ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಸ್ ಬಮ್ಮನ್!

Last Updated 3 ಜನವರಿ 2011, 8:20 IST
ಅಕ್ಷರ ಗಾತ್ರ

ಹಿಂದೂಸ್ತಾನಿ ಸಂಗೀತ ಲೋಕದಲ್ಲಿ ‘ಗಂಧರ್ವ’ ಎಂದು ಕರೆಯಿಸಿಕೊಳ್ಳುವುದು ಅತ್ಯಂತ ಗೌರವದ ಸಂಕೇತ. ಈ ಗೌರವ ಕೆಲವೇ ಕೆಲವರಿಗೆ. ಸವಾಯಿಗಂಧರ್ವ, ಬಾಲಗಂಧರ್ವ, ಛೋಟಾಗಂಧರ್ವ, ಕುಮಾರಗಂಧರ್ವ, ಶಪಿತಗಂಧರ್ವ, ನೂತನ ಗಂಧರ್ವ ಹೀಗೆ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಈ ಗೌರವ. ಪಂ.ಭೀಮಸೇನ ಜೋಶಿಯವರನ್ನು ‘ಹವಾಯಿ ಗಂಧರ್ವ’ ಎಂದು ಕರೆಯುತ್ತಿದ್ದರು. ಗಂಧರ್ವ ಪರಂಪರೆಯಲ್ಲಿ ಕನ್ನಡಿಗರದು ಅಗ್ರಪಾಲು ಎಂಬುದು ಹೆಮ್ಮೆಯ ಸಂಗತಿ.

ಗಂಧರ್ವ ಪರಂಪರೆ ಪ್ರಾರಂಭವಾಗಿದ್ದು ಭೂಗಂಧರ್ವರಿಂದ. ಉಸ್ತಾದ ರೆಹಮತ್‌ಖಾನರು ‘ಭೂಗಂಧರ್ವ’ ಎಂಬ ಕೀರ್ತಿಗೆ ಪಾತ್ರರಾಗಿದ್ದರು. ಇವರು ತಮ್ಮ ಜೀವಿತದ ಬಹುಪಾಲು ಅವಧಿಯನ್ನು ಕನ್ನಡನಾಡಿನಲ್ಲಿಯೇ ಕಳೆದರು ಎಂಬುದು ಮಹತ್ವದ ಸಂಗತಿ.
ಭೂಗಂಧರ್ವ ರೆಹಮತ್‌ಖಾನರು ವಿಚಿತ್ರ ಸ್ವಭಾವದವರಾಗಿದ್ದರು. ರಾಗಗಳಲ್ಲಿ ಮಗ್ನರಾಗಿಯೂ ವಿರಾಗಿಗಳಾಗಿದ್ದರು. ಲೌಕಿಕ ಜೀವನದ ಪರಿವೆ ಎಳ್ಳಷ್ಟೂ ಇರಲಿಲ್ಲ. ಸದಾ ಸಂಗೀತದಲ್ಲಿ ತನ್ಮಯರಾಗಿರುತ್ತಿದ್ದರು. ಹಾಗೆಂದ ಮಾತ್ರಕ್ಕೆ ಅವರು ಹಣದ ಆಸೆಗಾಗಿ ಇಲ್ಲವೆ ಮತ್ತಾವುದೋ ಲೋಭಕ್ಕಾಗಿ ಹಾಡುತ್ತಿರಲಿಲ್ಲ. ಯಾವ ರಾಜನ ಆಶ್ರಯದಲ್ಲಿಯೂ ಇರುವುದನ್ನು ಅವರು ಬಯಸುತ್ತಿರಲಿಲ್ಲ. ಆದರೆ, ಹುಬ್ಬಳ್ಳಿಯ ಸಿದ್ಧಾರೂಢಮಠ ಅವರ ನೆಚ್ಚಿನ ತಾಣವಾಗಿತ್ತು. ಸಿದ್ಧಾರೂಢರು ಹಾಡು ಎಂದಾಗಲೆಲ್ಲ ಅವರು ಹಾಡುತ್ತಿದ್ದರು. ಸಿದ್ಧಾರೂಢರಂತೆಯೇ ಭೂಗಂಧರ್ವರೂ ಅವಧೂತನಂತೆ ಬದುಕುತ್ತಿದ್ದರು.

ಇವರನ್ನು ಬಹುವಾಗಿ ಗೌರವಿಸುತ್ತಿದ್ದವರು ಮತ್ತು ಇವರ ಬಗೆಗೆ ಅಪಾರ ಕಾಳಜಿ ವಹಿಸಿ ಇವರನ್ನು ಸಂರಕ್ಷಿಸಿದವರು ಶ್ರಿ ಛತ್ರೆಯವರು. ಭೂಗಂಧರ್ವರ ಪಾಂಡಿತ್ಯ, ಪ್ರತಿಭೆ, ಅಪ್ರತಿಮ ಹಾಡುಗಾರಿಕೆ ಇವೆಲ್ಲವನ್ನು ಮನಗಂಡು ಅವರನ್ನು ಗೌರವಿಸಿದವರು. ಛತ್ರೆಯವರು ಸರ್ಕಸ್ ಕಂಪನಿಯ ಮಾಲೀಕರಾಗಿದ್ದರು. ಏಷಿಯಾದಲ್ಲಿಯೇ ಮೊದಲ ಸರ್ಕಸ್ ಕಂಪನಿ ಸ್ಥಾಪಿಸಿದ ಕೀರ್ತಿ ಅವರದೆಂದು ಹೇಳಲಾಗುತ್ತದೆ. ಭೂಗಂಧರ್ವರು ಛತ್ರೆಯವರ ಸರ್ಕಸ್ ಕಂಪನಿ ಹೋದಲ್ಲೆಲ್ಲ ತಾವೂ ಹೋಗುತ್ತಿದ್ದರು. ಅವರೊಂದಿಗೆ ವಾಸಿಸುತ್ತಿದ್ದರು.

ಭೂಗಂಧರ್ವರು ವೇದಿಕೆಯನ್ನೇರಿ, ಎರಡು ತಂಬೂರಿಗಳ ಮಧ್ಯ ವಿರಾಜಿಸಿ ಹಾಡಬೇಕೆಂಬುದು ಛತ್ರೆಯವರ ವಿಚಾರ. ಆದರೆ, ಭೂಗಂಧರ್ವರಿಗೆ ಇವಾವುದೂ ಇಷ್ಟವಿಲ್ಲ. ‘ಸಂಗೀತ ಆತ್ಮಾನಂದಕ್ಕೆ’ ಎಂದು ನಂಬಿದವರು ಅವರು. ಇಷ್ಟೊಂದು ಪಾಂಡಿತ್ಯ ಪ್ರತಿಭೆ ಇದ್ದೂ ಭೂಗಂಧರ್ವರ ಗಾಯನ ಜನರಿಗೆ ತಲುಪದೇ ಹೋಗುತ್ತದಲ್ಲ ಎಂಬ ಇರಾದೆ ಛತ್ರೆಯವರದು. ಈ ಜಟಾಪಟಿಯ ನಡುವೆ ಅಪರೂಪಕ್ಕೆ ಒಮ್ಮೊಮ್ಮೆ ಭೂಗಂಧರ್ವರು ಸೋಲುತ್ತಿದ್ದರು ಮತ್ತು ಅಂಥ ಸಂದರ್ಭಗಳಲ್ಲಿ ಖಾಸಗಿ ಬೈಠಕ್‌ಗಳಲ್ಲಿ ಹಾಡುತ್ತಿದ್ದರು.
ಶ್ರೀಮಂತರ ಮನೆಯಲ್ಲಿ ಬೈಠಕ್ ಮಾಡುವಾಗಲೂ ಅವರು ತಮ್ಮದೇ ಗುಂಗಿನಲ್ಲಿ ಇರುತ್ತಿದ್ದರು. ಹಣದ ಆಸೆಯಾಗಲೀ ಮತ್ತೊಂದಾಗಲಿ ಅವರಿಗಿರಲಿಲ್ಲ. ಒಮ್ಮೆ, ಅವರು ಒಬ್ಬ ಶ್ರೀಮಂತರ ಮನೆಯಲ್ಲಿ ಬೈಠಕ್ ಮಾಡಿದರು. ಇವರ ಗಾಯನ ಅಲ್ಲಿದ್ದವರನ್ನೆಲ್ಲ ಮಂತ್ರಮುಗ್ಧರನ್ನಾಗಿಸಿತ್ತು. ಅವರು ಒಂದು ತಟ್ಟೆಯ ತುಂಬ ನಾಣ್ಯಗಳನ್ನು ತುಂಬಿಕೊಂಡು ಭೂಗಂಧರ್ವರ ಮುಂದಿಟ್ಟು, ಅವುಗಳನ್ನು ಒಪ್ಪಿಸಿಕೊಳ್ಳಲು ವಿನಂತಿಸಿದರು.

ಭೂಗಂಧರ್ವರು ತಟ್ಟೆಯೊಳಗಿನ ಎರಡು ನಾಣ್ಯಗಳನ್ನು ಮಾತ್ರ ಎತ್ತಿಕೊಂಡು ಛತ್ರೆಯವರನ್ನು ತೋರಿಸುತ್ತ ಹೇಳಿದರು-
‘ಬಾಕಿ ಸಬ್ ಉಸ್ ಬಮ್ಮನ್ ಕೋ ದೇ ದೋ. ಉಸೆ ದಾನ ಲೇನೆ ಕಾ ಹಕ್ ಹೈ’.

ಶ್ರೀಮಂತರು ಉಳಿದ ನಾಣ್ಯಗಳನ್ನು ಛತ್ರೆಯವರಿಗೆ ಕೊಟ್ಟರು. ಪ್ರತಿ ಕಾರ್ಯಕ್ರಮದಲ್ಲೂ ಇಂಥ ಘಟನೆಗಳು ನಡೆಯುತ್ತಿದ್ದವು. ತಮಗೆ ಬಂದ ಬಿದಾಗಿಯನ್ನೆಲ್ಲ ಅವರು ‘ಉಸ್ ಬಮ್ಮನ್’ನಿಗೇ ಕೊಟ್ಟು ಬಿಡುತ್ತಿದ್ದರು.

ಭೂಗಂಧರ್ವರಿಗೆ ಅಫೀಮಿನ ಚಟವಿತ್ತು. ಅದಕ್ಕಾಗಿ ಮಾತ್ರ ಅವರು ಎರಡು ನಾಣ್ಯಗಳನ್ನು ತಗೆದುಕೊಳ್ಳುತ್ತಿದ್ದರು. ಅವರು ಸದಾ ಅಫೀಮಿನ ಗುಂಗಿನಲ್ಲಿಯೇ ಇರಲು ಬಯಸುತ್ತಿದ್ದರು. ಛತ್ರೆಯವರು ಆಫೀಮಿನ ಚಟ ಬಿಡಿಸಲು ಹಲವಾರು ಸಲ ಪ್ರಯತ್ನಿಸಿದರೂ ಅದು ಪ್ರಯೋಜನವಾಗಲಿಲ್ಲ. ಗುಲಾಬಿ ಗಿಡದಲ್ಲಿ ಮುಳ್ಳು ಇರುವಂತೆ, ಕಲಾವಿದನಲ್ಲಿಯೂ ದೌರ್ಬಲ್ಯಗಳಿರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT