಕ್ಕೆ ಅರ್ಪಿಸಿಕೊಂಡಿದ್ದರು. ಈ ಮಧ್ಯೆ ಅವರ ಕಾಲೆಳೆದವರು ಅದೆಷ್ಟೋ ಮಂದಿ. ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ'.

`ಕಾಲೇಜಿನ ಉನ್ನತಿಗಾಗಿ ಅಕ್ಷರಶಃ ಹೋರಾಡಿದರು. ಕೇವಲ ಡಿಪ್ಲೊಮಾ ಕೋರ್ಸ್‌ಗಳಿಗಷ್ಟೇ ಸೀಮಿತವಾಗಿದ್ದ ಕಾಲೇಜಿನಲ್ಲಿ ಇಂದು ಸ್ನಾತಕೋತ್ತರ ಕೋರ್ಸ್ ಕೂಡಾ ಇದೆ. ಅವರ ಮಾರ್ಗದರ್ಶನದಲ್ಲಿ ರಾಷ್ಟ್ರ, ಅಂತರರಾಷ್ಟ್ರಮಟ್ಟಕ್ಕೆ ಬೆಳೆದವರು ಅದೆಷ್ಟೋ ಮಂದಿ.

ಕೇಂದ್ರೀಯ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾಗಿದ್ದ ಕೆ.ಆರ್. ಸುಬ್ಬಣ್ಣ, ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಚಿ.ಸು. ಕೃಷ್ಣಸೆಟ್ಟಿ, ಹಿರಿಯ ಕಲಾವಿದ ಮಲ್ಲಿಕಾರ್ಜುನ ಜಾಧವ್ ಅವರಂಥ ಎಷ್ಟೋ ಹೆಸರುಗಳು ಹಿರೇಗೌಡರ್ ಶಿಷ್ಯಬಳಗದಲ್ಲಿ ಸೇರುತ್ತವೆ. ಅವರು ಮೈಸೂರಿನ ಡಿಎಂಎಸ್ ಚಿತ್ರಕಲಾ ಸಂಸ್ಥೆಯಲ್ಲಿಯೂ ಡೀನ್ ಆಗಿ ಸೇವೆ ಸಲ್ಲಿಸಿದರು. ರಾಜ್ಯದ ಬಹುತೇಕ ಲಲಿತಕಲಾ ಕಾಲೇಜುಗಳಿಗೆ ಅವರು ಶಿಕ್ಷಕರಾಗಿ, ಮಾರ್ಗದರ್ಶಕರಾಗಿ ಅನನ್ಯ ಸೇವೆ ಸಲ್ಲಿಸಿದರು'.

'ಎಲ್ಲಿಯೇ ಹೋಗಲಿ ಅವರ ಜತೆಗೊಂದು ಸ್ಕೆಚ್‌ಪ್ಯಾಡ್ ಇರುತ್ತಿತ್ತು. ಪ್ರವಾಸಕ್ಕೆ ಹೊರಟಾಗ ಒಂದೆಡೆ ನಿಂತು ಚಿತ್ರರಚನೆಗೆ ತೊಡಗಿದರೆಂದರೆ ಅವರೊಬ್ಬ ತಪಸ್ವಿ. ಅದು ವಿದ್ಯಾರ್ಥಿಗಳಾದ ನಮಗೂ ಸ್ಫೂರ್ತಿ ರೂಪದಲ್ಲಿ ಆವರಿಸಿದೆ. 3 ಸಾವಿರ ವರ್ಣಚಿತ್ರ, 5 ಸಾವಿರಕ್ಕೂ ಹೆಚ್ಚು ರೇಖಾಚಿತ್ರ, ಅಸಂಖ್ಯಾತ ಮಿನಿಯೇಚರ್‌ಗಳನ್ನು ರಚಿಸಿದರು. ದಾವಣಗೆರೆ ಲಲಿತಕಲಾ ಕಾಲೇಜಿನ ಜಮೀನನ್ನು ಅನ್ಯ ಉದ್ದೇಶಗಳಿಗೆ ಬಳಸಲು ಹವಣಿಸಿದವರು ಹಲವಾರು ಮಂದಿ. ಹಿರೇಗೌಡರ್ ದಿಟ್ಟ ನಿರ್ಧಾರದ ಪರಿಣಾಮ ಜಮೀನು ಉಳಿಯಿತು'.

'ಮೈಸೂರಿನ ಡಿಎಂಎಸ್ ಲಲಿತಕಲಾ ಮಹಾ ಸಂಸ್ಥಾನದಲ್ಲಿ ಡೀನ್ ಆಗಿದ್ದಾಗ ಕಲಾ ಶಿಕ್ಷಣವನ್ನು ದೂರಶಿಕ್ಷಣದ ಮೂಲಕ ನೀಡಲು ಆರಂಭಿಸಿದರು. ಇದರಿಂದಾಗಿ ರಾಷ್ಟ್ರ, ಅಂತರರಾಷ್ಟ್ರಮಟ್ಟದ ಕಲಾಸಕ್ತರೂ ಬಂದು ಚಿತ್ರಕಲಾ ಶಿಕ್ಷಣ ಪಡೆಯುವಂತಾಯಿತು. ಹಿರೇಗೌಡರ್ ಒಂದೇ ಮಾಧ್ಯಮಕ್ಕೆ ಅಂಟಿಕೊಳ್ಳಲಿಲ್ಲ. ತೈಲವರ್ಣಚಿತ್ರ, ರೇಖಾಚಿತ್ರ, ಅಕ್ರಿಲಿಕ್, ಶಿಲ್ಪಕಲೆ, ಮಿನಿಯೇಚರ್, ಉಬ್ಬುಶಿಲ್ಪ -ಹೀಗೆ ಎಲ್ಲದರಲ್ಲಿಯೂ ಬಹುಮುಖಿ ಪ್ರತಿಭೆ ಅವರದು.

ನಗರದ ಚಿತ್ರಮಂದಿರ, ಹಲವು ಕಟ್ಟಡ ಶಿಕ್ಷಣ ಸಂಸ್ಥೆಗಳು ಹಿರೇಗೌಡರ್ ಮೂಲಕ ಕಲಾಕೃತಿ ರಚಿಸಿವೆ. ಅವರು ಸಮಯ ಹಾಳು ಮಾಡಿದವರಲ್ಲ. ವಿದ್ಯಾರ್ಥಿಗಳು, ಸಹೋದ್ಯೋಗಿಗಳೊಂದಿಗೆ ಪ್ರೀತಿ ವಿಶ್ವಾಸದಿಂದ ಬೆರೆಯುತ್ತಿದ್ದವರು. ಹೌದು ನಾವು ಅವರಿಗಾಗಿ ಕಾಯುತ್ತಿದ್ದೆವು. ಶೈಕ್ಷಣಿಕ ಶಿಸ್ತು ಅವರಲ್ಲಿತ್ತು. ಅವರ ಭೌತಿಕ ದೇಹ ಇಲ್ಲವಾಗಿದೆ. ಅವರ ಸ್ಫೂರ್ತಿ, ಆಶೀರ್ವಾದ ನಮ್ಮ ಮೇಲಿರಲಿ'.

ಡಾ.ರವೀಂದ್ರ ಎಸ್. ಕಮ್ಮಾರ್
ದಾವಣಗೆರೆ ವಿವಿ ದೃಶ್ಯಕಲಾ ಕಾಲೇಜಿನ ಲಲಿತಕಲಾ ವಿಭಾಗದ ಮುಖ್ಯಸ್ಥರು
(`ಚಿತ್ರ ಕಲಾವಿದ ವಿ.ಬಿ. ಹಿರೇಗೌಡರ್ ಬದುಕು ಮತ್ತು ಕಲಾಕೃತಿಗಳು' ವಿಷಯದಲ್ಲಿ ಪಿಎಚ್.ಡಿ ಪಡೆದಿದ್ದಾರೆ)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT