ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ...

Last Updated 4 ಜೂನ್ 2011, 8:20 IST
ಅಕ್ಷರ ಗಾತ್ರ

ಉಡುಪಿ: ಮುಂಗಾರು ಮಳೆಯ ರಭಸ ಶುಕ್ರವಾರ ನಸುಕಿನಿಂದಲೇ ದಟ್ಟವಾಗಿ ಕಾಣಿಸಿಕೊಂಡಿತು. ಎಂದಿನಂತಿರದ ಮುಂಜಾವು ಗುಡುಗು ಸಿಡಿಲಿನ ಆರ್ಭಟದೊಂದಿಗೆ ಮಳೆರಾಯನನ್ನು ಹೊತ್ತು ತಂದಿ–ತ್ತು. ಮಧ್ಯಾಹ್ನದವರೆಗೂ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿಯಿತು. ಆದರೆ, ಎಲ್ಲಿಯೂ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.

ಉಡುಪಿಯಲ್ಲಿ 87.2 ಮಿ.ಮೀ, ಕುಂದಾಪುರದಲ್ಲಿ 100.4 ಮಿ.ಮೀ ಹಾಗೂ ಕಾರ್ಕಳದಲ್ಲಿ 30.4 ಮಿ.ಮೀ ಮಳೆಯಾಗಿದೆ. ಜಿಲ್ಲೆಯಲ್ಲಿ ಸರಾಸರಿ 72.66 ಮಿ.ಮೀ ಮಳೆ ದಾಖಲಾಗಿದೆ ಎಂದು ಜಿಲ್ಲಾಡಳಿತದ ನಿಯಂತ್ರಣ ಕೊಠಡಿ ಮೂಲಗಳು ತಿಳಿಸಿವೆ. ಮಧ್ಯಾಹ್ನದಲ್ಲಿ ಮಳೆಯ ರಭಸ ಕಡಿಮೆಯಾಗಿದ್ದು ಸಾಯಂಕಾಲವಾಗುತ್ತಿದ್ದಂತೆ ಮತ್ತೆ ಮಳೆ ಕಾಣಿಸಿಕೊಂಡಿದೆ.

ಗುರುವಾರ ರಾತ್ರಿ ಜೋರಾಗಿ ಸುರಿದ ಮಳೆ ಮರುದಿನವೂ ಮುಂದುವರಿಯಿತು. ಚತುಷ್ಫಥ ಕಾಮಗಾರಿಯಿಂದಾಗಿ ಅಲ್ಲಲ್ಲಿ ಚರಂಡಿ ನೀರು ಕಟ್ಟಿಕೊಂಡು ರಸ್ತೆಗೆ ನೀರು ನುಗ್ಗಿತ್ತು. ಉಡುಪಿಯ ಬನ್ನಂಜೆ, ಶಿರಿಬೀಡು, ಗುಂಡಿಬೈಲು, ಕಲ್ಸಂಕ ಸೇರಿದಂತೆ ಹಲವು  ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿತ್ತು. ನಗರಸಭೆ ಸಿಬ್ಬಂದಿ ತೋಡುಗಳು ಕಟ್ಟಿಕೊಂಡಲ್ಲಿ ತೆರವುಗೊಳಿಸಿದರು.

ಕಲ್ಯಾಣಪುರ, ಉಪ್ಪೂರು, ಅಂಬಾಗಿಲು, ಬಲೈಪಾದೆ ಮತ್ತಿತರ ಕಡೆಗಳಲ್ಲಿ ಧಾರಾಕಾರ ಮಳೆಯಿಂದಾಗಿ ತಗ್ಗುಪ್ರದೇಶಗಳು ಜಲಾವೃತವಾಗಿದ್ದವು. ಬಲೈಪಾದೆ ಬಳಿ ನೀರು ಹರಿದುಹೋಗಲು ಸಾಧ್ಯವಾಗದೇ ಹಿಟಾಚಿ ಮೂಲಕ ಮಣ್ಣನ್ನು ತೆರವುಗೊಳಿಸಿ ಕಾಲುವೆ ಮಾಡಿಕೊಡಲಾಯಿತು.

ನಗರದೆಲ್ಲೆಡೆ ರೇನ್‌ಕೋಟ್ ಧರಿಸಿದ, ಜನರು ಕೊಡೆ ಹಿಡಿದು ಸಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮಳೆಯಿಂದಾಗಿ ವಾಹನ ಸವಾರರು ಬೆಳಗಿನ ಹೊತ್ತಿನಲ್ಲಿಯೂ ಲೈಟ್ ಹಾಕಿ ಸಾಗುತ್ತಿದ್ದರು. ದ್ವಿಚಕ್ರ ಸವಾರರು ವಿಶೇಷ ಎಚ್ಚರಿಕೆಯಿಂದ ವಾಹನ ಓಡಿಸುತ್ತಿದ್ದರು.

ಮಳೆ ನೀರಿನಿಂದ ಚರಂಡಿಗಳು ಉಕ್ಕಿ ರಸ್ತೆಗಳೆಲ್ಲ ಜಲಾವೃತವಾಗಿದ್ದವು. ವಿಶೇಷವಾಗಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯಿಂದಾಗಿ ಚರಂಡಿಗಳೆಲ್ಲ ಮುಚ್ಚಿಹೋಗಿ ಮಣ್ಣಿನರಾಶಿಗಳು ತುಂಬಿದ್ದ ಕಾರಣ, ರಭಸದ ಮಳೆಗೆ ಮಣ್ಣುಗುಡ್ಡೆ ಕೊಚ್ಚಿಕೊಂಡು ಹಲವೆಡೆ ರಸ್ತೆಗೆ ಬಂದಿತ್ತು.

ಕರಾವಳಿ ಜಂಕ್ಷನ್‌ನ ಸಮೀಪದ ಕಲ್ಸಂಕ ತೋಡಿನಲ್ಲಿ ಹಿಟಾಚಿ ಮೂಲಕ ಮಣ್ಣಿನರಾಶಿ ಬದಿಗೆ ಸರಿಸುವ ಕಾರ್ಯ ಭರದಿಂದ ಸಾಗಿತ್ತು.

ಮಲ್ಪೆ ಕಡಲಲ್ಲಿ ಅಲೆಗಳ ಅಬ್ಬರ: ಮುಂಗಾರು ಮಳೆಯ ರಭಸಕ್ಕೆ ಮಲ್ಪೆ ಕಡಲು ಪ್ರಕ್ಷುಬ್ಧಗೊಂಡಿದೆ. ಆನೆಗಾತ್ರದ ಅಲೆಗಳು ದಡಕ್ಕಪ್ಪಳಿಸುತ್ತಿವೆ. ಅವಧಿಗೆ ಮುನ್ನವೇ ಬೋಟುಗಳು ದಡ ಸೇರಿವೆ. ಮುಂದಿನ 48 ಗಂಟೆಗಳಲ್ಲಿ ಬಿರುಸಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಮೀನುಗಾರರು ಕಡಲಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ.

ರೈತರಲ್ಲಿ ಹರ್ಷ: ಮುಂಗಾರು ಮಳೆ ರೈತಾಪಿವರ್ಗದಲ್ಲಿ ಖುಷಿ ನೀಡಿದೆ. ಹುಡಿ ನೇಜಿ ಹಾಕಲು ಮುಂದಾಗಿದ್ದ ರೈತರು ಸಂಭ್ರಮದಿಂದ ಕೃಷಿಕಾರ್ಯಕ್ಕೆ ಗದ್ದೆಗೆ ಇಳಿಯುತ್ತಿದ್ದಾರೆ.

ಕೆಸರಿನಲ್ಲಿ ಸಿಲುಕುತ್ತಿರುವ ವಾಹನ
ಬ್ರಹ್ಮಾವರ: ನಗರದ ಸುತ್ತಮುತ್ತ ಗುರುವಾರ ರಾತ್ರಿ ಮತ್ತು ಶುಕ್ರವಾರ ಬೆಳಿಗ್ಗೆ ಮುಂಗಾರು ಮಳೆ ಬಿರುಸಿನಿಂದ ಸುರಿಯಿತು. ಚತುಷ್ಪಥ ಕಾಮಗಾರಿಗಾಗಿ ಹೆದ್ದಾರಿಯ ಇಕ್ಕೆಲಗಳಲ್ಲಿ ಹೊಸ ಮಣ್ಣು ಹಾಕಿದ ಪರಿಣಾಮ ಅಲ್ಲಲ್ಲಿ ವಾಹನಗಳು ಹೂತು ಹೋದವು. ಕೋಟದ ಮೆಸ್ಕಾಂ ಕಛೇರಿ ಬಳಿ ನಿರ್ಮಿಸಿದ್ದ ಹೊಸ ಮೋರಿ ರಚನೆಯಾಗಿದ್ದು, ಒಂದೇ ದಿನದಲ್ಲಿ ಮಣ್ಣು ಕೊಚ್ಚಿ ಹೋಗಿದೆ.

ಮಳೆ ನೀರು ಹೋಗಲು ಹೊಸದಾಗಿ ಮೋರಿ ನಿರ್ಮಿಸಲಾಗಿದ್ದು, ಎರಡೂ ಕಡೆ ಕಲ್ಲು ಕಟ್ಟದೇ ಬರೀ ಮಣ್ಣು ಹಾಕಿ ಕಾಮಗಾರಿ ನಡೆಸಲಾಗಿತ್ತು. ಇಲ್ಲಿ ನಿರಂತರವಾಗಿ ಮಣ್ಣು ಸವೆತ ಉಂಟಾಗಿ ರಸ್ತೆಯೇ ಕುಸಿಯುವ ಆತಂಕ ಎದುರಾಗಿದೆ. ಈ ಸಮಸ್ಯೆ ಹೆದ್ದಾರಿಯಲ್ಲಿ ಸಾಗುವ ವಾಹನಗಳಿಗೂ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆ ಇದೆ.

ಸಮರ್ಪಕ ಚರಂಡಿ ವ್ಯವಸ್ಥೆ ಇರದೇ ಮಳೆ ನೀರು ರಸ್ತೆಯ ಮೇಲೆ ಹರಿದು ವಾಹನ ಸವಾರರು ತೊಂದರೆಗೊಳಗಾದರು. ನಗರದ ಎಸ್.ಎಂ.ಎಸ್, ರೋಟರಿ ಭವನ, ಸಮುದಾಯ ಆಸ್ಪತ್ರೆ ಬಳಿ ಸಮಸ್ಯೆ ತೀವ್ರವಾಗಿತ್ತು.

ಕೋಟ, ಸಾಲಿಗ್ರಾಮ, ಸಾಸ್ತಾನ, ಬಾರ್ಕೂರು ಮತ್ತು ಗ್ರಾಮಾಂತರ ಪ್ರದೇಶಗಳಲ್ಲೂ ಬೆಳಿಗ್ಗೆ ಭಾರಿ ಮಳೆ ಸುರಿಯಿತು. ಮಧ್ಯಾಹ್ನದ ವೇಳೆ ಮಳೆ ಇರಲಿಲ್ಲವಾದರೂ ಸಂಜೆ ಮತ್ತೆ ಮೋಡ ದಟ್ಟೈಸಿ ಮಳೆ ಸುರಿಯಿತು.

ಹೆಬ್ರಿ: ವಿದ್ಯುತ್ ಕಣ್ಣಮುಚ್ಚಾಲೆ
ಹೆಬ್ರಿ: ಹೆಬ್ರಿ ಪರಿಸರದಲ್ಲಿ ಶುಕ್ರವಾರ ಮುಂಗಾರು ಮಳೆ ಬಿರುಸಾಗಿ ಸುರಿದಿದೆ. ಗುರುವಾರ ಸಂಜೆ ಆರಂಭವಾದ ಮಳೆ ಶುಕ್ರವಾರ ಮಧ್ಯಾಹ್ನದವರೆಗೂ ಸುರಿಯಿತು.

ಸೋಮೇಶ್ವರ, ನಾಡ್ಪಾಲು, ಮುದ್ರಾಡಿ, ವರಂಗ, ಮುನಿಯಾಲು, ಪೆರ್ಡೂರು, ಪಾಡಿಗಾರ, ಶಿವಪುರ, ಅಜೆಕಾರು, ಕೂಚ್ಚೂರು ಪರಿಸರದಲ್ಲೂ ಮಳೆಯ ಆರ್ಭಟ ಜೋರಾಗಿತ್ತು. ಹೆಬ್ರಿಯಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ವಿದ್ಯುತ್ ಸಮಸ್ಯೆ ತಲೆದೊರಿದ್ದು,  ಆಗಾಗ್ಗೆ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿತ್ತು.
ತಂಗುದಾಣವಿಲ್ಲದ ಹೆದ್ದಾರಿ

ಸುರತ್ಕಲ್: ಸುರತ್ಕಲ್ ಪ್ರದೇಶದಲ್ಲಿ ಶುಕ್ರವಾರವೂ ಮಳೆಯಾಗಿದೆ. ಕೆಲವೆಡೆ ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆಯಲ್ಲೇ ನೀರು ಹರಿಯುತ್ತಿತ್ತು. ತಗ್ಗು ಪ್ರದೇಶದಲ್ಲಿ ನೀರು ನಿಂತಿದ್ದ ದೃಶ್ಯವೂ ಸಾಮಾನ್ಯವಾಗಿದೆ.
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಿಸ್ತರಣಾ ಕಾಮಗಾರಿ ಸಲುವಾಗಿ ರಸ್ತೆ ಬದಿಯಲ್ಲಿದ್ದ ಬಸ್ ತಂಗುದಾಣಗಳನ್ನು ಕೆಡವಿ ಹಾಕಲಾಗಿತ್ತು. ಹೆದ್ದಾರಿ ಕಾಮಗಾರಿ ಮುಗಿಯುತ್ತಾ ಬಂದರೂ ತಂಗುದಾಣ  ನಿರ್ಮಿಸುವತ್ತ ಪಾಲಿಕೆಯಾಗಲೀ, ಜಿಲ್ಲಾಡಳಿತವಾಗಲೀ ಮುಂದಾಗಿಲ್ಲ. ಪರಿಣಾಮ ಪ್ರಯಾಣಿಕರು ಮಳೆಗೆ ತೊಪ್ಪೆಯಾಗಬೇಕಾದ ಪರಿಸ್ಥಿತಿ ಉಂಟಾಯಿತು.

ಸುರತ್ಕಲ್‌ನ ಪ್ರಮುಖ ಬಸ್ ನಿಲುಗಡೆ ಪ್ರದೇಶಗಳಲ್ಲಿ ತಂಗುದಾಣವೇ ಇಲ್ಲವಾಗಿದೆ. ಶಾಲಾ ಕಾಲೇಜುಗಳ ಬಳಿ ತಂಗುದಾಣದ ಕೊರತೆಯಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ.ಇಡ್ಯದ ಶ್ರಿಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಸೂರಿಂಜೆಯ ತಗ್ಗುಪ್ರದೇಶದಲ್ಲಿ ನೀರು ತುಂಬಿದೆ. ಕಡಂಬೋಡಿ ಎಂಬಲ್ಲಿ ಒಳರಸ್ತೆ ಕುಸಿದಿದೆ. ಚರಂಡಿಯಿಲ್ಲದೇ ರಸ್ತೆಯಲ್ಲೆ ನೀರು ಹರಿಯುತ್ತಿರುವುದು ಕಡಂಬೋಡಿಯ ರಸ್ತೆ ಹದಗೆಡಲು ಕಾರಣ ಎಂದು ಸ್ಥಳೀಯರು ದೂರಿದ್ದಾರೆ.

ಕೃಷಿ ಕಾರ್ಯಕ್ಕೆ ಚಾಲನೆ
ಕುಂದಾಪುರ:
ತಾಲ್ಲೂಕಿನಲ್ಲಿ ಗುರುವಾರ ಪ್ರಾರಂಭವಾದ ವರ್ಷಧಾರೆ ಶುಕ್ರವಾರವೂ ಮುಂದುವರಿದಿದ್ದು, ಹೆಚ್ಚಿನ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಸಂಜೆವರೆಗೆ 100.4 ಮಿ.ಮಿ ಮಳೆ ಬಿದ್ದಿದೆ ಎಂದು ತಾಲ್ಲೂಕು ಕಚೇರಿ ಮೂಲಗಳು ತಿಳಿಸಿವೆ. ತಾಲ್ಲೂಕಿನ ಕೆಲವೆಡೆ ರೈತರು ಕೃಷಿ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಗದ್ದೆಗಳಿಗೆ ಗೊಬ್ಬರ ಹಾಕುವುದು ಹಾಗೂ ಬೀಜ ಬಿತ್ತನೆಗಾಗಿ ಉಳುಮೆ ನಡೆದಿದೆ.

ಮಳೆಗೆ ಪೂರ್ವಸಿದ್ಧತೆ ಮಾಡಿಕೊಳ್ಳದವರು  ದಿಢೀರ್ ರೈನ್‌ಕೋಟ್, ಕೊಡೆ ಖರೀದಿಗೆ ಮುಂದಾಗಿದ್ದರಿಂದ ಪೇಟೆಯ ಅಂಗಡಿಗಳಲ್ಲಿ ಜನಸಂದಣಿ ಇತ್ತು.ಸಂಜೆಯ ವೇಳೆ ಮಳೆಯ ತೀವ್ರಗೊಂಡಿತ್ತು. ಗಾಳಿ ಮಳೆ ಮುಂದುವರಿದಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಳ್ಳುತ್ತಿದೆ.

ಬೈಂದೂರು: ತೋಟಕ್ಕೆ ಹಾನಿ
ಬೈಂದೂರು: ಬೈಂದೂರು ಪರಿಸರದಲ್ಲಿ ಶುಕ್ರವಾರವೂ ಬಿರುಸಿನ ಮಳೆ ಮುಂದುವರಿದಿದೆ. ಗುರುವಾರ ರಾತ್ರಿ ಮಳೆಯ ಅಬ್ಬರದಿಂದ ಕೆಲವೆಡೆ ಬಿರುಗಾಳಿ ಬೀಸಿ, ಮರಗಳು ಉರುಳಿವೆ. ತೋಟಗಳಿಗೆ ಹಾನಿಯಾಗಿವೆ.

ಬೆಳಗಾಗುತ್ತಲೇ ಮಳೆ ಅಬ್ಬರ ಕಡಿಮೆಯಾಗಿತ್ತು. ಮಧಾಹ್ನ ಕೆಲಕಾಲ ಬಿಸಿಲು ಕಾಣಿಸಿಕೊಂಡಿತು. ಆದರೆ, ಸಂಜೆಯಾಗುತ್ತಿದ್ದಂತೆ ಮಳೆ ಮತ್ತೆ ಸುರಿಯಿತು. `ಗುಡುಗು, ಮಿಂಚುಗಳಿಲ್ಲದಿರುವುದು ಈ ಬಾರಿಯ ಮಳೆಯ ವಿಶೇಷ~ ಎಂದು ಜನರು ಆಡಿಕೊಳ್ಳುತ್ತ್ದ್ದಿದಾರೆ.

`ಮಳೆಗಾಲ-ಸಂಚಾರ ಸುಗಮವಿರಲಿ~
ಮಂಗಳೂರು: ಜಿಲ್ಲೆಯಲ್ಲಿ ಮುಂಗಾರು ಆರಂಭವಾಗಿದ್ದು, ಜೂನ್ ಪ್ರಥಮಾರ್ಧದಲ್ಲಿ ಧಾರಾಕಾರ ಮಳೆಯಾಗಲಿದೆ. ರಸ್ತೆಗಳ ಮೇಲೆ ಸಾಕಷ್ಟು ಪ್ರಮಾಣದಲ್ಲಿ ಡೀಸೆಲ್, ಆಯಿಲ್ ಬಿದ್ದಿದ್ದು, ಮಳೆಗೆ ಜಾರುವ ಸಂಭವವಿದೆ. ಹೆದ್ದಾರಿಯಲ್ಲಿ ಅಪಘಾತವಾಗಿ ಜೀವ ಮತ್ತು ಸ್ವತ್ತಿಗೆ ಹಾನಿಯಾಗುವುದನ್ನು ತಪ್ಪಿಸಲು ಬಸ್, ಟ್ರಕ್ ಚಾಲಕರು ಮಿತಿಯಾದ ವೇಗದಲ್ಲಿ ಜಾಗರೂಕತೆಯಿಂದ ಚಾಲನೆ ಮಾಡಬೇಕು ಎಂದು ದಕ್ಷಿಣ ಕನ್ನಡ ಬಸ್ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಅಜೀಜ್ ಪರ್ತಿಪ್ಪಾಡಿ ಮನವಿ ಮಾಡಿದ್ದಾರೆ.

ಶಾಲೆ-ಕಾಲೇಜುಗಳೂ ಆರಂಭವಾಗಿದ್ದು, ಬಸ್ ಚಾಲಕರು ಮತ್ತು ನಿರ್ವಾಹಕರು ವಿದ್ಯಾರ್ಥಿಗಳು ಬಸ್ ಹತ್ತುವಾಗ-ಇಳಿಯುವಾಗ ಯಾವುದೇ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಬೇಕು.

ವಿದ್ಯಾರ್ಥಿಗಳ ಜತೆ ಸೌಜನ್ಯದಿಂದ ವರ್ತಿಸಬೇಕು. ಸಂಘ ವಿತರಿಸುವ ರಿಯಾಯಿತಿ ಪಾಸು ಮಾನ್ಯ ಮಾಡಿ ಯಾವುದೇ  ದೂರುಗಳಿಗೆ ಆಸ್ಪದ ಆಗದಂತೆ ಕೊಡಬಾರದು. ವಿದ್ಯಾರ್ಥಿಗಳೂ ಸೌಮ್ಯವಾಗಿ ವರ್ತಿಸಿ ಬಸ್ ನಿರ್ವಾಹಕರೊಂದಿಗೆ ಸಹಕರಿಸಬೇಕು ಎಂದು ಅವರು ಶುಕ್ರವಾರ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT