ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿನಿಯರಿಂಗ್ ಕೌನ್ಸೆಲಿಂಗ್ ಮುಂದೂಡಿಕೆ?

Last Updated 18 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸುಮಾರು 35 ಕಾಲೇ ಜುಗಳ ಸೀಟು ಹಂಚಿಕೆ ಪಟ್ಟಿ ಪ್ರಕಟ ವಾಗುವುದು ತಡವಾಗಿರುವ ಹಿನ್ನೆಲೆ ಯಲ್ಲಿ ಇದೇ 27ರಿಂದ ಆರಂಭವಾ ಗಬೇಕಿದ್ದ ಎಂಜಿನಿಯರಿಂಗ್ ಕೋರ್ಸ್‌ಗಳ ಕೌನ್ಸೆಲಿಂಗ್ ಪ್ರಕ್ರಿಯೆ ಒಂದು ವಾರ ವಿಳಂಬವಾಗುವ ಸಾಧ್ಯತೆ ಇದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜೂನ್ 27ರಿಂದ ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಕೌನ್ಸೆಲಿಂಗ್ ಆರಂಭವಾಗಬೇಕಿತ್ತು. ಆದರೆ ಇದುವರೆಗೆ 145 ಕಾಲೇಜುಗಳ ಸೀಟು ಹಂಚಿಕೆ ಪಟ್ಟಿ ಮಾತ್ರ ಪ್ರಕಟವಾಗಿದ್ದು, ಉಳಿದ ಕಾಲೇಜುಗಳ ಪಟ್ಟಿ ಯಾವಾಗ ಪ್ರಕಟವಾಗಲಿದೆ ಎಂಬ ಸ್ಪಷ್ಟ ಚಿತ್ರಣವಿಲ್ಲ.

ಹೀಗಾಗಿ ಕೌನ್ಸೆಲಿಂಗ್ ಮುಂದೂಡುವುದು ಸೂಕ್ತ ಎಂದು ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಅವರಿಗೆ ಇಲಾಖೆಯ ಅಧಿಕಾರಿಗಳು ಮನವರಿಕೆ ಮಾಡಿಕೊಟ್ಟಿದ್ದಾರೆ. ಆದರೆ ಆಚಾರ್ಯ ಅವರು ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಕೂಡಲೇ ಬಾಕಿ ಇರುವ ಕಾಲೇಜುಗಳ ಸೀಟು ಹಂಚಿಕೆ ಪಟ್ಟಿ ಪ್ರಕಟಿಸುವಂತೆ ಒತ್ತಡ ಹೇರಲು ಆಚಾರ್ಯ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಇದೇ 21ರಂದು ನವದೆಹಲಿಗೆ ತೆರಳಲಿದ್ದಾರೆ.

ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಮತ್ತು ಎಐಸಿಟಿಇ ಅಧ್ಯಕ್ಷರೊಂದಿಗೆ ಸೀಟು ಹಂಚಿಕೆ ಪಟ್ಟಿ ಬಿಡುಗಡೆ ಸಂಬಂಧ ಚರ್ಚೆ ನಡೆಸಲಿದ್ದಾರೆ. ರಾಜ್ಯದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಜೂನ್ 24ರ ಒಳಗೆ ಪಟ್ಟಿ ಬಿಡುಗಡೆ ಮಾಡಿದರೆ ನಿಗದಿಯಂತೆ 27ರಿಂದ ಕೌನ್ಸೆಲಿಂಗ್ ನಡೆಯಲಿದೆ. ಇಲ್ಲದಿದ್ದರೆ ಕೌನ್ಸೆಲಿಂಗ್ ಮುಂದೂಡುವುದನ್ನು ಅಧಿಕೃತವಾಗಿ ಜೂನ್ 22ರಂದು ಪ್ರಕಟಿಸಲಾಗುತ್ತದೆ ಎಂದು ಉನ್ನತ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ಕಳೆದ ವರ್ಷ ಆರು ಸಾವಿರ ಸೀಟುಗಳ ಪಟ್ಟಿ ಪ್ರಕಟವಾಗುವುದು ತಡವಾದ ಕಾರಣ ಕೌನ್ಸೆಲಿಂಗ್ ಮುಂದೂಡಲಾಗಿತ್ತು. ಆದರೆ ಈ ವರ್ಷ ಇನ್ನೂ 14 ಸಾವಿರ ಸೀಟುಗಳ ಹಂಚಿಕೆ ಪಟ್ಟಿ ಪ್ರಕಟವಾಗುವುದು ಬಾಕಿ ಇದೆ. ಇದರಲ್ಲಿ ಏಳು ಸಾವಿರ, ಸರ್ಕಾರಿ ಕೋಟಾ ಸೀಟುಗಳಾಗಿವೆ. ಅಲ್ಲದೆ ಈಗ ಪ್ರಕಟವಾಗಿರುವ 145 ಕಾಲೇಜುಗಳ ಸೀಟು ಹಂಚಿಕೆ ಪಟ್ಟಿಯಲ್ಲೂ, ಯಾವ ವಿಷಯಕ್ಕೆ ಎಷ್ಟು ಸೀಟು ಎಂಬುದನ್ನು ನಿಖರವಾಗಿ ಹೇಳಿಲ್ಲ. ಕಾಲೇಜಿನ ಒಟ್ಟು ಸೀಟುಗಳ ಸಂಖ್ಯೆಯನ್ನು ಮಾತ್ರ ನಮೂದಿಸಲಾಗಿದೆ. ಇದರಿಂದಾಗಿ ಬಹಳಷ್ಟು ಗೊಂದಲಗಳಿವೆ ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು.

`ರಾಮನಗರ, ಹೂವಿನಹಡಗಲಿ, ಹಾಸನದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ಬಿಎಂಎಸ್, ಪಿ.ಇ.ಎಸ್, ನಿಟ್ಟೆ ಮೀನಾಕ್ಷಿ ಕಾಲೇಜು, ಬಸವೇಶ್ವರ ವಿದ್ಯಾವರ್ಧಕ ಕಾಲೇಜು ಸೇರಿದಂತೆ ಕೆಲವೊಂದು ಪ್ರಮುಖ ಕಾಲೇಜುಗಳ ಸೀಟು ಹಂಚಿಕೆ ಪಟ್ಟಿಯೇ ಇನ್ನೂ ಪ್ರಕಟವಾಗಿಲ್ಲ. ನಿಗದಿಯಂತೆ ಕೌನ್ಸೆಲಿಂಗ್ ಆರಂಭಿಸಿದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಮುಂದೂಡುವಂತೆ ಸಲಹೆ ಮಾಡಿದ್ದೇವೆ~ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಇದೇ 21ರಂದು ಎಐಸಿಟಿಇ ಆಡಳಿತ ಮಂಡಳಿ ಸಭೆ ನಡೆಯಬೇಕಾಗಿತ್ತು.

ಆದರೆ ಆ ಸಭೆಯನ್ನು 28ಕ್ಕೆ ಮುಂದೂಡಲಾಗಿದೆ. ಹೀಗಾಗಿ 27ಕ್ಕೂ ಮೊದಲು ಸೀಟು ಹಂಚಿಕೆ ಪಟ್ಟಿ ಪ್ರಕಟವಾಗುವ ಸಾಧ್ಯತೆಗಳು ತುಂಬಾ ಕಡಿಮೆ. ಈಗಿನ ಲೆಕ್ಕಾಚಾರದ ಪ್ರಕಾರ ಜುಲೈ ಮೊದಲ ವಾರದ ನಂತರವೇ ಕೌನ್ಸೆಲಿಂಗ್ ಆರಂಭಿಸಲು ಸಾಧ್ಯ ಎಂದು ಮೂಲಗಳು ತಿಳಿಸಿವೆ.

ಆಚಾರ್ಯ ಅಸಮಾಧಾನ
ಬೆಂಗಳೂರು: ಎಂಜಿನಿಯರಿಂಗ್, ಆಯು ರ್ವೇದ ಮತ್ತು ಯುನಾನಿ ಕೋರ್ಸ್‌ಗಳ ಸೀಟು ಹಂಚಿಕೆ ಪಟ್ಟಿಯನ್ನು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಮತ್ತು ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ ಇನ್ನೂ ಅಂತಿಮಗೊಳಿಸಿಲ್ಲ, ಈ ಸಂಸ್ಥೆಗಳನ್ನು ಪ್ರಶ್ನಿಸುವವರು ಯಾರೂ ಇಲ್ಲವೇ ಎಂದು ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್. ಆಚಾರ್ಯ ಕಿಡಿಕಾರಿದರು.

ರಾಜ್ಯ ಉನ್ನತ ಶಿಕ್ಷಣ ಪರಿಷತ್ ಶನಿವಾರ ಇಲ್ಲಿ ಆಯೋಜಿಸಿದ್ದ `ಉನ್ನತ ಶಿಕ್ಷಣದಲ್ಲಿ ಸುಧಾರಣೆ ಮತ್ತು ಸಾರ್ವಜನಿಕರ ಪಾಲ್ಗೊಳ್ಳುವಿಕೆ~ ಕುರಿತ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಿಇಟಿ ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ಸರ್ಕಾರ ಬಹಳ ಹಿಂದೆಯೇ ಪ್ರಕಟಿಸಿದೆ. ಆದರೆ ಎಐಸಿಟಿಇ ಮತ್ತು ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ ಸಂಸ್ಥೆಗಳು ಇದುವರೆಗೆ ಸೀಟು ಹಂಚಿಕೆ ಪಟ್ಟಿಯನ್ನು ಅಂತಿಮಗೊಳಿಸದ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಅತೃಪ್ತಿವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT