ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಪಿಚ್‌ನಲ್ಲಿ ಉಪ್ಪಿದೆಯೇ...?

Last Updated 4 ನವೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ: ಈ ಪಿಚ್‌ನಲ್ಲಿ ಉಪ್ಪಿದೆಯೇ...? ಈ ಪ್ರಶ್ನೆ ಕೇಳಿ ಯಾವುದೋ ಜಾಹೀರಾತಿನ ಪ್ರಚಾರದ ಸಾಲು ಎಡವಟ್ಟಾಗಿ ಹೀಗೆ ಆಗಿದೆ ಎಂದುಕೊಳ್ಳಬೇಡಿ. ಇದು ಇಲ್ಲಿನ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದ ಸುತ್ತ ಹೊಸದಾಗಿ ಹುಟ್ಟಿಕೊಂಡಿರುವ ವಿವಾದ.

ಕಳಪೆ ಗುಣಮಟ್ಟದ ಹಾಗೂ ಅಪಾಯಕಾರಿ ಅಂಗಳ ಎನ್ನುವ ಹಣೆಪಟ್ಟಿಯೊಂದಿಗೆ ಹನ್ನೆರಡು ತಿಂಗಳುಗಳ ಕಾಲ ಟೆಸ್ಟ್ ಪಂದ್ಯ ಆಯೋಜಿಸಲಾಗದೇ ಚಡಪಡಿಸಿದ್ದ ದೆಹಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಈಗ ನಿರಮ್ಮಳವಾಗಿದೆ ಎನ್ನುವಾಗಲೇ ಪ್ರಶ್ನೆಯೊಂದು ಕಾಡತೊಡಗಿದೆ.

ವೆಸ್ಟ್ ಇಂಡೀಸ್ ಹಾಗೂ ಭಾರತ ತಂಡಗಳ ನಡುವೆ ಭಾನುವಾರ ಆರಂಭವಾಗಲಿರುವ ಪ್ರಥಮ ಟೆಸ್ಟ್‌ಗಾಗಿ ಸಜ್ಜುಗೊಳಿಸಿರುವ ಪಿಚ್ `ಉಪ್ಪು ಹಾಗೂ ಹುಳಿ~ ಎಂದು ಕ್ರಿಕೆಟ್ ಪಂಡಿತರು ವ್ಯಂಗ್ಯವಾಗಿ ನಗುತ್ತಿದ್ದಾರೆ. ಲವಣಯುಕ್ತವಾದ ಮಣ್ಣನ್ನು ಬೆರಸಿ ಅಂಗಳಕ್ಕೆ ಲೇಪ ಮಾಡಲಾಗಿದೆ ಎನ್ನುವುದು ಈಗ ಕೇಳಿಬಂದಿರುವ ಹೊಸ ದೂರು.

ಬೇಗ ಬಿರುಕುಬಿಟ್ಟು ಈ ಅಂಗಳವು ಅಪಾಯಕಾರಿ ಸ್ವರೂಪವನ್ನು ಪಡೆಯಬಾರದೆಂದು ಲವಣವನ್ನು ಬೆರಸಿದ ತೆಳು ಮಣ್ಣಿನ ಹೊದಿಕೆ ಹೊದಿಸಲಾಗಿದೆ. ಉಪ್ಪಿನಂಶ ಇದ್ದರೆ ಮಣ್ಣು ಗಟ್ಟಿಯಾಗಿರುತ್ತದೆ ಹಾಗೂ ಬಿರುಕು ಬಿಟ್ಟರೂ ಬೇಗ ಹುಡಿಯಾಗುವುದಿಲ್ಲ ಎನ್ನುವುದು ನಿರೀಕ್ಷೆ. ಆದ್ದರಿಂದಲೇ ಕೋಟ್ಲಾ ಪಿಚ್‌ನಲ್ಲಿ ಉಪ್ಪು ಕರಗಿ ಬೆರೆತು ಹೋಗಿದೆ. ಆದರೆ ಇದರ ಪರಿಣಾಮ ಏನೆನ್ನುವುದು ಟೆಸ್ಟ್ ಪಂದ್ಯ ನಡೆದಾಗಲೇ ಸ್ಪಷ್ಟವಾಗಲಿದೆ.

`ಯಾವುದೇ ರೀತಿಯಲ್ಲಿಯೂ ಪಿಚ್ ಕುರಿತು ದೂರು ಇರುವುದಿಲ್ಲ. ಟೆಸ್ಟ್ ನಡೆಯುವ ಐದೂ ದಿನಗಳವರೆಗೆ ಸ್ವರೂಪ ಬದಲಾಗುವುದು ಬಹಳ ನಿಧಾನ~ ಎಂದು ಡಿಡಿಸಿಎ ಉಪಾಧ್ಯಕ್ಷ ಚೇತನ್ ಚೌಹಾಣ್ ಭರವಸೆ ನೀಡಿದ್ದಾರೆ.

`ಈಗಾಗಲೇ ಇಲ್ಲಿ ಎರಡು ಏಕದಿನ ಪಂದ್ಯಗಳನ್ನು ಆಯೋಜಿಸಲಾಗಿದೆ. ಹನ್ನೆರಡು ತಿಂಗಳ ನಿಷೇಧದ ನಂತರ ಟೆಸ್ಟ್ ನಡೆಯುತ್ತಿರುವುದು ಇದೇ ಮೊದಲು. ಆದರೆ ಈ ಬಾರಿ ಆಟಗಾರರಾಗಲಿ ಹಾಗೂ ಪಂದ್ಯದ ಅಧಿಕಾರಿಗಳಾಗಲಿ ಆಕ್ಷೇಪದ ಧ್ವನಿ ಎತ್ತುವುದಿಲ್ಲ ಎನ್ನುವ ವಿಶ್ವಾಸ ನಮಗಿದೆ~ ಎಂದರು ಚೌಹಾಣ್.

ಶ್ರೀಲಂಕಾ ತಂಡವು ಭಾರತ ಪ್ರವಾಸ ಕೈಗೊಂಡಿದ್ದ ಕಾಲದಲ್ಲಿ ಇಲ್ಲಿನ ಏಕದಿನ ಪಂದ್ಯವನ್ನು ರದ್ದು ಮಾಡಲಾಗಿತ್ತು. ಆಡುವುದಕ್ಕೆ ಯೋಗ್ಯವಾಗಿಲ್ಲ ಎಂದು ಆಗ ತೀರ್ಮಾನಿಸಲಾಗಿತ್ತು. ಆನಂತರ ಅಂಗಳಕ್ಕೆ ಹೊಸ ಸ್ವರೂಪ ನೀಡುವವರೆಗೆ ಕೋಟ್ಲಾ ಕ್ರೀಡಾಂಗಣಕ್ಕೆ ನಿಷೇಧ ಹೇರಲಾಗಿತ್ತು. ಆದರೆ ಈಗ ಪಿಚ್ ಹೆಚ್ಚು ಉತ್ತಮವಾಗಿದೆ ಎನ್ನುವುದು ಡಿಡಿಸಿಎ ಅಭಿಪ್ರಾಯ. ಅದಕ್ಕೆ ಟೆಸ್ಟ್ ಪಂದ್ಯ ನಡೆದಾಗಲೇ ಉತ್ತರ ಸಿಗಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT