ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉರ್ದು ಶಾಲೆ ದಾರಿಗಾಗಿ ಪ್ರತಿಭಟನೆ

Last Updated 23 ಜುಲೈ 2012, 10:00 IST
ಅಕ್ಷರ ಗಾತ್ರ

ಹಾನಗಲ್: ಶಾಲೆ ಬಹಿಷ್ಕರಿಸಿದ ತಾಲ್ಲೂಕಿನ ರಾಮತೀರ್ಥ-ಹೊಸಕೊಪ್ಪ ಗ್ರಾಮದ ಸರಕಾರಿ ಉರ್ದು ಶಾಲೆಯ ಮಕ್ಕಳಿಗೆ ಹಾನಗಲ್ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆವರಣ ವರ್ಗ ಕೊಠಡಿಯಾಗಿತ್ತು. ಮಕ್ಕಳಿಗೆ ಆಸರೆಯಾಗಿ ನಿಂತವರು ಶಾಲಾಭಿವೃದ್ಧಿ ಸಮಿತಿಯವರು, ಗ್ರಾಮಸ್ಥರು ಮತ್ತು ಪಾಲಕರು. ಇವರೆಲ್ಲರ ಬೇಡಿಕೆ ಶಾಲೆಗೆ ಶಿಕ್ಷಕರನ್ನು ನೇಮಕಗೊಳಿಸಿ, ಮಕ್ಕಳು ಶಾಲೆಗೆ ಹೋಗುವ ಮಾರ್ಗ ಕಲ್ಪಿಸಿಕೊಡಿ ಎಂಬುದಾಗಿತ್ತು.

ಈ ರೀತಿಯ ಅಲೆದಾಟ ರಾಮತೀರ್ಥ- ಹೊಸಕೊಪ್ಪದ ಕಿರಿಯ ಪ್ರಾಥಮಿಕ ಉರ್ದುಶಾಲೆಯ ವಿದ್ಯಾರ್ಥಿಗಳಿಗೆ ಹೊಸತೇನಲ್ಲ. ಈ ಶಾಲೆಗೆ ಇರುವ ಒಬ್ಬರೇ ಶಿಕ್ಷಕರು ರಜೆ ಪಡೆದುಕೊಂಡರೆ ಆ ದಿನ ಶಾಲೆಗೆ ಬೀಗ ಜಡಿದಂತೆ. ಅನಿವಾರ್ಯವಾಗಿ ಮಕ್ಕಳು ಪಠ್ಯದ ಚೀಲದೊಂದಿಗೆ ಗ್ರಾಮದಲ್ಲಿನ ಕನ್ನಡ ಪ್ರಾಥಮಿಕ ಶಾಲೆಗೆ ಗುಳೆ ಹೊರಡುತ್ತಾರೆ. ಹಾಗಂತ ಇದು ಇತ್ತೀಚಿನ ಅವ್ಯವಸ್ಥೆಯಲ್ಲ.., ಕಳೆದ 5 ವರ್ಷಗಳಿಂದ ಇಂತಹ ದಾರುಣ ಸ್ಥಿತಿಯಲ್ಲಿ ಇಲ್ಲಿನ ಮಕ್ಕಳ ಶಿಕ್ಷಣ ನಡೆಯುತ್ತಿದೆ ಎಂದರೆ ಅಚ್ಚರಿಯಾಗದಿರದು.

ಗ್ರಾಮಸ್ಥರು ಅಧಿಕಾರಿಗಳಿಗೆ ಮಾಡಿದ ಮನವಿಗಳು ಯಾವುದೇ ಫಲ ನೀಡಲಿಲ್ಲ. ಜನಪ್ರತಿನಿಧಿಗಳಲ್ಲಿ ಮಾಡಿಕೊಂಡ ವಿನಂತಿಯೂ ಫಲಪ್ರದವಾಗಲಿಲ್ಲ. ಹೀಗಾಗಿ ಮಕ್ಕಳ ಸಮೇತ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕುವ ನಿರ್ಣಯಕ್ಕೆ ಬರಬೇಕಾಯಿತು. ಆದಾಗ್ಯೂ ಇನ್ನೂ ತಮ್ಮ ಸಮಸ್ಯೆಗೆ ಪರಿಹಾರ ಸಿಗುವ ಭರವಸೆಗಳಿಲ್ಲ. ಆದ್ದರಿಂದ ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುವವರೆಗೆ   ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಪಟ್ಟು ಹಿಡಿದರು.

ಅಲ್ಲದೆ ಈ ಉರ್ದು ಶಾಲೆಗೆ ದಾರಿಯೇ ಇಲ್ಲ. ಹಿಂದೆ ಒಬ್ಬರು ಶಾಲೆಗೆ ಜಾಗೆಯನ್ನು ಮಾರಾಟ ಮಾಡಿದರು. ಆದರೆ ಅದು ಕರಾರು ಪತ್ರವಾಯಿತೇ ಹೊರತು ವ್ಯವಸ್ಥಿತವಾಗಿ ಜಾಗೆಯ ಖರೀದಿಯಾಗಲಿಲ್ಲ. ಇಷ್ಟಿದ್ದರೂ ಇದೇ ಜಾಗದಲ್ಲಿ ರೂ. 9 ಲಕ್ಷ ವೆಚ್ಚದಲ್ಲಿ ಸರಕಾರ 3 ವರ್ಗ ಕೋಣೆಗಳನ್ನು ನಿರ್ಮಿಸಿತು. ಆದರೆ ಈಗ ಈ ಶಾಲೆಗೆ ಹೋಗಲು ದಾರಿಯೇ ಇಲ್ಲದಂತಾಗಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ.

ಮೊದಲು ಎಲ್ಲೆಂದರಲ್ಲಿ ಬಿದ್ದೆದ್ದು ಮಕ್ಕಳು ಶಾಲೆಗೆ ಹೋಗುತ್ತಿದ್ದರು. ಆದರೆ ಈಗ ಅಂತಹ ಮಾರ್ಗಕ್ಕೂ ತಕರಾರು ಏರ್ಪಟ್ಟಿದ್ದರಿಂದ ಮಕ್ಕಳು ಶಾಲೆಗೆ ಹೋಗಲು ಆಗುತ್ತಿಲ್ಲ. ಶಿಕ್ಷಕರ ಕೊರತೆ ಜೊತೆಯಲ್ಲಿ ಈ ಸಮಸ್ಯೆಯನ್ನೂ ಬಗೆಹರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಮುತ್ತಿಗೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಘನೀಸಾಬ ಹಸನಾಬಾದಿ, ಸದಸ್ಯರಾದ ಹುಸೇನಬಿ ಹಸನಾಬಾದಿ, ಮುಕ್ತಾರಅಹಮ್ಮದ್ ಮುಲ್ಲಾ, ಹಜರತ್‌ಸಾಬ ಮುಲ್ಲಾ, ಬಾಷಾಸಾಬ ಹಸನಾಬಾದಿ, ಆಶಾಭೀ ತಹಶೀಲ್ದಾರ, ಹಫೀಜಸಾಬ ಮುಲ್ಲಾ, ಗಫಾರಸಾಬ ಹಸನಾಬಾದಿ, ಗ್ರಾ.ಪಂ ಸದಸ್ಯ ಮಕ್ಬೂಲ್ ಅಹಮ್ಮದ್ ಮುಲ್ಲಾನವರ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT