ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊಟದಲ್ಲಿ ಹುಳು: ವಿದ್ಯಾರ್ಥಿಗಳ ಪ್ರತಿಭಟನೆ

Last Updated 20 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಶಿರಾ: ಊಟದಲ್ಲಿ ಹುಳು, ಕುಡಿವ ನೀರು ಕಲ್ಮಷವಿರುವುದರಿಂದ ರೋಗಕ್ಕೆ ತುತ್ತಾಗುತ್ತಿದ್ದೇವೆ ಎಂದು ಆರೋಪಿಸಿ ನಗರದ ಸರ್ಕಾರಿ ಮೆಟ್ರಿಕ್ ನಂತರದ ಬಾಪೂಜಿ ಬಾಲಕರ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ಭಾನುವಾರ ಪ್ರತಿಭಟಿಸಿದರು.

ಬನ್ನಿನಗರದ ಖಾಸಗಿ ಕಟ್ಟಡದಲ್ಲಿ ನಡೆಯುತ್ತಿರುವ ಹಾಸ್ಟೆಲ್ ಎದುರು ಮಧ್ಯಾಹ್ನದ ಊಟದ ಸಾಂಬರ್‌ನಲ್ಲಿದ್ದ ಹುಳ ಪ್ರದರ್ಶಿಸಿ ಪ್ರತಿಭಟಿಸಿದರು. ಸಾಂಬರ್‌ನಲ್ಲಿ ಹುಳು, ಅನ್ನದಲ್ಲಿ ಕಲ್ಲು, ಸ್ವಚ್ಛತೆ ಇಲ್ಲದ ಕಟ್ಟಡ, ಅಶುದ್ಧ ಕುಡಿಯುವ ನೀರು, ಬೆಳಗಿನ ತಿಂಡಿ ಸರಿಯಾಗಿ ನೀಡದಿರುವುದು ಸೇರಿ ಹತ್ತಾರು ಸಮಸ್ಯೆಗಳು ನಿತ್ಯ ಇದ್ದರೂ ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಯಾವುದೇ ಕ್ರಮಕೈಗೊಂಡಿಲ್ಲ ಎಂದು ದೂರಿದರು.

 ಕಲುಷಿತ ನೀರು, ಆಹಾರ ಸೇವನೆಯಿಂದ ಜ್ವರ, ಕಜ್ಜಿ ಮಾಮೂಲಾಗಿದೆ.ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಲಕ್ಕಪ್ಪ ಅವರನ್ನು ಪ್ರಶ್ನಿಸಿದರೆ ಕೊಡುವ ಊಟ ಮಾಡಿಕೊಂಡು ಇರೋದಾದ್ರೆ ಇರಿ, ಬೇಡದಿದ್ದರೆ ಹಾಸ್ಟಲ್ ಬಿಟ್ಟು ಹೋಗಿ ಎಂದು ಗದರಿಸುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

 ವಿದ್ಯಾರ್ಥಿನಿಲಯಕ್ಕೆ 224 ವಿದ್ಯಾರ್ಥಿಗಳು ದಾಖಲಾಗಿದ್ದರೂ ನಿತ್ಯ 150ರಿಂದ 180 ವಿದ್ಯಾರ್ಥಿಗಳು ಮಾತ್ರ ಹಾಜರಾಗುತ್ತಾರೆ.ಎಲ್ಲ ವಿದ್ಯಾರ್ಥಿಗಳ ಹಾಜರಾತಿ ತೋರಿಸಿ ಹಣ ಗುಳುಂ ಮಾಡಲಾಗುತ್ತಿದೆ ಎಂದು ದೂರಿದರು. ಇದೇ ವೇಳೆ ಪ್ರತಿಭಟನಾ ವಿದ್ಯಾರ್ಥಿಗಳು ಮತ್ತು ವಾರ್ಡನ್ ಎಸ್.ಎಚ್. ಪೂಜಾರ್ ನಡುವೆ ಮಾತಿನ ಚಕಮಕಿ ನಡೆಯಿತು.

 ವಿದ್ಯಾರ್ಥಿಗಳು ಕೇಳಿದಾಗ ಹಣ ಕೊಡಬೇಕು. ರಾತ್ರಿ ಮದ್ಯ ಸೇವನೆ ಮಾಡಿಸಬೇಕು. ಇಲ್ಲದಿದ್ದರೆ ಊಟದಲ್ಲಿ ಉಪ್ಪು, ಖಾರ ಇಲ್ಲವೆಂದು ಸಣ್ಣಪುಟ್ಟ ನೆಪವೊಡ್ಡಿ ಪ್ರತಿಭಟನೆಗಿಳಿಯುತ್ತಾರೆ. ಜತೆಗೆ ಈ ಹಾಸ್ಟೆಲ್‌ಗೆ ಬರಬೇಕೆಂದು ಬಯಸುವ ಬೇರೆ ವಾರ್ಡನ್‌ಗಳು ವಿದ್ಯಾರ್ಥಿಗಳಿಗೆ ಕಮ್ಮಕ್ಕು ನೀಡಿ ಪ್ರತಿಭಟನೆ ಮಾಡಿಸುತ್ತಿದ್ದಾರೆ ಎಂದು  ಪೂಜಾರ್ ದೂರಿದರು.

ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ಹಣ ಪಡೆದ, ಕುಡಿಸಲು ಕೇಳಿದ ಒಬ್ಬ ವಿದ್ಯಾರ್ಥಿ ಇದ್ದರೂ ಈಗ ತೋರಿಸಿರೆಂದು ಪಟ್ಟುಹಿಡಿದರು. ಇದಕ್ಕೆ ವಾರ್ಡನ್ ನಿರುತ್ತರರಾದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT