ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ಕಿದ ತುಂಗಭದ್ರಾ; ಎಲ್ಲೆಲ್ಲೂ ಜಲರಾಶಿ

ಹಲವು ಗ್ರಾಮಗಳ ಸಂಪರ್ಕ ಕಡಿತ, ಮುಳುಗಡೆ ಭೀತಿ, ಗದ್ದೆಗಳು ಜಲಾವೃತ
Last Updated 3 ಆಗಸ್ಟ್ 2013, 10:00 IST
ಅಕ್ಷರ ಗಾತ್ರ

ಹರಿಹರ: ತುಂಗಭದ್ರಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ನದಿಪಾತ್ರದ ಅನೇಕ ಗ್ರಾಮಗಳ ಹೊಲ, ಗದ್ದೆ, ತೋಟಗಳು ಜಲಾವೃತಗೊಂಡಿವೆ. ಎರಡು ಗ್ರಾಮಗಳ ಸೇತುವೆ ಜಲಾವೃತ್ತಗೊಂಡು ಸಂಪರ್ಕ ಕಡಿತಗೊಂಡಿವೆ.

ತಾಲ್ಲೂಕಿನ ಹಲಸಬಾಳು ಗ್ರಾಮದ ಕ್ಯಾಂಪ್‌ನಲ್ಲಿ ಸುಮಾರು 40 ಮನೆಗಳು ಮುಳುಗಡೆ ಭೀತಿ ಎದುರಿಸುತ್ತಿವೆ. ಮಹಾಜೇನಹಳ್ಳಿ ಗ್ರಾಮದ ಸರ್ವೇ ನಂ. 75, 79, 80ರಲ್ಲಿ ಸುಮಾರು 75 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದ ಕಬ್ಬು, ಅಡಿಕೆ, ಕೋಕಾ, ಮೆಕ್ಕೆಜೋಳ ಬೆಳೆಗಳು ಜಲಾವೃತಗೊಂಡಿವೆ. ಗುತ್ತೂರು ಗ್ರಾಮ ವ್ಯಾಪ್ತಿಯಲ್ಲಿ ಸುಮಾರು 10 ಎಕರೆ ಮೆಕ್ಕೆಜೋಳದ ಹೊಲದಲ್ಲಿ ಹಾಗೂ ಹರಗನಹಳ್ಳಿ, ಹನಗವಾಡಿ ಗ್ರಾಮ ವ್ಯಾಪ್ತಿಯ ಸುಮಾರು 25 ಎಕರೆ ಮೆಕ್ಕೆಜೋಳ, ಕಬ್ಬಿನ ಹೊಲದಲ್ಲಿ ನೀರು ನುಗ್ಗಿದೆ.

ದೀಟೂರು ಗ್ರಾಮದ ನದಿಪಾತ್ರದ ಮನೆಗೆ ನೀರು ನುಗ್ಗಿದೆ. ಇಂದಿರಾನಗರದ ಮಣ್ಣಿನಗೋಡೆಯ ಹೆಂಚಿನ ಮನೆಯೊಂದು ಕುಸಿದು ಬಿದ್ದಿದೆ. ಹಲಸಬಾಳು ಗ್ರಾಮದ ಕ್ಯಾಂಪ್‌ಗೆ ನೆರೆ ಹಾವಳಿಯಿಂದ ತೊಂದರೆ ಆಗಬಾರದು ಎಂಬ ಕಾರಣದಿಂದ ನೀರಾವರಿ ಇಲಾಖೆ ನದಿ ದಡದಲ್ಲಿ ನಾಲ್ಕು ಅಡಿ ಎತ್ತರದ ತಡೆಗೋಡೆ ನಿರ್ಮಿಸಲಾಗಿತ್ತು. ಈ ತಡೆಗೋಡೆಗಳನ್ನು ಮೀರಿ ನೀರು ಹರಿಯುತ್ತಿದ್ದು, ಕ್ಯಾಂಪ್‌ನಲ್ಲಿರುವ 40 ಮನೆಗಳು ಮುಳುಗಡೆ ಭೀತಿ ಎದುರುಸುತ್ತಿವೆ.

ಸ್ಥಳಕ್ಕೆ ಭೇಟಿ ನೀಡಿದ್ದ ಕಂದಾಯ ಅಧಿಕಾರಿ ರಾಮಸ್ವಾಮಿ ಅವರಿಗೆ ಗ್ರಾಮದ ಎತ್ತರ ಪ್ರದೇಶದಲ್ಲಿರುವ ಎರಡು ಎಕರೆ ಇನಾಮು ಭೂಮಿಯಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದರು.

ಸಾರಥಿ ಮತ್ತು ಚಿಕ್ಕಬಿದರೆ ಸಂಪರ್ಕ ರಸ್ತೆ, ಪತ್ತೇಪುರ ಮತ್ತು ಉಕ್ಕಡಗಾತ್ರಿ ಹಾಗೂ ಕೈಲಾಸನಗರದಿಂದ ಬೈಪಾಸ್‌ಗೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು ಸಂಪರ್ಕ ಕಡಿತಗೊಂಡಿದೆ.

ಸಿಪಿಐ ಮಂಜುನಾಥ ಹಲವಾಗಲ್, ಪಿಎಸ್‌ಐ ಟಿ.ವಿ.ದೇವರಾಜ್, ಎಎಸ್‌ಐ ಅನ್ವರ್‌ಪಾಷಾ ಜಲಾವೃತಗೊಂಡ ಪ್ರದೇಶಗಳಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿದರು.

ವಾಹನ ಸಂಚಾರ ಸ್ಥಗಿತ
ಮಲೇಬೆನ್ನೂರು: ಹೋಬಳಿ ವ್ಯಾಪ್ತಿಯ ಗಡಿಗ್ರಾಮ ಉಕ್ಕಡಗಾತ್ರಿ ಶುಕ್ರವಾರ ತುಂಗಭದ್ರಾ ನದಿ ಪ್ರವಾಹದಿಂದ ರಸ್ತೆ, ಜಮೀನು, ತೋಟ ಜಲಾವೃತವಾಗಿದ್ದು, ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರದಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ.

ಗುರುವಾರ ರಾತ್ರಿ ಪ್ರವಾಹದ ನೀರು ಹೆಚ್ಚಾಗಿದೆ. ಶುಕ್ರವಾರ ರಸ್ತೆ ತುಮ್ಮಿನಕಟ್ಟೆ ಮಾಳನಾಯಕನಹಳ್ಳಿ ಭಾಗದಿಂದ ವಾಹನ ಸಂಚಾರಕ್ಕೆ ಸ್ಥಗಿತವಾಗಿದೆ. ಕುಪ್ಪೇಲೂರು ಮಾರ್ಗದ ಮೂಲಕ ವಾಹನ ಸಂಚರಿಸುತ್ತಿವೆ. ಕಳೆದ ಒಂದು ವಾರದಿಂದ ಗ್ರಾಮದ ಹೊರವಲಯದ ತೋಟ, ಭತ್ತದಗದ್ದೆ ನೀರಿನಲ್ಲಿ ಮುಳುಗಿವೆ, ನಾಟಿ ಹಚ್ಚಲು ಸಿದ್ಧವಾಗಿದ್ದ ಸಸಿಮಡಿ, ಸೊಪ್ಪು, ಮೂಲಂಗಿ ತೋಟ ಮುಳುಗಿ ಅಪಾರ ನಷ್ಟವಾಗಿದೆ ಎಂದು ರೈತರು ತಿಳಿಸಿದರು.

2 ದಿನದಲ್ಲಿ ಶ್ರಾವಣಮಾಸ ಹಾಗೂ ಅಮಾವಾಸ್ಯೆ ಇದ್ದು ಭಕ್ತರು ಆಗಮಿಸಲು ಸ್ವಲ್ಪ ತೊಂದರೆ ಆಗಬಹುದು. ಪ್ರವಾಹ ಹೆಚ್ಚಾದರೆ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ತುಮ್ಮಿನಕಟ್ಟೆ, ಕುಪ್ಪೇಲೂರು ಮೂಲಕ ಸಂಚರಿಸುವ ವ್ಯವಸ್ಥೆ ಮಾಡುವಂತೆ ಕರಿಬಸವೇಶ್ವರ ಟ್ರಸ್ಟ್ ಕಾರ್ಯದರ್ಶಿ ಸುರೇಶ್ ಕೋರಿದರು.

4-5 ವರ್ಷದಲ್ಲಿ ಪ್ರವಾಹ ಬಂದಿರಲಿಲ್ಲ. ಈ ಬಾರಿ ಜುಲೈ- ಆಗಸ್ಟ್ ತಿಂಗಳಲ್ಲಿ ಭತ್ತದ ಗದ್ದೆ ತೋಟ ಪ್ರವಾಹದಲ್ಲಿ ಮುಳುಗಿವೆ. ಲಕ್ಕವಳ್ಳಿ-ಗಾಜನೂರು ಜಲಾಶಯದಿಂದ ಹೆಚ್ಚು ನೀರು ಬಿಡುಗಡೆ ಮಾಡಿದರೆ ನಾಟಿ ಹಚ್ಚುವುದು ಕಷ್ಟ ಎಂಬ ಆತಂಕ ನದಿಪಾತ್ರದ ರೈತರದ್ದು.
ಸದ್ಯ ಯಾವ ಸಮಸ್ಯೆಯೂ ಇಲ್ಲ. ಸರ್ಕಾರಿ ಅಧಿಕಾರಿಗಳು ಪ್ರವಾಹ ಕಡಿಮೆಯಾದ ನಂತರ ಬರುತ್ತಾರೆ. ಸಮಸ್ಯೆ ಅರಿವಾಗುವುದಿಲ್ಲ. ಜಿಲ್ಲಾ ಕೇಂದ್ರದಿಂದ ಗಡಿಗ್ರಾಮ ದೂರವಾಗಿರುವುದು ಮುಖ್ಯ ಕಾರಣ. ನಂದಿಗುಡಿ-ಫತ್ಯಾಪುರ ಭಾಗದಲ್ಲಿ ಸೇತುವೆ ರಸ್ತೆ ನಿರ್ಮಿಸಿದರೆ ಎಲ್ಲ ಸಮಸ್ಯೆ ಪರಿಹಾರವಾಗುತ್ತದೆ.

ಜಿಲ್ಲಾಡಳಿತ, ಉಸ್ತುವಾರಿ ಸಚಿವರು, ಶಾಸಕರು ಇತ್ತ ಗಮನಹರಿಸಿ ಶಾಶ್ವತವಾಗಿ ಸಮಸ್ಯೆ ಪರಿಹರಿದರೆ ಒಳ್ಳೆಯದು ಎಂಬ ಸಲಹೆ ದಳಪತಿ ಶಿವಬಸಪ್ಪ ಶಿವಪೂಜೆ ಅವರದ್ದು.

ಹಲಸಬಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಳೆ ಭೀತಿ ಎದುರಿಸುತ್ತಿರುವ ಸುಮಾರು 40 ಕುಟುಂಬದವರಿಗೆ ತಾಲ್ಲೂಕು ಆಡಳಿತದಿಂದ ಗಂಜಿ ಕೇಂದ್ರದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

ಸಾರಥಿ ಮತ್ತು ಚಿಕ್ಕಬಿದರೆ ಗ್ರಾಮದ ಮಧ್ಯೆ ಸಂಪರ್ಕಕ್ಕಾಗಿ ಯಾಂತ್ರೀಕೃತ ಬೋಟ್ ವ್ಯವಸ್ಥೆ ಮಾಡಲಾಗಿದೆ. ನದಿಯ ಒಳ ಹರಿವಿನಲ್ಲಿ ಹೆಚ್ಚಳವಾಗುವ ಮಾಹಿತಿ ದೊರೆತಿದೆ. ನದಿ ಪಾತ್ರದ ಜನರು ಎತ್ತರ ಪ್ರದೇಶಗಳಿಗೆ ತೆರಳಬೇಕು. ನದಿಯಲ್ಲಿ ಮೀನುಗಾರಿಕೆಗೆ ಇಳಿಯಬಾರದು ಎಂದು ತಹಶೀಲ್ದಾರ್ ಜಿ. ನಜ್ಮಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT