ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿನ್ ಒಂದು ಕಾರುಗಳು ಹಲವು

Last Updated 11 ಜನವರಿ 2012, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ವಾಹನ ಹೊಂದಿರುವ ಪ್ರತಿಯೊಬ್ಬರೂ `ಇನ್ನೇನು, ಕೆಲವೇ ದಿನಗಳಲ್ಲಿ ಪೆಟ್ರೋಲ್ ಬೆಲೆ ನೂರು ರೂಪಾಯಿ ಆಗುತ್ತೆ~ ಎಂದು ಕನವರಿಸುತ್ತಲೇ ಇರುತ್ತಾರೆ.

ಏರುತ್ತಿರುವ ಪೆಟ್ರೋಲ್ ಬೆಲೆಯಿಂದ ತತ್ತರಿಸಿರುವ ಗ್ರಾಹಕರಲ್ಲಿ ಬಹುತೇಕ ಮಂದಿ ಕೆಲವೇ ದಶಕಗಳ ಹಿಂದೆ ನಿರ್ಲಕ್ಷ್ಯಕ್ಕೊಳಗಾಗಿದ್ದ, ಕೇವಲ ಟ್ರಕ್ ಹಾಗೂ ಬಸ್‌ಗಳಿಗೆ  ಮಾತ್ರ ಸೀಮಿತ ಎಂದೆನಿಸಿಕೊಂಡಿದ್ದ ಡೀಸೆಲ್‌ನತ್ತ ಮುಖ ಮಾಡಿದ್ದಾರೆ. ಭಾರತದಲ್ಲಿ ಇಂದು ಶೇ 80ರಷ್ಟು ಹೊಸ ಕಾರುಗಳು ಡೀಸೆಲ್ ಇಂಧನದಿಂದ ಚಲಿಸುತ್ತಿರುವುದು ಬೆರಗು ಮೂಡಿಸಿದೆ.

 ಕೇವಲ ಒಂದು ದಶಕದ ಹಿಂದೆ ಕಾರು ಹೊಂದಬೇಕೆಂಬ ಕನಸು ಕಂಡವರು `ಸೆಕೆಂಡ್‌ಹ್ಯಾಂಡ್~ ಅಂಬಾಸೆಡರ್ ಅಥವಾ ಫಿಯೆಟ್ ಪ್ರೀಮಿಯರ್ ಪದ್ಮಿನಿ ಕಾರು ಖರೀದಿಸುವುದು ಸಾಮಾನ್ಯವಾಗಿತ್ತು.

ಖರೀದಿಸಿದ ಕಾರಿಗೆ ಮೆಟಡಾರ್‌ನ ಡೀಸೆಲ್ ಎಂಜಿನ್ ಅಳವಡಿಸಿ ಓಡಿಸಲಾಗುತ್ತಿತ್ತು. ಕಾರುಗಳನ್ನು ವಾರಗಟ್ಟಲೆ ನಿಲ್ಲಿಸಿದರೆ ನಂತರ ಅವುಗಳನ್ನು ಸ್ಟಾರ್ಟ್ ಮಾಡಲು ಹರಸಾಹಸ ಪಡಬೇಕಾಗಿತ್ತು. ಇವೆಲ್ಲವನ್ನೂ ಕಂಡವರು, `ಡೀಸೆಲ್‌ಗೆ ಹೋಲಿಸಿದಲ್ಲಿ ಪೆಟ್ರೋಲ್ ಕಾರು ಎಷ್ಟೋ ವಾಸಿ~ ಎಂದಿದ್ದು ನಿಜ.
 
ಆದರೆ ಕೆಲವೇ ವರ್ಷಗಳಲ್ಲಿ ಡೀಸೆಲ್ ತನ್ನ ಅಧಿಪತ್ಯ ಸ್ಥಾಪಿಸಿದೆ. ಅದಕ್ಕೆ ಬಹುಮುಖ್ಯ ಕಾರಣ 2003ರಲ್ಲಿ ಫಿಯೆಟ್ ಅಭಿವೃದ್ಧಿಪಡಿಸಿದ 1.3 ಲೀಟರ್ ಯೂನಿಜೆಟ್ ಡೀಸೆಲ್ ಎಂಜಿನ್. ಬಹುತೇಕ ಕಂಪ್ಯೂಟರ್‌ಗಳು ಇಂಟೆಲ್ ಅಥವಾ ಎಂಎಂಡಿ ಪ್ರೊಸೆಸ್ಸರ್‌ಗಳಿಂದಲೇ ಚಲಿಸುತ್ತಿವೆ.

ವಿವಿಧ ಕಂಪ್ಯೂಟರ್ ತಯಾರಿಕಾ ಕಂಪೆನಿಗಳು ತಾವು ತಯಾರಿಸುವ ಕಂಪ್ಯೂಟರ್‌ಗಳಿಗೆ ಇಂಟೆಲ್ ಅಥವಾ ಎಎಂಡಿ ತಯಾರಿಸುವ ಪ್ರೊಸೆಸ್ಸರ್‌ಗಳನ್ನೇ ಬಳಸುತ್ತಾರೆ. ಇದೇ ಮಾತು ಈಗ ಕಾರುಗಳಿಗೂ ಅನ್ವಯಿಸುತ್ತಿದೆ. ಭಾರತದಲ್ಲಿ ಬೇರೆ ಬೇರೆ ಕಂಪೆನಿಗಳ ಸುಮಾರು ಹನ್ನೆರಡು ಕಾರು ಮಾಡೆಲ್‌ಗಳು ಫಿಯೆಟ್ ಎಂಜಿನ್‌ನಿಂದ ಚಲಿಸುತ್ತಿವೆ ಎಂದರೆ ಆಶ್ಚರ್ಯವಾಗಬಹುದು.

 ಇಟಲಿಯ ಕಾರು ತಯಾರಿಕಾ ಕಂಪೆನಿ ಫಿಯೆಟ್, 1.3 ಲೀ. ಯೂನಿನೆಟ್ ಡೀಸೆಲ್ ಎಂಜಿನ್ (ನಂತರ ಇದು ಮಲ್ಟಿಜೆಟ್ ಎಂಜಿನ್ ಆಗಿ ಬದಲಾಯಿತು)ಅನ್ನು 2003ರಲ್ಲಿ ಬಿಡುಗಡೆ ಮಾಡಿದಾಗ ಅದರ ಧಕ್ಷತೆ, ಇಂಧನ ಮಿತವ್ಯಯ, ಶಕ್ತಿ ಹಾಗೂ ಸುಲಭ ಬಳಕೆ ಬಹುತೇಕ ಕಾರು ತಯಾರಕರನ್ನು ಆಕರ್ಷಿಸಿತು.
 
ಪೋಲೆಂಡ್‌ನಲ್ಲಿ ತಯಾರಾಗುವ ಈ 1248 ಸಿಸಿ ಸಾಮರ್ಥ್ಯದ ಎಂಜಿನ್ ಕಾಮನ್ ರೈಲ್ ಡೈರೆಕ್ಟ್ ಎಂಜಿನ್ ಸಿಸ್ಟಂ (ಸಿಆರ್‌ಡಿಐ) ತಂತ್ರಜ್ಞಾನ ಹೊಂದಿದ್ದರಿಂದ ಪೆಟ್ರೋಲ್‌ನಷ್ಟೇ ಮೃದುವಾಗಿ ಹಾಗೂ ಅದಕ್ಕಿಂತಲೂ ಹೆಚ್ಚು ಇಂಧನ ದಕ್ಷತೆ ನೀಡುವ ಸಾಮರ್ಥ್ಯವನ್ನು ಹೊಂದಿತ್ತು. ಹೀಗಾಗಿ ಮಾರುತಿ ಸುಜುಕಿ, ಸ್ವಿಫ್ಟ್, ರಿಟ್ಜ್, ಡಿಸೈರ್, ಎಸ್‌ಎಕ್ಸ್4 ಹಾಗೂ ಇತ್ತೀಚೆಗೆ ಬಿಡುಗಡೆಗೊಂಡ ಎರ್ಟಿಗಾ ಕಾರುಗಳು ಇದೇ ಫಿಯೆಟ್ ಎಂಜಿನ್ ಹೊಂದಿವೆ.

ಅದರಂತೆಯೇ ಟಾಟಾ ಕಂಪೆನಿಯ ಇಂಡಿಕಾ ವಿಸ್ತಾ, ಟಾಟಾ ಇಂಡಿಗೋ ಮಾಂಜಾ, ಫಿಯೆಟ್ ಅವರದ್ದೇ ಆದ ಗ್ರಾಂದೆ ಪುಂತೊ, ಫಿಯೆಟ್ ಲೀನಿಯಾ, ಫಿಯೆಟ್ 500 ಹಾಗೂ ಪ್ರೀಮಿಯರ್ ಕಂಪೆನಿಯ ರಿಯೋ ಕಾರಿಗೂ ಇನ್ನೇನು ಕೆಲವೇ ತಿಂಗಳುಗಳಲ್ಲಿ ಇದೇ ಎಂಜಿನ್ ಅಳವಡಿಸಿ ರಸ್ತೆಗಿಳಿಯುತ್ತಿದೆ.

 `ಇಷ್ಟೊಂದು ಕಾರುಗಳು ಒಂದೇ ಎಂಜಿನ್ ಬಳಸುತ್ತಿವೆ ಎಂದರೆ ಅದರಲ್ಲಿ ಅಂಥದ್ದೇನಿದೆ?~ ಎನ್ನುವ ಪ್ರಶ್ನೆ ಮನಸ್ಸಿನಲ್ಲಿ ಮೂಡುವುದು ಸಹಜ. ಅಧಿಕ ಸಾಮರ್ಥ್ಯದ ಹಾಗೂ ತೂಕದ ಸಮತೋಲನ ಕಾಪಾಡಬಲ್ಲ ಸಾಮರ್ಥ್ಯವನ್ನು ಈ ಡೀಸೆಲ್ ಎಂಜಿನ್ ಹೊಂದಿದೆ.

ಫಿಯೆಟ್ ಅವರ 1.3 ಲೀ ಮಲ್ಟಿಜೆಟ್ (1.3 ಎಂಜೆಡಿ) ಎಂಜಿನ್  ಪರಿಚಯವಾಗುವವರೆಗೂ, `ಡೀಸೆಲ್ ಪರಿಸರ ಸ್ನೇಹಿ ಅಲ್ಲದ ಹಾಗೂ ಅಧಿಕ ಖರ್ಚಿನ ಎಂಜಿನ್~ ಎಂದೇ ಬಹತೇಕ ಮಂದಿ ಪರಿಗಣಿಸಿದ್ದರು.
 
ಈ ಹಿಂದೆ ಎಂಜಿನ್‌ಗೆ ಏಕ ನಳಿಕೆಯಲ್ಲಿ ಡೀಸೆಲ್ ಪೂರೈಸುತ್ತಿದ್ದ ಸಾಂಪ್ರದಾಯಿಕ ತಂತ್ರಜ್ಞಾನವನ್ನು ಬಹು ನಳಿಕೆಯ ಮೂಲಕ ಡೀಸೆಲ್ ಸಿಂಪಡಿಸುವ ತಂತ್ರಜ್ಞಾನಕ್ಕೆ ಬದಲಾಯಿಸಿದ್ದು ಫಿಯೆಟ್‌ನ ಸಾಧನೆ. ಫೆರಾರಿ ಅಂಥ ಕಾರು ತಯಾರಿಸುವ ಫಿಯೆಟ್ 2003ಕ್ಕಿಂತ ಹಿಂದೆ ಅಷ್ಟಾಗಿ ಮುಂಚೂಣಿಯಲ್ಲಿರಲಿಲ್ಲ. ಆದರೆ 1.3 ಎಂಜೆಡಿ ಪರಿಚಯಿಸಿದ್ದು ಕಂಪೆನಿಯ ದೆಸೆಯನ್ನೇ ಬದಲಿಸಿತು. 

 ಫಿಯೆಟ್ 1.3 ಎಂಜೆಡಿ ಎಂಜಿನ್ ಅನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಟ್ಯೂನ್ ಮಾಡಿ ಅಧಿಕ ಶಕ್ತಿ ಪಡೆಯಬಹುದಾಗಿದೆ. ಹೆಚ್ಚು ಇಂಧನ ಧಕ್ಷತೆ ಹೊಂದಿರುವ ಈ ಎಂಜಿನ್, ಬಹುಬೇಗ ಬಳಕೆದಾರರಿಗೆ ಇಷ್ಟವಾಯಿತು.
 
1ರಿಂದ 1.4 ಲೀ ಎಂಜಿನ್ ಸಾಮರ್ಥ್ಯದ ವಿಭಾಗದಲ್ಲಿ, 2005ರಲ್ಲಿ ಫಿಯೆಟ್ ತನ್ನ ಈ ಎಂಜಿನ್‌ಗೆ ಅಂತರರಾಷ್ಟ್ರೀಯ ಪುರಸ್ಕಾರ ಪಡೆಯಿತು. ಡೀಸೆಲ್ ಎಂಜಿನ್ ಸಂಶೋಧನೆ ಅತ್ಯಂತ ದುಬಾರಿಯಾಗಿದ್ದರಿಂದ ಬಹುತೇಕ ಕಾರು ತಯಾರಕರು ಡೀಸೆಲ್ ಎಂಜಿನ್ ಅಭಿವೃದ್ಧಿಯತ್ತ ಆಸಕ್ತಿವಹಿಸುತ್ತಿರಲಿಲ್ಲ. ಆದರೆ ಆ ನಿರ್ವಾತವನ್ನೇ ಫಿಯೆಟ್ ಸೂಕ್ತ ಅವಕಾಶವನ್ನಾಗಿ ಪರಿವರ್ತಿಸಿಕೊಂಡಿತು.

 ಹೀಗಾಗಿ 2007ರಲ್ಲಿ ಸುಜುಕಿ ಮೋಟಾರ್ಸ್‌ ತಮ್ಮದೇ ಆದ ಜೆಟಿಡಿ ತಂತ್ರಜ್ಞಾನದ ಎಂಜಿನ್ ಅಭಿವೃದ್ಧಿಪಡಿಸಲು ಫಿಯೆಟ್‌ನಿಂದ ಪರವಾನಗಿ ಪಡೆಯಿತು. ಜತೆಗೆ, ಹೊಸತಾಗಿ ಎಂಜಿನ್ ಉತ್ಪಾದಿಸುವ ಬದಲಾಗಿ ಈಗಾಗಲೇ ಲಭ್ಯವಿರುವ ಫಿಯೆಟ್ ಡೀಸೆಲ್ ಎಂಜಿನ್ ಅನ್ನೇ ತನ್ನ ಕಾರುಗಳಿಗೆ ತಕ್ಕಂತೆ ಪರಿವರ್ತಿಸಿಕೊಂಡಿತು.
 
ಜಪಾನ್ ಮೂಲದ ಸುಜುಕಿ ಫಿಯೆಟ್ 1.3 ಲೀ ಎಂಜೆಡಿಯನ್ನು 75ಬ್ರೇಕ್ ಅಶ್ವಶಕ್ತಿ ಹಾಗೂ 190ಎನ್‌ಎಂ ಟಾರ್ಕ್‌ಗೆ ಪರಿವರ್ತಿಸಿ ಡಿಡಿಐಎಸ್ ಎಂಬ ಹೆಸರನ್ನಿಟ್ಟಿತು.

ಇದೇ ಯಶಸ್ಸನ್ನು  ಉಳಿಸಿಕೊಳ್ಳಲು  ಫಿಯೆಟ್ 2006ರಲ್ಲಿ ಟಾಟಾ ಮೋಟಾರ್ಸ್‌ ಜತೆ ಮಹಾರಾಷ್ಟ್ರದ ರಂಜನ್‌ಗಾಂವ್‌ನಲ್ಲಿರುವ ಟಾಟಾ ಮೋಟಾರ್ಸ್‌ನ ಇಂಡಸ್ಟ್ರೀಸ್‌ನಲ್ಲಿ ಪಾಲುದಾರಿಕೆ ಮೇಲೆ ಎಂಜಿನ್ ಉತ್ಪಾದಿಸುವ ಜಂಟಿ ಒಪ್ಪಂದಕ್ಕೆ ಸಹಿ ಹಾಕಿತು.

ಈ ಒಪ್ಪಂದದ ಅನ್ವಯ ಟಾಟಾ ಮೋಟಾರ್ಸ್‌ ಫಿಯೆಟ್ ಕಾರುಗಳಿಗೆ ತನ್ನ ಮಳಿಗೆಯಲ್ಲಿ ಜಾಗ ಕೊಟ್ಟು ಮಾರಾಟ ಮಾಡಲು ಒಪ್ಪಿಕೊಂಡಿತು. ಇದಾದ ಕೆಲವೇ ತಿಂಗಳುಗಳಲ್ಲಿ ಟಾಟಾ ಮೋಟಾರ್ಸ್‌ ತನ್ನ ಇಂಡಿಕಾ ವಿಸ್ತಾ ಕಾರುಗಳಿಗೆ 1.3 ಎಂಜೆಡಿ ಡೀಸೆಲ್ ಎಂಜಿನ್ ಅಳವಡಿಸಿತು. ಅದು ಆ ಎಂಜಿನ್‌ಗೆ ಕ್ವಾಡ್ರಾಜೆಟ್ ಎಂಬ ಹೆಸರನ್ನಿಟ್ಟಿತು.

`ಮಾರುತಿ ಸುಜುಕಿ ಸ್ವಿಫ್ಟ್ ಡೀಸೆಲ್ ಎಂಜಿನ್~ ಕಾರುಗಳಿಗೆ ಬೇಡಿಕೆ ಹೆಚ್ಚಾದಂತೆ ಫಿಯೆಟ್‌ನ ವಹಿವಾಟು ಸಹ ಹೆಚ್ಚಾಯಿತು. ಜತೆಗೆ ಮಾರುತಿ ಸುಜುಕಿ ಕಾರುಗಳಿಗೆ ಬೇಡಿಕೆಯೂ ಏರುತ್ತಾ ಸಾಗಿತು.

ಇದರಿಂದ ಉತ್ತೇಜನಗೊಂಡ ಟಾಟಾ-ಫಿಯೆಟ್ ಜಂಟಿಯಾಗಿ 2008ರಲ್ಲಿ ಸುಜುಕಿ ಮೋಟಾರ್ಸ್‌ ಭೇಟಿ ಮಾಡಿ ಹೈದರಾಬಾದ್‌ನಲ್ಲಿರುವ ಮನೆಸಾರ್ ಕಂಪೆನಿಯ ತಯಾರಿಕಾ ಘಟಕದಲ್ಲಿ ಸರ್ವಾನ್ವಯಿ ಎಂಜಿನ್ ತಯಾರಿಸುವ ಪ್ರಸ್ತಾವನೆಯನ್ನು ಮುಂದಿಟ್ಟಿತು.
 
ಆದರೆ ಸುಜುಕಿ ಕಂಪೆನಿ ಇದನ್ನು ತಿರಸ್ಕರಿಸಿ, ಫಿಯೆಟ್‌ಗೆ `ರಾಯಧನ~ ನೀಡಿ ತಮ್ಮ ಎಂಜಿನ್ ಅನ್ನು ತಾವೇ ಅಭಿವೃದ್ಧಿಪಡಿಸಿಕೊಳ್ಳುವ ನಿಲುವಿಗೆ ಅಂಟಿಕೊಂಡರು.

ಹೀಗೆ ಈ ನಿಲುವಿಗೆ ಅಂಟಿಕೊಳ್ಳಲು ಹಾಗೂ ಟಾಟಾ-ಫಿಯೆಟ್ ಸುಜುಕಿಯನ್ನು ಭೇಟಿ ಮಾಡಲು ಕಾರಣವಿತ್ತು. ಫಿಯೆಟ್ ಎಂಜಿನ್ ಬಳಸಿರುವ ಯಾವುದೇ ಕಾರುಗಳಿಗೆ ಹೋಲಿಸಿದಲ್ಲಿ ಸುಜುಕಿಯ ಕಾರುಗಳು ಅಗ್ರಪಂಕ್ತಿಯಲ್ಲಿ ನಿಲ್ಲುತ್ತವೆ. ಏಕೆಂದರೆ ಸುಜುಕಿ ಸ್ವಿಫ್ಟ್, ಟಾಟಾ ವಿಸ್ಟಾ, ಫಿಯೆಟ್ ಗ್ರಾಂದೆ ಪುಂತೊ ಕಾರುಗಳು ಒಂದೇ ಎಂಜಿನ್‌ನಿಂದ ಚಲಿಸಿದರೂ ಅವುಗಳಲ್ಲಿ ಸ್ವಿಫ್ಟ್‌ನ ವೇಗ ಹೆಚ್ಚು.
 
ಪ್ರತಿ ಗಂಟೆಗೆ 0ಯಿಂದ 100 ಕಿ.ಮೀ ವೇಗ ಪಡೆಯಲು ಸ್ವಿಫ್ಟ್ ತೆಗೆದುಕೊಳ್ಳುವ ಸಮಯ ಕೇವಲ 14.13 ಸೆಕೆಂಡ್. ಟಾಟಾ ವಿಸ್ಟಾ ಇದೇ ವೇಗವನ್ನು 21.1 ಸೆಕೆಂಡ್ ತೆಗೆದುಕೊಂಡರೆ ಗ್ರಾಂದೆ ಪುಂತೊ 17.57 ಸೆಕೆಂಡ್‌ಗಳಷ್ಟು ಸಮಯ ತೆಗೆದುಕೊಳ್ಳುತ್ತದೆ.

ಫಿಯೆಟ್ ಪುಂತೊಗೆ ಹೋಲಿಸಿದಲ್ಲಿ ಪರಸ್ಪರ ಗೇರುಗಳು ನಡುವಿನ ಅಂತರ ಹೆಚ್ಚು ವಿಸ್ತಾರವಾಗಿವೆ. ಹೀಗಾಗಿ ಪದೇ ಪದೇ ಗೇರ್ ಬದಲಾಯಿಸುವ ಅಗತ್ಯವಿಲ್ಲ. ಜತೆಗೆ ಪುಂತೊ (1130 ಕೆ.ಜಿ)ಗೆ ಹೋಲಿಸಿದಲ್ಲಿ ಸ್ವಿಫ್ಟ್ ತೂಕ (1075 ಕೆ.ಜಿ) ಕಡಿಮೆ. ಹೀಗಾಗಿ ವೇಗ ಹೆಚ್ಚಿಸಿಕೊಳ್ಳುವುದು ಹಾಗೂ ಮೈಲೇಜ್ ದೃಷ್ಟಿಯಿಂದ ಇದೇ ಎಂಜಿನ್ ಬಳಕೆಯ ಇತರ ಕಾರುಗಳಿಗಿಂತ ಮಾರುತಿ ಸುಜುಕಿ ಕೊಂಚ ಭಿನ್ನ ಹಾಗೂ ಉತ್ತಮ.

ಇತರ ಕಾರು ತಯಾರಿಕಾ ಕಂಪೆನಿಗಳಿಗೆ ಎಂಜಿನ್ ನೀಡಿರುವ ಫಿಯೆಟ್ ತನ್ನ ಕಾರುಗಳಿಗೂ ಇದೇ ಎಂಜಿನ್ ಬಳಸಿದೆ. ಆದರೆ ಅವುಗಳಿಗಿಂತ ಉತ್ತಮ ಶ್ರೇಣಿಯ ಹಾಗೂ ಮುಂದಿನ ತಲೆಮಾರಿನ ಎಂಜಿನ್‌ಗಳನ್ನು ತನ್ನ ಪುಂತೊ ಹಾಗೂ ಲೀನಿಯಾ ವಾಹನಗಳಲ್ಲಿ ಅಳವಡಿಸಿದೆ.

ಆಕ್ಸಲರೇಟರ್ ನೀಡದೆ ಒಂದರಿಂದ ಐದನೇ ಗೇರ್‌ವರೆಗೂ ವಾಹನವನ್ನು ಚಲಿಸಬಹುದಾಗಿದೆ. ಇದರ ಎಂಜಿನ್ ಬಳಕೆಗೆ ಬಳಸಾಗಿರುವ ಇಂಟಲಿಜೆಂಟ್ ವ್ಯವಸ್ಥೆ ಎಂಜಿನ್‌ನ ಟಾರ್ಕ್ ತನ್ನಿಂತಾನೆ ನಿರ್ಧರಿಸುವ ಸಾಮರ್ಥ್ಯ ಹೊಂದಿದೆ.

ಇನ್ನು ಸೆಡಾನ್ ಶ್ರೇಣಿಯಲ್ಲೂ 1.3 ಎಂಜೆಡಿ ಬಳಕೆ ಇದೆ. ಮಾರುತಿ ಸುಜುಕಿ ಡಿಸೈರ್ ಹಾಗೂ ಎಸ್‌ಎಕ್ಸ್4, ಟಾಟಾ ಇಂಡಿಗೊ ಮಾಂಜಾ ಹಾಗೂ ಫಿಯೆಟ್ ಲೀನಿಯಾ ಟಿ-ಜೆಟ್‌ಗಳ ಒಂದೇ ಪ್ರಬೇಧದ ಎಂಜಿನ್ ಬಳಸುತ್ತಿವೆ. ಆದರೆ ಬಳಕೆ ಹಾಗೂ ಎಂಜಿನ್ ಕಾರ್ಯಕ್ಷಮತೆ ದೃಷ್ಟಿಯಿಂದ ಮಾರುತಿ ಸುಜುಕಿ ಸೆಡಾನ್ ಕಾರುಗಳು ಇತರ ಕಾರುಗಳಿಗಿಂತ ಭಿನ್ನ.

ಫಿಯೆಟ್ ತನ್ನ ನಲವತ್ತನೇ ಲಕ್ಷದ 1.3 ಎಂಜೆಡಿ ಎಂಜಿನ್ ಅನ್ನು 2011ರ ಫೆಬ್ರವರಿಯಲ್ಲಿ ಫ್ರಾನ್ಸ್ ಗ್ರಾಹಕನಿಗಾಗಿ ತನ್ನ ಫಿಯೆಟ್ 500 ಕಾರಿಗೆ ಅಳವಡಿಸಿ ನೀಡಿತು. ಆ ಎಂಜಿನ್ ವಿಶೇಷವಾಗಿ ಅಭವೃದ್ಧಿಪಡಿಸಿದ್ದು 95 ಬ್ರೇಕ್ ಅಶ್ವ ಶಕ್ತಿ ಹೊಂದಿತ್ತು.

2012ರಲ್ಲಿ ಫಿಯೆಟ್‌ನ ಹಳೆಯ ಪಾಲುದಾರ ಕಂಪೆನಿ ಪ್ರೀಮಿಯರ್ ತನ್ನ ಹೊಸ ಎಸ್‌ಯುವಿ ರಿಯೋ ವಾಹನಕ್ಕೆ 1.3 ಎಂಜಿಟಿ ಎಂಜಿನ್ ಪೂರೈಸುವ ಒಪ್ಪಂದಕ್ಕೆ ಸಹಿ ಹಾಕಿದೆ. ಇನ್ನು ಮೂರು ತಿಂಗಳಲ್ಲಿ ಡೀಸೆಲ್ ಮಾದರಿಯ ರಿಯೋ ಎಸ್‌ಯುವಿ ಮಾರುಕಟ್ಟೆ ಪ್ರವೇಶಿಸಲಿದೆ.

ಇದೀಗ ಫಿಯೆಟ್ ಅರ್ಧ ಕೋಟಿಗೂ ಹೆಚ್ಚು 1.3 ಎಂಜೆಡಿ ಎಂಜಿನ್ ಸಿದ್ಧಪಡಿಸಿದೆ. ಕಡಿಮೆ ಇಂಧನ ಬೇಡುವ ಹಾಗೂ ಹೆಚ್ಚು ಶಬ್ದ ಮಾಡದ, ಹೆಚ್ಚು ಶಕ್ತಿಶಾಲಿ ಎಂಜಿನ್ ತಯಾರಿಕೆಯಲ್ಲಿ ತನ್ನದೇ ಛಾಪು ಮೂಡಿಸಿದೆ.
 
ಭಾರತದ ಹನ್ನೆರಡಕ್ಕೂ ಅಧಿಕ ಕಾರುಗಳು ಫಿಯೆಟ್ 1.3 ಎಂಜಿನ್ ಬಳಸಿ ಚಲಿಸುತ್ತಿವೆ. ಡೀಸೆಲ್ ಕಾರುಗಳಿಗೂ ಭವಿಷ್ಯವಿದೆ ಎಂದು ತೋರಿಸಿಕೊಟ್ಟ ಎಂಜಿನ್‌ಗೆ ಈಗ ಎಲ್ಲಿಲ್ಲದ ಬೇಡಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT