ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ ಕಾನ್ಸಲ್ ಬಂಧನ, ಬಿಡುಗಡೆ

ಭಾರತದ ತೀವ್ರ ಅಸಮಾಧಾನ: ನ್ಯಾನ್ಸಿ ಪೋವೆಲ್‌ಗೆ ಸಮನ್ಸ್‌
Last Updated 13 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ಪಿಟಿಐ):  ಮನೆಕೆಲಸ­ದವಳ ವೀಸಾ ಅರ್ಜಿಯಲ್ಲಿ ಸುಳ್ಳು ಮಾಹಿತಿ ನೀಡಿದ ಆರೋಪಕ್ಕಾಗಿ ನ್ಯೂಯಾರ್ಕ್‌ನಲ್ಲಿನ ಭಾರತದ ಉಪ ಕಾನ್ಸಲ್‌ ಜನರಲ್‌ ದೇವಯಾನಿ ಖೋಬ್ರಾಗಡೆ (39) ಅವರನ್ನು ಅಮೆರಿಕ ಅಧಿಕಾರಿಗಳು ಬಂಧಿಸಿ ಕೋಳ ತೊಡಿಸಿದ ಪ್ರಕರಣ ಈಗ ತೀವ್ರ ವಿವಾದಕ್ಕೆ ಎಡೆ ಮಾಡಿದೆ.

ದೆಹಲಿಯಲ್ಲಿ ಶುಕ್ರವಾರ ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್‌ ಅವರು ಭಾರತದಲ್ಲಿನ ಅಮೆರಿಕ ರಾಯಭಾರಿ ನ್ಯಾನ್ಸಿ ಪೋವೆಲ್‌ ಅವರನ್ನು ತಮ್ಮ ಕಚೇರಿಗೆ ಕರೆಸಿಕೊಂಡು ಭಾರತದ ತೀವ್ರ ಪ್ರತಿಭಟನೆಯನ್ನು ದಾಖಲಿಸಿದರು.

‘ನಡುರಸ್ತೆಯಲ್ಲಿಯೇ  ರಾಜತಾಂತ್ರಿಕ ಅಧಿಕಾರಿಗೆ ಕೈಕೋಳ ತೊಡಿಸಿ ಕರೆದೊಯ್ದಿರುವುದು ಒಪ್ಪ­ಲಾಗದ್ದು ಮತ್ತು ಆಕ್ಷೇಪಾರ್ಹ’ ಎಂದು ಸ್ಪಷ್ಟವಾಗಿ ಹೇಳಿದರು.  

ಮಕ್ಕಳನ್ನು ಶಾಲೆಗೆ ಬಿಟ್ಟು ಮರಳುತ್ತಿದ್ದ ದೇವಯಾನಿ ಅವರನ್ನು ನ್ಯೂಯಾರ್ಕ್‌ ಕಾಲಮಾನ ಗುರುವಾರ ಬೆಳಗಿನ 9 ಗಂಟೆ ಸುಮಾರಿಗೆ (ಭಾರತೀಯ ಕಾಲಮಾನ ಗುರುವಾರ ರಾತ್ರಿ ಸುಮಾರು 10 ಗಂಟೆ) ಬಂಧಿಸಲಾಗಿತ್ತು. ನಂತರ ಸಂಜೆ ಅವರನ್ನು ಸ್ಥಳೀಯ ನ್ಯಾಯಾಲಯ 2.50 ಲಕ್ಷ ಡಾಲರ್‌ ಬಾಂಡ್‌ ಮೇಲೆ ಬಿಡುಗಡೆ ಮಾಡಿತ್ತು. ಅಲ್ಲದೆ ಅವರ  ಪಾಸ್‌ಪೋರ್ಟ್‌ ಮುಟ್ಟುಗೋಲು ಹಾಕಿತ್ತು.

ಒಂದು ವೇಳೆ ಅವರ ವಿರುದ್ಧದ ವೀಸಾ ವಂಚನೆಯ ಆರೋಪ ಸಾಬೀತಾದರೆ ದೇವಯಾನಿ ಅವರು, ಗರಿಷ್ಠ ಹತ್ತು ವರ್ಷ ಮತ್ತು  ತಪ್ಪು ಮಾಹಿತಿಗೆ ಐದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಜನವರಿ 13ಕ್ಕೆ ನಿಗದಿ ಮಾಡಿದೆ.

ಆರೋಪವೇನು?
ಮನೆಗೆಲಸಕ್ಕಾಗಿ ಮತ್ತು ಮಕ್ಕಳನ್ನು ನೋಡಿಕೊಳ್ಳುವುದ­ಕ್ಕಾಗಿ ದೇವಯಾನಿ ಅವರು ಭಾರತದಿಂದ ಸಂಗೀತಾ ರಿಚರ್ಡ್‌ ಎಂಬ ಸಹಾಯಕಿಯನ್ನು ಅಮೆರಿಕಕ್ಕೆ ಕರೆಸಿ­ಕೊಂಡಿದ್ದರು. ಆಕೆಯ ವೀಸಾ ಅರ್ಜಿಯಲ್ಲಿ ‘ಸಂಗೀತಾಗೆ ಪ್ರತಿ ಗಂಟೆಗೆ 9.75 ಡಾಲರ್‌ ಲೆಕ್ಕದಂತೆ  ವಾರಕ್ಕೆ 40 ತಾಸು ಕೆಲಸಕ್ಕೆ ತಿಂಗಳಿಗೆ 4500 ಡಾಲರ್‌ ವೇತನ (ಸುಮಾರು ರೂ. 2.80 ಲಕ್ಷ) ವೇತನ ನೀಡುವ ಕರಾರು ಮಾಡಿಕೊಂಡಿರುವುದಾಗಿ’ ಮಾಹಿತಿ ನೀಡಿದ್ದರು.

ಆದರೆ ತನ್ನಿಂದ ವಾರಕ್ಕೆ 40 ತಾಸಿಗೂ ಹೆಚ್ಚು ಕೆಲಸ ಮಾಡಿಸಿಕೊಂಡಿದ್ದಾರೆ.  ಅಲ್ಲದೆ ಒಪ್ಪಂದವನ್ನು ಉಲ್ಲಂಘಿಸಿ ತಿಂಗಳಿಗೆ ಕೇವಲ ರೂ.30 ಸಾವಿರ (ಗಂಟೆಗೆ 3.31 ಡಾಲರ್‌) ನೀಡುತ್ತಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳಿಗೆ ಸಂಗೀತಾ ದೂರು ಸಲ್ಲಿಸಿದ್ದರು ಎನ್ನಲಾಗಿದೆ.

ಕಡಿಮೆ ಸಂಬಳ ಕೊಟ್ಟು ಹೆಚ್ಚು ಕೆಲಸ ಮಾಡಿಸಿಕೊಂಡು ಮನೆಕೆಲಸದಾಕೆಯನ್ನು ಶೋಷಿಸಿದ್ದಾರೆ. ಈ ಮೂಲಕ ಅಮೆರಿಕದ ಕಾನೂನು  ಉಲ್ಲಂಘಿಸಿದ್ದಾರೆ ಎಂಬ  ಆರೋಪವನ್ನು ಈಗ ದೇವಯಾನಿ ಮೇಲೆ ಹೊರಿಸಲಾಗಿದೆ. 

ಈ ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಸಿದ ಮ್ಯಾನ್‌ಹಟನ್‌ನ ಅಟಾರ್ನಿ ಪ್ರೀತ್‌ ಭರಾರ್‌ ಭಾರತೀಯ ಮೂಲದ ಅಮೆರಿಕ ಪ್ರಜೆ. ಅಲ್ಲದೆ ಅತ್ಯಂತ ಕಟ್ಟುನಿಟ್ಟಿನ ಅಧಿಕಾರಿ ಎಂದು ಹೆಸರು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT