ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಾನನಗರಿಗೆ ಬಂದ ಪಾಕ್ ತಂಡ

Last Updated 22 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: ಸಾಕಷ್ಟು ನಿರೀಕ್ಷ್ನೆ ಹೊತ್ತು ಭಾರತ ವಿರುದ್ಧ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯವನ್ನಾಡಲು ಪಾಕಿಸ್ತಾನ ತಂಡ ಶನಿವಾರ ರಾತ್ರಿ ಉದ್ಯಾನನಗರಿಗೆ ಆಗಮಿಸಿತು.

ವಿಮಾನ ನಿಲ್ದಾಣದಿಂದ ಪಾಕ್ ಆಟಗಾರರು ನೇರವಾಗಿ ಹೋಟೆಲ್‌ಗೆ ತೆರಳಿದರು. ಈ ವೇಳೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕೆಲ ಅಧಿಕಾರಿಗಳು ಹಾಜರಿದ್ದರು. ಪಾಕ್ ತಂಡದ ಈ ಪ್ರವಾಸ ಆರಂಭದ ಮೂಲಕ ಐದು ವರ್ಷಗಳ ಕಾಯುವಿಕೆಗೆ ಕೊನೆಗೂ ತೆರೆ ಬಿದ್ದಿದೆ. 2008ರಲ್ಲಿ ಮುಂಬೈಯಲ್ಲಿ ಭಯೋತ್ಪಾದಕರ ದಾಳಿ ನಡೆದ ನಂತರ ಉಭಯ ರಾಷ್ಟ್ರಗಳ ನಡುವೆ ಕ್ರಿಕೆಟ್ ಸರಣಿ ನಡೆದಿರಲಿಲ್ಲ. ಈ ಕುರಿತು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭಾರತಕ್ಕೆ ಪದೇ ಪದೇ ಮನವಿ ಮಾಡಿಕೊಳ್ಳುತ್ತಲೇ ಬಂದಿತ್ತು. ಕೊನೆಗೆ ಬಿಸಿಸಿಐ ಪಾಕ್ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿತ್ತು.

ಬೆಂಗಳೂರಿನಲ್ಲಿ ಪಂದ್ಯಕ್ಕೆ ಅಡ್ಡಿಪಡಿಸುವುದಾಗಿ ಕೆಲ ಸಂಘಟನೆಗಳು ಬೆದರಿಕೆ ಒಡ್ಡಿದ ಕಾರಣ, ಭಾರಿ ಬಿಗಿ ಭದ್ರತೆ ನಿಯೋಜಿಸಲಾಗಿದೆ.
ನವದೆಹಲಿ ವರದಿ: ಮಹಮ್ಮದ್ ಹಫೀಜ್ ನೇತೃತ್ವದ ಪಾಕ್ ತಂಡ ಶನಿವಾರ ಮಧ್ಯಾಹ್ನ ನವದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು. ಈ ವೇಳೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಪಾಕ್ ಹೈಕಮೀಷನ್‌ನ ಅಧಿಕಾರಿಗಳು ಹಾಜರಿದ್ದರು.

`ಭಾರತದ ನೆಲಕ್ಕೆ ಕಾಲಿಟ್ಟಾಗ ಪಾಕ್ ಆಟಗಾರರು ಬಹಳ ಖುಷಿ ಪಟ್ಟರು. ಅವರಿಗೆ ಹೂ ಗುಚ್ಛ ನೀಡಿ ಸ್ವಾಗತಿಸಲಾಯಿತು' ಎಂದು ಬಿಸಿಸಿಐ ಮುಖ್ಯ ಆಡಳಿತಾಧಿಕಾರಿ ರತ್ನಾಕರ ಶೆಟ್ಟಿ ತಿಳಿಸಿದರು.

ಕರಾಚಿ ವರದಿ: ಭಾರತಕ್ಕೆ ತೆರಳುವುದಕ್ಕೆ ಮುನ್ನ ಪಾಕ್ ತಂಡದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಹಾಗೂ ಜಾವೇದ್ ಮಿಯಾಂದಾದ್ ಅವರು ತಮ್ಮ ದೇಶದ ಆಟಗಾರರಿಗೆ ತಾಂತ್ರಿಕ ವಿಷಯಗಳ ಬಗ್ಗೆ  ಕಿವಿಮಾತು ಹೇಳಿದರು. ಪಾಕ್ ತಂಡ ಈ ಪ್ರವಾಸದಲ್ಲಿ ಎರಡು ಟ್ವೆಂಟಿ-20 ಹಾಗೂ ಮೂರು ಏಕದಿನ ಪಂದ್ಯಗಳನ್ನಾಡಲಿದೆ. ಮೊದಲ ಟಿ-20 ಪಂದ್ಯ ಡಿಸೆಂಬರ್ 25ರಂದು ಬೆಂಗಳೂರಿನಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT