ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗೇಶ್‌ ಉವಾಚ!

Last Updated 6 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಟಿಪಿಕಲ್‌ ಜಾದೂಗಾರರ ಬಟ್ಟೆ ಧರಿಸದೆ ಸಾಮಾನ್ಯ ಉಡುಪು ತೊಟ್ಟಿದ್ದ ವ್ಯಕ್ತಿಯೊಬ್ಬರು ನಾಲ್ಕೈದು ಬಗೆಯ ಜಾದೂ ಮಾಡಿ ಜನರನ್ನು ರಂಜಿಸಿದರು. ಹೆಸರು ಉಗೇಶ್‌ ಸರ್ಕಾರ್‌. ಮಹದೇವಪುರದಲ್ಲಿರುವ ಫಿನಿಕ್ಸ್‌ ಮಾಲ್‌ನಲ್ಲಿ ಟಾಟಾ ಮೋಟಾರ್ಸ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಗೇಶ್‌ ಜಾದೂ ತೋರುವುದರ ಜತೆಗೆ ನ್ಯಾನೋ ಕಾರಿನ ಬಗ್ಗೆ ತಮಗಿರುವ ಪ್ರೀತಿಯನ್ನು ಹಂಚಿಕೊಂಡರು.

ಮೊದಲನೆಯದಾಗಿ, ಉಗೇಶ್‌ ಇಸ್ಪೀಟ್‌ ಎಲೆಯಲ್ಲಿ ತಮ್ಮ ಜಾದೂ ಕೈಚಳಕ ತೋರುತ್ತಾ ಜನರಲ್ಲಿ ಬೆರಗು ಮೂಡಿಸಿದರು. ಅನಂತರ ಅವರು ದೊಡ್ಡ ಸಾಹಸಕ್ಕೆ ಕೈ ಹಾಕಿದರು. ಹಂಚಿಕಡ್ಡಿಯಂತಿದ್ದ ಉಗೇಶ್‌, ಜಾದೂ ನೋಡಲು ಬಂದಿದ್ದ ಗುಂಪಿಗೆ ಒಂದು ಬಹಿರಂಗ ಸವಾಲು ಹಾಕಿದರು. ‘ನನ್ನನ್ನು ತಳ್ಳಲು ಎಷ್ಟು ಜನ ಬೇಕು? ಅಂತಂದರು.

ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ‘ಇಬ್ಬರು ಬೇಕು’ ಎಂದು ಮಾರುತ್ತರ ನೀಡಿದ. ‘ಹತ್ತು ಜನ ಬಲಿಷ್ಠ ವ್ಯಕ್ತಿಗಳು ವೇದಿಕೆ ಮೇಲೆ ಬನ್ನಿ. ನಿಂತ ಜಾಗದಿಂದ ನನ್ನನ್ನು ಒಂದಿಂಚು ಕದಲಿಸಿ’ ಎಂದು ಹೇಳಿ ಎಲ್ಲರನ್ನು ಚಕಿತಗೊಳಿಸಿದರು. ಅವರ ಸವಾಲಿಗೆ ಸ್ಪಂದಿಸಿದ ಹತ್ತು ಯುವಕರು ವೇದಿಕೆ ಏರಿದರು. ಆನಂತರ ಉಗೇಶ್‌ ಹೇಳಿದಂತೆ, ಅವರಿಗೆ ಮುಖಾಮುಖಿಯಾಗಿ ಆ ಹತ್ತು ಹುಡುಗರು ಸಾಲಾಗಿ ನಿಂತರು. ಆಗ ಉಗೇಶ್‌, ತಮ್ಮ ಕಾಲನ್ನು ತುಸು ಪಕ್ಕಕ್ಕೆ ಅಗಲಿಸಿ ಸ್ಟಡಿ ಆಗಿ ನಿಂತರು.

ಆಮೇಲೆ ಉಗೇಶ್‌ ಹೇಳಿದಂತೆ ಮೊದಲಿದ್ದ ಹುಡಗ ಅವರ ಭುಜಕ್ಕೆ ತನ್ನ ಎರಡು ಕೈ ಇಟ್ಟು ತಳ್ಳಲು ಸಜ್ಜಾದ. ಉಗೇಶ್‌ ತಳ್ಳಬಹುದು ಎಂದು ಸೂಚನೆ ನೀಡಿದ ತಕ್ಷಣ ಹತ್ತು ಜನರ ಬಲ ಮೊದಲನೇ ವ್ಯಕ್ತಿಯ ಮೂಲಕ ಉಗೇಶ್‌ ಮೇಲೆ ಪ್ರವಹಿಸಿತು. ಆದರೆ, ಉಗೇಶ್‌ ಅಲ್ಲಾಡಲಿಲ್ಲ. ಜನ ಖುಷಿಯಿಂದ ಚಪ್ಪಾಳೆ ತಟ್ಟಿದರು. ಮತ್ತೆ ಹತ್ತು ಜನ ಬಲಿಷ್ಠರೂ ತಮ್ಮೆಲ್ಲಾ ಶಕ್ತಿ ಪ್ರಯೋಗಿಸಿ ಉಗೇಶ್‌ ಅವರನ್ನು ಅಲ್ಲಾಡಿಸುವ ಪ್ರಯತ್ನ ಮಾಡಿದರು. ಆದರೆ, ಅವರ ಶ್ರಮವೆಲ್ಲಾ ವ್ಯರ್ಥವಾಯ್ತು. ಐದು ನಿಮಿಷ ನಡೆದ ಈ ಆಟದಲ್ಲಿ ಉಗೇಶ್‌ ಗೆಲುವಿನ ನಗು ಬೀರಿದರು.

ಆನಂತರ ಉಗೇಶ್‌, ಗುಂಪಿನಲ್ಲಿದ್ದ ಮಧ್ಯವಯಸ್ಕರೊಬ್ಬರಿಂದ ಕನ್ನಡ ತೆಗೆದುಕೊಂಡರು. ಕನ್ನಡಕವನ್ನು ತದೇಕಚಿತ್ತರಾಗಿ ವೀಕ್ಷಿಸಿ, ಅದನ್ನು ನೆಲದ ಮೇಲಿಟ್ಟರು. ತಮ್ಮ ಎರಡು ಕೈಗಳನ್ನು ಉಜ್ಜಿ ಫ್ರೇಮ್ ಇರುವ ಜಾಗಕ್ಕೆ ತುಸು ಮೇಲಿನಿಂದ ಹಿಡಿದರು. ಜಾದೂ ಶುರುವಾಯ್ತು. ಹಾವಾಡಿಗನ ಪುಂಗಿಗೆ ಹಾವು ತಲೆದೂಗುವಂತೆ ಕನ್ನಡಕ ಉಗೇಶ್‌ ಕೈಸನ್ನೆಗೆ ಅನುಗುಣವಾಗಿ ಮೇಲೆ, ಕೆಳಗೆ ಆಡುತ್ತಿತ್ತು. ಇದನ್ನು ನೋಡಿದ ಮಂದಿ ರೋಮಾಂಚಿತರಾದರು. ಹೀಗೆ ವಿವಿಧ ಬಗೆಯ ಜಾದೂ ಮಾಡಿ ರಂಜಿಸಿದ ಉಗೇಶ್‌ ಕಾರ್ಯಕ್ರಮ ಆರಂಭಕ್ಕೂ ಮುನ್ನ ಮಾತಿಗೆ ಸಿಕ್ಕರು. ಅವರೊಂದಿಗೆ ಆಡಿದ ಮಾತಿನ ತುಣುಕು ಇಂತಿದೆ...

ನಿಮ್ಮ ಬಗ್ಗೆ ಹೇಳಿ ಎಂಬ ಪ್ರಶ್ನೆಗೆ, ‘ಏನಂತ ಹೇಳಲಿ, ಎಲ್ಲಾ ಗೂಗಲ್‌ನಲ್ಲೇ ಇದೆ ನೋಡಿಕೊಳ್ಳಿ’ –ಎಂದರು ಉಗೇಶ್‌ ಸರ್ಕಾರ್‌. (ಗೂಗಲ್‌ನಲ್ಲಿ ಅವರ ಬಗ್ಗೆ ಯಾವುದೇ ಮಾಹಿತಿ ಸಿಗುವುದಿಲ್ಲ). ಅಲ್ಲಿಂದ ಅವರು ಮಾತು ನ್ಯಾನೋ ಕಾರಿನತ್ತ ಹೊರಳಿತು. ‘ಯುವ ಸಾಧಕರನ್ನು ಜಗತ್ತಿಗೆ ಪರಿಚಯಿಸುವಂತಹ ಅನೇಕ ಅವಕಾಶಗಳನ್ನು ನ್ಯಾನೋ ಒದಗಿಸುತ್ತಿದೆ. ಸಾಧಕರಿಗೆ ಮತ್ತಷ್ಟು ಸ್ಫೂರ್ತಿ ತುಂಬಲು ವೇದಿಕೆ ಒದಗಿಸುವ ಈ ಕಾರ್‌ ನನಗೆ ತುಂಬ ಇಷ್ಟ. ನಾನು ಈ ಕಾರು ಕೊಂಡು ಎರಡು ತಿಂಗಳಾಯ್ತು. ಆಗಿನಿಂದಲೂ ಇದರಲ್ಲೇ ಓಡಾಡುತ್ತಿದ್ದೇನೆ. ನನಗನಿಸುವಂತೆ ಇದೊಂದು ಫ್ಯಾಬ್ಯುಲಸ್‌ ಕಾರ್‌. ಬೇರೆಲ್ಲಾ ಕಾರುಗಳಿಗಿಂತ ಇದು ನನಗೆ ಅಚ್ಚುಮೆಚ್ಚಾಯ್ತು. ನ್ಯಾನೋದೊಂದಿಗೆ ನಾನು ಸಹಯೋಗ ಹೊಂದಿದ್ದೇನೆ ಎಂಬ ಕಾರಣಕ್ಕೆ ನಾನು ಹೀಗೆ ಹೇಳುತ್ತಿಲ್ಲ. ನಿಜಕ್ಕೂ ಇದು ನನ್ನ ಪ್ರಾಮಾಣಿಕ ಅಭಿಪ್ರಾಯ’ ಎಂದು ತಮಗಿರುವ ನ್ಯಾನೋ ಪ್ರೀತಿ ಹೇಳಿಕೊಂಡರು ಅವರು. 

‘ನ್ಯಾನೋ ಕಾರ್‌ನಲ್ಲಿ ಲೆಗ್‌ಸ್ಪೇಸ್‌ ತುಂಬಾ ಇದೆ. ಬ್ಯಾಕ್‌ ಪೇನ್‌ ಬರುವುದಿಲ್ಲ. ಗ್ರೌಂಡ್‌ ಕ್ಲಿಯರೆನ್ಸ್‌ ಸೂಪರ್‌ ಆಗಿದೆ, ಈ ಕಾರ್‌ನ ಸೌಂಡ್‌ ಅಂತೂ ಆಸಮ್‌. ಸ್ಪೋರ್ಟ್ಸ್‌ ಕಾರಿನಂತಿದೆ ಇದರ ಶಬ್ದ ಇದೆ. ಈ ಕಾರನ್ನು ಓಡಿಸುವಾಗ ಸಿಗುವ ಮಜವೇ ಬೇರೆ. ಸಿಟಿಯಲ್ಲಿ ಓಡಾಡಲು ಹೇಳಿ ಮಾಡಿಸಿದಂಥ ಕಾರ್‌ ಇದು. ಈ ಕಾರ್‌ನಲ್ಲಿ ದೂರ ಪ್ರಯಾಣ ಮಾಡುವುದು ಕಷ್ಟ ಅಂತ ಜನರೆಲ್ಲಾ ಒಂದು ಮೈಂಡ್‌ಸೆಟ್‌ಗೆ ಬಂದುಬಿಟ್ಟಿದ್ದಾರೆ. ಚಿಕ್ಕ ಕಾರು ಅಂತ ಮೂಗು ಮುರಿಯುತ್ತಾರೆ. ಆದರೆ. ಕಾರಿನೊಳಗೆ ಕುಳಿತುಕೊಂಡರೆ ಒಳಭಾಗ ದೊಡ್ಡದಿದೆ ಎಂದು ಅವರಿಗೆ ಗೊತ್ತಾಗುತ್ತದೆ’ ಎಂದು ಮಾತು ಸೇರಿಸಿದರು ಉಗೇಶ್‌.

ಏನೇನು ಕೆಲಸ ಮಾಡುತ್ತೀರಿ ಎಂಬ ಪ್ರಶ್ನೆಗೆ ಉಗೇಶ್‌ ಉತ್ತರಿಸಿದ್ದು ಹೀಗೆ: ‘ಜಾದೂ ಮಾಡುತ್ತೇನೆ. ಬೇರೆಯವರಿಗೆ ವ್ಯಾಲ್ಯೂ ಆ್ಯಡ್‌ ಮಾಡುತ್ತೇನೆ. ಒಳ್ಳೆ ಕೆಲಸದಲ್ಲಿ ತೊಡಗಿಸಿಕೊಳ್ಳುವಂತೆ ಬೇರೆಯವರನ್ನು ಪ್ರೋತ್ಸಾಹಿಸುತ್ತೇನೆ’. ಅಂದಹಾಗೆ, ಮ್ಯಾಜಿಕ್‌ನಲ್ಲಿ ಜನರನ್ನು ಮೋಡಿ ಮಾಡುವ ಉಗೇಶ್‌ ಅವರು ಸ್ಟೇಜ್‌ ಹತ್ತುವುದಕ್ಕೂ ಮುನ್ನ ಅವರ ತಲೆಯಲ್ಲಿ ಯಾವ ಬಗೆಯ ಜಾದೂ ಮಾಡಬೇಕು ಎಂಬ ಸ್ಪಷ್ಟ ನಿರ್ಧಾರ ಇರುವುದಿಲ್ಲವಂತೆ. ಸ್ಟೇಜ್‌ ಹತ್ತಿದ ಮೇಲೆಯೇ ಅವರ ಮನಸ್ಸಿನಲ್ಲಿ ಯಾವ ಜಾದೂ ಮಾಡಬೇಕು ಎಂದು ಹೊಳೆಯುತ್ತದಂತೆ. ಅದರಂತೆ ಅವರು ಜಾದೂ ಮಾಡಿ ಜನರನ್ನು ರಂಜಿಸುತ್ತಾರೆ.

ಯಾವುದರ ಬಗ್ಗೆ ನೀವು ತುಂಬಾ ಪ್ಯಾಷನೇಟ್ ಆಗಿದ್ದೀರಾ ಅಂದ್ರೆ ಉಗೇಶ್‌ ಮಾತಿನ ಮಳೆ ಸುರಿಸುತ್ತಾರೆ. ‘ಮ್ಯಾಜಿಕ್‌ ಬಗ್ಗೆ ನಾನು ತುಂಬ ಪ್ಯಾಷನೇಟ್. ಹಾಗೆಯೇ, ಫೋಟೊಗ್ರಫಿಯಲ್ಲೂ.  ಎಲ್ಲಕ್ಕಿಂತ ಹೆಚ್ಚಾಗಿ ಬೇರೆಯವರಿಗೆ ಒಳ್ಳೆಯದನ್ನು ಮಾಡಬೇಕು ಎನ್ನುವ ತುಡಿತ ನನ್ನಲ್ಲಿ ಜಾಸ್ತಿ. ಇದಕ್ಕಿಂತ ಹೆಚ್ಚಿನ ಪ್ಯಾಷನ್‌ ಯಾವುದೂ ನನ್ನನ್ನು ಆವರಿಸಿಕೊಂಡಿಲ್ಲ. ಬೇರೆಯವರಿಗೆ ಸಹಾಯ ಮಾಡಿದಾಗ ಸಿಕ್ಕುವ ಮಜಾ ನನಗೆ ಬೇರಾವುದರಲ್ಲೂ ಸಿಗುವುದಿಲ್ಲ’ ಎನ್ನುತ್ತಾರೆ.

ನಿಮ್ಮ ಮಲ್ಟಿ ಟ್ಯಾಲೆಂಟ್ ಹಿಂದಿನ ಗುಟ್ಟೇನು ಅಂದರೆ ಉಗೇಶ್‌ ಹೇಳುವುದು ಹೀಗೆ: ‘ಅದೆಲ್ಲಾ ನಮ್ಮ ನಮ್ಮ ಸಂಕಲ್ಪ ಶಕ್ತಿಯಲ್ಲಿ ಅಡಕವಾಗಿದೆ. ಒಂದು ಕೆಲಸ ಅಥವಾ ವಿದ್ಯೆಯನ್ನು ಕಲಿಯಬೇಕು ಎಂದು ಮನಸ್ಸಿನಲ್ಲಿ ದೃಢಸಂಕಲ್ಪ ಮಾಡಿದ ನಂತರ ಅದನ್ನು ದಕ್ಕಿಸಿಕೊಳ್ಳುವವರೆಗೂ ನಾನು ಸುಮ್ಮನೆ ಕೂರುವುದಿಲ್ಲ. ಅಂಥ ಜಾಯಮಾನ ನನ್ನದು. ಮನಸ್ಸಿನಲ್ಲಿ ಯಾವುದೇ ಬಗೆಯ ಗಲಿಬಿಲಿ ಇಟ್ಟುಕೊಳ್ಳದೇ ಅಂದುಕೊಂಡಿದ್ದನ್ನು ಮಾಡಿಬಿಡುವ ಸಂಕಲ್ಪವೇ ನನ್ನ ಬಹುಮುಖಿ ವ್ಯಕ್ತಿತ್ವದ ಹಿಂದಿನ ಗುಟ್ಟು’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT