ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್ಕೆ ಕನಸು ಭಗ್ನಗೊಳಿಸಲು ರಣತಂತ್ರ

Last Updated 23 ಏಪ್ರಿಲ್ 2013, 9:35 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿಷ್ಠಿತ ಕ್ಷೇತ್ರ ಗದಗ. ಈ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಎಚ್.ಕೆ.ಪಾಟೀಲ ಅವರ ಕನಸು ಭಗ್ನಗೊಳಿಸಲು ಬಿಜೆಪಿ, ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳು ರಣತಂತ್ರ ರೂಪಿಸುತ್ತಿವೆ.

ನಾಲ್ಕು ಬಾರಿ ಪಶ್ಚಿಮ ಪದವೀಧರ ಕ್ಷೇತ್ರದಿಂದ ಎಚ್. ಕೆ.ಪಾಟೀಲ ಆಯ್ಕೆಯಾಗಿ ಸೋಲಿಲ್ಲದ ಸರದಾರ ಎನ್ನಿಸಿ ಕೊಂಡಿದ್ದರು. 2008ರ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ಎಚ್.ಕೆ.ಪಾಟೀಲ ಮೊದಲ ಬಾರಿಗೆ ವಿಧಾನಸಭೆಗೆ ಸ್ಪರ್ಧಿಸಿದ್ದರು. ಆಗ ಆಗಿದ್ದೇ ಬೇರೆ. ಬಿಜೆಪಿ ಅಭ್ಯರ್ಥಿ ಶ್ರೀಶೈಲಪ್ಪ ಬಿದರೂರ ವಿರುದ್ಧ ಎಚ್.ಕೆ.ಪಾಟೀಲ ಸೋಲುವ ಮೂಲಕ ತೀವ್ರ ಮುಖಭಂಗ ಅನುಭವಿಸಿದ್ದರು. ನಂತರ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿಯೂ ಮೋಹನ ಲಿಂಬಿಕಾಯಿ ವಿರುದ್ಧ ಮತ್ತೊಮ್ಮೆ ಪರಾಭವಗೊಂಡರು.

ನಾಮಪತ್ರ ಸಲ್ಲಿಕೆ ಆರಂಭವಾಗುತ್ತಿದ್ದಂತೆ ಇತ್ತ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಕಾಂಗ್ರೆಸ್ಸೇತರ ಪಕ್ಷಗಳು ಒಂದಾಗಿ ಏಕ ಅಭ್ಯರ್ಥಿ ನಿಲ್ಲಿಸಬೇಕು ಎಂಬ ಬೆಳವಣಿಗೆಯು ನಡೆಯಿತು. ಎರಡು ಬಾರಿ ಸಭೆ ನಡೆಸಿ ಒಮ್ಮತದ ಅಭ್ಯರ್ಥಿ ಆಯ್ಕೆ ಕುರಿತು ಚರ್ಚಿಸಿದರೂ ಅಂತಿಮ ತೀರ್ಮಾನಕ್ಕೆ ಬರಲುಆಗಿಲ್ಲ. `ಸ್ವಲ್ಪ ದಿನದ ಮಟ್ಟಿಗೆ ಮುಖಂಡರು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ' ಎಂದು ಮೂಲಗಳು ತಿಳಿಸಿವೆ. ಈ ಬೆಳವಣಿಗೆ ಕಾಂಗ್ರೆಸ್ ಮುಖಂಡರ ನಿದ್ದೆಗೆಡಿಸಿದೆ.

ಗದಗ ಕ್ಷೇತ್ರದ ಇತಿಹಾಸ ಅವಲೋಕಿಸಿದರೆ ಮಾಜಿ ಸಚಿವ ಕೆ.ಎಚ್.ಪಾಟೀಲ ಮತ್ತು ಅವರ ಅಣ್ಣನ ಮಗ ಡಿ.ಆರ್.ಪಾಟೀಲ ನಾಲ್ಕು ದಶಕಗಳ ಕಾಲ ಕ್ಷೇತ್ರ ಪ್ರತಿನಿಧಿಸಿದ್ದಾರೆ. ಒಂದು ಬಾರಿ ಜನತಾ ಪರಿವಾರ ಮತ್ತು ಬಿಜೆಪಿ ಪ್ರತಿನಿಧಿಸಿದೆ. ಕ್ಷೇತ್ರದ ಜನತೆ ಹಲವು ಬಾರಿ ಕಾಂಗ್ರೆಸ್ ಬೆಂಬಲಿಸಿರುವುದು ಚುನಾವಣೆ ಹೆಚ್ಚಿನ ಕುತೂಹಲ ಕೆರಳಿಸಿದೆ.

ನಾಲ್ಕು ಪಕ್ಷಗಳ ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್ ಹೊರತುಪಡಿಸಿ ಮೂವರು ಲಿಂಗಾಯತರು ಕಣದಲ್ಲಿದ್ದಾರೆ. ಲಿಂಗಾಯತರು, ಹಿಂದುಳಿದವರು, ಅಲ್ಪಸಂಖ್ಯಾತ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತವೆ.

ಈ ಚುನಾವಣೆ ಎಚ್.ಕೆ.ಪಾಟೀಲ ಅವರ ರಾಜಕೀಯ ಜೀವನದ ಅಳಿವು-ಉಳಿವಿನ ಪ್ರಶ್ನೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಶತಾಯಗತಾಯ ವಿಧಾನಸಭೆ ಪ್ರವೇಶಿಸಬೇಕೆಂದು ನಿರ್ಧರಿಸಿರುವ ಎಚ್ಕೆ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಪ್ರಚಾರದ ಭರಾಟೆಯೂ ಜೋರಾಗಿಯೇ ನಡೆದಿದೆ. ಬಿಜೆಪಿ ಸರ್ಕಾರದ ಹಗರಣ, ಭ್ರಷ್ಟಾಚಾರ ಕುರಿತು ಪ್ರಚಾರ ಮಾಡಿ ಮತಯಾಚಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಶುದ್ಧ ನೀರಿನ ಘಟಕ ಸ್ಥಾಪನೆ ಎಚ್ಕೆ ಅವರಿಗೆ ಅನುಕೂಲ ವಾತಾವರಣ ಕಲ್ಪಿಸಲಿದೆ ಎನ್ನಲಾಗಿದೆ. ಗದಗ ಬೆಟಗೇರಿ ನಗರಸಭೆ 35 ಸ್ಥಾನಗಳಲ್ಲಿ 20 ಸ್ಥಾನ ಮತ್ತು ಮುಳಗುಂದ ಪಟ್ಟಣ ಪಂಚಾಯಿತಿಯಲ್ಲಿ 19 ಸ್ಥಾನಗಳಲ್ಲಿ 16ರಲ್ಲಿ ಗೆದ್ದಿರುವುದು ಕಾಂಗ್ರೆಸ್ ಮುಖಂಡರಲ್ಲಿ ಗೆಲುವಿನ ಆತ್ಮವಿಶ್ವಾಸ ಹೆಚ್ಚಿಸಿದೆ. ಇತ್ತ ಡಿ.ಆರ್.ಪಾಟೀಲ ಸಹ ಸಹೋದರನ ಗೆಲುವಿಗೆ ಪಣ ತೊಟ್ಟಿದ್ದಾರೆ.

ಕೆಜೆಪಿಯಲ್ಲಿ ಗುರುತಿಸಿಕೊಂಡು ಬಿಜೆಪಿಗೆ ಮರಳಿದ ಶಾಸಕ ಶ್ರೀಶೈಲಪ್ಪ ಬಿದರೂರ ಅವರಿಗೆ ವರಿಷ್ಠರು ಒಲ್ಲದ ಮನಸ್ಸಿನಿಂದ ಟಿಕೆಟ್ ನೀಡಿದರು. ಇದಕ್ಕೆ ಪಕ್ಷದ ಮುಖಂಡರಿಂದ ತೀವ್ರ ವಿರೋಧವೂ ವ್ಯಕ್ತವಾಗಿತ್ತು ಬಿಜೆಪಿಗೆ ತಟ್ಟಿದ್ದ ಬಂಡಾಯದ ಬಿಸಿಯನ್ನು ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಷಿ ಅವರು ತಕ್ಕಮಟ್ಟಿಗೆ ಶಮನ ಮಾಡಿ ಹೋಗಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಸಾಧನೆ ಅಷ್ಟಕಷ್ಟೇ. ಜತೆಗೆ ಕೆಲ ಮುಖಂಡರು ಮುನಿಸಿಕೊಂಡು ಪ್ರಚಾರದಿಂದ ದೂರ ಉಳಿದಿದ್ದಾರೆ. ಇದು ಪಕ್ಷದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಮೆಡಿಕಲ್ ಕಾಲೇಜು ಸ್ಥಾಪನೆ, ಕುಡಿಯುವ ನೀರು ಯೋಜನೆ, ಹೈಟೆಕ್ ಜಿಲ್ಲಾಸ್ಪತ್ರೆ ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯಕ್ರಮಗಳು ಬಿದೂರರ ಅವರ ಸಾಧನೆ ಪಟ್ಟಿಯಲ್ಲಿವೆ.

1994ರಲ್ಲಿ ರೋಣ ಕ್ಷೇತ್ರದಿಂದ ಜನತಾದಳದಿಂದ ಸ್ಪರ್ಧಿಸಿದ್ದ ಬಿದರೂರ, ಕಾಂಗ್ರೆಸ್‌ನ ಜಿ.ಎಸ್.ಪಾಟೀಲರನ್ನು ಸೋಲಿಸಿದ್ದರು. 1999ರಲ್ಲಿ ಜೆಡಿಎಸ್‌ನಿಂದ ಕಣಕ್ಕಿಳಿದ ಬಿದರೂರ ಅದೇ ಜಿ.ಎಸ್.ಪಾಟೀಲ ವಿರುದ್ಧ ಪರಾಭವ ಗೊಂಡರು. ನಂತರ ಬಿಜೆಪಿ ಸೇರ್ಪ ಡೆಯಾಗಿ 2008 ರಲ್ಲಿ ಗದಗ ಕ್ಷೇತ್ರ ದಿಂದ ಸ್ಪರ್ಧಿಸಿ ಆಯ್ಕೆ ಯಾದರು.

ಬಿಜೆಪಿ ಟಿಕೆಟ್ ವಂಚಿತ ವರ್ತಕ ಎಸ್.ಬಿ.ಸಂಕಣ್ಣವರ ಈ ಬಾರಿ ಕೆಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕೆ.ಎಚ್.ಪಾಟೀಲ ನಿಧನದ ನಂತರ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಜನತಾದಳದಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಡಿ.ಆರ್.ಪಾಟೀಲ ವಿರುದ್ಧ ಸೋಲು ಕಂಡರು. 2004ರಲ್ಲಿ ಬಿಜೆಪಿಯಿಂದ ಮತ್ತೊಮ್ಮೆ ಸ್ಪರ್ಧಿಸಿ ಪರಾಭವಗೊಂಡರು. ಕೆಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜತೆಗೆ ಸಮುದಾಯ ಮತಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ.

ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಸಹ ವಿಭಿನ್ನ ತಂತ್ರ ಅನುಸರಿಸುವ ಮೂಲಕ ಮತಯಾಚನೆ ಮಾಡುತ್ತಿದ್ದಾರೆ. ಜಿಸಿಎಲ್, ಗದಗ ಹಬ್ಬದ ಮೂಲಕ ಹೆಸರು ಮಾಡಿದ್ದಾರೆ. ಈಗ ಕೊಳಗೇರಿಗಳಲ್ಲಿ ವಾಸ್ತವ್ಯ ಹೂಡಿ ಮತಯಾಚನೆ ಮಾಡುತ್ತಿದ್ದಾರೆ. ಶ್ರೀರಾಮುಲು ಜನಪ್ರಿಯತೆ ಅನುಕೂಲಕರ ವಾತಾವರಣ ಕಲ್ಪಿಸಲಿದೆ ಎಂಬ ಲೆಕ್ಕಚಾರ ಅವರದ್ದು.

ಜೆಡಿಎಸ್ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಸ್ಪರ್ಧಿಸಿರುವ ಅಂದಾನಯ್ಯ ಕುರ್ತಕೋಟಿ ಅವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜನಪ್ರಿಯ ಕಾರ್ಯಕ್ರಮಗಳನ್ನು ಜನತೆಗೆ ತಿಳಿಸಿ  ಮತಯಾಚನೆ ಮಾಡುತ್ತಿದ್ದಾರೆ.

ಕಾಂಗ್ರೆಸ್, ಬಿಜೆಪಿ, ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್, ಜೆಡಿಎಸ್ ಪಕ್ಷಗಳಲ್ಲದೆ ಮಹಾರಾಷ್ಟ್ರ ಮೂಲದ ನ್ಯಾಷನಲ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ), ಬಿಹಾರದ  ಲೋಕಜನಶಕ್ತಿ ಪಕ್ಷ (ಎಲ್‌ಜೆಪಿ), ಉತ್ತರ ಪ್ರದೇಶದ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ), ಮೇಘಾಲಯದ ನ್ಯಾಷನಲ್ ಪೀಪಲ್ಸ್‌ಪಾರ್ಟಿ (ಎನ್‌ಪಿಪಿ), ಶುಭ ಕರ್ನಾಟಕ (ಎಸ್‌ಕೆ) ಪಕ್ಷದಿಂದ ಅಭ್ಯರ್ಥಿಗಳು ಸಹ ಅಖಾಡಕ್ಕೆ ಧುಮುಕ್ಕಿದ್ದಾರೆ.

ಈ ಕ್ಷೇತ್ರದಲ್ಲಿ ಮೇಲ್ನೋಟಕ್ಕೆ ಕಾಂಗ್ರೆಸ್ ಮತ್ತು ಬಿಎಸ್‌ಆರ್ ಕಾಂಗ್ರೆಸ್ ನಡುವೆ ಹಣಾಹಣಿ ಕಂಡು ಬಂದಿದೆ. ಆದರೆ ಕೊನೆ ಮೂರು ದಿನದದಲ್ಲಿ ಚಿತ್ರಣ ಬದಲಾದರೂ ಅಚ್ಚರಿ ಪಡಬೇಕಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT