ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಪ್ರದೇಶ 4ನೇ ಹಂತದ ಚುನಾವಣೆ: ಶೇಕಡಾ 57ರಷ್ಟು ಮತದಾನ

Last Updated 19 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಲಖನೌ (ಪಿಟಿಐ): ಉತ್ತರಪ್ರದೇಶ ವಿಧಾನಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನದಲ್ಲಿ ಶೇಕಡಾ 57ರಷ್ಟು ಜನರು ಮತ ಚಲಾಯಿಸಿದ್ದಾರೆ.

ನೆಹರು ಕುಟುಂಬ ಪ್ರತಿನಿಧಿಸುವ  ರಾಯ್‌ಬರೇಲಿ, ಅಮೇಥಿ ಹಾಗೂ ಅತಿ ಹಿಂದುಳಿದ ಪ್ರದೇಶವಾದ ಬುಂದೇಲಖಂಡ್ ಕ್ಷೇತ್ರವೂ ಸೇರಿದಂತೆ 12 ಕ್ಷೇತ್ರಗಳಲ್ಲಿ 1.74 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಒಟ್ಟು 967 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಅಮೇಥಿಯ ಸಿಎಸ್‌ಎಂ ನಗರ ಮತ್ತು ರಾಯ್‌ಬರೇಲಿಯಲ್ಲಿ ಬಿರುಸಿನ ಮತದಾನ ನಡೆಯಿತು. ಬಂದಾ ಮತ್ತು ಚಿತ್ರಕೂಟದಲ್ಲೂ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತ ಚಲಾಯಿಸಿದರು.

ನಾಲ್ಕನೇ ಹಂತದ ಚುನಾವಣೆಯಲ್ಲಿ ಮೂವರು ಸಚಿವರು, 32 ಮಂದಿ ಹಾಲಿ ಶಾಸಕರು ಮತ್ತು 12 ಮಂದಿ ಮಾಜಿ ಸಚಿವರ ಅದೃಷ್ಟದ ಪರೀಕ್ಷೆಯಾಗಲಿದೆ. ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಕಾಲ್‌ರಾಜ್ ಮಿಶ್ರಾ ಮತ್ತು ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ರೀಟಾ ಬಹುಗುಣ ಜೋಶಿ ಸ್ಪರ್ಧೆಯಲ್ಲಿರುವ ಪ್ರಮುಖರು.  11 ಜಿಲ್ಲೆಗಳನ್ನು ಒಳಗೊಂಡಿರುವ ನಾಲ್ಕನೇ ಹಂತದ ಮತದಾನವು ಬೆಳಿಗ್ಗೆ ಏಳು ಗಂಟೆಗೆ ಬಿಗಿ ಭದ್ರತೆಯಲ್ಲಿ ಆರಂಭವಾಯಿತು. ಬಿಸಿಲು ಏರಿದಂತೆ ಮತದಾನವು ಬಿರುಸಾಯಿತು. ಮತದಾನ ಶಾಂತಿಯುತವಾಗಿ ನಡೆಯಿತು.

ರಾಜ್ಯ ಸರ್ಕಾರ ವಿರುದ್ಧ ಸೋನಿಯಾ ಟೀಕೆ

ಅಲಿಗಡ (ಐಎಎನ್‌ಎಸ್): ಕೇಂದ್ರ ನೀಡಿರುವ ಅನುದಾನಗಳು ಜನರಿಗೆ ತಲುಪದಿರುವುದಕ್ಕೆ ಇಲ್ಲಿ ನಡೆಯುತ್ತಿರುವ ಹಗರಣಗಳು ಮತ್ತು ಲೂಟಿಕೋರರು ಕಾರಣ ಎಂದು ಆಪಾದಿಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉತ್ತರ ಪ್ರದೇಶದ ಮಾಯಾವತಿ ನೇತೃತ್ವದ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ.

ಭಾನುವಾರ ಇಲ್ಲಿ ನಡೆದ ಚುನಾವಣಾ ರ‌್ಯಾಲಿಯಲ್ಲಿ ಮಾತನಾಡಿದ ಅವರು, ತಮ್ಮ ಭಾಷಣದುದ್ದಕ್ಕೂ ಮಾಯಾವತಿ ಮತ್ತು ಅವರ ಸರ್ಕಾರವನ್ನು ಗುರಿಯಾಗಿಟ್ಟುಕೊಂಡೇ ವಾಗ್ದಾಳಿ ನಡೆಸಿದರು.

ಬಿಎಸ್‌ಪಿಗೆ ಹೆಚ್ಚು ಸ್ಥಾನ: ಮಾಯಾವತಿ

ಲಖನೌ (ಪಿಟಿಐ): `ಪ್ರಸ್ತುತ ಚುನಾವಣೆಯಲ್ಲಿ ಬಿಎಸ್‌ಪಿ 2007 ಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ~ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಹಾಗೂ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಭಾನುವಾರ ಆಶಯ ವ್ಯಕ್ತಪಡಿದ್ದಾರೆ.

ಇಲ್ಲಿನ ಮಾಂಟೆಸ್ಸರಿ ಇಂಟರ್ ಕಾಲೇಜಿನಲ್ಲಿ ಮತದಾನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಚುನಾವಣಾ ಪ್ರಯುಕ್ತ ನಡೆಸಿದ ಪ್ರವಾಸ ಹಾಗೂ ಭಾಗವಹಿಸಿದ ಸಭೆ-ಸಮಾರಂಭಗಳಲ್ಲಿ ಸೇರಿದ್ದ ಜನರ ಮಧ್ಯೆ ಎದ್ದು ಕಾಣುತ್ತಿದ್ದ ಅತ್ಯುತ್ಸಾಹವನ್ನು ಗಮನಿಸಿದರೆ, ಈ ಬಾರಿಯೂ ಬಿಎಸ್‌ಪಿ ಅತ್ಯಂತ ಹೆಚ್ಚು ಸ್ಥಾನಗಳನ್ನು ಪಡೆದುಕೊಳ್ಳುತ್ತದೆ ಎಂಬ ವಿಶ್ವಾಸ ಇದೆ~ ಎಂದು ತಿಳಿಸಿದರು.

`ಖುರ್ಷಿದ್‌ಗೆ ಗಾಂಧಿ ಕುಟುಂಬದ ಬೆಂಬಲ~

ನವದೆಹಲಿ (ಪಿಟಿಐ): ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯನ್ನು ಕಾಂಗ್ರೆಸ್ ಕೋಮು ಆಧಾರಿತವನ್ನಾಗಿ ಮಾಡಿದೆ ಎಂದು ಬಿಜೆಪಿ ಹಿರಿಯ ಮುಖಂಡ ಎಲ್.ಕೆ ಅಡ್ವಾಣಿ ಭಾನುವಾರ ಆರೋಪಿಸಿದ್ದಾರೆ. ಮುಸ್ಲಿಮರಿಗೆ ಒಳಮೀಸಲಾತಿ ಕುರಿತಂತೆ ಕೇಂದ್ರ ಸಚಿವರಾದ ಸಲ್ಮಾನ್ ಖುರ್ಷಿದ್ ಮತ್ತು ಬೇಣಿ ಪ್ರಸಾದ್ ನೀಡಿರುವ ಹೇಳಿಕೆಗಳನ್ನು ಗಾಂಧಿ ಕುಟುಂಬ ಬೆಂಬಲಿಸಿದ್ದು ಇದನ್ನು  ದೃಢಪಡಿಸುತ್ತದೆ ಎಂದಿದ್ದಾರೆ.

ಕಾಂಗ್ರೆಸ್ ನಾಯಕರು ಈ ಹಿಂದೆ ಯಾವುದೇ ವಿಧಾನಸಭಾ ಚುನಾವಣೆಗಳನ್ನು  ಈ ಬಾರಿ ಉತ್ತರಪ್ರದೇಶದಲ್ಲಿ ಮಾಡಿದಂತೆ ಉದ್ದೇಶಪೂರ್ವಕವಾಗಿ ಜಾತಿ ಆಧಾರಿತವಾಗಿ ಮಾಡಿರಲಿಲ್ಲ~ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT