ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಘಾಟನೆಗೆ ಕಾದು ನಿಂತಿದೆ ಮೊರಾರ್ಜಿ ಶಾಲೆ

Last Updated 12 ಅಕ್ಟೋಬರ್ 2012, 12:10 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಹೊರವಲಯದ ಪೆರೇಸಂದ್ರ ಬಳಿ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ಮಾದರಿ ವಸತಿ ಶಾಲೆಯು ನಿರ್ಮಿಸಲಾಗಿದ್ದು, ವಿಶಾಲವಾದ ಆವರಣದಲ್ಲಿ ಮಕ್ಕಳಿಗೆ ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸಲಾಗಿದೆ. ಸುಮಾರು 6 ಎಕರೆ ಜಮೀನಿನಲ್ಲಿ ನಿರ್ಮಿಸಲಾಗಿರುವ ಶಾಲೆಯು ತಾಲ್ಲೂಕಿನಲ್ಲೇ ಬೃಹತ್ ಮಾದರಿ ವಸತಿ ಶಾಲೆಯೆಂದು ಪರಿಗಣಿಸಲಾಗುತ್ತಿದೆ. ಒಟ್ಟು 229 ವಿದ್ಯಾರ್ಥಿಗಳು ಇಲ್ಲಿ ಈಗಾಗಲೇ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಅಚ್ಚರಿ ಸಂಗತಿಯೆಂದರೆ, ಕಟ್ಟಡದ ಉದ್ಘಾಟನೆ ಇನ್ನೂ ನೆರವೇರಿಲ್ಲ !

`ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅನುಮೋದನೆ ಸಿಗದ ಮತ್ತು ಕಾರ್ಯಕ್ರಮಕ್ಕೆ ಸೂಕ್ತ ಸಮಯ ನಿಗದಿಯಾಗದ ಕಟ್ಟಡ ಉದ್ಘಾಟನೆ ಕಾರ್ಯ ನೆರವೇರಿಲ್ಲ. ಉದ್ಘಾಟನಾ ಕಾರ್ಯವು ಯಾವಾಗ ಮತ್ತು ಯಾರಿಂದ ನೆರವೇರುತ್ತದೆ ಎಂಬುದು ಕೂಡ ಇನ್ನೂ ನಿಶ್ಚಯವಾಗಿಲ್ಲ. ಆದರೆ ಕಟ್ಟಡ ಉದ್ಘಾಟನಾ ಕಾರ್ಯವು ಶೀಘ್ರವೇ ನೆರವೇರಲಿದೆ~ ಎಂದು ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಪೆರೇಸಂದ್ರದಲ್ಲಿ ಬಾಡಿಗೆ ಕಟ್ಟಡವೊಂದರಲ್ಲಿ ವಿದ್ಯಾರ್ಥಿಗಳೆಲ್ಲ ವಸತಿ ಸಹಿತ ಶಿಕ್ಷಣ ಪಡೆಯುತ್ತಿದ್ದರು. ಆದರೆ ಅಲ್ಲಿ ಸ್ಥಳಾವಕಾಶ ತುಂಬ ಕಿರಿದಾಗಿದ್ದ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗುತಿತ್ತು. ಇದನ್ನರಿತ ರಾಜ್ಯ ಸರ್ಕಾರವು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೂಲಕ ಪೆರೇಸಂದ್ರದಲ್ಲೇ ನೂತನ ಕಟ್ಟಡ ನಿರ್ಮಿಸಲು ನಿರ್ಧರಿಸಿತು. ನಿವೇಶನ ಗುರುತಿಸಿ ಕಟ್ಟಡ ನಿರ್ಮಾಣವನ್ನು ಕೈಗೊಳ್ಳಲಾಯಿತು.

`ನಿಗದಿತ ಅವಧಿಯೊಳಗೆ ಸುಮಾರು 6 ಎಕರೆ ಜಮೀನಿನಲ್ಲಿ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ಮಾದರಿ ವಸತಿ ಶಾಲೆಗೆ ಕಟ್ಟಡವು ನಿರ್ಮಾಣಗೊಂಡಿದೆ~ ಎಂದು ವಸತಿ ಶಾಲೆಯ ವಾರ್ಡನ್ ಮಂಜುನಾಥ್ ತಿಳಿಸಿದರು.

`ಶಾಲೆಯಲ್ಲಿ ಸದ್ಯಕ್ಕೆ 229 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಅವರಲ್ಲಿ 148 ಬಾಲಕರು, 81 ಬಾಲಕಿಯರಿದ್ದು ಪ್ರತ್ಯೇಕ ಕಟ್ಟಡ ಸೌಕರ್ಯ ಕಲ್ಪಿಸಲಾಗಿದೆ.

ಶಾಲಾ ಆವರಣದಲ್ಲೇ ಪ್ರತ್ಯೇಕ ಭೋಜನಶಾಲೆ, ಶಿಕ್ಷಕರಿಗೆ, ಶಿಕ್ಷಕೇತರರಿಗೆ ವಸತಿ ಸೌಕರ್ಯ, ಕ್ರೀಡಾಂಗಣ ಮುಂತಾದವು ಕಲ್ಪಿಸಲಾಗಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಇದೇ ಪ್ರಥಮ ಬಾರಿಗೆ ಇಷ್ಟು ವಿಶಾಲವಾದ ಆವರಣದಲ್ಲಿ ಸರ್ಕಾರಿ ವಸತಿ ಶಾಲೆಯನ್ನು ಕಟ್ಟಲಾಗಿದೆ~ ಎಂದರು.

ನಮ್ಮ ಶಾಲೆಯಲ್ಲಿ 6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾರೆ. ಐದನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ ಆಯೋಜಿಸುವುದರ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತಾರೆ.

ನಮ್ಮ ಶಾಲೆಯಲ್ಲಿ ಚಿಕ್ಕಬಳ್ಳಾಪುರದಿಂದ ಮಾತ್ರವಲ್ಲದೇ ಚಿಂತಾಮಣಿ, ಬಾಗೇಪಲ್ಲಿ, ದೇವನಹಳ್ಳಿ ತಾಲ್ಲೂಗಳ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಹೊರಜಿಲ್ಲೆಯ ವಿದ್ಯಾರ್ಥಿಗಳು ಇಲ್ಲಿದ್ದಾರೆ. ಶೇ 75ರಷ್ಟು ಅಲ್ಪಸಂಖ್ಯಾತ ಸಮುದಾಯದವದರಿಗೆ ಮತ್ತು ಶೇ 25ರಷ್ಟು ಇತರ ಜಾತಿ-ಸಮುದಾಯದವರಿಗೆ ಪ್ರವೇಶ ಅವಕಾಶ ಕಲ್ಪಿಸಲಾಗಿದೆ~ ಎಂದು ಅವರು ತಿಳಿಸಿದರು.

`ಕಟ್ಟಡದ ಉದ್ಘಾಟನೆಯಾಗದಿರುವುದಕ್ಕೆ ನಿಶ್ಚಿತ ಕಾರಣಗಳು ಗೊತ್ತಿಲ್ಲ. ಈ ಹಿಂದಿನ ಬಾಡಿಗೆ ಕಟ್ಟಡದಲ್ಲಿ ವಿದ್ಯಾರ್ಥಿಗಳು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರದ ಅನುಮತಿಯನ್ನು ಪಡೆದು ಆಗಸ್ಟ್ 1ರಂದು ಹೊಸ ಕಟ್ಟಡಕ್ಕೆ ಮಕ್ಕಳನ್ನು ಕರೆತಂದೆವು. ಮಕ್ಕಳು ಈಗ ನೆಮ್ಮದಿಯಿಂದ ಶಿಕ್ಷಣ ಪಡೆಯುತ್ತಿದ್ದಾರೆ.

ಅಗತ್ಯ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿ ಶಾಲೆಯಲ್ಲಿದ್ದು, ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ~ ಎಂದು ವಸತಿ ಶಾಲೆಯ ಪ್ರಾಂಶುಪಾಲ ಶಂಕರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT