ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರರಿಗೆ ಪಾಕ್ ಚಿತಾವಣೆ: ಶಿಂಧೆ ಆರೋಪ

Last Updated 21 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): `ಭಾರತದೊಳಗೆ ನುಸುಳುವುದಕ್ಕೆ ಪಾಕಿಸ್ತಾನವು ಉಗ್ರಗಾಮಿಗಳಿಗೆ ಚಿತಾವಣೆ ನೀಡುತ್ತಿದೆ~ ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಭಾನುವಾರ ಗಂಭೀರ ಸ್ವರೂಪದ ಆರೋಪ ಮಾಡಿದ್ದಾರೆ.

`ನಮಗೆ ಈ ಬಗ್ಗೆ ಗುಪ್ತಚರ ವರದಿಗಳು ಬಂದಿದ್ದು, ಈ ಬಗ್ಗೆ ಕಟ್ಟೆಚ್ಚರದಿಂದ  ಇದ್ದೇವೆ~ ಎಂದು ಸಚಿವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

`ದಸರಾ - ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಎಲ್ಲೆಡೆ ಕಟ್ಟೆಚ್ಚರ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಜನರು ಜಾಗರೂಕತೆಯಿಂದ ಇರಬೇಕು, ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದೇನೆ~ ಎಂದರು.

`ಜಮ್ಮು-ಕಾಶ್ಮೀರದಲ್ಲಿ ಸಂಪೂರ್ಣವಾಗಿ ಶಾಂತಿ ಮರಳುವ ವರೆಗೆ ಅಲ್ಲಿಂದ ಸೇನೆಯನ್ನು ವಾಪಸ್ ಕರೆಸಲಾಗದು~ ಎಂದೂ ಸ್ಪಷ್ಟಪಡಿಸಿದರು.

ಭ್ರಷ್ಟಾಚಾರವನ್ನು ವಿರೋಧಿಸಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ನಡೆಯುತ್ತಿರುವ ಆಂದೋಲನಕ್ಕೆ ಪ್ರತಿಕ್ರಿಯಿಸುತ್ತಾ, `ತಮ್ಮ ಚಟುವಟಿಕೆಗಳು ಸಮಾಜದಲ್ಲಿ ಅಶಿಸ್ತು ಮೂಡಿಸುತ್ತಿವೆ ಎನ್ನುವುದನ್ನು ಕಾರ್ಯಕರ್ತರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಯಾರೇ ಆಗಲಿ, ಕಾನೂನನ್ನು ಕೈಗೆ ತೆಗೆದುಕೊಂಡರೆ ಸರ್ಕಾರ ಸಹಿಸುವುದಿಲ್ಲ~ ಎಂದು ನುಡಿದರು.

ಶಾಶ್ವತ ರಕ್ಷಣಾ ಗೋಡೆ
ಶ್ರೀನಗರ ವರದಿ: ಅಕ್ರಮ ಒಳನುಸುಳುವಿಕೆ ತಡೆಯುವುದಕ್ಕಾಗಿ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ)ಯಲ್ಲಿ  ಶಾಶ್ವತ ರಕ್ಷಣಾ ಗೋಡೆ ನಿರ್ಮಿಸುವ ಸಂಬಂಧ ಕೇಂದ್ರವು ಶೀಘ್ರವೇ ಅಲ್ಲಿಗೆ ತಜ್ಞರ ಸಮಿತಿಯನ್ನು ಕಳಿಸಲಿದೆ. ಇತ್ತೀಚೆಗೆ ಕಾಶ್ಮೀರ ಕಣಿವೆಗೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ, ಈ ಸಂಬಂಧ ಸುದೀರ್ಘ ಚರ್ಚೆ ನಡೆಸಿದ್ದರು.

 ಪ್ರತಿ ವರ್ಷವೂ ಹಿಮಕುಸಿತ ಅಥವಾ ಹಿಮಪಾತಕ್ಕೆ ಗಡಿ ನಿಯಂತ್ರಣ ರೇಖೆಯಲ್ಲಿ 83 ಕಿ.ಮೀ ಗೋಡೆ ಹಾನಿಯಾಗುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. 740 ಕಿ.ಮೀ ಉದ್ದದ ಎಲ್‌ಒಸಿಯಲ್ಲಿ ಭಾರತವು 550 ಕಿ.ಮೀ ವರೆಗೆ ರಕ್ಷಣಾ ಗೋಡೆ ನಿರ್ಮಿಸಿದೆ. ಆದರೆ ಭಾರಿ ಹಿಮಪಾತಕ್ಕೆ ಪ್ರತಿ ವರ್ಷವೂ ಗೋಡೆಗೆ ಹಾನಿಯಾಗುತ್ತದೆ. ಇದರ ಲಾಭ ಪಡೆದುಕೊಂಡು ಉಗ್ರರು ಕಣಿವೆ ರಾಜ್ಯದೊಳಗೆ ನುಸುಳುತ್ತಾರೆ.

 ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾ ನಿರ್ದೇಶಕ ಅಶೋಕ್ ಪ್ರಸಾದ್ ಅವರು ಎಲ್‌ಒಸಿಯುದ್ದಕ್ಕೂ ಹಿಮಪಾತಕ್ಕೆ ಜಗ್ಗದ ಶಾಶ್ವತ ತಡೆಗೋಡೆಯನ್ನು ನಿರ್ಮಿಸುವ ಪ್ರಸ್ತಾವ ಮುಂದಿಟ್ಟಿದ್ದಾರೆ. ಈ ಸಂಬಂಧ ಕೇಂದ್ರ ಗೃಹ ಸಚಿವಾಲಯವು ಸಿವಿಲ್ ಎಂಜಿನಿಯರ್‌ಗಳನ್ನು ಒಳಗೊಂಡ ತಜ್ಞರ ತಂಡವನ್ನು ಎಲ್‌ಒಸಿಗೆ ಕಳಿಸಲಿದೆ. ಇದರಲ್ಲಿ ಹವಾಮಾನ ಇಲಾಖೆಯ ಅಧಿಕಾರಿಗಳೂ ಇರುತ್ತಾರೆ.

ಉಗ್ರರು ಕಣಿವೆಯೊಳಗೆ ನುಸುಳಲು ಬಳಸುವ ಸುಮಾರು 40 ಮಾರ್ಗಗಳನ್ನು ಮುಚ್ಚುವ ಯೋಜನೆಯನ್ನು ಮೊದಲ ಹಂತದಲ್ಲಿ ಕೇಂದ್ರವು ಹಮ್ಮಿಕೊಂಡಿದೆ. ಈ ಮಾರ್ಗಗಳು ಪ್ರಮುಖವಾಗಿ ಉತ್ತರ ಕಾಶ್ಮೀರದ ಕುಪ್ವಾರಾ, ಗುರೆಜ್, ಉರಿ ಹಾಗೂ ಕೆರನ್ ಮತ್ತು ಜಮ್ಮು ವಲಯದ ದೋಡಾ ಜಿಲ್ಲೆಯಲ್ಲಿ ಇವೆ.

`ಶಾಶ್ವತ ತಡೆಗೋಡೆ ಕಾರ್ಯಸಾಧ್ಯತೆಯನ್ನು ಪರಿಶೀಲಿಸಿದ ಬಳಿಕ ತಂಡವು ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಲಿದೆ.

ಆಯೋಗಕ್ಕೆ ಅನುಮತಿ ಅಸಂಭವ
ಮುಂಬೈ ದಾಳಿ (26/11) ಪ್ರಕರಣದ ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಲು ಪಾಕಿಸ್ತಾನದ ನ್ಯಾಯಾಂಗ ಆಯೋಗವು ಮತ್ತೊಮ್ಮೆ ಇಲ್ಲಿಗೆ ಭೇಟಿ ನೀಡುವುದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡುವ ಸಾಧ್ಯತೆ ಇಲ್ಲ.
`ಆಯೋಗವು ಎರಡನೇ ಬಾರಿ ಇಲ್ಲಿಗೆ ಭೇಟಿ ನೀಡುವ ಅಗತ್ಯವನ್ನು ಮನಗಾಣಬೇಕಿದೆ. ಇದನ್ನು ಪರಿಶೀಲಿಸುವುದಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ತಂಡವು ಪಾಕ್‌ಗೆ ತೆರಳಲು ಆ ದೇಶದಿಂದ ಅನುಮತಿ ಸಿಗಬೇಕು. ಅಲ್ಲಿಯವರೆಗೆ ಮುಂಬೈಗೆ ಮತ್ತೊಮ್ಮೆ ಭೇಟಿ ನೀಡುವುದಕ್ಕೆ ಪಾಕ್ ಆಯೋಗಕ್ಕೆ ಅನುಮತಿ ಸಿಗುವುದು ಕಷ್ಟ~ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯ ಪ್ರಮುಖ ಆರೋಪಿ ಲಷ್ಕರ್-ಎ-ತೊಯ್ಬಾ ಕಮಾಂಡರ್ ಝಾಕೀವುರ್ ರೆಹಮಾನ್ ಲಖ್ವಿ ಸೇರಿದಂತೆ ಇನ್ನಿತರ 6 ಮಂದಿಯ ವಿರುದ್ಧ ಸಂಗ್ರಹಿಸಿರುವ ಪುರಾವೆಗಳನ್ನು ಪರಿಶೀಲಿಸಲು ಭಾರತವು ಎನ್‌ಐಎ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಬಯಸಲಿದೆ.

ಪಾಕ್ ನ್ಯಾಯಾಂಗ ಆಯೋಗವು ಕಸಾಬ್‌ನ ಹೇಳಿಕೆ ದಾಖಲಿಸಿಕೊಂಡಿರುವ ನ್ಯಾಯಾಧೀಶರು, ಪ್ರಕರಣದ ತನಿಖಾಧಿಕಾರಿ ಹಾಗೂ ಮೃತ ಉಗ್ರರ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರನ್ನು ಪ್ರಶ್ನಿಸುವಂತಿಲ್ಲ ಎಂದು ಉಭಯ ದೇಶಗಳ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆ ಬಳಿಕ ಎಂಟು ಸದಸ್ಯರನ್ನೊಳಗೊಂಡ ಪಾಕ್ ಆಯೋಗವು ಭಾರತಕ್ಕೆ ಭೇಟಿ ನೀಡಿತ್ತು.

ಆಯೋಗವು ಮಾರ್ಚ್‌ನಲ್ಲಿ ಭಾರತಕ್ಕೆ ಮೊದಲ ಬಾರಿ ಭೇಟಿ ನೀಡಿ ಸಂಗ್ರಹಿಸಿದ ಪುರಾವೆಗಳು ದುರ್ಬಲವಾಗಿವೆ. ಹಾಗಾಗಿ ತಪ್ಪಿತಸ್ಥರನ್ನು ಶಿಕ್ಷಿಸುವುದಕ್ಕೆ ಆಗುತ್ತಿಲ್ಲ ಎಂದು ಪಾಕ್ ಕೋರ್ಟ್ ಹೇಳಿತ್ತು. ಹಾಗಾಗಿ ಎರಡನೇ ಬಾರಿ ಆಯೋಗವು ಮುಂಬೈಗೆ ಭೇಟಿ ನೀಡುವುದಕ್ಕೆ ಪಾಕ್ ಅನುಮತಿ ಕೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT