ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ: ಮಹಿಳಾ ಪ್ರಾತಿನಿಧ್ಯದಲ್ಲಿ ಹಿಂದೆ

Last Updated 7 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಕಾರವಾರ: ಅಡುಗೆ ಮನೆಯಿಂದ ಬಾಹ್ಯಾಕಾಶದ ವರೆಗೆ ಮಹಿಳೆ ಮಾಡಿರುವ ಸಾಧನೆ ಅಪಾರ. ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲೂ ತಮ್ಮ ಛಾಪು ಮೂಡಿಸಿರುವ ಮಹಿಳೆಯರು ಪ್ರಧಾನಮಂತ್ರಿ, ರಾಷ್ಟ್ರಪತಿ ಯಾಗಿದ್ದಾರೆ. ಮಹಿಳೆ ಇಷ್ಟೆಲ್ಲ ಸಾಧನೆ ಮಾಡುತ್ತಿದ್ದರೂ ಉತ್ತರ ಕನ್ನಡ ಜಿಲ್ಲೆಯ ರಾಜಕೀಯದಲ್ಲಿ ಅವರ ಪಾತ್ರ ನಗಣ್ಯ.

1957ರಿಂದ 2008ರ ವರೆಗೆ 12 ಬಾರಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಣಕ್ಕೆ ಇಳಿದ ಮಹಿಳಾ ಸ್ಪರ್ಧಿಗಳ ಸಂಖ್ಯೆ 13. ಇದೇ ಅವಧಿಯಲ್ಲಿ ಸ್ಪರ್ಧಿಸಿದ ಪುರುಷ ಅಭ್ಯರ್ಥಿಗಳ ಸಂಖ್ಯೆ 352!  ಹಿಂದಿನ 12 ಚುನಾವಣೆಗಳನ್ನು ಗಣನೆಗೆ ತೆಗೆದುಕೊಂಡರೆ ಒಟ್ಟು ಮೂವರು ಮಹಿಳೆಯರು ಮಾತ್ರ ವಿಧಾನಸಭೆ ಪ್ರವೇಶ ಮಾಡಿದ್ದಾರೆ.

ನಾಲ್ವರು ಮಹಿಳೆಯರಲ್ಲಿ ಮೊದಲು ವಿಧಾನಸಭೆ ಪ್ರವೇಶ ಮಾಡಿದವರು ಕುಮಟಾ ಕ್ಷೇತ್ರದಿಂದ 1957ರಲ್ಲಿ ಆಯ್ಕೆಯಾಗಿದ್ದ ವಸಂತಲತಾ ಮಿರ್ಜಾನಕರ.

ಮಾಜಿ ಮುಖ್ಯಮಂತ್ರಿ, ದಿವಂಗತ ರಾಮಕೃಷ್ಣ ಹೆಗಡೆಯವರ ಬೆಂಬಲದಿಂದ ಆಯ್ಕೆಯಾಗಿದ್ದ ಮಿರ್ಜಾನಕರ ಸತತ ಎರಡು ಬಾರಿ ಜಯಗಳಿಸಿ ಮೂರನೇ ಬಾರಿ ಸ್ವತಂತ್ರ ಅಭ್ಯರ್ಥಿ ರಾಮಚಂದ್ರ ಹೆಗಡೆ ಅವರ ಎದುರು ಸೋಲು ಕಂಡರು.

ಮಿರ್ಜಾನಕರ ಅವರ ನಂತರ ಕುಮಟಾ ಕ್ಷೇತ್ರದಲ್ಲಿ 1978ರಲ್ಲಿ ನಳಿನಿ ನಾಯಕ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಸೋಲು ಅನುಭವಿಸಿದರು. ಕಣದಲ್ಲಿದ್ದ ಆರು ಅಭ್ಯರ್ಥಿಗಳ ಪೈಕಿ ಅವರು ಐದನೇ ಸ್ಥಾನ ಪಡೆದರು. ಇದೇ ಕ್ಷೇತ್ರದಿಂದ 1994ರಲ್ಲಿ ಸುಮನಾ ಹೆಗಡೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಅಂದು  ಕಣದಲ್ಲಿದ್ದ 11 ಅಭ್ಯರ್ಥಿಗಳ ಪೈಕಿ 9ನೇ ಸ್ಥಾನ ಪಡೆದರು.

ಕಾರವಾರ ಕ್ಷೇತ್ರದಿಂದ 1994ರಲ್ಲಿ ಜನತಾ ದಳದಿಂದ ಜ್ಯೋತಿ ನಾಯ್ಕ ಹಾಗೂ 2008ರಲ್ಲಿ ಸಂಧ್ಯಾ ಅಣ್ವೇಕರ ಸ್ಪರ್ಧೆ ಮಾಡಿದ್ದರು. ಆದರೆ ವಿಧಾನಸಭೆ ಪ್ರವೇಶ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ.

ಅಂಕೋಲಾ ಕ್ಷೇತ್ರದಿಂದ 1972ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ರಾಧಾ ಭಟ್ ಅವರು ಎನ್‌ಸಿಓ (ಸಂಸ್ಥಾ ಕಾಂಗ್ರೆಸ್) ಪಕ್ಷದಿಂದ ಸ್ಪರ್ಧಿಸಿದ್ದ ವಿದ್ಯಾಬಾಯಿ ನಾರ್ವೇಕರ ಅವರ ವಿರುದ್ಧ ಆರು ಸಾವಿರ ಮತಗಳ ಅಂತರದಿಂದ ಗೆದ್ದು ವಿಧಾನಸಭೆ ಪ್ರವೇಶ ಮಾಡಿದ ಜಿಲ್ಲೆಯ ಎರಡನೇ ಮಹಿಳೆ ಎನಿಸಿಕೊಂಡರು.

ನಂತರ 1972ರಲ್ಲಿ ನಡೆದ ಚುನಾವಣೆಯಲ್ಲಿ ಜನತಾ ದಳದಿಂದ ಕಣಕ್ಕೆ ಇಳಿದಿದ್ದ ಅನಸೂಯಾ ಶರ್ಮಾ 27 ಸಾವಿರ ಪಡೆದು ಜಯಗಳಿಸಿ ವಿಧಾನಸಭೆಗೆ ಹೋದ ಮೂರನೇ ಮಹಿಳೆ ಎನಿಸಿಕೊಂಡರು. ಅದರ ನಂತರ 1983ರಲ್ಲಿ ನಡೆದ ಚುನಾವಣೆಯಲ್ಲಿ ಅನುಸೂಯಾ ಸ್ಪರ್ಧಿಸಿದರೂ ಗೆಲುವು ಸಾಧ್ಯವಾಗಲಿಲ್ಲ. 1989ರಲ್ಲಿ ನಡೆದ ಚುನಾವಣೆಯಲ್ಲಿ ಇಂದಿರಾ ಭಟ್ ಸ್ಪರ್ಧಿಸಿ ಕೊನೆಯ ಸ್ಥಾನ ಪಡೆದರೆ, 2008ರಲ್ಲಿ ಸ್ಪರ್ಧಿಸಿದ್ದ ಸಾವಿತ್ರಿ ಐದನೇ ಸ್ಥಾನ ಪಡೆದರು.

ಸತತ ಎರಡು ಚುನಾವಣೆಯಲ್ಲಿ ಮಹಿಳೆಯರ ಕೈಹಿಡಿದ ಅಂಕೋಲಾ ಕ್ಷೇತ್ರದ ಮತದಾರರು ನಂತರ ನಿಲುವು ಬದಲಿಸಿರುವುದು ಚುನಾವಣೆಗಳ ಫಲಿತಾಂಶದಿಂದ ಸ್ಪಷ್ಟವಾಗಿದೆ.

ಭಟ್ಕಳ ಕ್ಷೇತ್ರದಿಂದ 1994ರಲ್ಲಿ ಲಕ್ಷ್ಮಿ ನಾಯ್ಕ ಕಾಂಗ್ರೆಸ್‌ನಿಂದ ಹಾಗೂ ಲಲಿತಾ ಹೆಗಡೆ ಸಮಾಜವಾದಿ ಪಕ್ಷದಿಂದ ಸ್ಪರ್ಧೆ ಮಾಡಿ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನ ಪಡೆದಿದ್ದಾರೆ. 1972ರ ನಂತರ ಮತದಾರರು ಮಹಿಳೆಯರಿಗೆ ಮನ್ನಣೆ ನೀಡದೆ ಇರುವುದರಿಂದ ಯಾವ ವಿಧಾನಸಭಾ ಕ್ಷೇತ್ರದಲ್ಲೂ ಅವರ ಗೆಲುವೂ ಸಾಧ್ಯವಾಗಲಿಲ್ಲ ಎನ್ನುವುದು ಸ್ಪಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT