ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಸಮಾಜ ನಿರ್ಮಾಣಕ್ಕೆ ಮತದಾನ ಮದ್ದು

Last Updated 26 ಜನವರಿ 2012, 9:55 IST
ಅಕ್ಷರ ಗಾತ್ರ

ಚಾಮರಾಜನಗರ: ಯುವಕರು ಮತ್ತು ಸಾರ್ವಜನಿಕರು ತಮ್ಮ ಮತದಾನದ ಹಕ್ಕನ್ನು ನಿಷ್ಪಕ್ಷಪಾತವಾಗಿ ಚಲಾಯಿಸುವುದರ ಮೂಲಕ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ ಉತ್ತಮ ಸಮಾಜ ಸೃಷ್ಟಿಸಬೇಕು~ ಎಂದು ಎಂದು ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಮಾಸ್ಟರ್ ಆರ್‌ಕೆಜಿಎಂಎಂ ಮಹಾಸ್ವಾಮೀಜಿ ಸಲಹೆ ನೀಡಿದರು.

ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಬುಧವಾರ ನಡೆದ `ರಾಷ್ಟ್ರೀಯ ಮತದಾರರ ದಿನಾಚರಣೆ~ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

`ಹದಿನೆಂಟು ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾನದ ಹಕ್ಕನ್ನು ಪಡೆಯುತ್ತಾನೆ. ಚುನಾವಣಾ ಆಯೋಗದಿಂದ ನೀಡುವಂತಹ ಗುರುತಿನ ಚೀಟಿ ಪಡೆದು ನಾಗರಿಕನೆಂಬ ಹೆಗ್ಗಳಿಕೆಗೆ ಪಾತ್ರರಾಗಿ. ತಮ್ಮ ಮತದಾನವನ್ನು ಚಲಾಯಿಸಿ ಸಂಪೂರ್ಣ ಪೌರರಾಗಿ ಎಂದ ಅವರು, ನಿಮ್ಮ ಹಕ್ಕನ್ನು ಚಲಾಯಿಸುವಾಗ ನಿಮ್ಮ ಸ್ವಂತ ವಿವೇಚನೆಯಿಂದ ಮತಹಾಕಿ ಎಂದು ತಿಳಿ ಹೇಳಿದರು.

ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಯುವಕರ ಪಾತ್ರ ಪ್ರಮುಖವಾದುದು. ಪ್ರಸ್ತುತ ಮತದಾನದ ಹಕ್ಕನ್ನು ಸಾರ್ವಜನಿಕರು ಸಮರ್ಪಕವಾಗಿ ಚಲಾಯಿಸುತ್ತಿಲ್ಲ. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳ ಅವಶ್ಯಕತೆಯಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಕೆ.ಆರ್. ಸುಂದರ್ ಮಾತನಾಡಿ, ಮತದಾನದ ಸಂದರ್ಭದಲ್ಲಿ ಗೊಂದಲ ಸೃಷ್ಟಿಯಾಗಬಾರದೆಂದು ಚುನಾವಣಾ ಆಯೋಗ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತದೆ. ಮತದಾನ ಸಂದರ್ಭದಲ್ಲಿ ಯಾವುದೇ ಒತ್ತಡಕ್ಕೆ ಒಳಗಾಗದೆ ನಿರ್ಭೀತಿಯಿಂದ ಹಕ್ಕನ್ನು ಚಲಾಯಿಸಿ ಎಂದರು.

ಪ್ರಧಾನ ಸಿವಿಲ್ ನ್ಯಾಯಾಧೀಶ ರಾಧಾಕೃಷ್ಣ ಮಾತನಾಡಿ, ಮತದಾನ ಬಹಿಷ್ಕಾರದಿಂದ ಅರ್ಹವ್ಯಕ್ತಿ ಆಯ್ಕೆಯಲ್ಲಿ ಸೋಲುತ್ತಾನೆ. ಇದರ ಪರಿಣಾಮ ಅರ್ಹನಲ್ಲದ ವ್ಯಕ್ತಿ ಆಯ್ಕೆಯಾಗಿ ದೇಶ ವಿನಾಶದ ಸ್ಥಿತಿಗೆ ಬಂದು ನಿಲ್ಲುತ್ತದೆ. ಮತದಾನ ದೇಶದ ಅಳಿವು ಉಳಿವನ್ನು ನಿರ್ಧರಿಸುತ್ತದೆ~ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಎಚ್.ಚಂದ್ರಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್. ಮಂಜಪ್ಪ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು. 

`ಮತದಾನದ ಅರಿವು ಮೂಡಿಸಿ~
ಕೊಳ್ಳೇಗಾಲ: ಜನಪ್ರತಿನಿಧಿಗಳು ಮತ್ತು ಮತದಾರರು ಹೆಚ್ಚು ಪಾಲ್ಗೊಳ್ಳುವಂತೆ ಮಾಡುವ ಮೂಲಕ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ರೂಪಿಸುವಂತೆ ಅಧಿಕಾರಿಗಳಿಗೆ ಸಂಸದ ಆರ್. ಧ್ರುವನಾರಾಯಣ ಸೂಚಿಸಿದರು.

ತಾಲ್ಲೂಕಿನ ಹನೂರು ಪಟ್ಟಣದಲ್ಲಿ ವಿಶೇಷ ತಹಶೀಲ್ದಾರ್ ಕಚೇರಿ ವತಿಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮದಲ್ಲಿ ಅವರು ಮತದಾರರಿಗೆ ಗುರುತಿನ ಚೀಟಿ ವಿತರಿಸಿ ಮಾತನಾಡಿದರು.

ಜನಪ್ರತಿನಿಧಿಗಳು ಮತದಾರರ ಪರಸ್ಪರ ಸಹಕಾರದೊಡನೆ ಗ್ರಾಮದ ಮುಖ್ಯ ಸ್ಥಳಗಳಲ್ಲಿ ಅರಿವು ಕಾರ್ಯಕ್ರಮ ಏರ್ಪಡಿಸದೆ, ಪರಿವೀಕ್ಷಣಾ ಮಂದಿರದಲ್ಲಿ ತೋರಿಕೆ ಕಾರ್ಯಕ್ರಮ ಏರ್ಪಡಿಸಿರುವುದು ಸರಿಯ್ಲ್ಲಲ ಎಂದು ಅಧಿಕಾರಿಗಳ ಕ್ರಮದ ಬಗ್ಗೆ ಕಿಡಿಕಾರಿದರು.

ಶಾಸಕ ಆರ್. ನರೇಂದ್ರ ಮಾತನಾಡಿ, ಮತದಾನದ ಮಹತ್ವ ಮತ್ತು ಎಲ್ಲರೂ ಮತದಾರರ ಗುರುತಿನ ಚೀಟಿ ಪಡೆಯುವಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಾರ್ಯಕ್ರಮ ರೂಪಿಸಬೇಕು ಎಂದು ಹೇಳಿದರು.

ಪ್ರಭಾರ ತಹಶೀಲ್ದಾರ್ ಬೈರಯ್ಯ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹೇಮಂತರಾಜ್, ಚಂದ್ರಕಾಂತ್, ಶಾಗ್ಯ ರವಿ, ರಾಮಾಪುರ ಬ್ಲಾಕ್ ಅಧ್ಯಕ್ಷ ಕಾಮರಾಜ್ ಇತರರು ಉಪಸ್ಥಿತರಿದ್ದರು.

`ಮತದಾನದ ಪ್ರಮಾಣ ಹೆಚ್ಚಾಗಲಿ~ 
ಯಳಂದೂರು: ಮತದಾನವು ಭಾರತೀಯ ನಾಗರೀಕನ ಹಕ್ಕಾಗಿದ್ದು, ರಾಷ್ಟ್ರದ ಒಳಿತಿನ ದೃಷ್ಟಿಯಿಂದ ಮತದಾನದ ಪ್ರಮಾಣ ಹೆಚ್ಚಾಗ ಬೇಕು ಎಂದು ತಹಶೀಲ್ದಾರ್ ಜಗದೀಶ್ ಆಶಿಸಿದರು.

ತಾಲ್ಲೂಕು ಕಚೇರಿ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮತದಾರರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭಾರತದಲ್ಲಿ ಮತದಾನದ ಪ್ರಮಾಣ ಶೇ 60-70 ಭಾಗ ಮಾತ್ರ ಆಗುತ್ತಿರುವುದು ದುರ್ದೈವ. ಯುವ ಜನರು ಆಲಸ್ಯದಿಂದ ಮತದಾನದಿಂದ ದೂರ ಉಳಿಯುವ ಪರಿಣಾಮ ಮತದಾನದ ಪ್ರಮಾಣ ಕಡಿಮೆಯಾಗಿದೆ.

ಆದ್ದರಿಂದ ಯುವ ಜನತೆ ಜಾಗೃತಗೊಂಡು ಉತ್ತಮ ಭವಿಷ್ಯವನ್ನು ನಿರ್ಮಾಣ ಮಾಡಲು ಮತದಾನ ಮಾಡಬೇಕು ಎಂದು ಸಲಹೆ ನೀಡಿದರು. ಈ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರವು ಕಳೆದ ವರ್ಷದಿಂದ ಈ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಮಂಜುನಾಥ್ ಮಾತನಾಡಿ, ಮತದಾನ ಹೆಚ್ಚಾದಷ್ಟು ಪ್ರಜ್ಞಾವಂತ ರಾಜಕಾರಣಿಗಳ ಸಂಖ್ಯೆ ಹೆಚ್ಚಾಗುತ್ತದೆ. ಇದರಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕೊಳ್ಳೇಗಾಲ ಕ್ಷೇತ್ರದ ಯುವ ಮತದಾರರಿಗೆ ರೂ.1 ಸಾವಿರ ನಗದು ಬಹುಮಾನವನ್ನು ಲಕ್ಕಿ ಡಿಪ್‌ನಿಂದ ಚೀಟಿ ಎತ್ತುವ ಮೂಲಕ ಆರಿಸಲಾಯಿತು. ಯಳಂದೂರು ತಾಲ್ಲೂಕಿನ ಯರಿಯೂರು ಗ್ರಾಮದ ಬೂತ್ ಸಂಖ್ಯೆ 174, ಕ್ರಮ ಸಂಖ್ಯೆ 883 ರ ಜ್ಯೋತಿ ಹಾಗೂ ಕೊಳ್ಳೇಗಾಲ ತಾಲ್ಲೂಕಿನ ಮುಡಿಗುಂಡ ಗ್ರಾಮದ ಬೂತ್ ಸಂಖ್ಯೆ 127,  ಕ್ರಮ ಸಂಖ್ಯೆ 861 ಎನ್. ಶರತ್ ವಿಜೇತರಾಗಿ ಆಯ್ಕೆಯಾದರು. ಉತ್ತಮ ಪಿಎಲ್‌ಒ ಗಳಿಗೂ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.

ತಾಪಂ ಕಾರ್ಯ ನಿರ್ವಹಣಾಧಿಕಾರಿ ಚಿಕ್ಕಲಿಂಗಯ್ಯ, ಸಮಾಜ ಕಲ್ಯಾಣ ಅಧಿಕಾರಿ ಸರಸ್ವತಿ, ಉಪಪ್ರಾಂಶುಪಾಲೆ ಚಂದ್ರಮ್ಮ, ಪ್ರಾಂಶುಪಾಲ ಶಿವಮಲ್ಲು, ಸಿಡಿಪಿಒ ಜಯರಾಂ, ಉಪ ತಹಶೀಲ್ದಾರ್ ನಂಜಯ್ಯ, ಶಿರಸ್ತೇದಾರ್ ನಂಜುಂಡಯ್ಯ, ಪ್ರಭಾರ ಉಪ ನೋಂದಾಣಿಧಿಕಾರಿ ರುದ್ರಯ್ಯ, ರಂಗರಾಜು ಆರ್‌ಐ ರಾಜಶೇಖರ್, ರಂಗಸ್ವಾಮಿ ಇತರರು ಇದ್ದರು.

ಮತದಾರರನ್ನು ಪ್ರಾಮಾಣಿಕವಾಗಿ ಗುರುತಿಸಿ: ಮಂಜುನಾಥ್
ಗುಂಡ್ಲುಪೇಟೆ: ಯುವ ಮತದಾರರನ್ನು ಗುರುತಿಸುವ ಕೆಲಸವನ್ನು ಸಿಬ್ಬಂದಿಯವರು ಪ್ರಾಮಾಣಿಕತೆಯಿಂದ ಮಾಡಬೇಕು ಎಂದು ತಹಶೀಲ್ದಾರ್ ಜಿ.ಎನ್. ಮಂಜುನಾಥ್ ಹೇಳಿದರು.

ಪಟ್ಟಣದ ಗುರುಭವನದಲ್ಲಿ  ಬುಧವಾರ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಇಂದಿನ ಸನ್ನಿವೇಶದಲ್ಲಿ ಯುವ ಮತದಾರರನ್ನು ಗುರುತಿಸಿ ಅವರಿಗೂ ಮತದಾನವನ್ನು ಕಲ್ಪಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಇಡೀ ರಾಜ್ಯದಲ್ಲಿ ಚಾಮರಾಜನಗರ ಜಿಲ್ಲೆ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಶೇಕಡ 99 ರಷ್ಟು ಸಾಧನೆ ಮಾಡಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಮಲ್ಲಿಕಾರ್ಜುನ್, ಚಾಮರಾಜನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎ.ಎಂ. ನಾಗಮಲ್ಲಪ್ಪ, ಸಾಂತ್ವನ ಕೇಂದ್ರದ ಸರಸ್ವತಿ ಮುಂತಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT