ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಸೃಷ್ಟಿಗಾಗಿ ಕೈಗಾರಿಕೆ ಸ್ಥಾಪನೆ: ಕತ್ತಿ

Last Updated 10 ಏಪ್ರಿಲ್ 2014, 6:59 IST
ಅಕ್ಷರ ಗಾತ್ರ

ಬೆಳಗಾವಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಕತ್ತಿ ಅವರದ್ದು ರಾಜಕೀಯ ಹಿನ್ನೆಲೆ ಕುಟುಂಬ. ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಯ ನಿವಾಸಿ ಯಾಗಿರುವ ಇವರು, ದ್ವಿತೀಯ ಪಿಯುಸಿ ಮುಗಿಸಿದ ಬಳಿಕ ಓದಿಗೆ ತಿಲಾಂಜಲಿ ಹೇಳಿ ಹದಿನೆಂಟನೇ ವಯಸ್ಸಿಗೆ ಸಹಕಾರಿ ರಂಗ ಪ್ರವೇಶಿಸಿದರು. ಸ್ಥಳೀಯ ಅರ್ಬನ್‌ ಬ್ಯಾಂಕ್‌ ಅಧ್ಯಕ್ಷರಾಗಿದ್ದ ಇವರು 1999ರಿಂದ ಹದಿಮೂರುವರೆ ವರ್ಷಗಳ ಕಾಲ ಸತತವಾಗಿ ಅಧ್ಯಕ್ಷರಾಗಿ ಬಿಡಿಸಿಸಿ ಬ್ಯಾಂಕ್‌ಅನ್ನು ಲಾಭದತ್ತ ಒಯ್ದರು. ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರೂ ಆಗಿದ್ದರು.

ಹುಕ್ಕೇರಿ ಕ್ಷೇತ್ರದಲ್ಲಿ ಏಳು ಬಾರಿ ಶಾಸಕರಾಗಿರುವ ಉಮೇಶ ಕತ್ತಿ ಅವರು ತಮ್ಮ ಸೋದರರಾದ ರಮೇಶ ಅವರನ್ನು 2009ರಲ್ಲಿ ರಾಜಕೀಯ ಕ್ಷೇತ್ರಕ್ಕೆ ಕರೆ ತಂದರು. ಮೊದಲನೇ ಯತ್ನದಲ್ಲೇ ಸಂಸದರಾದ ಇವರು, ಇದೀಗ ಪುನರಾಯ್ಕೆ ಬಯಸಿ ಅಖಾಡಕ್ಕೆ ಇಳಿದಿದ್ದಾರೆ. ತಮ್ಮ ಬಿಡುವಿಲ್ಲದ ಪ್ರಚಾರದ ನಡುವೆಯೂ ರಮೇಶ ಕತ್ತಿ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ:

* ಪ್ರಶ್ನೆ: ಕ್ಷೇತ್ರದ ಜನರಿಂದ ಪ್ರತಿಕ್ರಿಯೆ ಹೇಗೆ ಸಿಗುತ್ತಿದೆ?
ಕಳೆದ ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ನಿಂದ ಜನ ಬೇಸತ್ತಿದ್ದಾರೆ. ಬದಲಾವಣೆ ಬಯಸುತ್ತಿರುವುದು ಪ್ರಚಾರಕ್ಕೆ ಹೋದ ಎಲ್ಲ ಕಡೆಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ರಾಜ್ಯದಲ್ಲಿ 5 ವರ್ಷ ಉತ್ತಮ ಆಡಳಿತ ನೀಡಿದ್ದ ಬಿಜೆಪಿಯ ಕುಟುಂಬದ ಸದಸ್ಯರು ಮತ್ತೆ ಒಂದಾಗಿರುವುದು ಜನರಲ್ಲಿ ಹೊಸ ನಿರೀಕ್ಷೆ ತಂದಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಆಡಳಿತವನ್ನು ನೋಡಬೇಕು ಎಂಬ ಪ್ರಬಲ ಇಚ್ಛೆ ಜನರಲ್ಲಿ ಇರುವುದನ್ನು ಕಾಣುತ್ತಿದ್ದೇನೆ.


* ಕ್ಷೇತ್ರದಲ್ಲಿ ನಿಮ್ಮ ಗಮನಕ್ಕೆ ಬಂದ ಪ್ರಮುಖ ಸಮಸ್ಯೆಗಳು ಯಾವವು?
ಅಥಣಿ, ರಾಯಬಾಗ, ಚಿಕ್ಕೋಡಿ ತಾಲ್ಲೂಕುಗಳಲ್ಲಿ ಒಟ್ಟು ಸುಮಾರು 43,000 ಎಕರೆ ಕೃಷಿಭೂಮಿಯಲ್ಲಿ ಸವಳು– ಜವಳು ಸಮಸ್ಯೆ ಇದೆ. ಅತಿವೃಷ್ಟಿಯಾದಾಗ ಕುಡಚಿ ಸೇತುವೆ ಸೇರಿದಂತೆ 18 ಸೇತುವೆಗಳು ಜಲಾವೃತವಾಗುತ್ತಿವೆ. ಶೇಡಬಾಳ– ವಿಜಾಪುರ ರೈಲು ಮಾರ್ಗ, ಕರಾಡ–ಕೊಲ್ಲಾಪುರ– ನಿಪ್ಪಾಣಿ– ಸಂಕೇಶ್ವರ– ಬೆಳಗಾವಿ ರೈಲು ಮಾರ್ಗ; ಚಿಕ್ಕೋಡಿ– ಘಟಪ್ರಭಾ– ಗೋಕಾಕ– ಸವದತ್ತಿ– ಧಾರವಾಡ ರೈಲು ಮಾರ್ಗ ನಿರ್ಮಾಣ ಆಗಬೇಕಾಗಿದೆ. ಈ ಭಾಗದಲ್ಲಿ ಹಲವು ನದಿಗಳು ಹರಿದರೂ, ಇನ್ನೂ ನೀರಾವರಿ ಸೌಲಭ್ಯ ಬಹಳ ಪ್ರದೇಶಗಳಿಗೆ ಆಗಬೇಕಾಗಿದೆ. ನಿರುದ್ಯೋಗ ಸಮಸ್ಯೆಯೂ ಬಹಳ ಇದೆ.

* ನಿಮ್ಮ ಪ್ರಮುಖ ಎದುರಾಳಿ ಯಾರು? ಅವರನ್ನು ಹೇಗೆ ಎದುರಿಸುತ್ತೀರಿ?
ಕಾಂಗ್ರೆಸ್‌ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರೇ ನನಗೆ ಪ್ರಬಲ ಎದುರಾಳಿ. ಐದು ಬಾರಿ ಶಾಸಕರಾಗಿದ್ದ ಅವರಿಗೆ ಕಾಂಗ್ರೆಸ್ಸಿನವರು ಸೂಕ್ತ ಸಚಿವ ಸ್ಥಾನ ನೀಡಲಿಲ್ಲ ಎಂಬ ಬೇಸರ ನಮಗೂ ಇದೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಅವಧಿ ಇನ್ನೂ 4 ನಾಲ್ಕು ವರ್ಷಗಳಿವೆ. ಇವರು ಸಚಿವರಾಗಿದ್ದುಕೊಂಡು ಕ್ಷೇತ್ರದಲ್ಲಿ ರಸ್ತೆ, ಬಾಂದಾರದಂತಹ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು ಎಂಬುದು ಈ ಭಾಗದ ಜನರ ಅಪೇಕ್ಷೆ. ನನ್ನ ಆಸೆಯೂ ಅದೇ ಆಗಿದೆ! ಕಳೆದ ಬಾರಿ 55,287 ಮತಗಳ ಅಂತರದಿಂದ ಗೆದ್ದಿದ್ದೆ. ಈ ಬಾರಿ 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ಇದೆ.

* ಕಳೆದ ಚುನಾವಣೆಯಲ್ಲಿ ನಿಮ್ಮ ಮತ್ತು ಪ್ರಕಾಶ ಹುಕ್ಕೇರಿ ನಡುವೆ ಹೊಂದಾಣಿಕೆ ಆಗಿತ್ತು ಎಂಬ ಆರೋಪ ಇದೆಯಲ್ಲ?
ರಾಜಕಾರಣದಲ್ಲಿ ಎರಡು ಬಗೆ ಇದೆ. ಮೊದಲನೇಯದ್ದು ದ್ವೇಷದ ರಾಜಕಾರಣ, ಇನ್ನೊಂದು ಅಭಿವೃದ್ಧಿಪರ ರಾಜಕಾರಣ. ನಾವು ಹಾಗೂ ಹುಕ್ಕೇರಿ ಅವರು ಎರಡನೇಯದ್ದನ್ನು ಆಯ್ಕೆ ಮಾಡಿಕೊಂಡಿದ್ದೇವೆ.  ನಾವಿಬ್ಬರೂ ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ಒಂದಾಗಿ ಕೆಲಸ ಮಾಡುತ್ತೇವೆ. ಹುಕ್ಕೇರಿ ಅವರ ಮೇಲೆ ನನಗೆ ಗೌರವ ಇದೆ. ನಮ್ಮಿಬ್ಬರ ಮನೆತನದ ನಡುವೆ ಮೊದಲಿನಿಂದಲೂ ಅನ್ಯೋನ್ಯ ಸಂಬಂಧ ಇದೆ. ನಾವಿಬ್ಬರೂ ಬೈದಾಡಬೇಕು, ಹೊಡೆದಾಡಬೇಕು ಎಂದು ಜನ ಬಯಸುತ್ತಿದ್ದರೆ, ಅದು ಸರಿಯಲ್ಲ. ನಾವಿಬ್ಬರೂ ನಮ್ಮ ನಮ್ಮ ಪಕ್ಷದ ಸಿದ್ಧಾಂತಗಳ ವ್ಯಾಪ್ತಿಯಲ್ಲೇ ಚುನಾವಣೆಯನ್ನು ಕ್ರೀಡಾಮನೋಭಾವದಿಂದ ಎದುರಿಸುತ್ತೇವೆ. ಸೋಲು– ಗೆಲುವು ನಿರ್ಧರಿಸುವುದು ಮತದಾರರಿಗೆ ಬಿಟ್ಟ ವಿಷಯ. ನಾನು ಗೆದ್ದರೆ, ಹುಕ್ಕೇರಿ ಅವರ ಮಾರ್ಗದರ್ಶನ ಪಡೆದು ಕೇಂದ್ರದಿಂದ ಅನುದಾನ ತಂದು ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ.

* ಸಂಸದರಾದ ಬಳಿಕ ನೀವು ಕ್ಷೇತ್ರದಲ್ಲಿ ಸಂಚರಿಸಿ ಜನರ ಸಮಸ್ಯೆ ಆಲಿಸಿಲ್ಲ ಎಂಬ ಆರೋಪ ಇದೆಯಲ್ಲ?
ಇದು ಚುನಾವಣೆ ಹಿನ್ನೆಲೆಯಲ್ಲಿ ಹುಕ್ಕೇರಿ ಅವರು ಸೃಷ್ಟಿಸಿರುವ ಆರೋಪ. 477 ಹಳ್ಳಿಗಳು, 12 ಶಹರಗಳಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಸ್ಥಳದಲ್ಲೇ ಜನರ ಹಲವು ಸಮಸ್ಯೆಗಳನ್ನು ಬಗೆ ಹರಿಸಿದ್ದೇನೆ. ಸಂಸತ್ತಿನಲ್ಲಿ ಹಾಗೂ ಅದರ ಸಮಿತಿ ಸಭೆಗಳಲ್ಲಿ ಪಾಲ್ಗೊಳ್ಳಲು ಸುಮಾರು 170 ದಿನಗಳು ದೆಹಲಿಯಲ್ಲೇ ಕಳೆದು ಹೋಗುತ್ತವೆ. ಉಳಿದ ದಿನಗಳಲ್ಲಿ ಜನರ ಕೆಲಸ ಮಾಡಿಸಿಕೊಡಲು ಯತ್ನಿಸಿದ್ದೇನೆ.

* ನೀವು ಜನರೊಂದಿಗೆ ಒರಟಾಗಿ ವರ್ತಿಸುತ್ತೀರಲ್ಲ?
ನೇರವಾಗಿ ಮಾತನಾಡುವುದು ನನ್ನ ಸ್ವಭಾವ. ಇದು ನನ್ನ ಹುಟ್ಟು ಗುಣವೂ ಹೌದು. ನಾನು ನಿಷ್ಠುರನಾಗಿ ಇಲ್ಲದೇ ಇದ್ದರೆ, ಹದಿನಾಲ್ಕು ವರ್ಷಗಳ ಹಿಂದೆ ಮುಚ್ಚುವ ಹಂತದಲ್ಲಿದ್ದ ಬಿಡಿಸಿಸಿ ಬ್ಯಾಂಕ್‌ ಇಂದು ರಾಜ್ಯದಲ್ಲೇ ಮೊದಲ ಸ್ಥಾನಕ್ಕೆ ಬರುತ್ತಿರಲಿಲ್ಲ. ನಾನು ಜನರೊಂದಿಗೆ ಮುಕ್ತವಾಗಿ ಮಾತನಾಡುತ್ತೇನೆ. ಕೆಲವರಿಗೆ ಒರಟನಂತೆ ಕಾಣಬಹುದು.

* ನಿಮಗೆ ಮತ್ತು ನಿಮ್ಮ ಪಕ್ಷಕ್ಕೇ ಏಕೆ ಮತ ಹಾಕಬೇಕು?
ಉತ್ತರ: ಸಂಸದನಾಗಿ ಐದು ವರ್ಷಗಳ ಕಾಲ ಕ್ಷೇತ್ರದಲ್ಲಿನ ಸಮಸ್ಯೆಗಳ ಅಧ್ಯಯನ ನಡೆಸಿದ್ದೇನೆ. ಅವುಗಳ ಪರಿಹಾರಕ್ಕೆ ಸಂಬಂಧಪಟ್ಟ ಇಲಾಖೆಗಳಿಗೆ ಈಗಾಗಲೇ ಪ್ರಸ್ತಾವ ಕಳುಹಿಸಿಕೊಟ್ಟಿದ್ದೇನೆ. ಈ ಬಾರಿ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಬರುವುದು ಖಚಿತ. ವಿರೋಧ ಪಕ್ಷದ ಸಂಸದರಾದರೆ, ಕ್ಷೇತ್ರಕ್ಕೆ ಅನುದಾನ ತರುವುದು ಕಷ್ಟ. ದೂರಷ್ಟಿಯುಳ್ಳ ನರೇಂದ್ರ ಮೋದಿ ಪ್ರಧಾನಿಯಾದರೆ, ಈ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಲು ಸಾಧ್ಯ. ಹೀಗಾಗಿ ನನ್ನನ್ನು ಪುನರಾಯ್ಕೆ ಮಾಡಬೇಕು.

* ಸಂಸದರಾದರೆ ಕ್ಷೇತ್ರದ ಅಭಿವೃದ್ಧಿಗೆ ಏನು ಯೋಜನೆ ಹಾಕಿಕೊಳ್ಳುತ್ತೀರಿ?
ಕ್ಷೇತ್ರ ವ್ಯಾಪ್ತಿಯಲ್ಲಿ 13 ಸಕ್ಕರೆ ಕಾರ್ಖಾನೆಗಳಿವೆ. ಈ ಭಾಗದ ಸಕ್ಕರೆ ಕಾರ್ಖಾನೆಯವರು ಸಗಟು ದರದಲ್ಲಿ ಶೇ. 5ರಷ್ಟು ಕಡಿಮೆ ಬೆಲೆಯಲ್ಲಿ ತಮ್ಮ ಉತ್ಪನ್ನಗಳನ್ನು ಸ್ಥಳೀಯ ಕೈಗಾರಿಕೆಗಳಿಗೆ ನೀಡಲು ಸಿದ್ಧರಿದ್ದಾರೆ. ಹೀಗಾಗಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸಕ್ಕರೆ ಉಪ ಉತ್ಪನ್ನ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಲು ಯತ್ನಿಸುತ್ತೇನೆ. ಏತ ನೀರಾವರಿ ಹಾಗೂ ಕೆರೆ ತುಂಬಿಸುವ ಮೂಲಕ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಿಕೊಡುತ್ತೇನೆ. ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಸಂಸತ್ತಿನಲ್ಲಿ ಧ್ವನಿ ಎತ್ತುತ್ತೇನೆ. ಚಿಕ್ಕೋಡಿಗೆ ಮಂಜೂರು ಮಾಡಿಸಿದ ಕೇಂದ್ರೀಯ ವಿದ್ಯಾಲಯ ನಿರ್ಮಾಣ ಕೆಲಸವನ್ನು ಈ ವರ್ಷವೇ ಆರಂಭಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT