ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಖಾತರಿ: ಕಾಮಗಾರಿ ಚುರುಕಿಗೆ ಸೂಚನೆ

Last Updated 9 ಜುಲೈ 2013, 11:10 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದಲ್ಲಿ ಅವ್ಯವಹಾರದ ಆರೋಪಗಳು ಹೆಚ್ಚಿದ್ದು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದರ ಬಗೆಗೆ ಹೆಚ್ಚಿನ ದೂರುಗಳಿವೆ ಎಂದು ಸಂಸದ ಧರ್ಮಸಿಂಗ್ ಸೋಮವಾರ ಹೇಳಿದರು.

ಸೋಮವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಯಾವುದೇ ಕೆಲಸ ಆಗುತ್ತಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಅವರಿಗೆ ಹೇಳಿ, ಹೇಳಿ ಸಾಕಾಗಿದೆ' ಎಂದು ಹೇಳಿದರು.

ಕೇಂದ್ರ ಪುರಸ್ಕೃತ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಗೆ ಬರಬೇಕು ಎಂಬುದು ಆದೇಶ. ಹಿಂದಿನ ಸರ್ಕಾರದಲ್ಲಿ ಈ ಬಗೆಗೆ ಕೇಳುವವರೇ ಇರಲಿಲ್ಲ. ಈ ಹಿಂದೆ ಪರಿಶೀಲನೆ ಸಭೆ ನಡೆಸಿದರೂ ಉಸ್ತುವಾರಿ ಸಚಿವರು, ಶಾಸಕರೂ ಬರುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಯೋಜನೆಗಳ ಜಾರಿ ವಿಳಂಬ ಬಗೆಗೆ ಹಿಂದೆ ಯಡಿಯೂರಪ್ಪ ಅವರಿಗೊ, ಜಗದೀಶ್ ಶೆಟ್ಟರ್‌ಅವರಿಗೊ ಹೇಳಲು ಸಾಧ್ಯವಿರಲಿಲ್ಲ. ಈಗ ಸರ್ಕಾರ ಬದಲಾಗಿದೆ. ಇನ್ನಾದರೂ ಕೆಲಸ ಮಾಡಿ. ಕೇಂದ್ರದ ಹಣ ಇದೆ. ಅಭಿವೃದ್ಧಿ ಮಾಡಲು ಒತ್ತು ನೀಡಿ ಎಂದು ಸೂಚಿಸಿದರು.

ಅಕ್ರಮದ ದೂರುಗಳಿವೆ: ಸಭೆಯಲ್ಲಿ ಮಾತನಾಡಿದ ಉಪ ಕಾರ್ಯದರ್ಶಿ ಭೀಮಸೇನ ಗುಡೂರ ಅವರು, ಭಾಲ್ಕಿ ಮತ್ತು ಬಸವಕಲ್ಯಾಣ ತಾಲ್ಲೂಕಿನಲ್ಲಿ ಯೋಜನೆ ಜಾರಿಯಲ್ಲಿ ಅಕ್ರಮ ಆಗಿರುವ ಬಗೆಗೆ ದೂರುಗಳು ಬಂದಿವೆ. ಇವುಗಳನ್ನು ಪರಿಶೀಲಿಸಿ ಕ್ರಮ ಜರುಗಿಸಲಾಗುವುದು ಎಂದರು.

2013-14ನೇ ಸಾಲಿನಲ್ಲಿ  ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಯಲ್ಲಿ 10 ಗ್ರಾಮ ಪಂಚಾಯಿತಿ ಹೊರತುಪಡಿಸಿ ಉಳಿದೆಲ್ಲ ಕಡೆ ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯಲಾಗಿದೆ. 3-4 ದಿನದಲ್ಲಿ ಈ ಪಂಚಾಯಿತಿಗಳಲ್ಲೂ ವರದಿ ಪಡೆಯಲಾಗುವುದು ಎಂದು ತಿಳಿಸಿದರು.

ಕಳೆದ ವರ್ಷ 2,09,509 ಜಾಬ್‌ಕಾರ್ಡ್‌ಗಳು ಇದ್ದು, ಈ ವರ್ಷ 1,79,925 ಜಾಬ್‌ಕಾರ್ಡ್‌ಗಳಿವೆ ಎಂಬ ಮಾಹಿತಿಯನ್ನು ಉಲ್ಲೇಖಿಸಿದ ಶಾಸಕ ಈಶ್ವರ ಖಂಡ್ರೆ ಅವರು, `ಉಳಿದ ಜಾಬ್ ಕಾರ್ಡ್‌ಗಳು ಅಕ್ರಮವೇ, ಅವುಗಳನ್ನು ರದ್ದುಪಡಿಸಲಾಗಿದೆಯೇ' ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉಜ್ವಲ್ ಕುಮಾರ್ ಘೋಷ್ ಅವರು, `ಪ್ರಸಕ್ತ ಸಾಲಿನಲ್ಲಿ ಅಂಚೆ ಕಚೇರಿಯಲ್ಲಿ ಖಾತೆ ಹೊಂದಿದ್ದವರಿಗೆ ಈಗ ಬ್ಯಾಂಕ್‌ನಲ್ಲಿ ಖಾತೆ ತೆರೆಯಲು ಸೂಚಿಸಲಾಗಿದೆ. ಎಲ್ಲರೂ ಖಾತೆ ತೆರೆದಿಲ್ಲ' ಎಂದರು. ಇಲ್ಲಿ ಕೇವಲ ಬ್ಯಾಂಕ್‌ನಲ್ಲಿ ಖಾತೆ ಹೊಂದಿದವರ ಸಂಖ್ಯೆಗಳಷ್ಟೇ ಇಲ್ಲಿ ನೀಡಲಾಗಿದೆ. ಜಾಬ್ ಕಾರ್ಡ್ ಪಡೆದವರ ಪೈಕಿ ಇದುವರೆಗೂ 486 ಮಂದಿ ಉದ್ಯೋಗ ಬಯಸಿದ್ದು, ಈ ಪೈಕಿ 88 ಜನರಿಗೆ ಉದ್ಯೋಗ ನೀಡಲಾಗಿದೆ ಎಂದರು.

ನಿಯಮದ ಅನುಸಾರ ಉದ್ಯೋಗ ಬಯಸಿ ಅರ್ಜಿ ಸಲ್ಲಿಸಿದ 15 ದಿನದಲ್ಲಿ ಕೆಲಸ ನೀಡಬೇಕು. ಉದ್ಯೋಗ ನೀಡುವಲ್ಲಿ ವಿಳಂಬವಾದ ಪ್ರಕರಣಗಳು ಇದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬಹುದು ಎಂದರು.

ಪಿಡಿಒಗಳ ಕೊರತೆ: ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್ ಅವರು, ಜಿಲ್ಲೆಯಲ್ಲಿ ಪಿಡಿಒಗಳ ಕೊರತೆ ದೊಡ್ಡ ಸಮಸ್ಯೆ. ಶೇ 40ರಷ್ಟು ಕೊರತೆ ಇದ್ದು, ಇದನ್ನು ಪರಿಹರಿಸಬೇಕಿದೆ. ಇರುವ ಕೆಲವರು ಕೆಲಸ ಮಾಡುವುದಿಲ್ಲ; ಕೆಲವರು ಕೆಲಸ ಮಾಡುವ ಸ್ಥಿತಿಯಲ್ಲೇ ಇರುವುದಿಲ್ಲ ಎಂದರು.  ಸಮ್ಮಿಶ್ರ ಸರ್ಕಾರ ಇದ್ದಾಗ, ಕೆಲ ಗ್ರಾಮ ಪಂಚಾಯಿತಿಗಳಿಗೆ ಲೆಕ್ಕ ಸಹಾಯಕ ನೀಡುವ ಪ್ರಸ್ತಾಪ ಇತ್ತು. ಅದು ಜಾರಿಯಾಗುವಂತೆ ನೋಡಿಕೊಂಡರೆ ಸಮಸ್ಯೆ ಬಗೆಹರಿವುದರ ಜೊತೆಗೆ, ಕಾಮಗಾರಿಯೂ ಚುರುಕಾಗಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT