ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪನ್ಯಾಸಕರು, ಪ್ರಯೋಗಾಲಯ ಕೊಡಿ

Last Updated 16 ಜೂನ್ 2012, 8:45 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲಾ ಕೇಂದ್ರದಲ್ಲಿರುವ ಎರಡು ಪ್ರಮುಖ ಸರ್ಕಾರಿ ಪಿಯುಸಿ ಕಾಲೇಜುಗಳು ಮೂಲ ಸೌಕರ್ಯಗಳ ಕೊರತೆಯಿಂದ ನರಳುತ್ತಿವೆ. ಗ್ರಾಮೀಣ ಭಾಗದಿಂದ ಬರುವ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳೇ ಹೆಚ್ಚಾಗಿರುವ ಈ ಕಾಲೇಜುಗಳ ಫಲಿತಾಂಶ ಗಮನಾರ್ಹ ಪ್ರಮಾಣ ದಲ್ಲಿ ಸುಧಾರಿಸಿದೆ. ಆದರೆ ಕಲಿಕೆಯ ವಾತಾವರಣ ನಿರ್ಮಿಸಲು ಸಾಧ್ಯವಾಗಿಲ್ಲ.

ಪ್ರಯೋಗಾಲಯವೇ ಇಲ್ಲ: ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯೊಬ್ಬನಿಗೆ ಈ ಬಾರಿ ಸಿಇಟಿಯಲ್ಲಿ ಅತ್ಯುತ್ತಮ ಅಂಕ ಸಿಕ್ಕಿತ್ತು. ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಅಧ್ಯಯನಕ್ಕೆ ಸೀಟು ದಕ್ಕಿಸಿ ಕೊಂಡ ಬಡ ವಿದ್ಯಾರ್ಥಿಗೆ ಆಸರೆಯಾಗಿ ಉಪನ್ಯಾಸಕ ರೇ ನಿಂತುಕೊಂಡರು.

ಗೆಲುವಿನ ನಗೆ ಬೀರಿದ ಪ್ರತಿಭಾವಂತನ ಮನದಲ್ಲಿ ಇದ್ದುದು ಒಂದೇ ಕೊರಗು. `ನಾನು ಓದಿದ ಕಾಲೇಜಲ್ಲಿ ಸುಸಜ್ಜಿತ ಪ್ರಯೋಗಾಲಯ ಇದ್ದಿದ್ದರೆ, ನನ್ನ ಸಾಧನೆ ಇನ್ನಷ್ಟು ಉತ್ತಮವಾಗಿರುತ್ತಿತ್ತು. ಖಾಸಗಿ ಕಾಲೇಜುಗಳಿಗಿಂತ ಪಾಠ ಪ್ರವಚನದಲ್ಲಿ ಕಾಲೇಜು ಕಡಿಮೆಯಿಲ್ಲ. ಆದರೆ ಕನಿಷ್ಠ ಒಂದು ಪ್ರಯೋಗಾಲಯ ನಿರ್ಮಿಸಿಕೊಡಲು ಸರ್ಕಾರಕ್ಕೆ ಸಾಧ್ಯವಿಲ್ಲವೇ?~ ಈ ಪ್ರಶ್ನೆಗೆ ಉತ್ತರ ಹೇಳುವಷ್ಟು ಛಾತಿ ಉಪನ್ಯಾಸಕರಿಗೆ ಇರಲಿಲ್ಲ.

ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿ ಗಳು ಓದುತ್ತಾರೆ. 10ನೇ ತರಗತಿಯಲ್ಲಿ ಉತ್ತಮ ಫಲಿತಾಂಶ ಪಡೆದವರು ಹಾಗೂ ವಿಜ್ಞಾನ ವಿಭಾಗಕ್ಕೆ ಸೇರಲು ಉತ್ಸುಕರಾಗಿರುವ ವಿದ್ಯಾರ್ಥಿಗಳನ್ನು ಉಪನ್ಯಾಸಕರೇ ಸಂದರ್ಶಿಸಿ ದಾಖಲಿಸಿಕೊಳ್ಳುತ್ತಾರೆ.

ತಿಂಗಳಿಗೊಂದು ತರಗತಿ ಮಟ್ಟದ ಪರೀಕ್ಷೆ, ಅಗತ್ಯವಿರುವಾಗ ಪೋಷಕರ ಸಭೆ ನಡೆಸುತ್ತಾರೆ. ಮಠದಲ್ಲಿ ಆಶ್ರಯ ಪಡೆದಿರುವ ವಿದ್ಯಾರ್ಥಿಗಳನ್ನು ಗಮನಿಸಲು ಪ್ರತ್ಯೇಕ ಉಪನ್ಯಾಸಕರ ತಂಡ ಮಾಡಲಾಗಿದೆ. ಹೆಣ್ಣು ಮಕ್ಕಳ ಪ್ರಗತಿ ಪರಿಶೀಲಿಸಲು ಮಹಿಳಾ ಉಪನ್ಯಾಸಕಿಯರ ತಂಡ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಉಪನ್ಯಾಸಕರ ವಲಯದಿಂದ ಇಷ್ಟೆಲ್ಲಾ ಉತ್ಸಾಹವಿದ್ದರೂ ಸರ್ಕಾರದಿಂದ ಸೂಕ್ತ ಸ್ಪಂದನೆ, ಜತೆಗೆ ಸೌಲಭ್ಯ ದೊರೆತಿಲ್ಲ.

ಪ್ರೌಢಶಾಲೆಯ ಪ್ರಯೋಗಾಲಯದಲ್ಲೇ ಪಿಯುಸಿ ವಿದ್ಯಾರ್ಥಿಗಳೂ ಪ್ರಯೋಗ ನಡೆಸುತ್ತಾರೆ. ಸಲಕರಣೆಗಳ ಕೊರತೆ ಮತ್ತು ಕಳಪೆ ಸಾಮಗ್ರಿ ಯಿಂದಾಗಿ ಆಧುನಿಕ ಪಠ್ಯಕ್ರಮದ ಪ್ರಯೋಗ ಮಾಡಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ. ಪ್ರಯೋಗಾಲಯದಲ್ಲಿ ಮಾಡಿದ ಪ್ರಯೋಗಗಳ ಥಿಯರಿ ಬರೆಯುವ ಕೆಲವು ಪ್ರಶ್ನೆಗಳೂ ಪರೀಕ್ಷೆಯಲ್ಲಿರುತ್ತವೆ. ಸೂಕ್ತ ಪ್ರಯೋಗಾಲಯ ಇಲ್ಲದೆ ಮುಖ್ಯ ಪರೀಕ್ಷೆಯಲ್ಲಿ ಈ ಅಂಕಗಳನ್ನೂ ವಿದ್ಯಾರ್ಥಿ ಕಳೆದುಕೊಳ್ಳಬೇಕಾಗುತ್ತದೆ.

ಒಂದೇ ಕೊಠಡಿಯಲ್ಲಿ ಮೂವರು ಉಪನ್ಯಾಸಕರು ಏಕಕಾಲಕ್ಕೆ ಪ್ರಯೋಗಾಲಯ ತರಗತಿ ತೆಗೆದು ಕೊಳ್ಳುತ್ತಾರೆ. ವಿದ್ಯಾರ್ಥಿಗಳಿಗೆ ಯಾರು ಯಾವ ಪಾಠ ಹೇಳುತ್ತಿದ್ದಾರೆ ಎಂಬುದೇ ತಿಳಿಯದೆ, ಕಬ್ಬಿಣದ ಕಡಲೆಯಾಗಿರುವ ವಿಜ್ಞಾನ ಇನ್ನಷ್ಟು ಕಠಿಣ ಎನಿಸುತ್ತದೆ.

ವಾಣಿಜ್ಯ ವಿಭಾಗದಲ್ಲಿ ಇಬ್ಬರು ಉಪನ್ಯಾಸಕರು ಇದ್ದಾರೆ. ಸುಮಾರು 250 ವಿದ್ಯಾರ್ಥಿಗಳಿದ್ದಾರೆ. `ಉಪನ್ಯಾಸಕರಿಗೆ ಹಾಜರಾತಿ ಹಾಕಲು ಅರ್ಧಗಂಟೆ ಬೇಕು. ಇನ್ನು ಪಾಠ ಮಾಡುವುದು, ವಿದ್ಯಾರ್ಥಿ ಗಳನ್ನು ಗಮನಿಸಿಕೊಳ್ಳುವುದು ಹೇಗೆ? ಕೊನೆಯ ಸಾಲಿನಲ್ಲಿ ಕುಳಿತ ವಿದ್ಯಾರ್ಥಿಗೆ ಉಪನ್ಯಾಸಕರು ಹೇಳುವ ಪಾಠವೇ ಕೇಳುವುದಿಲ್ಲ. ತರಗತಿಗಳಿಗೆ ಮೈಕ್ ಅಳವಡಿಸಬೇಕು~ ಎನ್ನುತ್ತಾರೆ ಪೋಷಕ ಕೃಷ್ಣಪ್ಪ.

ನಗರ ಕ್ಷೇತ್ರದ ಶಾಸಕ ಎಸ್.ಶಿವಣ್ಣ, ಸಿದ್ದಗಂಗಾ ಮಠದ ಶಿವಕುಮಾರಸ್ವಾಮೀಜಿ ಸೇರಿದಂತೆ ಅನೇಕ ಗಣ್ಯರು ಇದೇ ಕಾಲೇಜಿನಲ್ಲಿ ಕಲಿತವರು. ಈ ಕಾಲೇಜಿ ನಲ್ಲಿ ಓದಿದ ಎಷ್ಟೋ ವಿದ್ಯಾರ್ಥಿಗಳು ಇಂದು ಉನ್ನತ ಸ್ಥಾನದಲ್ಲಿದ್ದಾರೆ. ಆದರೆ ಯಾರೂ ಕಾಲೇಜಿನ ಪ್ರಸ್ತುತ ದುಸ್ಥಿತಿಯ ಬಗ್ಗೆ ಗಮನ ಹರಿಸುತ್ತಿಲ್ಲ. ಜನ ಪ್ರತಿನಿಧಿಗಳು, ಪಿಯುಸಿ ಮಂಡಳಿಯ ಅಧಿಕಾರಿ ಗಳನ್ನು ಭೇಟಿ ಮಾಡಿರುವ ಕಾಲೇಜು ಸಿಬ್ಬಂದಿ ಸಮಸ್ಯೆ ಮನಗಾಣಿಸಲು ಯತ್ನಿಸಿದ್ದಾರೆ. ಬೆಂಗಳೂ ರಿನ ಹಿರಿಯ ಅಧಿಕಾರಿಗಳನ್ನು ಮುಖತಃ ಕಂಡು ಮನವರಿಕೆ ಮಾಡಿಕೊಟ್ಟರೂ ಸಮಸ್ಯೆ ಪರಿಹಾರ ವಾಗಿಲ್ಲ ಎಂದು ಖೇದ ವ್ಯಕ್ತಪಡಿಸುತ್ತಾರೆ.

ಒಂದೂವರೆ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುವ ಕಾಲೇಜಿನಲ್ಲಿ ಕೊಠಡಿಗಳ ಕೊರತೆಯೂ ಇದೆ. ಕನಿಷ್ಠ 6 ಕೊಠಡಿಗಳನ್ನು ಅಗತ್ಯವಿದೆ. ಇದರ ಜೊತೆಗೆ ಕಾಂಪೌಂಡ್ ಸಮಸ್ಯೆಯಿಂದಲೂ ಕಾಲೇಜು ಹೈರಾಣಾಗಿದೆ.

ಕಾಲೇಜು ಆವರಣದಲ್ಲಿ ಹೊಸದಾಗಿ ಕಾರು ಕಲಿಯುವವರ ಪಾಲಿಗೆ `ಪ್ರಾಕ್ಟೀಸ್ ಗ್ರೌಂಡ್~. ಕಾಂಪೌಂಡ್, ಗೇಟ್ ಇಲ್ಲದಿರುವುದರಿಂದ ಕಳ್ಳ ಕಾಕರಿಗೆ ಕಾಲೇಜು ಮುಕ್ತ ಪ್ರವೇಶ ಕಲ್ಪಿಸಿದೆ. ಒಂದೇ ವರ್ಷದಲ್ಲಿ ಕಾಲೇಜಿನ ಹಿಂದಿನಿಂದ ಪ್ರವೇಶಿಸಿದ ದುಷ್ಕರ್ಮಿಗಳು ಡೆಸ್ಕ್ ಸೇರಿದಂತೆ ಹಲವು ಬೋಧನೋಪಕರಣಗಳನ್ನು ಹೊತ್ತೊಯ್ದಿದ್ದಾರೆ.

ರೈಲ್ವೆ ನಿಲ್ದಾಣ ಸಮೀಪ ಕಾಲೇಜು ಮೈದಾನ ಅತಿಕ್ರಮಿಸುವ ಯತ್ನವನ್ನು ನಗರದ ಪ್ರತಿಷ್ಠಿತ ವ್ಯಕ್ತಿ ಯೊಬ್ಬರು ನಡೆಸಿದ್ದಾರೆ. ಅಲೆಮಾರಿಗಳ ಗುಡಿಸಲು ಗಳೂ ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿವೆ. ಹಾಡಹಗಲೇ ಕಾಲೇಜು ಆವರಣದಲ್ಲಿ ಸಾರ್ವಜನಿಕರು ಕ್ರಿಕೆಟ್ ಆಡುತ್ತಾರೆ. ಕೇಳುವ ಉಪನ್ಯಾಸಕರೊಂದಿಗೆ ವಾಗ್ವಾದ ನಡೆಸುತ್ತಾರೆ.

ಪ್ರಯೋಗಾಲಯ ಸಹಾಯಕರು, ಭದ್ರತಾ ಸಿಬ್ಬಂದಿ ಮತ್ತು `ಡಿ~ ಗ್ರೂಪ್ ನೌಕರರನ್ನು ಕೇಳು ವಂತೆಯೇ ಇಲ್ಲ. ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿ ರುವ ವಾಣಿಜ್ಯ ವಿಭಾಗಕ್ಕೆ ಇಬ್ಬರು ಉಪನ್ಯಾಸಕರು ತುರ್ತಾಗಿ ನೇಮಕವಾಗಬೇಕಿದೆ. ಸಿಬ್ಬಂದಿ ಕೊರತೆ ತುಂಬಿಕೊಳ್ಳಲು ಕೆಲವರನ್ನು ಹಂಗಾಮಿಯಾಗಿ ನೇಮಿಸಿಕೊಳ್ಳಲಾಗಿದೆ.

ಕುಡಿಯುವ ನೀರೂ ಇಲ್ಲಿಲ್ಲ: ಬಸ್ ನಿಲ್ದಾಣದ ಪಕ್ಕದಲ್ಲಿಯೇ ಇರುವ ಪ್ರತಿಷ್ಠಿತ ಎಂಪ್ರೆಸ್ ಬಾಲಕಿಯರ ಪದವಿ ಪೂರ್ವ ಕಾಲೇಜು ಕಟ್ಟಡ ಕೊರತೆ, ಶೌಚಾಲಯ, ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದೆ.

ಪಿಯುಸಿಯಲ್ಲಿ ದಿನಕ್ಕೆ ಒಂದು 1 ಗಂಟೆಯ 6 ಪಿರಿಯಡ್ ನಡೆಯಬೇಕು. ಆದರೆ ಇಲ್ಲಿ 50 ನಿಮಿಷದ 5 ಪಿರಿಯಡ್ ನಡೆಯುತ್ತವೆ. ಮುಂಜಾನೆ 8ರಿಂದ 11.20ರ ವರೆಗೆ ಪದವಿ ಪೂರ್ವ ಕಾಲೇಜು ನಡೆಯುವ ಕೊಠಡಿಗಳಲ್ಲೇ ನಂತರ ಪ್ರೌಢಶಾಲೆಯ ತರಗತಿಗಳು ನಡೆಯಬೇಕು. ಹೀಗಾಗಿ ಹೆಚ್ಚುವರಿ ತರಗತಿಗಳನ್ನು ನಡೆಸುವ ಉತ್ಸಾಹ ಇದ್ದರೂ ಉಪನ್ಯಾಸಕರು ಅಸಹಾಯಕರಾಗಿ ಮಕ್ಕಳನ್ನು ಮನೆಗೆ ಕಳುಹಿಸಬೇಕು. ಇಲ್ಲವೇ ಹೊರಗೆ ಮರದ ಕೆಳಗೆ ತರಗತಿ ನಡೆಸಬೇಕಾಗಿದೆ.

ಕಾಲೇಜಿನ ಸನಿಹದಲ್ಲಿಯೇ ನಗರಸಭೆ ಇದೆ. ನಗರಸಭೆ ಆವರಣದಲ್ಲಿಯೇ ಅತಿದೊಡ್ಡ ನೆಲಮಟ್ಟದ ನೀರಿನ ತೊಟ್ಟಿ ಇದ್ದರೂ ನೀರಿನ ಸೌಲಭ್ಯ ಕಲ್ಪಿಸಿಲ್ಲ. ಕಾಲೇಜಿನ ಹೆಣ್ಣು ಮಕ್ಕಳು ಕುಡಿಯಲು ಹಾಗೂ ಶೌಚಾಲಯಕ್ಕೆ ನೀರಿಲ್ಲದೆ ಪರದಾಡುತ್ತಾರೆ. ಕಾರಣ ಕೇಳಿದರೆ `ಬಿ.ಎಚ್.ರಸ್ತೆ ಅಗೆದು ಪೈಪ್‌ಲೈನ್ ಹಾಕಲು ಸಾಧ್ಯವಿಲ್ಲ. ಹೆದ್ದಾರಿ ಪ್ರಾಧಿಕಾರ ಅಡ್ಡಿಯುಂಟು ಮಾಡುತ್ತದೆ~ ಎಂದು ನಗರಸಭೆ ಸಿಬ್ಬಂದಿ ನೆಪ ಹೇಳುತ್ತಾರೆ.

ಜಿಲ್ಲಾಧಿಕಾರಿ ಮುತುವರ್ಜಿಯಿಂದ ಕಾಲೇಜಿನಲ್ಲಿ ಕೊರೆಸಲಾಗಿದ್ದ ಕೊಳವೆ ಬಾವಿಯಲ್ಲಿ ನೀರು ಸಂಪೂರ್ಣ ಕಡಿಮೆಯಾಗಿದೆ. 2000 ಹೆಣ್ಣು ಮಕ್ಕಳ ಅಗತ್ಯ ಪೂರೈಸುವಷ್ಟೂ ನೀರು ಶೌಚಾಲಯದಲ್ಲಿಲ್ಲ. ಇನ್ನೊಬ್ಬರಿಗೆ ಹೇಳಲೂ ಸಾಧ್ಯವಿಲ್ಲದ ತಮ್ಮ ಸಂಕಟವನ್ನು ಹೆಣ್ಣು ಮಕ್ಕಳು ಅವುಡುಕಚ್ಚಿ ಸಹಿಸಬೇಕಾದ ದುಃಸ್ಥಿತಿ ಎದುರಿಸುತ್ತಿದ್ದಾರೆ.

`ಖಾಸಗಿ ಕಾಲೇಜುಗಳ ಲಾಬಿಗೆ ಮಣಿದಿರುವ ಜನ ಪ್ರತಿನಿಧಿಗಳು ಉದ್ದೇಶಪೂರ್ವಕವಾಗಿಯೇ ಸರ್ಕಾರಿ ಕಾಲೇಜುಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಹೀಗಾಗಿಯೇ ಈ ಕಾಲೇಜಿನ ಬಗ್ಗೆ ಒಮ್ಮೆಯಾದರೂ ನಗರಸಭೆ, ಜಿಲ್ಲಾ ಪಂಚಾಯಿತಿ ಸಭೆಗಳಲ್ಲಿ ಚರ್ಚೆಯಾಗುವು ದಿಲ್ಲ~ ಎಂದು ಪೋಷಕ ರಾಮಚಂದ್ರ ದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT