ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಐವಿ ವಿರುದ್ಧ ನಾವೀಗ ಜಾಗೃತರು

Last Updated 1 ಡಿಸೆಂಬರ್ 2012, 5:16 IST
ಅಕ್ಷರ ಗಾತ್ರ

ಕೋಲಾರ: ಎಚ್‌ಐವಿ-ಏಡ್ಸ್ ವಿರುದ್ಧ ನಾವೀಗ ಜಾಗೃತರು. ಹೆಚ್ಚಿನ ಹಣದ ಆಸೆಗಿಂತಲೂ ನಮ್ಮ ಮತ್ತು ನಮ್ಮ ಗ್ರಾಹಕರ ಹಾಗೂ ಕುಟುಂಬಗಳ ಆರೋಗ್ಯ ಮತ್ತು ಧೀರ್ಘಾಯುಷ್ಯಕ್ಕಾಗಿ ನಾವು ಪ್ರತಿ ಕ್ಷಣವೂ ಎಚ್ಚರ ವಹಿಸುತ್ತೇವೆ. ಆದಕ್ಕಾಗಿಯೇ ಒಗ್ಗಟ್ಟಾಗಿದ್ದೇವೆ...

-ನಗರದ ಮೈರಾಡ/ಸೌಖ್ಯ ಸಮೃದ್ಧಿ ಸಂಸ್ಥೆಯಲ್ಲಿ ಕುಳಿತ ಜಿಲ್ಲೆಯ ಕೆಲವು ಲೈಂಗಿಕ ವೃತ್ತಿಪರ ಮಹಿಳೆಯರು ತಮ್ಮ ಮನದಾಳವನ್ನು ತೋಡಿಕೊಂಡಿದ್ದು ಹೀಗೆ.
ಗೂಂಡಾಗಳು, ನಿಕಟ ಸಂಗಾತಿಗಳು, ನೆರೆಹೊರೆಯವರು, ದಲ್ಲಾಳಿಗಳು, ಕುಟುಂಬದವರಿಂದ ಶೋಷಣೆಗೆ ಒಳಗಾಗುವ ಅವರು, ಸಮದಾಯದಲ್ಲಿ ಅನುಭವಿಸುವ ತೊಂದರೆ- ಕಿರುಕುಳಗಳ ಜೊತೆಗೇ ಎಚ್‌ಐವಿ-ಏಡ್ಸ್ ವಿರುದ್ಧವೂ ಪ್ರತಿದಿನ ಹೋರಾಡುತ್ತಾರೆ.

`ಪ್ರಜಾವಾಣಿ'ಯೊಡನೆ ಮುಕ್ತವಾಗಿ ಮಾತನಾಡಿದ ಈ ಮಹಿಳೆಯರು, ಸೋಂಕು ಮತ್ತು ಕಾಯಿಲೆ ವಿರುದ್ಧ ತಾವು ಸಂಘಟಿತರಾಗಿರುವ ರೀತಿಯನ್ನು ತಮ್ಮದೇ ಮಾತುಗಳಲ್ಲಿ ವಿವರಿಸಿದರು.

ಇತರೆ ಸಾಧ್ಯತೆಗಳಿಗಿಂತಲೂ, ಲೈಂಗಿಕ ವೃತ್ತಿಪರ ಮಹಿಳೆಯರಿಂದಲೇ ಹೆಚ್ಚು ಎಚ್‌ಐವಿ ಸೋಂಕು, ಏಡ್ಸ್ ಕಾಯಿಲೆ ಹರಡುತ್ತದೆ ಎಂಬ ನಂಬಿಕೆ ಸಮಾಜದಲ್ಲಿ ಬಲವಾಗಿ ಬೇರೂರಿದೆ. ಆದರೆ ಅದು ತಪ್ಪು. ವೃತ್ತಿಪರ ಮಹಿಳೆಯರಲ್ಲದವರಿಂದಲೂ ಸೋಂಕು, ಕಾಯಿಲೆ ಹರಡುತ್ತದೆ. ಆದು ಗೊತ್ತಾಗುವುದಿಲ್ಲ ಆಷ್ಟೆ. ಏಕೆಂದರೆ ಸಂಘಟಿತರಲ್ಲದ ಹಲವರಲ್ಲಿ ಸೋಂಕು ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮಗಳ ಕುರಿತ ಅರಿವು ಅಷ್ಟಾಗಿ ಇರುವುದಿಲ್ಲ. ತಮಗೆ ಸೋಂಕಿದೆ ಎಂಬ ಅರಿವೂ ಕಡಿಮೆ ಎನ್ನುತ್ತಾರೆ ಜಾನಕಿ (ಮಹಿಳೆಯರ ಹೆಸರುಗಳನ್ನು ಬದಲಿಸಲಾಗಿದೆ).

ಎಲ್ಲೆಲ್ಲೋ ಇದ್ದ ನಮ್ಮನ್ನು ಎಂಟು ವರ್ಷದಿಂದ ಮೈರಾಡ ಸಂಸ್ಥೆಯು ಗುರುತಿಸಿ ಒಟ್ಟಿಗೆ ಸೇರಿಸಿ ಜಾಗೃತಿ ಮೂಡಿಸಿರದಿದ್ದರೆ, ಕಾಂಡೊಂ ಬಳಸದ ಗ್ರಾಹಕರು ನೀಡುವ ಹೆಚ್ಚಿನ ಹಣಕ್ಕೆ ಆಸೆ ಪಡುವ ದಿನಗಳನ್ನೇ ನಾವು ಕಾಣುತ್ತಿದ್ದೆವು. ನಮ್ಮ ಭವಿಷ್ಯ ನಮ್ಮ ಕೈಯಲ್ಲಿ ಇರುತ್ತಿರಲಿಲ್ಲ. ಈಗ ಸನ್ನಿವೇಶ ಬದಲಾಗಿದೆ. ಒಂದು ಸಾವಿರವಲ್ಲ ಎರಡು ಸಾವಿರ ರೂಪಾಯಿ ಕೊಟ್ಟರೂ, ಕಾಂಡೋಂ ಬಳಸದ ಗ್ರಾಹಕನನ್ನು ಮುಲಾಜಿಲ್ಲದೆ ತಿರಸ್ಕರಿಸುತ್ತೇವೆ. ಶೋಷಣೆಯ ವಿರುದ್ಧ ನಾವೀಗ ಮೌನ ಮುರಿದಿದ್ದೇವೆ ಎಂಬುದು ಮತ್ತೊಬ್ಬ ವೃತ್ತಿಪರ ಮಹಿಳೆ ಮಂಜುಳಾ ಆವರ ದಿಟ್ಟನುಡಿ.

ಮೈರಾಡ ನೆರಳಿನಲ್ಲಿ ಸಂಘಟಿತರಾಗುವ ಮೊದಲು ಮತ್ತು ಆರಂಭದ ದಿನಗಳಲ್ಲಿ ಕೆಲವು ಪೊಲೀಸರು, ಗೂಂಡಾಗಳಿಂದ ಹಿಂಸೆಗೊಳಗಾದದ್ದನ್ನೂ ಈ ಮಹಿಳೆಯರು ಮರೆತಿಲ್ಲ. ತಮ್ಮನ್ನು ಭೇಟಿ ಮಾಡುತ್ತಿದ್ದ ಸಂಸ್ಥೆಯ ಪ್ರತಿನಿಧಿಗಳನ್ನು ಗಿರಾಕಿಗಳೆಂದೇ ಭಾವಿಸಿ ಪೊಲೀಸರು ಹಲವು ಬಾರಿ ಥಳಿಸಿದ್ದಾರೆ ಎಂದು ಸ್ಮರಿಸುತ್ತಾರೆ ರಾಮಕ್ಕ.

ಈ ಧೈರ್ಯ ಮತ್ತು ವಿಶ್ವಾಸ ಮೈರಾಡದ ಆವರಣದಲ್ಲಿರುವ ಬಹಳಷ್ಟು ಲೈಂಗಿಕ ವೃತ್ತಿಪರ ಮಹಿಳೆಯರಲ್ಲಿ ಕಾಣ ಸಿಗುವುದು ವಿಶೇಷ. ಇಲ್ಲಿರುವ ಒಬ್ಬೊಬ್ಬ ಮಹಿಳೆಯದೂ ಒಂದೊಂದು ಸಂತ್ರಸ್ತ, ತಪ್ತ ಜೀವನ ಲೋಕ. ಹಲವು ಕಷ್ಟ-ಕಾರ್ಪಣ್ಯ, ಆವಮಾನಗಳ ನಡುವೆಯೇ ಆವರು ಲೈಂಗಿಕ ವೃತ್ತಿಯಲ್ಲಿ ಮುಂದುವರಿದಿದ್ದಾರೆ. ಎಚ್‌ಐವಿ ಸೋಂಕನ್ನೂ ತಡೆಗಟ್ಟುವಲ್ಲಿ ಶ್ರಮವಹಿಸುತ್ತಿದ್ದಾರೆ.

ಇವರಿಗೆಲ್ಲ ಉಚಿತ ಕಾಂಡೊಂಗಳನ್ನಷ್ಟೇ ಆಲ್ಲದೆ, ಪ್ರತಿ 6 ತಿಂಗಳಿಗೊಮ್ಮೆ ಉಚಿತ ಎಚ್‌ಐವಿ ಪರೀಕ್ಷೆ, ಪ್ರತಿ ಮೂರು ತಿಂಗಳಿಗೊಮ್ಮೆ ಲೈಂಗಿಕ ಆರೋಗ್ಯ ಪರೀಕ್ಷೆಯನ್ನು ಸಂಸ್ಥೆ ಏರ್ಪಡಿಸುತ್ತದೆ. ಆದನ್ನು ನಡೆಸಲೆಂದೇ ಟಿಐ (ಟಾರ್ಗೆಟೆಡ್ ಇಂಟರ‌್ವೆನ್ಶನ್) ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಇದು ಲೈಂಗಿಕ ವೃತ್ತಿಪರ ಮಹಿಳೆಯರಿಗೆ ತಮ್ಮ ವೃತ್ತಿಯನ್ನು ವಿಶ್ವಾಸದಿಂದ ಮತ್ತು ಆರೋಗ್ಯಪೂರ್ಣವಾಗಿ ಮುಂದುವರಿಸಲು ಮುಖ್ಯ ಆಧಾರ ಎಂಬುದು ಗಮನಾರ್ಹ.

ಎಚ್‌ಐವಿ- ಏಡ್ಸ್ ತಡೆಯಲು ರೂಪಿತವಾದ `ನ್ಯಾಕೋ' ಕ್ರಮೇಣ ಲೈಂಗಿಕ ಕಾರ್ಯಕರ್ತೆಯರನ್ನು ಗುರಿಯಾಗಿರಿಸಿಕೊಂಡು ಜಾಗೃತಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ ಪರಿಣಾಮ ಅವರಿಗೆ ಹಲವು ತರಬೇತಿಗಳಾಗಿವೆ. ಈ ಮಹಿಳೆಯರು ಲೈಂಗಿಕ ಕಾಯಿಲೆಗಳಿಂದ ದೂರವಿರಲು ಸಾಧ್ಯವಾಗಿದೆ ಎನ್ನತ್ತಾರೆ ಬೆಂಗಳೂರಿನ ಸೆಂಟರ್‌ಫಾರ್ ಅಡ್ವೊಕೇಸಿ ಸಂಸ್ಥೆಯ ಸುಧಾ.

ಏಡ್ಸ್ ಮುಕ್ತ ಜನಾಂಗಕ್ಕಾಗಿ ಒಟ್ಟಿಗೇ ದುಡಿಯೋಣ ಎಂಬುದ ಈ ವರ್ಷದ ವಿಶ್ವ ಏಡ್ಸ್ ದಿನಾಚರಣೆಯ ಘೋಷ ವಾಕ್ಯ. ಈ ವಾಕ್ಯವನ್ನು ವೈಯಕ್ತಿಕವಾಗಿ ಮತ್ತು ಸಣ್ಣ ಸಮುದಾಯಗಳಾಗಿಯೇ ಆನುಷ್ಠಾನಗೊಳಿಸುತ್ತಿರುವ ಈ ಮಹಿಳೆಯರ ಬದುಕು ಇನ್ನಷ್ಟು ಹಸನಾಗಬೇಕಾಗಿದೆ ಎನ್ನುತ್ತಾರೆ `ಸಂವೇದನಾ' ಸಂಸ್ಥೆಯ ಜ್ಲ್ಲಿಲಾ ಯೋಜನಾ ಸಂಯೋಜಕ ಜಿ.ಎಸ್ ವೆಂಕಟೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT