ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಕಾಲದಲ್ಲಿ ಆ ಕಲೆ

Last Updated 23 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನಗರದ ಕನಕಪುರ ರಸ್ತೆಯ ಬಳಿ ಹೊಯ್ಸಳ ಶೈಲಿಯ ದೇವಸ್ಥಾನ. ಅದು ಏಕಕೂಟ ದೇವಳ. ಮೊದಲ ನೋಟದಲ್ಲೇ ಮನದಲ್ಲಿ ನೂರೆಂಟು ಪ್ರಶ್ನೆಗಳು. ಅಗರ ಗ್ರಾಮದಲ್ಲಿರುವ ಸ್ವಾನಂದಾಶ್ರಮದಲ್ಲಿರುವ ಈ ದೇವಳದ ಬಗ್ಗೆ ಮಾಹಿತಿ ಸಂಗ್ರಹಿಸತೊಡಗಿದಾಗ ಈ ಕಲಾನೈಪುಣ್ಯದ ಗುಡಿ ಕರೆದೊಯ್ದದ್ದು ಹಾಸನದ ಬೇಲೂರು, ಹಳೇಬೀಡಿಗಲ್ಲ; ಬೆಂಗಳೂರಿನ ಬನಶಂಕರಿಗೆ.

ಅಲ್ಲಿ ತಲುಪುವವರೆಗೂ ಮನಸಿನಲ್ಲಿದ್ದುದು ದೋರಸಮುದ್ರದ ಕಲ್ಪನೆ. ಹೊಯ್ಸಳ ಸಾಮ್ರಾಜ್ಯದ ಶಿಲ್ಪಕಲೆಗೂ ಬೆಂದಕಾಳೂರಿಗೂ ಹೇಗೆ ಸಂಬಂಧ? ಶತಮಾನಗಳು ಕಳೆದರೂ ಮಾಸದ ಈ ಶಿಲೆ ಯಾವುದು? ಯಾರ ಕಾಲದಲ್ಲಿ ಯಾವ ಶಿಲ್ಪಿ ನಿರ್ಮಿಸಿದ ದೇವಸ್ಥಾನ ಇದು? ಇಂಥವೇ ಹಲವು ಪ್ರಶ್ನೆಗಳು. ಉತ್ತರ ದೊರಕಿದ್ದು ಬನಶಂಕರಿಯ `ಕದಂಬ~ ಶಾಲೆಯಲ್ಲಿ. 

ಈ ಶಾಲೆಗೆ ಕಾಲಿರಿಸಿದಾಗ ಮೊದಲು ಕಂಡದ್ದು ಕಲ್ಲಿನಲ್ಲಿಯೇ ಜೀವತಳೆದಂತಿರುವ ಸಾಯಿಬಾಬಾ. ಭಾವ ತುಂಬಿದ ವಿಗ್ರಹವದು. ಮತ್ತೊಂದು ಕಡೆ  ಸುಂದರ ದೇವಿಯರ ಸಾಲು ಕಂಡರೆ ಗಂಧರ್ವ ಕನ್ಯೆಯರೇ ಎದ್ದುಬಂದಂಥ ಅನುಭವ.

ಅಲ್ಲಲ್ಲೇ ಕಲ್ಲಿಗೆ ಉಳಿಪೆಟ್ಟು ನೀಡುತ್ತಾ ಕಾರ್ಯನಿರತರಾದ ಯುವಕರು. ಅವರ ಸುತ್ತ ಕಲ್ಲುಗಳ ರಾಶಿ. ಅದೇ ಅವರ ಬದುಕಿನ ದಾರಿ. ಇವೆಲ್ಲ ಕಂಡುಬಂದಿದ್ದು ಬನಶಂಕರಿ ಬಳಿಯ ಕದಂಬ ಶಿಲ್ಪಕಲಾ  ಶಾಲೆಯಲ್ಲಿ. ಇದು ಕಲಿಯುವ ಮನಸ್ಸುಗಳ ಶಾಲೆ. ಇದರ ಮಾಸ್ತರ್ ಸೂರಾಲು ವೆಂಕಟರಮಣ ಭಟ್.


ಶಾಂತಲೆಯ ನೃತ್ಯಕ್ಕೆ ಮನಸೋತ ಬಿಟ್ಟಿದೇವ (ವಿಷ್ಣುವರ್ಧನ) ಮಡದಿಯ ಕೋರಿಕೆಯಂತೆ ವೇಲನೂರಿನಲ್ಲಿ ಹೊಯ್ಸಳ ಶೈಲಿಯ ಶಿಲ್ಪಕಲೆಗೆ ನಾಂದಿಹಾಡುತ್ತಾನೆ. ತಾನು ಸತ್ತರೂ ಕಲೆ ಶಾಶ್ವತವಾಗಬೇಕು ಎಂಬ ಬಯಕೆಯ ಹಿಂದಿನ ಅವಳ ಹಂಬಲ ಹಿರಿದು. ಅದ್ಭುತ ಶಿಲ್ಪಕಲೆಗೆ ಕಾರಣರಾದ ಶಿಲ್ಪಿಗಳ ಸೃಜನಶೀಲತೆ ಇಂದಿನ ಶಿಲ್ಪಿಗಳಲ್ಲೂ ಇದೆ. ಆದರೆ ಗುರುತಿಸುವ ಕಣ್ಣುಗಳು ಬೇಕಷ್ಟೆ.

`ನನ್ನ ಹೆಸರು ರವಿಕುಮಾರ್, ಎಸ್‌ಎಸ್‌ಎಲ್‌ಸಿಗೆ ನನ್ನ ಶಿಕ್ಷಣ ಮುಗಿಸಿ ಕಲೆಯ ಹಿಂದೆ ಬಿದ್ದೆ. ಇದು ಈಗ ಬದುಕಿಗೂ ಸೆಲೆಯಾಗಿದೆ. ನನಗೆ ಈ ವೃತ್ತಿಯಲ್ಲಿ 23 ವರ್ಷದ ಅನುಭವವಿದೆ~ ಎಂದು ಹೇಳುವಾಗ ಅವರ ಕಣ್ಣಲ್ಲಿ ಹೆಮ್ಮೆ.

ಇವರಷ್ಟೇ ಅಲ್ಲ, ಅಲ್ಲಿ ಎಂಟು ಮಂದಿ ಯುವಕರ ಒಂದು ಸಣ್ಣ ಪಡೆಯೇ ಇದೆ. ಶಿಲೆಯಲ್ಲೂ ಕಲೆ ಅರಳಿಸುವ ಜಿದ್ದಿಗೆ ಬಿದ್ದ ಮನಸ್ಸು ಮತ್ತು ಕೈಗಳು. ನಮಗೆ ಸಾಫ್ಟ್‌ವೇರ್ ಬೇಡ, ಹಾರ್ಡ್‌ವೇರ್ ಸಾಕು ಎಂಬ ಛಲದ ಬೆವರು ಹಣೆಯ ಮೇಲೆ ಮುತ್ತಿನ ಸಾಲು ಕಟ್ಟಿತ್ತು.
ಇವರ ಮೇಷ್ಟ್ರು ವೆಂಕಟರಮಣ ಭಟ್. ಇವರೇ ಆ ಏಕಕೂಟ ದೇವಸ್ಥಾನ ನಿರ್ಮಾಣದ ಮುಖ್ಯ ಶಿಲ್ಪಿ. 

ಶಿಲ್ಪಕಲೆಗಾಗಿ ಕಲ್ಲರಳಿಸಿ, ಹೂವಾಗಿಸಿ, ದೇವರಾಗಿಸುವ ಶಿಲ್ಪಿ ಇವರು. ಸಂಗಾತಿ ರತ್ನ ಕೂಡ ಪತಿಯ ಹಾದಿಯಲ್ಲೇ ಹೆಜ್ಜೆ ಹಾಕಿದ್ದಾರೆ. `ಅವಳದೂ ನನ್ನದು ಪ್ರೇಮವಿವಾಹ~ ಎಂದು ಹೇಳುವ ಭಟ್ಟರು ತಮ್ಮ ಏಳಿಗೆಯ ಪ್ರತಿ ಮೆಟ್ಟಿಲಲ್ಲೂ ಪತ್ನಿಯ ಸಹಕಾರವನ್ನು ಸ್ಮರಿಸುತ್ತಾರೆ.

`ನನ್ನ ಗುರು ಧಾರೆಯೆರೆದ ವಿದ್ಯೆಯನ್ನು ಶಿಷ್ಯವೃಂದಕ್ಕೆ ನೀಡುತ್ತಿದ್ದೇನೆ~ ಎಂದು ಹೇಳುವಾಗ ಅವರ ಕಣ್ಣಲ್ಲಿ ನಿಸ್ವಾರ್ಥ ಭಾವ. ಕೇವಲ ಭಾರತದಲ್ಲಿ ಮಾತ್ರವಲ್ಲ, ಅಮೆರಿಕಾದಲ್ಲೂ ಇವರು ಕೈಚಳಕವನ್ನು ತೋರಿದ್ದಾರೆ.

“ಮೊದಲಿಗೆ ದೇವಲಕುಂದ ವಾದಿರಾಜ ಅವರ ಬಳಿ ಶಿಷ್ಯನಾಗಿ ಸೇರಿಕೊಂಡೆ. ಅಲ್ಲಿಂದ ಶುರುವಾಯಿತು ನನಗೂ ಶಿಲೆಗೂ ನಡುವಿನ ನಂಟು. ಯಾವುದೇ ಲಾಭ-ನಷ್ಟದ ಲೆಕ್ಕಾಚಾರಕ್ಕೆ ತಲೆಕೆಡಿಸಿಕೊಳ್ಳಲಿಲ್ಲ. ಕಲೆ ನನ್ನ ಕೈಹಿಡಿಯುತ್ತದೆ ಎಂಬ ನಂಬಿಕೆ ಮಾತ್ರ ಇತ್ತು. ಅದೇ ನಂಬಿಕೆ ಬೆಂಗಳೂರಿನ ಕನಕಪುರ ರಸ್ತೆಯ ಬಳಿಯಿರುವ `ಹೊಯ್ಸಳ~ ಮಾದರಿಯ ದೇವಸ್ಥಾನಕ್ಕೆ ನಾಂದಿಯಾಯಿತು.
 
ಮೈಸೂರಿನ ಹೆಗ್ಗಡದೇವನಕೋಟೆಯಿಂದ ತರಿಸಲಾದ ಕೃಷ್ಣಶಿಲೆಯಿಂದ ನಿರ್ಮಿಸಲಾದ ಈ ದೇವಸ್ಥಾನ ಕಣ್ಮನ ಸೆಳೆಯುತ್ತದೆ. ಐದು ದೇವತೆಗಳನ್ನು ಒಂದೇ ಗರ್ಭಗುಡಿಯೊಳಗೆ ಪೂಜಿಸುವ ಪದ್ಧತಿ ಇಲ್ಲಿಯ ವೈಶಿಷ್ಟ್ಯ. ಹಿಂದೆ ದೇವಸ್ಥಾನದ ವಿಗ್ರಹ ಬಿಟ್ಟರೆ ಬೇರೆ ಯಾವ ಕೆಲಸವೂ ಶಿಲ್ಪಿಗಳಿಗೆ  ಸಿಗುತ್ತಿರಲಿಲ್ಲ.
 
ಹಾಗಾಗಿ ಶಿಲ್ಪಿಗಳಿಗೂ ಮಾನ್ಯತೆ ಸಿಗಲಿ ಎಂಬ ಉದ್ದೇಶದಿಂದ ಗರ್ಭಗುಡಿಯಲ್ಲಿ ಪೂಜಿಸುವ ದೇವರ ವಿಗ್ರಹಗಳಿಗೆ ಕಣ್ಣು ತೆರೆಸುವ ಒಂದು ಪದ್ಧತಿ ಇದೆ. ಪ್ರತಿಷ್ಠಾಪನೆಯ ದಿನ ಅಲ್ಲಿ ಹೋಗಿ ಅವರು ಈ ಕಾರ್ಯವನ್ನು ಮಾಡುತ್ತಾರೆ. ಆದರೆ ಈಗ ಮನೆಗೆ, ಗಾರ್ಡನ್‌ಗೆ, ಹೋಟೆಲ್‌ಗೆ, ಎಲ್ಲಾ ಕಡೆಗೂ ಶಿಲ್ಪಗಳೂ ಸೌಂದರ್ಯದ ಪ್ರತೀಕವಾಗಿ ರಾರಾಜಿಸುತ್ತಿದೆ. ಆದ್ದರಿಂದ ಸ್ವಲ್ಪ ಮಟ್ಟಿಗೆ ಅವರ ಸ್ಥಿತಿ ಸುಧಾರಿಸಿದೆ” ಎಂದು ಹೇಳುತ್ತಾರೆ ಭಟ್ಟರು.

ನಮ್ಮ ಕಲೆಗೆ ನಾವು ಬೆಲೆ ಕೊಡಬೇಕು. ನಮ್ಮಲ್ಲಿ ಸಾಕಷ್ಟು ಮಂದಿ ಶಿಲ್ಪಿಗಳು ಇದ್ದಾರೆ. ಅವರಲ್ಲಿರುವ ಕಲೆಯನ್ನು ಜಗತ್ತಿಗೆ ತೋರಿಸಲು ಅವಕಾಶ ಕೊಡಿ ಎಂಬುದು ಅವರ ಕೋರಿಕೆ.

ಉಡುಪಿ ಸಮೀಪದ ಸೂರಾಲಿನಿಂದ ಬಂದ ಭಟ್ಟರ ಕನಸು ಚಿಗುರೊಡೆದಿದ್ದು ಬೆಂಗಳೂರಿನಲ್ಲಿ. ಇಷ್ಟೆಲ್ಲಾ ಸಾಧಿಸಿದ್ದರೂ ಮನದಲ್ಲಿ ಏನೋ ತುಡಿತ! ತನ್ನೂರಲ್ಲೂ ಕಲೆಯ ಅಚ್ಚನ್ನು ಮೂಡಿಸಬೇಕು ಎಂಬ ತವಕ. ಹಾಗಾಗಿ ತನ್ನ ಅಜ್ಜನ ಮನೆಯಲ್ಲಿ ಒಂದು ಮ್ಯೂಸಿಯಂ ಮಾಡಬೇಕೆಂಬ ಆಸೆ. ಇಳಿ ವಯಸ್ಸಿನಲ್ಲಿಯೂ ಬತ್ತದ ಉತ್ಸಾಹದ ಭಟ್ಟರು ಈಗ ಅಶೋಕನ ಶಾಸನಗಳ ಅಧ್ಯಯನದಲ್ಲಿ ತೊಡಗಿದ್ದಾರೆ.  ಮಾಹಿತಿಗೆ ದೂರವಾಣಿ ಸಂಖ್ಯೆ: 9900581394
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT