ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗ ಹಿಂತೆಗೆಸುವ ಕಸರತ್ತು

ಬೆಳಗಾವಿ: ವಿಧಾನಸಭೆ ಚುನಾವಣೆ
Last Updated 19 ಏಪ್ರಿಲ್ 2013, 9:13 IST
ಅಕ್ಷರ ಗಾತ್ರ

ಬೆಳಗಾವಿ: ನಾಮಪತ್ರ ಸಲ್ಲಿಸುವ ಭರಾಟೆ ಮುಗಿಯು ತ್ತಿದ್ದಂತೆ, ಬಂಡಾಯ ಹಾಗೂ ಸ್ವತಂತ್ರ ಅಭ್ಯರ್ಥಿ ಗಳನ್ನು ಕಣದಿಂದ ಹಿಂದಕ್ಕೆ ಸರಿಸುವ ಕಸರತ್ತು ಶುರು ವಾಗಿದೆ. ವಿವಿಧ ಪಕ್ಷಗಳ ಮುಖಂಡರು ಬಂಡಾಯ ಅಭ್ಯರ್ಥಿಗಳ ಮನವೊಲಿಸುವಲ್ಲಿ ತೊಡಗಿದ್ದಾರೆ.

ನಾಮಪತ್ರಗಳ ಪರಿಶೀಲನೆ ಗುರುವಾರ ಮುಗಿದ ನಂತರ ಕಣದಲ್ಲಿರುವವರು ವಿವಿಧ ಬೇಡಿಕೆಗಳನ್ನು ಅಧಿಕೃತ ಅಭ್ಯರ್ಥಿಗಳ ಎದುರು ಮಂಡಿಸುತ್ತಿದ್ದಾರೆ. ರಾಜಕೀಯ ಪಕ್ಷಗಳ ಅಧಿಕೃತ ಹಾಗೂ ಗೆಲ್ಲುವ ವಿಶ್ವಾಸ ಹೊಂದಿರುವ ಕೆಲವು ಅಭ್ಯರ್ಥಿಗಳು ಬಂಡಾಯದ ಕಹಳೆ ಮೊಳಗಿಸಿದವರಿಗೆ ಮತ್ತು ಪಕ್ಷೇತರರಿಗೆ ಆಮಿಷವೊಡ್ಡುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಜಿಲ್ಲೆಯಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ.

ನಾಮಪತ್ರಗಳ ಪರಿಶೀಲನೆಗೂ ಮುನ್ನವೇ ಬುಧವಾರ ಸಂಜೆಯಿಂದಲೇ ಬಂಡಾಯ ಅಭ್ಯರ್ಥಿಗಳ ಮನವೊಲಿಕೆಗೆ ಕಸರತ್ತು ನಡೆದಿದೆ. ಮುಖಂಡರ ಮಾತಿಗೆ ಕಿಮ್ಮತ್ತು ನೀಡದ ಬಂಡಾಯ ಹಾಗೂ ಸ್ವತಂತ್ರ ಅಭ್ಯರ್ಥಿಗಳ ನಾಮಪತ್ರಗಳ ಬಗ್ಗೆ ಗುರುವಾರ ನಡೆದ ಪರಿಶೀಲನೆ ಸಂದರ್ಭದಲ್ಲಿ ತಕರಾರು ಸಲ್ಲಿಸಿದ ಪ್ರಸಂಗ ನಡೆಯಿತು. ಆದರೆ, ಎಲ್ಲ ದಾಖಲೆಗಳು ಸರಿಯಾಗಿಯೇ ಇದ್ದಿದ್ದರಿಂದ ಇಂಥ ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾದವು.

ಅಧಿಕೃತ ಅಭ್ಯರ್ಥಿಗಳು ಸ್ವತಂತ್ರ ಹಾಗೂ ಬಂಡಾಯದ ಕಹಳೆ ಮೊಳಗಿಸಿದವರನ್ನು ಕಣದಿಂದ ಹಿಂದಕ್ಕೆ ಸರಿಸದೇ ತಮಗೆ ಬೇರೆ ಮಾರ್ಗವಿಲ್ಲ ಎಂದು ನಾಯಕರ ಎದುರು ಹೇಳಿಕೊಳ್ಳುತ್ತಿದ್ದಾರೆ. ಜಿಲ್ಲೆಯ ಕೆಲವು ಕ್ಷೇತ್ರಗಳಲ್ಲಿ `ಪ್ರಬಲ' ಅಭ್ಯರ್ಥಿಗಳು ತಮ್ಮ ಗೆಲುವಿಗೆ ಅಡ್ಡಿಪಡಿಸಬಹುದು ಎಂಬ ಲೆಕ್ಕಾಚಾರ ದಿಂದ ಈಗಾಗಲೇ ಕೆಲವರನ್ನು ಕಣದಿಂದ ಹಿಂದಕ್ಕೆ ಸರಿಸಲು `ಕುದುರೆ ವ್ಯಾಪಾರ'ಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಜಿಲ್ಲೆಯಲ್ಲಿ ವ್ಯಾಪಕ ಚರ್ಚೆ ನಡೆದಿದೆ.

ಬಂಡಾಯ ಅಭ್ಯರ್ಥಿಗಳು ಕಣದಲ್ಲಿ ಇಳಿಯುವ ಮೂಲಕ ರಾಜಕೀಯ ಪಕ್ಷಗಳ ಅಧಿಕೃತ ಅಭ್ಯರ್ಥಿ ಗಳಿಗೆ ಸೆಡ್ಡು ಹೊಡೆದಿದ್ದಾರೆ. ಮಹಾರಾಷ್ಟ್ರ ಏಕೀಕರಣ ಸಮಿತಿ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯದ ಬಿಸಿ ತಾರಕಕ್ಕೇರಿದೆ. ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿರುವ ಕೆಜೆಪಿಯಲ್ಲೂ ಬಂಡಾಯದ ಕಹಳೆ ಮೊಳಗಿದೆ.

ಕೆಲವು ಪಕ್ಷಗಳ ಅಧಿಕೃತ ಅಭ್ಯರ್ಥಿಗಳು ತಮ್ಮ ಎದುರಾಳಿಗಳನ್ನು ಮಣಿಸಲು ಆ ಪಕ್ಷಗಳಲ್ಲಿ ಬಂಡಾಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಅಭ್ಯರ್ಥಿಗಳು ಯಾವುದೇ ಕಾರಣಕ್ಕೂ ಕಣದಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ಘೋಷಿಸಿದ್ದಾರೆ. ಕೆಲವು ಬಂಡಾಯ ಅಭ್ಯರ್ಥಿಗಳು ಕಣದಲ್ಲಿರುವ ಇತರೆ ಪಕ್ಷಗಳ ಅಧಿಕೃತ ಅಭ್ಯರ್ಥಿಗಳಿಂದ `ಪ್ರಸಾದ' ಸಹ ಪಡೆದಿದ್ದಾರೆ ಎಂಬ ಮಾತುಗಳು ಕೇಳಿಬರಲಾರಂಭಿಸಿವೆ.

ಚುನಾವಣೆಯ ಪ್ರಚಾರ ಮಾಡುವುದಕ್ಕಿಂತ ಬಂಡಾಯ ಎದ್ದಿರುವ ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಸುವುದು ದೊಡ್ಡ ತಲೆನೋವಾಗಿದೆ. ಬಂಡಾಯ ಅಭ್ಯರ್ಥಿಗಳ `ರಿಮೋಟ್' ಎದುರಾಳಿಗಳ ಕೈಯಲ್ಲಿರುವುದರಿಂದ ಅಧಿಕೃತ ಅಭ್ಯರ್ಥಿಗಳು ನಿದ್ರೆಗೆಟ್ಟಿದ್ದಾರೆ.

ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಎಂಇಎಸ್‌ನಲ್ಲಿ ಬಂಡಾಯ ತಾರಕಕ್ಕೇರಿದೆ. ಹಾಲಿ ಶಾಸಕ, ಬಿಜೆಪಿ ಅಭ್ಯರ್ಥಿ ಅಭಯ ಪಾಟೀಲ ಅವರನ್ನು ಚುನಾವಣೆ ಯಲ್ಲಿ ಮಣಿಸಬೇಕು ಎಂದು ಎಂಇಎಸ್‌ನ ಒಂದು ಗುಂಪಿನ ನಾಯಕರು `ತಂತ್ರಗಾರಿಕೆ'ಯಲ್ಲಿ ತೊಡಗಿದ್ದರೆ, ಸಮಿತಿಯ ಇನ್ನೊಂದು ಗುಂಪಿನವರು ಬಂಡಾಯದ ಕಹಳೆ ಊದಿದ್ದಾರೆ. ಈ ಪರಿಸ್ಥಿತಿ ಎಂಇಎಸ್ ನಾಯಕರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಮಾಜಿ ಮೇಯರ್ ಸಂಭಾಜಿ ಪಾಟೀಲ ದಕ್ಷಿಣ ಕ್ಷೇತ್ರದ ಎಂಇಎಸ್ ಬೆಂಬಲಿತ ಅಧಿಕೃತ ಅಭ್ಯರ್ಥಿ ಎಂದು ಘೋಷಣೆಯಾಗಿದೆ. ನೇತಾಜಿ ಬಾಳು ಮನಗೂತ್ಕರ್ ಬಂಡಾಯ ಅಭ್ಯರ್ಥಿಯಾಗಿದ್ದರೆ, ರತನ್ ಗೋಪಾಲ್ ಮಾಸೇಕರ ಸಹ ನಾಮಪತ್ರ ಸಲ್ಲಿಸಿದ್ದಾರೆ.
ಕೆಜೆಪಿಯಲ್ಲೂ ಬಂಡಾಯದ ಬಾವುಟ ಹಾರಿದ್ದು, ಉತ್ತರ ಕ್ಷೇತ್ರದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಎಸ್.ಸಿ. ಮಾಳಗಿ ಅವರಿಗೆ ಬಂಡಾಯ ಅಭ್ಯರ್ಥಿ ರವಿ ಮಾಳಗಿ ಸೆಡ್ಡು ಹೊಡೆದಿದ್ದಾರೆ.

ಬೆಳಗಾವಿ ಗ್ರಾಮೀಣ ಹಾಗೂ ಖಾನಾಪುರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಬಂಡಾಯವೆದ್ದಿದ್ದಾರೆ. ಖಾನಾಪುರ ಕ್ಷೇತ್ರದಲ್ಲಿ ಡಾ. ಅಂಜಲಿ ನಿಂಬಾಳ್ಕರ್ ಹಾಗೂ ಗ್ರಾಮೀಣ ಕ್ಷೇತ್ರದಲ್ಲಿ ಆನಂದಸ್ವಾಮಿ ಗಡ್ಡಯ್ಯ ಗಡ್ಡದೇವರಮಠ ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ.

ಈಗಾಗಲೇ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿಗಳು `ಶಕ್ತಿ' ಪ್ರದರ್ಶನ ಮಾಡಿದ್ದಾರೆ. ಇದರಿಂದ ಅಧಿಕೃತ ಅಭ್ಯರ್ಥಿ ಗಳು ದಿಗಿಲುಗೊಂಡಿದ್ದು, ಬಂಡಾಯದ ಬಾವುಟ ಹಾರಿಸಿದವರನ್ನು ಕಣದಿಂದ ಹಿಂದೆ ಸರಿಸಲು ತೆರಮರೆಯಲ್ಲಿ ಕಸರತ್ತು ನಡೆಸಿದ್ದಾರೆ. ಇದೆಲ್ಲದಕ್ಕೂ ಏ. 20ರ ನಂತರ ಉತ್ತರ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT