ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಅವಕಾಶಗಳಿಲ್ಲದ ಮಹಿಳಾ ಅಧ್ಯಯನ ಕೋರ್ಸ್

Last Updated 15 ಜನವರಿ 2012, 19:30 IST
ಅಕ್ಷರ ಗಾತ್ರ

ಶಿಕ್ಷಣದ ಉದ್ದೇಶ ಜ್ಞಾನ ಹಾಗೂ ಉದ್ಯೋಗ. ಇವೆರಡರಲ್ಲಿ ಒಂದು ಉದ್ದೇಶ ಈಡೇರದಿದ್ದರೂ ಅಂತಹ ಶಿಕ್ಷಣಕ್ಕೆ ಬೆಲೆ ಇರುವುದಿಲ್ಲ. ಸರ್ಕಾರದ ಅವೈಜ್ಞಾನಿಕ ಕ್ರಮ ಹಾಗೂ ನಿರ್ಲಕ್ಷ್ಯದಿಂದಾಗಿ ರಾಜ್ಯದಲ್ಲಿ ಮಹಿಳಾ ಅಧ್ಯಯನ ಸ್ನಾತಕೋತ್ತರ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು ಉದ್ಯೋಗ ವಂಚಿತರಾಗುತ್ತಿದ್ದಾರೆ.

ಸ್ತ್ರೀ ಪ್ರಜ್ಞೆ ಬೆಳೆಸುವುದು, ಮಹಿಳಾ ಸಬಲೀಕರಣ ಉದ್ದೇಶದಿಂದ ಪರಿಚಯಿಸಿದ ಮಹಿಳಾ ಅಧ್ಯಯನ ಕೋರ್ಸ್ ತನ್ನ ಮಹತ್ವ ಕಳೆದುಕೊಳ್ಳುವ ಅಪಾಯವೂ ಎದುರಾಗಿದೆ.

ಈಗಾಗಲೇ ಸ್ನಾತಕೋತ್ತರ ಪದವಿ ಪೂರೈಸಿರುವ ಸಾವಿರಾರು ವಿದ್ಯಾರ್ಥಿಗಳು ಉದ್ಯೋಗ ಇಲ್ಲದೆ ಪರದಾಡುತ್ತಿದ್ದಾರೆ. ಸಮಾಜ ಕಾರ್ಯ ಮತ್ತು ಗೃಹ ವಿಜ್ಞಾನ ಕೋರ್ಸ್‌ಗಳಿಗೆ ಮಹಿಳಾ ಅಧ್ಯಯನ ಸಮ ಎಂದು ಪರಿಗಣಿಸದಿರುವುದೇ ಇಷ್ಟೆಲ್ಲ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ.

ಮಹಿಳಾ ಅಧ್ಯಯನ ಕೋರ್ಸ್‌ನ ಪ್ರಾಮುಖ್ಯತೆ ಮನಗಂಡ ನಂತರ ಹದಿನೆಂಟು ವರ್ಷಗಳ ಹಿಂದೆ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಈ ಕೋರ್ಸ್ ಅನ್ನು ಪರಿಚಯಿಸಲಾಯಿತು. ಈಗಾಗಲೇ ಸಾವಿರಾರು ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಪ್ರತಿ ವರ್ಷ ನೂರಾರು ವಿದ್ಯಾರ್ಥಿಗಳು ಪದವಿ ಪಡೆಯುತ್ತಿದ್ದಾರೆ. ಆದರೆ ಉದ್ಯೋಗ ಅವಕಾಶ ಮಾತ್ರ ಇಲ್ಲದಂತಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಹಲವು ಇಲಾಖೆಗಳಲ್ಲಿ ಈ ಪದವೀಧರರಿಗೆ ಉದ್ಯೋಗ ಅವಕಾಶ ಇದೆ.
 
ಪ್ರಥಮ ದರ್ಜೆ ಅಧಿಕಾರಿಗಳನ್ನು ಈ ಇಲಾಖೆಗಳು ನೇಮಕ ಮಾಡಿಕೊಳ್ಳುತ್ತಿವೆ. ಆದರೆ ಸಮಾಜ ಕಾರ್ಯ, ಗೃಹ ವಿಜ್ಞಾನ ಪದವೀಧರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ವೃಂದ ಮತ್ತು ನೇಮಕಾತಿ ನಿಯಮಕ್ಕೆ ತಿದ್ದುಪಡಿ ಮಾಡದಿರುವುದೇ ಇದಕ್ಕೆಲ್ಲ ಕಾರಣವಾಗಿದೆ.

ಉಪನ್ಯಾಸಕರಾಗುವ ಅವಕಾಶ ಕಡಿಮೆ
ಮಹಿಳಾ ಅಧ್ಯಯನ ಕೋರ್ಸ್ ಪೂರೈಸಿದವರಿಗೆ ಉಪನ್ಯಾಸಕರಾಗುವ ಅವಕಾಶವೂ ಕಡಿಮೆ ಇದೆ. ಅವರು ಕೇವಲ ವಿ.ವಿಗಳಲ್ಲಿ ಮಾತ್ರ ಪ್ರಾಧ್ಯಾಪಕರಾಗಬಹುದು. ಪದವಿ ಮಟ್ಟದಲ್ಲಿ ಮಹಿಳಾ ಅಧ್ಯಯನ ಕೋರ್ಸ್ ಪರಿಚಯಿಸಿಲ್ಲ.

ಆದ್ದರಿಂದ ಪದವಿ ಕಾಲೇಜುಗಳಲ್ಲಿ ಬೋಧನೆ ಮಾಡಲು ಅವಕಾಶವೇ ಇಲ್ಲ. ವಿ.ವಿಗಳಲ್ಲಿ ಇರುವ ಅವಕಾಶ ತೀರ ಕಡಿಮೆ ಇರುವುದರಿಂದ ಬೆರಳೆಣಿಕೆಗಿಂತ ಕಡಿಮೆ ಮಂದಿಗೆ ಕೆಲಸ ಸಿಗುತ್ತಿದೆ. ಆದರೆ ಇಲ್ಲಿಯೂ ಒಂದು ಸಮಸ್ಯೆ ಇದೆ. ವಿ.ವಿಗಳಲ್ಲಿ ಯಾವುದೇ ವಿಷಯದ ಬೋಧನೆಗೆ ಅರ್ಹತೆ ಪಡೆಯಬೇಕೆಂದರೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ) ಪಾಸಾಗುವುದು ಕಡ್ಡಾಯ.

ಇದಕ್ಕೆ ಪರ್ಯಾವಾಗಿ ಕರ್ನಾಟಕದಲ್ಲಿ ರಾಜ್ಯ ಅರ್ಹತಾ ಪರೀಕ್ಷೆಯನ್ನು (ಕೆಎಸ್‌ಇಟಿ) ಮೈಸೂರು ವಿ.ವಿ ನಡೆಸುತ್ತಿದೆ. ಆದರೆ ಕೆಎಸ್‌ಇಟಿಯಲ್ಲಿ ಮಹಿಳಾ ಅಧ್ಯಯನ ವಿಷಯವೇ ಇಲ್ಲ. ಆದ್ದರಿಂದ ಕಠಿಣವಾಗಿರುವ ನೆಟ್ ಪರೀಕ್ಷೆ ಉತ್ತೀರ್ಣರಾಗುವುದು ಅನಿವಾರ್ಯವಾಗಿದೆ.

ಪತ್ರಿಕೋದ್ಯಮವನ್ನು ಉದಾಹರಣೆಯಾಗಿ ತೆಗೆದುಕೊಂಡರೆ ಸ್ನಾತಕೋತ್ತರ ಪದವಿ ಪೂರೈಸಿದವರು ವಿ.ವಿಗಳಲ್ಲಿ ಹಾಗೂ ಪದವಿ ಕಾಲೇಜುಗಳಲ್ಲಿಯೂ ಉಪನ್ಯಾಸಕ ಹುದ್ದೆ ಪಡೆಯಬಹುದು. ಮಹಿಳಾ ಅಧ್ಯಯನವೊಂದು ಪ್ರಮುಖ ವಿಷಯ ಆಗಿರುವುದರಿಂದ ಪದವಿ ಮಟ್ಟದಲ್ಲಿಯೂ ಐಚ್ಛಿಕ ವಿಷಯವಾಗಿ ಪರಿಚಯಿಸಿ ಎಂದು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಹೇಳಿದೆ. ಆದರೆ ಇಚ್ಛಾಶಕ್ತಿಯ ಕೊರತೆಯಿಂದಾಗಿ ಜಾರಿಗೆ ಬಂದಿಲ್ಲ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿನಲ್ಲಿ ಸಹ ಈ ವಿಷಯದ ಬಗ್ಗೆ ಚರ್ಚೆ ನಡೆಸಲಾಯಿತು. ಮಹಿಳಾ ಅಧ್ಯಯನ ಪದವೀಧರರ ಬೇಡಿಕೆಗಳ ತಜ್ಞರ ಸಮಿತಿಯಲ್ಲಿ ಚರ್ಚೆ ನಡೆಸಿ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂಬ ನಿರ್ಧಾರ ಕೈಗೊಳ್ಳಲಾಯಿತು. ರಾಜ್ಯದ ಇತರೆ ವಿ.ವಿಗಳಲ್ಲಿ ಸಹ ಈ ಬಗ್ಗೆ ಚರ್ಚೆ ನಡೆಯುತ್ತಿದ್ದರೂ ಫಲಿತಾಂಶ ಮಾತ್ರ ಇಲ್ಲ.

`ಸಮಾಜ ಕಾರ್ಯ ಮತ್ತು ಮಹಿಳಾ ಅಧ್ಯಯನದಲ್ಲಿ ಅಂತಹ ವ್ಯತ್ಯಾಸ ಏನೂ ಇಲ್ಲ. ಅವರು ಅಧ್ಯಯನ ಮಾಡುವ ವಿಷಯವನ್ನು ನಾವು ಮಹಿಳಾ ದೃಷ್ಟಿಕೋನದಲ್ಲಿ ಆಳವಾಗಿ ಅಧ್ಯಯನ ಮಾಡುತ್ತೇವೆ. ಆದ್ದರಿಂದ ತತ್ಸಮಾನ ಕೋರ್ಸ್ ಎಂದು ಪರಿಗಣಿಸಲು ಯಾವುದೇ ಅಡ್ಡಿ ಇಲ್ಲ. ಕೇವಲ ಒಂದು ಇಲಾಖೆ ಮಾತ್ರವಲ್ಲ ಎಲ್ಲ ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮಕ್ಕೆ ತಿದ್ದುಪಡಿ ಮಾಡಿದರೆ ಮಾತ್ರ ನಮಗೆ ಹೆಚ್ಚಿನ ಉದ್ಯೋಗ ಅವಕಾಶ ಸಿಗುತ್ತದೆ.
 
ಈ ಬಗ್ಗೆ ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೂ ಪ್ರಯೋಜನ ಆಗಿಲ್ಲ~ ಎನ್ನುತ್ತಾರೆ ರಾಜ್ಯ ಮಹಿಳಾ ಅಧ್ಯಯನ ವಿದ್ಯಾರ್ಥಿ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಡಾ. ಯರ‌್ರಿಸ್ವಾಮಿ.

`ಆಯಾ ವಿಷಯದಲ್ಲಿ ಎಂ.ಎ ಮತ್ತು ಪಿಎಚ್.ಡಿ ಮಾಡಿದವರನ್ನು ಪ್ರಾಧ್ಯಾಪಕ ಮತ್ತು ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕ ಮಾಡಬೇಕು ಎನ್ನುತ್ತದೆ ಯುಜಿಸಿ ನಿಯಮ. ಆದರೆ ಇದನ್ನು ಪಾಲಿಸುತ್ತಿಲ್ಲ.
 
ಮಹಿಳಾ ವಿ.ವಿ ಮತ್ತು ಬೆಂಗಳೂರು ವಿ.ವಿ.ಯ ಮಹಿಳಾ ಅಧ್ಯಯನ ವಿಭಾಗಕ್ಕೆ ಸಮಾಜ ಶಾಸ್ತ್ರ, ರಾಜ್ಯಶಾಸ್ತ್ರ, ಕನ್ನಡ ಸ್ನಾತಕೋತ್ತರ ಪದವೀಧರರನ್ನು ಆಯ್ಕೆ ಮಾಡಲಾಗಿದೆ. ಇದರಿಂದಾಗಿ ನಮಗೆ ಅನ್ಯಾಯವಾಗುತ್ತಿದೆ. ಸೂಕ್ತ ತಿದ್ದುಪಡಿಗಳನ್ನು ತರುವ ಮೂಲಕ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿಕೊಡಬೇಕು.

ಇಲ್ಲವಾದರೆ ಮಹತ್ವಾಕಾಂಕ್ಷೆಯಿಂದ ಆರಂಭಿಸಿರುವ ಮಹಿಳಾ ಅಧ್ಯಯನ ಕೋರ್ಸ್‌ಗೆ ಭವಿಷ್ಯದಲ್ಲಿ ವಿದ್ಯಾರ್ಥಿಗಳೇ ಸಿಗದ ಪರಿಸ್ಥಿತಿ ನಿರ್ಮಾಣವಾದರೂ ಆಶ್ಚರ್ಯಪಡಬೇಕಿಲ್ಲ. ಇದೆಲ್ಲಕ್ಕಿಂತ ಮುಖ್ಯವಾಗಿ ಈಗಾಗಲೇ ಪದವಿ ಪೂರೈಸಿರುವ ಸಾವಿರಾರು ವಿದ್ಯಾರ್ಥಿಗಳ ಅನ್ನದ ಪ್ರಶ್ನೆಯೂ ಇದರಲ್ಲಿ ಅಡಗಿದೆ~ ಎಂದು ಅವರು ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT