ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಬಾರಿ ನಿರ್ಣಾಯಕ ಹೋರಾಟ: ರಾಮ್‌ದೇವ್

Last Updated 18 ಜುಲೈ 2012, 20:00 IST
ಅಕ್ಷರ ಗಾತ್ರ

ಬೆಂಗಳೂರು: `ಕೇಂದ್ರ ಸರ್ಕಾರ ಎಷ್ಟೇ ವಿರೋಧ ಮಾಡಿದರೂ ನಮ್ಮ ಹೋರಾಟವನ್ನು ಬಗ್ಗು ಬಡಿಯಲು ಸಾಧ್ಯವಿಲ್ಲ. ಅದಕ್ಕಾಗಿ ಎಲ್ಲ ಪೂರ್ವ ತಯಾರಿ ಮಾಡಿಕೊಂಡೇ ಈ ಬಾರಿ ನಿರ್ಣಾಯಕ ಹೋರಾಟಕ್ಕಿಳಿಯುತ್ತಿದ್ದೇವೆ. ನನ್ನ ಕೊನೆಯುಸಿರುವವರೆಗೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಜತೆ ಕೇಂದ್ರದ ವಿರುದ್ಧ ಹೋರಾಟ ಮುಂದುವರಿಸಲಾಗುವುದು~ ಎಂದು ಯೋಗ ಗುರು ಬಾಬಾ ರಾಮ್‌ದೇವ್ ಬುಧವಾರ  ಹೇಳಿದರು.

ಪ್ರಬಲ ಲೋಕಪಾಲ ಮಸೂದೆ ಜಾರಿ, ಕಪ್ಪು ಹಣ ವಾಪಸು ಹಾಗೂ ಭ್ರಷ್ಟಾಚಾರ ನಿರ್ಮೂಲನೆಗೆ ಒತ್ತಾಯಿಸಿ ಆಗಸ್ಟ್ 9ರಿಂದ ನವದೆಹಲಿಯಲ್ಲಿ ಮತ್ತೆ ಹಮ್ಮಿಕೊಂಡಿರುವ ಸತ್ಯಾಗ್ರಹದ ಪೂರ್ವಭಾವಿಯಾಗಿ ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳ ಹಾಗೂ ಗೋವಾ ಕಾರ್ಯಕರ್ತರ ಸಭೆಗೂ ಮುನ್ನ ವಿ.ವಿ.ಪುರಂನ ಭಾರತ್ ಸ್ವಾಭಿಮಾನ್ ಕಾರ್ಯಾಲಯದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

`ಭ್ರಷ್ಟಾಚಾರ, ಸಾಮ್ರಾಜ್ಯಶಾಹಿ ಆಡಳಿತದ ಮೂಲಕ ಕೇಂದ್ರವು ಪಾಪದ ಕೆಲಸಗಳನ್ನು ಮಾಡುತ್ತಿದೆ. ಆ ಪಾಪದ ಕೊಳೆ ತೊಳೆಯಲು ಜನರ ಸಿಟ್ಟಿನ ಪ್ರತಿನಿಧಿಯಾಗಿ ನಾನು ಹೋರಾಟ ನಡೆಸುತ್ತಿದ್ದೇನೆ. ನನ್ನ ಹೋರಾಟ ಅಕ್ರಮ, ಅಸಂವಿಧಾನಿಕ ಅಥವಾ ಕಾನೂನುಬಾಹಿರವಲ್ಲ. ಅನ್ಯಾಯದ ವಿರುದ್ಧ ಪ್ರತಿಭಟಿಸಿ ದೇಶವನ್ನು ರಕ್ಷಿಸುವುದು ಈ ದೇಶದ ಪ್ರತಿಯೊಬ್ಬ ನಾಗರಿಕನ ಹಕ್ಕು. ಅದನ್ನು ದಮನ ಮಾಡಲು ಯಾರಿಂದಲೂ ಸಾಧ್ಯವಿಲ್ಲ~ ಎಂದು ರಾಮ್‌ದೇವ್ ಕೇಂದ್ರದ ವಿರುದ್ಧ ಗುಡುಗಿದರು.

`ದೇಶದ ನೆಲ, ಜಲ, ಅರಣ್ಯ ಸೇರಿದಂತೆ ನೈಸರ್ಗಿಕ ಸಂಪನ್ಮೂಲಗಳನ್ನು ಮಾರಿ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿರುವ ಕೇಂದ್ರವು ನಮ್ಮ ಭಾರತವನ್ನೇ ಮಾರಾಟ ಮಾಡಲು ಹಿಂಜರಿಯುವ ಸ್ಥಿತಿಯಲ್ಲಿಲ್ಲ. ಈ ಹಿಂದೆ ನೂರು ಕೋಟಿ ಹಗರಣಗಳೇ ದೊಡ್ಡದೆನಿಸಿದರೆ, ಈಗಿನ ಕೇಂದ್ರ ಸರ್ಕಾರಕ್ಕೆ ಸಾವಿರ, ಲಕ್ಷ, ಕೋಟಿಗಟ್ಟಲೆ ಹಗರಣಗಳೇ ಲೆಕ್ಕಕಿಲ್ಲ~ ಎಂದು ಜರೆದರು.

`ಪ್ರಧಾನಮಂತ್ರಿಗಳ ಕಚೇರಿ ವ್ಯಾಪ್ತಿಯ ಇಲಾಖೆಗಳಲ್ಲೇ ಕೋಟಿ ಕೋಟಿ ಹಗರಣಗಳು ನಡೆದರೂ ಅದನ್ನು ಯಾರೂ ನಿಯಂತ್ರಿಸುವ ಸ್ಥಿತಿಯಲ್ಲಿಲ್ಲ. ಸರ್ಕಾರ ಮನಸ್ಸು ಮಾಡಿದರೆ ಹಗರಣಗಳಲ್ಲಿ ಲೂಟಿ ಮಾಡಿದ ಹಣವನ್ನು ತಪ್ಪಿತಸ್ಥರಿಂದ ಒಂದೇ ದಿನದಲ್ಲಿ ವಸೂಲಿ ಮಾಡಬಹುದು. ಆದರೆ, ಆ ಕೆಲಸಕ್ಕೆ ಯಾರೂ ಕೈಹಾಕುತ್ತಿಲ್ಲ. ಸಿಬಿಐ, ಸಿವಿಸಿ ಮತ್ತಿತರ ತನಿಖಾ ಸಂಸ್ಥೆಗಳು ಕೇಂದ್ರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ. ಸರ್ಕಾರ ಇರುವುದು ಲೂಟಿ ಮಾಡಲು ಅಲ್ಲ. ದೇಶದ ಸಂಪನ್ಮೂಲಗಳನ್ನು ರಕ್ಷಿಸಿ ದೇಶವನ್ನು ಕಾಪಾಡುವುದು ನಮ್ಮ ಹೋರಾಟದ ಧ್ಯೇಯ~ ಎಂದರು.

ರಾಹುಲ್ `ಶಾಶ್ವತ~ವಾಗಿ ಪ್ರಧಾನಿಯಾಗಿರಲಿ: ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್‌ಗಾಂಧಿಯನ್ನು ಕಾಂಗ್ರೆಸ್ ಭವಿಷ್ಯದ ಪ್ರಧಾನಿಯನ್ನಾಗಿ ಬಿಂಬಿಸಲು ಹೊರಟಿರುವ ಬಗ್ಗೆ ಕೇಳಿದ ಪ್ರಶ್ನೆಗೆ, `ವಿದೇಶದಲ್ಲಿನ ಕಪ್ಪು ಹಣವನ್ನು ವಾಪಸು ತಂದು ದೇಶದಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಸಾಧ್ಯವಾಗುವುದಾದಲ್ಲಿ ರಾಹುಲ್ `ಶಾಶ್ವತ~ವಾಗಿ ದೇಶದ ಪ್ರಧಾನಿಯಾಗಿರಲಿ. ಅದಕ್ಕೆ ನನ್ನ ಅಭ್ಯಂತರವಿಲ್ಲ~ ಎಂದು ಪ್ರತಿಕ್ರಿಯಿಸಿದರು.

`ಭ್ರಷ್ಟಾಚಾರ ವ್ಯವಸ್ಥೆಯನ್ನು ಕೊನೆಗಾಣಿಸಿ, ಕಪ್ಪು ಹಣವನ್ನು ವಾಪಸು ತರುವಂತಹ ವ್ಯಕ್ತಿ ಪ್ರಧಾನಿಯಾಗಬೇಕು ಎಂದು ದೇಶದ ಜನತೆ ಬಯಸುತ್ತಿದ್ದಾರೆ. ಆ ಕೆಲಸ ಮಾಡಲು ರಾಹುಲ್‌ಗಾಂಧಿಯಿಂದ ಸಾಧ್ಯವಾಗುವುದಾದರೆ `ಶಾಶ್ವತ~ ಪ್ರಧಾನಿಯಾಗಿರಲಿ~ ಎಂದರು.

`ಕೇಂದ್ರದಲ್ಲಿ ಉತ್ತಮ ಆಡಳಿತ ನೀಡಿ ದೇಶವನ್ನು ಮುನ್ನಡೆಸುವ ಯಾವುದೇ ಪಕ್ಷದ ಬಿಸಿರಕ್ತದ ಯುವ ನಾಯಕರೊಬ್ಬರು ಸಾರಥ್ಯ ವಹಿಸಲಿ. ಆದರೆ, ಅಂತಹ ಸರ್ಕಾರ ಜನರ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದಲ್ಲಿ ಜನತೆ ಅಂಥವರನ್ನು ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಬಹಿಷ್ಕರಿಸಲಿದ್ದಾರೆ~ ಎಂದು ಎಚ್ಚರಿಸಿದರು.

2014ರ ಲೋಕಸಭೆಯ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟು ನೀವು `ದಿಲ್ಲಿ ಹೋರಾಟ~ ನಡೆಸುತ್ತಿದ್ದೀರಾ ಎಂಬ ಪ್ರಶ್ನೆಗೆ, `ಕಪ್ಪು ಹಣ ವಾಪಸು ತರುವುದು, ಭ್ರಷ್ಟಾಚಾರ ನಿರ್ಮೂಲನೆ ಮಾಡುವುದು ಹಾಗೂ ದೇಶವನ್ನು ಉಳಿಸುವುದು ನಮ್ಮ ಹೋರಾಟದ ಮುಖ್ಯ ಗುರಿ. ಯಾವುದೇ ಚುನಾವಣೆಯ ವಾಸನೆ ಕೂಡ ನನ್ನ ಬಳಿ ಸುಳಿಯದು~ ಎಂದು ಪ್ರತಿಕ್ರಿಯಿಸಿದರು.


ಪಾಕ್ ಜತೆ ಕ್ರಿಕೆಟ್-  `ರಾಜಕೀಯ, ಸಾಮಾಜಿಕ ಅಪರಾಧ~
ಪಾಕಿಸ್ತಾನದ ಜತೆ ಮತ್ತೆ ಸರಣಿ ಕ್ರಿಕೆಟ್ ಪಂದ್ಯಗಳನ್ನಾಡಲು ನಿರ್ಧರಿಸಿರುವ ಭಾರತೀಯ ಕ್ರಿಕೆಟ್ ಮಂಡಳಿ ನಿರ್ಧಾರದ ಬಗ್ಗೆ ಕೇಳಿದ ಪ್ರಶ್ನೆಗೆ, `ನೆರೆಯ ಪಾಕಿಸ್ತಾನ ನಮ್ಮ ಕಡುವೈರಿ ರಾಷ್ಟ್ರ. ಆ ರಾಷ್ಟ್ರದ ಜತೆ ಕ್ರಿಕೆಟ್ ಮುಂದುವರಿಸುವುದು ರಾಜಕೀಯ ಹಾಗೂ ಸಾಮಾಜಿಕ ಅಪರಾಧ~ ಎಂದು ಪ್ರತಿಕ್ರಿಯಿಸಿದರು.

`ಪಾಕಿಸ್ತಾನದ ಜತೆ ಕ್ರಿಕೆಟ್ ಪಂದ್ಯಗಳನ್ನಾಡುವುದು ಒಂದು ರೀತಿಯಲ್ಲಿ ಜನರನ್ನು ಮೋಸ ಮಾಡಿದಂತೆ. ಮೊದಲು ಇದನ್ನು ನಿಲ್ಲಿಸಿ, ಕಪ್ಪು ಹಣ ವಾಪಸು ತಂದು ದೇಶವನ್ನು ಬಲಪಡಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಲಿ~ ಎಂದು ಒತ್ತಾಯಿಸಿದರು.

`ನೆರೆಯ ಪಾಕಿಸ್ತಾನ ಹಾಗೂ ಚೀನಾ ರಾಷ್ಟ್ರಗಳನ್ನು ನಾವು ಎಂದಿಗೂ ನಂಬುವಂತೆಯೇ ಇಲ್ಲ. ಅವು ಮುಂದೆ ಹೇಳುವುದೊಂದು, ಹಿಂದೆ ಮಾಡುವುದು ಮತ್ತೊಂದು. ನಾನು ಕ್ರಿಕೆಟ್ ವಿರೋಧಿಯಲ್ಲ. ಆದರೆ, ನೆರೆ ರಾಷ್ಟ್ರಗಳ ಕುತಂತ್ರವನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT